ರಾಜ್ಯದಲ್ಲಿ ಉದ್ಯೋಗದ ಭರವಸೆಗಳು ಕೇವಲ ಮರೀಚಿಕೆಯೇ?
ಪ್ರಚಲಿತ * ಬಿವಿಸೀ ಇತ್ತೀಚೆಗೆ ಧಾರವಾಡದಲ್ಲಿ ನಡೆದ ಯುವಜನತೆಯ ಬೃಹತ್ ಪ್ರತಿಭಟನೆಯು ಕೇವಲ ಒಂದು ತಾತ್ಕಾಲಿಕ ಆಕ್ರೋಶವಲ್ಲ, ಬದಲಾಗಿ ಇದು ಇಡೀ ರಾಜ್ಯಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಕರ್ನಾಟಕದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಹಲವು ವರ್ಷಗಳಿಂದ ಖಾಲಿಯಿದ್ದರೂ, ಅವುಗಳ ಭರ್ತಿಗೆ ಸರ್ಕಾರಗಳು ತೋರುತ್ತಿರುವ ಅಸಡ್ಡೆ ಯುವಜನತೆಯನ್ನು ಬೀದಿಗೆ ತಂದಿದೆ. ಪ್ರತಿ ಬಾರಿಯೂ "ಶೀಘ್ರದಲ್ಲೇ ನೇಮಕಾತಿ" ಎಂಬ ಘೋಷಣೆಗಳು ಹೊರಬರುತ್ತವೆ, ಆದರೆ ವಾಸ್ತವದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುತ್ತಿಲ್ಲ. ಕೆಲವು ತಿಂಗಳಿಗೊಮ್ಮೆ ಸಚಿವರು ತಮ್ಮ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪತ್ರಿಕಾಗೋಷ್ಠಿಗಳಲ್ಲಿ ಅಬ್ಬರದ ಹೇಳಿಕೆಗಳನ್ನು ನೀಡುತ್ತಾರೆ. ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಆದರೆ ಕಡತಗಳು ಮಾತ್ರ ಇಲಾಖೆಗಳ ಧೂಳು ಹಿಡಿದ ಮೇಜುಗಳಿಂದ ಕದಲುವುದಿಲ್ಲ. ಅಂತಿಮವಾಗಿ ನೇಮಕಾತಿ ಪ್ರಕ್ರಿಯೆಯು ನೆನೆಗುದಿಗೆ ಬೀಳುತ್ತದೆ. ಶಿಕ್ಷಣ ಪಡೆದ ಯುವಕರು ಮೊದಲು ತಾಳ್ಮೆಯಿಂದ ಕಾಯುತ್ತಾರೆ, ನಂತರ ಆತಂಕಕ್ಕೆ ಒಳಗಾಗುತ್ತಾರೆ ಮತ್ತು ಈಗ ಅವರ ಆತಂಕವು ತೀವ್ರ ಆಕ್ರೋಶವಾಗಿ ಮಾರ್ಪಟ್ಟಿದೆ. ಧಾರವಾಡದಲ್ಲಿ ನಡೆದ ಪ್ರತಿಭಟನೆಯನ್ನು ಕೆಲವರು ಕೇವಲ "ಜೆನ್ ಝೆಡ್" ಯುವಕರ ಗಲಾಟೆ ಎಂದು ತಳ್ಳಿಹಾಕಬಹುದು, ಆದರೆ ಇದು ವಾಸ್ತವವಾಗಿ ಘನತೆಯ ಬದುಕಿಗಾಗಿ ನಡೆಸುತ್ತಿರುವ ಒಂದು ತಲೆಮಾರಿನ ಕೂಗಾಗಿದೆ. ಇಂದ...