ಆತ್ಮನಿರ್ಭರತೆಯನ್ನು ಅವುಡುಗಚ್ಚಿಕೊಂಡು ಅಮೆರಿಕಕ್ಕೆ ಶರಣಾದ ಮೋದಿ
ರಾಜನೀತಿ * ಬಿವಿಸೀ
ಭಾರತದ ಕಚ್ಚಾತೈಲ ಖರೀದಿ ಮತ್ತು ಆಮದು ನೀತಿಯ ಸುತ್ತ ಸೃಷ್ಟಿಯಾಗುತ್ತಿರುವ ಚಿತ್ರಣ ಕೆಲವು ಅಹಿತಕರ ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. ಕಳೆದ ಕೆಲವು ವರ್ಷಗಳಿಂದ ಮೋದಿ ಸರ್ಕಾರವು ಪಶ್ಚಿಮ ರಾಷ್ಟ್ರಗಳ ಒತ್ತಡ ತಂತ್ರಗಳಿಗೆ ಪ್ರತಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದು, ಜಾಗತಿಕ ಖಂಡನೆಯ ಹೊರತಾಗಿಯೂ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಲೇ ಇದೆ. ಈ ಧೋರಣೆಯನ್ನು ಆಂತರಿಕವಾಗಿ ಕಾರ್ಯತಂತ್ರದ ಸ್ವಾಯತ್ತತೆ ಎಂದೇ ಬಣ್ಣಿಸಲಾಗುತ್ತಿತ್ತು. ಭಾರತ ಮೊದಲು, ಆನಂತರ ಮೈತ್ರಿ ಎನ್ನುವ ಧೋರಣೆ ಅಲ್ಲಿ ಕಾಣಬಹುದಿತ್ತು.
ಈಗ ವರದಿಗಳನ್ನು ಗಮನಿಸಿದರೆ, ನಮ್ಮ ರಿಫೈನರಿಗಳಿಗೆ ರಷ್ಯಾದ ಕಚ್ಚಾ ತೈಲ ಖರೀದಿಯನ್ನು ಕಡಿಮೆ ಮಾಡಲು ನಿರ್ದೇಶನಗಳನ್ನು ಭಾರತ ಸರಕಾರ ನೀಡುತ್ತಿದೆ ಎನ್ನಲಾಗಿದೆ. ಅಮೆರಿಕ ಮತ್ತು ವೆನೆಜುವೆಲಾದಿಂದ ತೈಲ ಖರೀದಿಸುವಂತೆ ಆದೇಶಿಸಲಾಗುತ್ತಿದೆ. ಇದು ಡೊನಾಲ್ಡ್ ಟ್ರಂಪ್ ಅವರ ದೀರ್ಘ ಕಾಲದ ದುರಾಗ್ರಹಕ್ಕೆ ಪೂರಕವಾಗಿ ಕಾಣುತ್ತದೆ. ಇದು ಕೇವಲ ವಾಣಿಜ್ಯ ಒಪ್ಪಂದದ ಹೊಂದಾಣಿಕೆಯಾಗಿದ್ದಲ್ಲಿ ಸರ್ಕಾರ ಇದನ್ನು ಸ್ಪಷ್ಟವಾಗಿ ಹೇಳಬೇಕು. ಅಥವಾ ಇದು ವಿಶಾಲ ವ್ಯಾಪಾರ ಒಪ್ಪಂದದ ಚೌಕಾಸಿಯ ಭಾಗವಾಗಿದ್ದರೆ, ದೇಶದ ಜನತೆ ಪಾರದರ್ಶಕತೆಯನ್ನು ಅಪೇಕ್ಷಿಸುತ್ತಾರೆ. ಮೌನವಾಗಿದ್ದಷ್ಟೂ ಅನುಮಾನಗಳು ಹೆಚ್ಚಾಗುತ್ತವೆ.
ಬದಲಾವಣೆಯಾಗಿರುವುದು ಏನು? ಕೇಂದ್ರ ಸರ್ಕಾರ ಒತ್ತಡವನ್ನು ತಡೆದುಕೊಂಡಿದೆ. ಇಂದು ಯಾವುದೇ ವಿವರಣೆ ನೀಡದೆ, ಹೊಂದಾಣಿಕೆಯ ಪ್ರಕ್ರಿಯೆಯಲ್ಲಿ ತೊಡಗಿದೆ. ಇಂಧನ ಭದ್ರತೆ ಕೇವಲ ಸಣ್ಣ ಪ್ರಮಾಣದ ಖರೀದಿ ಮತ್ತು ತೈಲ ಸಂಗ್ರಹದ ವಿಚಾರ ಅಲ್ಲ. ಇದು ವಿದೇಶಾಂಗ ನೀತಿಯ ಕೇಂದ್ರ ಬಿಂದು ಆಗಿದ್ದು, ಆರ್ಥಿಕ ಸ್ಥಿರತೆಯ ಸಂಕೇತವಾಗಿದೆ. ದೀರ್ಘ ಕಾಲದ ಸರಬರಾಜು ದೇಶವನ್ನು ಹಠಾತ್ತನೆ ದೂರ ತಳ್ಳುವುದರ ಹಿಂದಿನ ಕಾರಣಗಳನ್ನು ಪ್ರಜೆಗಳು ತಿಳಿದುಕೊಳ್ಳಬೇಕಿದೆ. ಜನತೆಗೆ ಆ ಹಕ್ಕು ಇದೆ.
ಕೇಂದ್ರ ಸರ್ಕಾರ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದೆ ಎಂಬ ರಾಹುಲ್ ಗಾಂಧಿಯ ಆರೋಪ ತೀಕ್ಷ್ಣವಾಗಿರಬಹುದು. ಆದರೆ ಅದನ್ನು ಕೇವಲ ವೈಯುಕ್ತಿಕ ದಾಳಿ ಎಂದು ನಿರಾಕರಿಸಲಾಗುವುದಿಲ್ಲ. ಇದರ ಹಿಂದಿನ ಕಾಳಜಿಯ ಮೂಲ ವಸ್ತುವನ್ನು ಕುರಿತು ಮಾತನಾಡದೆ, ಆಡಳಿತಾರೂಢ ಬಿಜೆಪಿಯ ವಕ್ತಾರರು ದಿಕ್ಕುತಪ್ಪಿಸುವಂತೆ ಮಾತನಾಡುತ್ತಿರುವುದು, ಕಾಂಗ್ರೆಸ್ ಪಕ್ಷದ ಹಿಂದಿನ ನಿರ್ಧಾರಗಳನ್ನು ಮುಂದಿಟ್ಟುಕೊಂಡು ಸಮರ್ಥಿಸುತ್ತಿರುವುದು ಒಪ್ಪುವಂತಹುದಲ್ಲ. ಎರಡು ಆರೋಪಿತ ತಪ್ಪುಗಳು ಸರಿಯಾದ ಹಾದಿಯನ್ನು ಸೃಷ್ಟಿಸುವುದಿಲ್ಲ. ಚಾರಿತ್ರಿಕ ನಿಂದನೆ ಅಥವಾ ಆರೋಪಗಳು ವರ್ತಮಾನದ ಉತ್ತರದಾಯಿತ್ವಕ್ಕೆ ಪರ್ಯಾಯವಾಗಲಾರದು.
ಪ್ರಧಾನಿ ನರೇಂದ್ರ ಮೋದಿಯ ಮೌನ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಸಂಸತ್ತಿನಲ್ಲಿ ಮತ್ತು ಹೊರಗಡೆ ಸಾರ್ವಜನಿಕರು ಪ್ರಧಾನಿ ನುಣುಚಿಕೊಳ್ಳುವುದನ್ನೇ ಕಾಣುತ್ತಿದ್ದಾರೆಯೇ ಹೊರತು, ಮಾತುಕತೆಗಳಲ್ಲಿ ಅಲ್ಲ. ಕೆಲವು ಸಂದರ್ಭಗಳಲ್ಲಿ ಕಾರ್ಯತಾಂತ್ರಿಕ ಬದಲಾವಣೆ ಅವಶ್ಯವಾಗಿರಬಹುದು; ಆದರೆ, ವಿಶ್ವಾಸಾರ್ಹತೆ ಉಳಿಯುವುದು ಇದನ್ನು ಸ್ಪಷ್ಟೀಕರಿಸುವುದರ ಮೂಲಕ. ಮೋದಿ ಪದೇ ಪದೇ ಹೇಳುವ ಆತ್ಮನಿರ್ಭರತೆ ಗತಿ ಏನು ಅದು ಎಲ್ಲಿ ಹೋಯಿತು ಎನ್ನುವುದರ ಬಗ್ಗೆಯೂ ವಿವರಿಸಲಿ.
ಈ ನಡೆಯು ಭಾರತದ ಮಾತುಕತೆಗಳ ಸಾಮರ್ಥ್ಯವನ್ನು ಬಲಪಡಿಸುವುದಾದರೆ, ದೀರ್ಘ ಕಾಲದ ಇಂಧನ ಭದ್ರತೆಯನ್ನು ಬಲಪಡಿಸುವುದಾದರೆ, ಸರ್ಕಾರ ಮುಕ್ತವಾಗಿ ಅದನ್ನು ಸಮರ್ಥಿಸಿಕೊಳ್ಳಬೇಕು. ಇಲ್ಲವಾದರೆ, ನಮ್ಮ ಸರಕಾರ ಅಮೆರಿಕಕ್ಕೆ ಶರಣಾಗತರಾಗಿರುವ ಸಾರ್ವಜನಿಕ ಅಭಿಪ್ರಾಯ ಇನ್ನೂ ಗಟ್ಟಿಯಾಗುತ್ತದೆ. ಭೌಗೋಳಿಕ ರಾಜಕಾರಣದಲ್ಲಿ ಅಭಿಪ್ರಾಯ, ಅನಿಸಿಕೆಗಳೇ ಮೂಲ ಶಕ್ತಿ. ಒಮ್ಮೆ ಅದರ ಬಗ್ಗೆ ಅನುಮಾನಗಳು ಉಂಟಾದರೆ, ಮರಳಿ ವಿಶ್ವಾಸ ಗಳಿಸುವುದು ಅಸಾಧ್ಯವಾಗುತ್ತದೆ.
Comments
Post a Comment