ವಂದೇ ಮಾತರಂ: 150 ವರ್ಷಗಳ ಐತಿಹಾಸಿಕ ಪಯಣ ಮತ್ತು ವಿವಾದದ ನೆಲೆಗಟ್ಟು
ಪ್ರಚಲಿತ * ಬಿವಿಸೀ
ಬಂಕಿಮಚಂದ್ರ ಚಟರ್ಜಿಯವರು ಸೃಜಿಸಿದ `ವಂದೇ ಮಾತರಂ' ಎನ್ನುವ ಮಂತ್ರವು ಕೇವಲ ಒಂದು ಗೀತೆಯಲ್ಲ, ಅದು ಭಾರತದ ಅಖಂಡ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹಚ್ಚಿದ ಮಹಾನ್ ಶಕ್ತಿ. ಇಂದು ಈ ಗೀತೆಯು ರಚನೆಯಾಗಿ ಸುಮಾರು 150 ವರ್ಷಗಳು ಪೂರೈಸುತ್ತಾ ಬಂದಿದ್ದರೂ, ಇದರ ಆರು ಚರಣಗಳು ಮತ್ತು ಪ್ರಸ್ತುತ ರಾಷ್ಟ್ರೀಯ ಗೀತೆಯಾಗಿ ಚಾಲ್ತಿಯಲ್ಲಿರುವ ಎರಡು ಚರಣಗಳ ನಡುವಿನ ವ್ಯತ್ಯಾಸವು ಒಂದು ದೊಡ್ಡ ವೈಚಾರಿಕ ಚರ್ಚೆಗೆ ದಾರಿಮಾಡಿಕೊಟ್ಟಿದೆ. ಈ ಗೀತೆಯು ರಾಷ್ಟ್ರೀಯತೆಯ ಪ್ರತೀಕವಾಗಿ ಎಷ್ಟು ಪ್ರಬಲವಾಗಿದೆಯೋ, ಅಷ್ಟೇ ವಿವಾದಾತ್ಮಕವಾಗಿಯೂ ಉಳಿದುಕೊಂಡಿರುವುದು ಭಾರತದ ಸಾಂಸ್ಕøತಿಕ ರಾಜಕಾರಣದ ಒಂದು ವಿಪರ್ಯಾಸವೆಂದೇ ಹೇಳಬಹುದು.
ಆರಂಭದಲ್ಲಿ `ಆನಂದಮಠ' ಎನ್ನುವ ಕಾದಂಬರಿಯ ಭಾಗವಾಗಿ ಮೂಡಿಬಂದ ಈ ಸುಂದರ ಗೀತೆಯಲ್ಲಿ ಒಟ್ಟು ಆರು ಚರಣಗಳಿವೆ. ಮೊದಲ ಎರಡು ಚರಣಗಳು ಪ್ರಕೃತಿಯ ಸೌಂದರ್ಯವನ್ನು, ಹಚ್ಚಹಸಿರಿನಿಂದ ಕೂಡಿದ ಭೂಮಿಯನ್ನು ಮತ್ತು ತಾಯ್ನಾಡಿನ ಸಮೃದ್ಧಿಯನ್ನು ಅತ್ಯಂತ ಭಕ್ತಿಯಿಂದ ವರ್ಣಿಸುತ್ತವೆ. ಈ ಸಾಲುಗಳು ಜಾತಿ, ಮತ, ಪಂಥಗಳನ್ನು ಮೀರಿ ನಿಂತು ಎಲ್ಲ ಭಾರತೀಯರನ್ನು ಒಳಗೊಳ್ಳುವ ಅದ್ಭುತ ಶಕ್ತಿಯನ್ನು ಹೊಂದಿವೆ. ಆದರೆ ಇದರ ನಂತರದ ಚರಣಗಳಲ್ಲಿ ಬರುವ ದೇವತೆಗಳ ಆವಾಹನೆ ಮತ್ತು ಯುದ್ಧದ ಉಗ್ರ ವರ್ಣನೆಗಳು ಒಂದು ನಿರ್ದಿಷ್ಟ ಧಾರ್ಮಿಕ ಚೌಕಟ್ಟನ್ನು ಪ್ರತಿಬಿಂಬಿಸುತ್ತವೆ ಎಂಬುದು ಆರಂಭದಿಂದಲೂ ಒಂದು ವರ್ಗದ ವಿರೋಧಕ್ಕೆ ಪ್ರಮುಖ ಕಾರಣವಾಯಿತು. ಇದೇ ಗಂಭೀರ ಕಾರಣಕ್ಕಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು 1937ರಲ್ಲಿ ನಡೆದ ಅಧಿವೇಶನದಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಅಧಿಕೃತವಾಗಿ ಒಪ್ಪಿಕೊಂಡು ಉಳಿದವನ್ನು ಕೈಬಿಟ್ಟಿತು.
ಆದರೆ ಈ ಸಾಹಿತ್ಯಿಕ `ಕತ್ತರಿ ಪ್ರಯೋಗ' ಇಂದಿಗೂ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಸಿದ್ಧಾಂತದ ಪ್ರಕಾರ, ಸಂಪೂರ್ಣ ಆರು ಚರಣಗಳನ್ನು ಹಾಡದಿರುವುದು ದೇಶದ ಸಾಂಸ್ಕೃತಿಕ ಪರಂಪರೆಗೆ ಮತ್ತು ಬಂಕಿಮಚಂದ್ರರ ಮೂಲ ಆಶಯಕ್ಕೆ ಮಾಡಿದ ಅಪಚಾರವಾಗಿದೆ. ಮತ್ತೊಂದು ಸಿದ್ಧಾಂತದ ಪ್ರಕಾರ, ವೈವಿಧ್ಯಮಯವಾಗಿರುವ ಇಂದಿನ ಭಾರತದಲ್ಲಿ ಎಲ್ಲ ಧರ್ಮದವರನ್ನು ಭಾವನಾತ್ಮಕವಾಗಿ ಒಗ್ಗೂಡಿಸಲು ಕೇವಲ ಮೊದಲ ಎರಡು ಚರಣಗಳು ಸಾಕು. ಈ ನಿರಂತರ ವಿವಾದವು ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಭಾರತದ ಸೆಕ್ಯುಲರಿಸಂ ಮತ್ತು ರಾಷ್ಟ್ರೀಯತೆಯ ನಡುವಿನ ನಿರಂತರ ಸಂಘರ್ಷದ ದೊಡ್ಡ ಸಂಕೇತವಾಗಿದೆ.
ವಂದೇ ಮಾತರಂ ಎನ್ನುವ ಘೋಷಣೆಯು ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ನಿದ್ದೆಗೆಡಿಸಿದ ಸಿಂಹಗರ್ಜನೆಯಾಗಿತ್ತು. ಆದರೆ ಇಂದು ಅದನ್ನು ಕೇವಲ ಒಂದು ರಾಜಕೀಯ ಸಂಕೇತವಾಗಿ ಬಳಸಲಾಗುತ್ತಿರುವುದು ವಿಷಾದನೀಯ. ಗೀತೆಯ ಆರು ಚರಣಗಳ ಭಾವನಾತ್ಮಕ ತೀವ್ರತೆ ಮತ್ತು ಎರಡು ಚರಣಗಳ ನಡುವಿನ ರಾಜಕೀಯ ಸಮಾಧಾನದ ನಡುವೆ ಸಿಲುಕಿರುವ ಇದರ ಪರಂಪರೆಯು, ನಾವು ನಮ್ಮ ಇತಿಹಾಸವನ್ನು ಹೇಗೆ ವ್ಯಾಖ್ಯಾನಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. 150 ವರ್ಷಗಳ ಸುದೀರ್ಘ ಪಯಣದ ನಂತರವೂ ಈ ಗೀತೆಯು ಇಂದಿಗೂ ಚರ್ಚೆಯ ಕೇಂದ್ರಬಿಂದುವಾಗಿರುವುದು ಅದರ ಅಪ್ರತಿಮ ಪ್ರಭಾವಕ್ಕೆ ಅತಿ ದೊಡ್ಡ ಸಾಕ್ಷಿಯಾಗಿದೆ. ದೇಶಪ್ರೇಮದ ಈ ಮಹಾನ್ ಗೀತೆಯು ದೇಶವನ್ನು ವಿಭಜಿಸುವ ಬದಲು ಎಲ್ಲರನ್ನೂ ಭಾವನಾತ್ಮಕವಾಗಿ ಜೋಡಿಸುವಂತಾಗಬೇಕು.
Comments
Post a Comment