ಮಾಹಿತಿ ಬಹಿರಂಗಪಡಿಸಲು ಮೋದಿ ಸರ್ಕಾರಕ್ಕೆ ಏಕೆ ಭಯ?

 ದೇಶದ ಸಾರ್ವಜನಿಕ ಚರ್ಚೆಗಳಲ್ಲಿ ಒಂದು ಆತಂಕಕಾರಿ ಭಾವನೆ ಮಡುಗಟ್ಟುತ್ತಿದೆ. ಕೇಂದ್ರ ಎನ್‍ಡಿಎ ಸರ್ಕಾರವು ಉದ್ದೇಶಪೂರ್ವಕವಾಗಿ ನಾಗರಿಕರಿಂದ ಮಾಹಿತಿಯನ್ನು ಮುಚ್ಚಿಡುತ್ತಿದ್ದು, ಜನಸಾಮಾನ್ಯರ ಜೀವನವನ್ನು ಪ್ರಭಾವಿಸುವ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹಾಗೂ ಸಾರ್ವಜನಿಕ ವಿಶ್ವಾಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಡೆಹಿಡಿಯುತ್ತಿರುವುದು ಈ ಕಳವಳಕ್ಕೆ ಕಾರಣವಾಗಿದೆ. ಭಾರತ-ಅಮೆರಿಕಾದ ನಡುವೆ ಏರ್ಪಟ್ಟಿರುವ ವ್ಯಾಪಾರ ಒಪ್ಪಂದದ ಬಗ್ಗೆ ಈ ಕಳಕಳಿಯನ್ನೇ ಉದಾಹರಣೆಯಾಗಿ ನೋಡಿ.

ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರೈತರಿಗೆ ಅವರ ಹಿತಾಸಕ್ತಿಯನ್ನು ಕಾಪಾಡುವುದಾಗಿ ಆಶ್ವಾಸನೆ ನೀಡಿದ್ದರು. ಆದಾಗ್ಯೂ ಅಮೆರಿಕ ಕೂಡಲೇ ಒಪ್ಪಂದದ ನಿಯಮಗಳನ್ನು ಬಹಿರಂಗಪಡಿಸಿದ್ದು, ಅಮೆರಿಕದ ಕೆಲವು ಧಾನ್ಯಗಳಿಗೆ ಭಾರತೀಯ ಮಾರುಕಟ್ಟೆಗೆ ಮುಕ್ತ ಸಂಪರ್ಕ ಕಲ್ಪಿಸಿರುವುದು ಸ್ಪಷ್ಟವಾಗಿದೆ. ಈ ವಿರೋಧಾಭಾಸವು ತಾಂತ್ರಿಕವಲ್ಲ. ಸರ್ಕಾರದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಹುದು. ಭಾರತದ ಬದಲು ಅಮೆರಿಕದಿಂದ ಈ ರೀತಿ ಮಾಹಿತಿ ಬಹಿರಂಗಗೊಳ್ಳುವುದು ರೈತರ ಆಕ್ರೋಶಕ್ಕೆ ಕಾರಣವಾಗಿರುವುದು ಸಹಜವೇ ಆಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ``ದೇಶದ ಜನರಿಗೆ ಮೋದಿ ಸರಕಾರ ಬೆನ್ನಿಗೆ ಚೂರಿ'' ಹಾಕಿದ ಆರೋಪ ಪ್ರತಿಧ್ವನಿಸುತ್ತಿದ್ದು, ರೈತರ ದನಿಗೆ ದನಿಗೂಡಿಸುತ್ತದೆ.

ಈ ಮಾದರಿಯನ್ನು ವ್ಯಾಪಾರ ವ್ಯವಹಾರಗಳಿಂದಾಚೆಗೂ ಗಮನಿಸಬಹುದು. ಅಮೆರಿಕ ಭಾರತದ ಮೇಲೆ ಒತ್ತಡ ಹೇರುತ್ತಿದ್ದು ತನ್ನ ದೇಶದಿಂದ ತೈಲ ಖರೀದಿಸದಂತೆ ಬಲಾತ್ಕರಿಸಿದೆ ಎಂದು ರಷ್ಯಾ ಬಹಿರಂಗವಾಗಿ ಆರೋಪಿಸುತ್ತಿದೆ. ಅಮೆರಿಕದೊಡಗಿನ ಒಪ್ಪಂದವನ್ನು ಅಂತಿಮಗೊಳಿಸುವ ಮುನ್ನ ಮೋದಿ ಸರ್ಕಾರ ಈ ಅಂಶವನ್ನು ದೃಢೀಕರಿಸಿಲ್ಲ. ಯಾವ ರೀತಿಯ ವ್ಯಾಪಾರಿ ರಾಜೀ ಸೂತ್ರಗಳನ್ನು ಅನುಸರಿಸಲಾಗಿದೆ ಎನ್ನುವುದು ಅಸ್ಪಷ್ಟವಾಗಿದ್ದು, ಸರ್ಕಾರ ಪಾರದರ್ಶಕವಾಗಿರುವುದರ ಬದಲು ಮೌನವಾಗಿರಲು ಬಯಸಿದೆ.

ಸಂಸದೀಯ ಉತ್ತರದಾಯಿತ್ವವೇ ಇಂದು ಧಕ್ಕೆಗೊಳಗಾಗಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು, ನಿವೃತ್ತ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಎಮ್ ಎಮ್ ನರಾವಣೆ ಅವರ ಪುಸ್ತಕವನ್ನು ಆಧರಿಸಿ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ, ಇದು ಚೀನಾ ಸಂಬಂಧಗಳನ್ನು ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರವೂ ಆಗಿದೆ. ಆದರೆ ಸರ್ಕಾರವು ರಾಹುಲ್ ಗಾಂಧಿಯ ಆರೋಪಗಳಿಗೆ ಉತ್ತರಿಸುವ ಗೊಡವೆಗೇ ಹೋಗದೆ ಮೌನ ವಹಿಸಿದೆ. ಬದಲಾಗಿ ಕಲಾಪವನ್ನು ಭಂಗಗೊಳಿಸುವ ಮೂಲಕ ಪ್ರತ್ಯಾರೋಪಗಳನ್ನು ಮಾಡಿ ವಿಷಯವನ್ನು ಮರೆಮಾಚಿದೆ. ಸ್ವತಃ ಪ್ರಧಾನಮಂತ್ರಿಗಳೇ ಪ್ರತಿಕ್ರಿಯಿಸಲು ನಿರಾಕರಿಸಿದ್ದು ತನ್ನ ವೈಯಕ್ತಿಕ ಭದ್ರತೆಗೆ ಸದನದಲ್ಲಿ ಅಪಾಯವಿದೆ ಎಂದು ನೆವ ಹೇಳಿ ಸದನಕ್ಕೆ ಬರುವುದನ್ನೇ ತಪ್ಪಿಸಿದ್ದಾರೆ.

ಇನ್ನೂ ಹಾನಿಕಾರಕ ಅಂಶ ಎಂದರೆ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಿರುವುದು. ಕಾನೂನಾತ್ಮಕ ನೆಪಗಳನ್ನು ಮುಂದಿಡುವ ಮೂಲಕ ಪಿಎಂ ಕೇರ್ ಫಂಡ್ಸ್ ಯೋಜನೆಯನ್ನೇ ಪ್ರಶ್ನಾತೀತವಾಗಿಸಲಾಗಿದೆ. ಮಾಹಿತಿ ಆಯುಕ್ತರ ನೇಮಕದಲ್ಲಿ ವಿಳಂಬವಾಗುತ್ತಿದ್ದು, ವಿಷಯವನ್ನು ಬಹಿರಂಗಪಡಿಸುವುದಕ್ಕೆ ಅಡ್ಡಿಮಾಡಲಾಗುತ್ತಿದೆ. ಮೂಲಭೂತ ಮಾಹಿತಿಗಳಾದ ಪ್ರಧಾನಮಂತ್ರಿಗಳ ವಿದ್ಯಾರ್ಹತೆ ಪ್ರಶ್ನೆಯನ್ನೂ ಸಹ ಪ್ರಭುತ್ವದ ರಹಸ್ಯ ಎಂದೇ ಹೇಳಲಾಗುತ್ತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯು ಮಾಹಿತಿಪೂರ್ಣ ಸಮ್ಮತಿಯನ್ನು ಆಧರಿಸುತ್ತದೆ. ಸರ್ಕಾರವು ತನಗೆ ಅಹಿತಕರ ಎನಿಸುವ ಮಾಹಿತಿಯನ್ನು  ಪದೇಪದೇ ತಡೆಹಿಡಿಯುವುದು ಕೇವಲ ವಿರೋಧ ಪಕ್ಷಗಳ ಆರೋಪಗಳಿಗೆ ತುತ್ತಾಗುವುದಲ್ಲ. ಸಾಂಸ್ಥಿಕ ಅವನತಿಯ ಲಕ್ಷಣವಾಗಿ ಕಾಣುತ್ತದೆ. ಸರ್ವಾಧಿಕಾರಗಳು ಗೋಪ್ಯತೆಯನ್ನೇ ಅವಲಂಬಿಸಿ ಉಳಿಯುತ್ತವೆ, ಪ್ರಜಾಪ್ರಭುತ್ವ ಮುಕ್ತ ವಾತಾವರಣದ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again