ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆ: ರಾಜಕೀಯ ಲೆಕ್ಕಾಚಾರ ಉಲ್ಟಾ ಹೊಡೆದಿದ್ದೇಕೆ ?
ಪ್ರಚಲಿತ * ಬಿವಿಸೀ
ನರೇಂದ್ರ ಮೋದಿ ಸರ್ಕಾರವು ರಾಹುಲ್ ಗಾಂಧಿ ವಿರುದ್ಧ ಉದ್ದೇಶಿತ ಹಕ್ಕುಚ್ಯುತಿ ನಿರ್ಣಯದಿಂದ ಹಿಂದೆ ಸರಿದಿರುವುದು ಕೇವಲ ಸೌಜನ್ಯದ ಕಾರಣಕ್ಕಲ್ಲ, ಬದಲಾಗಿ ಬದಲಾದ ರಾಜಕೀಯ ಪರಿಸ್ಥಿತಿಯ ಒತ್ತಡದಿಂದ ಎಂಬುದು ಸ್ಪಷ್ಟವಾಗಿದೆ. ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭಾರತದ ಒಪ್ಪಂದಗಳು ದೇಶದ ಹಿತಾಸಕ್ತಿಗೆ ಧಕ್ಕೆ ತರುತ್ತಿವೆ ಎಂದು ಸಂಸತ್ತಿನಲ್ಲಿ ರಾಹುಲ್ ಮಾಡಿದ ಗಂಭೀರ ಆರೋಪಗಳು ಕೇವಲ ವಿರೋಧ ಪಕ್ಷದ ಸಾಮಾನ್ಯ ಟೀಕೆಯಾಗಿ ಉಳಿಯದೆ, ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವೊದಗಿಸಿವೆ. ಅವರು ಈ ವಿಷಯವನ್ನು ಅತ್ಯಂತ ಭಾವನಾತ್ಮಕವಾಗಿ ಮತ್ತು ಅಷ್ಟೇ ದೃಢವಾಗಿ ಮಂಡಿಸಿದ್ದು, ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡಿದ್ದ ಆತಂಕಗಳನ್ನೇ ಪ್ರತಿಧ್ವನಿಸಿದಂತೆ ಭಾಸವಾಯಿತು. ಅನಿಶ್ಚಿತ ಮತ್ತು ವ್ಯವಹಾರಿಕ ಮನೋಭಾವದ ನಾಯಕರೊಂದಿಗೆ ನಡೆಯುವ ಪಾರದರ್ಶಕವಲ್ಲದ ಒಪ್ಪಂದಗಳು ಭಾರತಕ್ಕೆ ಅಪಾಯ ತರಬಹುದು ಎಂಬ ಅವರ ಮಾತುಗಳು ಜನರಿಗೆ ತಲುಪಿದವು.
ಕಳೆದ ಹಲವು ವರ್ಷಗಳಿಂದ ಮೋದಿ ಸರ್ಕಾರವು `ಆತ್ಮನಿರ್ಭರತೆ'ಯನ್ನು ಸಾರ್ವಭೌಮತ್ವ ಮತ್ತು ಆಯಕಟ್ಟಿನ ಸ್ವಾತಂತ್ರ‍್ಯದ ಸಂಕೇತವಾಗಿ ಬಿಂಬಿಸುತ್ತಾ ಬಂದಿದೆ. ಇಂತಹ ಸನ್ನಿವೇಶದಲ್ಲಿ, ವ್ಯಾಪಾರ ಒಪ್ಪಂದಗಳ ವಿಷಯದಲ್ಲಿ ಭಾರತವು ಪರಕೀಯ ಒತ್ತಡಕ್ಕೆ ಮಣಿಯುತ್ತಿದೆ ಎಂಬ ಸಣ್ಣ ಸಂಶಯವೂ ರಾಜಕೀಯವಾಗಿ ಸರ್ಕಾರಕ್ಕೆ ಮುಜುಗರ ತರುವಂಥದ್ದಾಗಿತ್ತು. ರಾಹುಲ್ ಗಾಂಧಿ ಈ ಸಂಶಯವನ್ನೇ ಒಂದು ನೇರ ರಾಜಕೀಯ ಸವಾಲಾಗಿ ಪರಿವರ್ತಿಸಿದರು. ಸರ್ಕಾರವು ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆಯ ಸುಳಿವು ನೀಡಿದಾಗಲೂ ಗಾಂಧಿ ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ; ಬದಲಾಗಿ, `ಧೈರ್ಯವಿದ್ದರೆ ಮುಂದುವರಿಯಿರಿ; ನೇಣಿಗೆ ಹಾಕುವುದಿದ್ದರೂ ರೆಡಿ' ಎಂದು ಸವಾಲು ಹಾಕಿದರು. ಈ ಹಠಾತ್ ಬೆಳವಣಿಗೆಯು ರಾಜಕೀಯ ಸಮೀಕರಣವನ್ನೇ ಬದಲಿಸಿತು. ಒಂದು ವೇಳೆ ಸರ್ಕಾರ ಹಕ್ಕುಚ್ಯುತಿ ಮಂಡನೆಯೊಂದಿಗೆ ಮುಂದೆ ಹೋಗಿದ್ದರೆ, ಅದು ಕೇವಲ ನೀತಿಗಳ ಮೇಲಿನ ಚರ್ಚೆಯಾಗಿ ಉಳಿಯದೆ ಸಂಸತ್ತಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯದ ಮೇಲಿನ ಹಲ್ಲೆ ಎಂಬಂತೆ ಬಿಂಬಿತವಾಗುತ್ತಿತ್ತು.
ಸರ್ಕಾರದ ಇಂತಹ ಕ್ರಮವು ರಾಹುಲ್ ಗಾಂಧಿಯವರಿಗೆ ಜನರ ಸಹಾನುಭೂತಿ ಗಳಿಸಲು ಅವಕಾಶ ಮಾಡಿಕೊಡುತ್ತಿತ್ತು. ವಿಶೇಷವಾಗಿ ರೈತರು, ಸಣ್ಣ ವ್ಯಾಪಾರಿಗಳು ಮತ್ತು ದೇಶದ ಆರ್ಥಿಕ ಸ್ವಾಯತ್ತತೆಯ ಬಗ್ಗೆ ಕಾಳಜಿ ಹೊಂದಿರುವ ಮಧ್ಯಮ ವರ್ಗದ ಮತದಾರರಲ್ಲಿ ಸರ್ಕಾರದ ಬಗ್ಗೆ ನಕಾರಾತ್ಮಕ ಭಾವನೆ ಮೂಡುವ ಸಾಧ್ಯತೆಯಿತ್ತು. ಒಂದು ವೇಳೆ ಅವರನ್ನು ಅಮಾನತುಗೊಳಿಸುವ ಅಥವಾ ಅನರ್ಹಗೊಳಿಸುವ ಪ್ರಯತ್ನ ನಡೆದಿದ್ದರೆ, `ಟೀಕೆಗಳನ್ನು ಸಹಿಸದ ಸರ್ಕಾರ' ಎಂಬ ಹಣೆಪಟ್ಟಿ ಬಲವಾಗುತ್ತಿತ್ತು.
ರಾಜಕೀಯದಲ್ಲಿ ಕೆಲವೊಮ್ಮೆ ಹಿಮ್ಮೆಟ್ಟುವಿಕೆ ಎನ್ನುವುದು ದೌರ್ಬಲ್ಯವಲ್ಲ, ಬದಲಾಗಿ ವಾಸ್ತವದ ಅರಿವು. ಸಾರ್ವಜನಿಕ ವಲಯದಲ್ಲಿ ಎದ್ದಿರುವ ನೈಜ ಆತಂಕಗಳನ್ನು ಎತ್ತಿ ತೋರಿಸಿದ ಟೀಕಾಕಾರನನ್ನು ಶಿಕ್ಷಿಸುವುದು, ಅವರು ಮಾಡಿದ ಆರೋಪಗಳನ್ನೇ ನಿಜವೆಂದು ಸಾಬೀತುಪಡಿಸಿದಂತಾಗುತ್ತದೆ ಎಂದು ಸರ್ಕಾರಕ್ಕೆ ಮನವರಿಕೆಯಾಗಿರಬಹುದು. ಆದ್ದರಿಂದಲೇ, ವಿವಾದವನ್ನು ಮತ್ತಷ್ಟು ಬೆಳೆಸುವ ಬದಲು ಮೌನವಾಗಿ ಹಿಂದೆ ಸರಿಯುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಿಜೆಪಿ ನಾಯಕತ್ವ ಬಂದಿದೆ
Comments
Post a Comment