ಮುಖ್ಯಮಂತ್ರಿಯಾಗುವ ಬಯಕೆಗೆ ಆಳ್ವಿಕೆಯ ಬಲಿ
ಮಾತು ಕಡಿಮೆ ಮಾಡಿ ಆಳ್ವಿಕೆಯನ್ನು ಚುರುಕುಗೊಳಿಸುವುದೇ ದಾರಿ
* ಬಿವಿಸೀ
ಇಂದು ಕರ್ನಾಟಕದ ಕಾಂಗ್ರೆಸ್ ಪಕ್ಷ ಆಡಳಿತಾರೂಢ ಪಕ್ಷದ ಹಾಗೆ ಕಾಣುವುದಿಲ್ಲ. ಹೆಚ್ಚಾಗಿ ಅಡೆತಡೆಯಿಲ್ಲದ ಮಾತುಗಳನ್ನಾಡುವ ಒಂದು ಸಂಘದಂತಾಗಿದ್ದು, ಮಾತನಾಡುವುದನ್ನು ತಡೆಯುವವರು ಯಾರು ಎಂಬುದು ಸ್ಪಷ್ಟವಿಲ್ಲ. ಈ ಸಮಸ್ಯೆಯ ಕೇಂದ್ರ ಇರುವುದು ಇಬ್ಬರು ನಾಯಕರು, ಇಬ್ಬರಲ್ಲೂ ಸಂಯಮ ಕಾಣುವುದಿಲ್ಲ - ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ.
ಶಿವಕುಮಾರ್ ಅವರ ಮುಖ್ಯಮಂತ್ರಿಯಾಗುವ ಹಂಬಲ ಗೋಪ್ಯವಾಗೇನೂ ಉಳಿದಿಲ್ಲ. ಅಥವಾ ಅಚ್ಚರಿಯ ಅಂಶವೂ ಅಲ್ಲ. ಅಚ್ಚರಿದಾಯಕ ಸಂಗತಿ ಎಂದರೆ, ನಾಯಕತ್ವದ ಪ್ರಶ್ನೆ ಬಗೆಹರಿಸಲಾಗಿದೆ ಎಂದು ಹೈಕಮಾಂಡ್ ಹೇಳುತ್ತಲೇ ಇದ್ದರೂ ಸಹ ಸಾರ್ವಜನಿಕವಾಗಿ ಅವರು ತಮ್ಮ ಹಂಬಲವನ್ನು ಪದೇಪದೇ ವ್ಯಕ್ತಪಡಿಸುತ್ತಿರುವುದು. ಪ್ರತಿಯೊಂದು ಹೇಳಿಕೆಯೂ, ಸೂಚನೆಯೂ ಸಹ ಅವರ ಬೆಂಬಲಿಗರ ಪ್ರಶಂಸೆಗೆ ಒಳಗಾಗುತ್ತಿದ್ದು ಡಿಕೆಶಿ ಮುಖ್ಯಮಂತ್ರಿಯಾಗುವ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಿದೆ. ಈ ಬೆಳವಣಿಗೆಗಳು ಏನನ್ನೂ ಸಾಧಿಸುವುದಿಲ್ಲ, ಹೆಚ್ಚೆಂದರೆ ಹುದ್ದೆ ಖಾಲಿ ಇಲ್ಲದಿದ್ದಾಗಲೂ ಸಹ ನಾಯಕತ್ವದ ಪ್ರಶ್ನೆ ಚಾಲನೆಯಲ್ಲಿರುತ್ತದೆ. ರಾಜಕಾರಣದಲ್ಲಿ ಮತ್ತೆ ಮತ್ತೆ ಹೇಳುತ್ತಲೇ ಇರುವುದರಿಂದ ವ್ಯಕ್ತಿಯ ಹಕ್ಕೊತ್ತಾಯಕ್ಕೆ ಬಲ ಬರುವುದಿಲ್ಲ. ಶಿಸ್ತನ್ನು ಹಾಳುಮಾಡುತ್ತದೆ.
ಯತೀಂದ್ರ ಅವರ ಹಸ್ತಕ್ಷೇಪವು ಅನಗತ್ಯವಾಗಿತ್ತು. ತಮ್ಮ ತಂದೆಯವರು ಪೂರ್ಣಾವಧಿ ಪೂರೈಸುತ್ತಾರೆ ಎಂಬ ಅವರ ದೃಢ ಹೇಳಿಕೆ ರಾಜಕೀಯ ವಾಸ್ತವವನ್ನು ಬಿಂಬಿಸಬಹುದು, ಆದರೆ ಇದು ನಿಜವೇ ಎನ್ನುವುದು ಮುಖ್ಯ ಪ್ರಶ್ನೆಯಲ್ಲ, ಅವರಿಂದ ಏಕೆ ಈ ಅಭಿಪ್ರಾಯ ಬರುತ್ತಿದೆ ಎನ್ನುವುದು ಪ್ರಶ್ನೆ. ಮುಖ್ಯಮಂತ್ರಿಯ ಮಗ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವಾಗ ಇದು ಸಾರ್ವಜನಿಕವಾಗಿ ಒಳ್ಳೆಯ ಚಿತ್ರಣವನ್ನು ನೀಡುವುದಿಲ್ಲ ಮತ್ತು ಪಕ್ಷದಲ್ಲಿ ಅಸಮಾಧಾನ ಹೆಚ್ಚಾಗುತ್ತದೆ. ಯಾವುದೇ ಸಂಘಟನಾತ್ಮಕ ಜವಾಬ್ದಾರಿ ಇಲ್ಲದ ವ್ಯಕ್ತಿ ನಾಯಕತ್ವದ ಮುಂದುವರಿಕೆ ಅಥವಾ ಸ್ಥಿರತೆಯ ಬಗ್ಗೆ ಹೇಳಿಕೆ ನೀಡುವುದನ್ನು ಪಕ್ಷದ ನಾಯಕರು ಒಪ್ಪುವುದಿಲ್ಲ.
ಇದರ ಪರಿಣಾಮಗಳನ್ನು ನಿರೀಕ್ಷಿಸಬಹುದು. ಒಮ್ಮೆ ಮುಖ್ಯಮಂತ್ರಿಯ ಬದಲಾವಣೆಯ ವಿಷಯವನ್ನು ಸಾರ್ವಜನಿಕವಾಗಿ ಚಾಲನೆಯಲ್ಲಿರಿಸಿದರೆ, ಇತರ ನಾಯಕರಾದ ಜಿ ಪರಮೇಶ್ವರ್, ಎಮ್ ಬಿ ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಮುಂತಾದವರು ತಮ್ಮ ಹಂಬಲವನ್ನು ಕಡ್ಡಾಯವಾಗಿ ವ್ಯಕ್ತಪಡಿಸುವಂತಾಗುತ್ತದೆ. ಸಚಿವ ಸಂಪುಟವು ಹುದ್ದೆ ಬಯಸುವವರ ಗುಂಪು ಆಗುವುದೇ ಹೊರತು, ಸಹವರ್ತಿಗಳ ಕೂಟ ಆಗುವುದಿಲ್ಲ.
ಇದು ಪಕ್ಷ ಮತ್ತು ಸರಕಾರಕ್ಕೆ ಅನಗತ್ಯವಾದ ಹಾನಿ ಉಂಟುಮಾಡುತ್ತಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವದ ಬಿಕ್ಕಟ್ಟು ಇಲ್ಲ. ಸಮಸ್ಯೆ ಇರುವುದು ಶಿಸ್ತಿನಲ್ಲಿ. ಮತದಾರರು ಸರ್ಕಾರವನ್ನು ಚುನಾಯಿಸುವುದು ಆಂತರಿಕ ಹಕ್ಕೊತ್ತಾಯಗಳಿಗಾಗಿ ಅಲ್ಲ. ಸರ್ಕಾರವನ್ನು ಚುನಾಯಿಸುವುದು ಆಳ್ವಿಕೆ ನಡೆಸುವುದಕ್ಕಾಗಿ. ಸಾಮಾನ್ಯ ಪರಿಜ್ಞಾನ ಇದ್ದರೆ ಒಂದು ಸರಳ ಉಪಾಯವನ್ನೂ ಕಾಣಬಹುದು. ಮಾತು ಕಡಿಮೆ ಮಾಡಿ ಆಳ್ವಿಕೆಯನ್ನು ಚುರುಕುಗೊಳಿಸುವುದೇ ಆ ಉಪಾಯ.. ನಾಯಕತ್ವದ ಪ್ರಶ್ನೆಯನ್ನು ಕದಮುಚ್ಚಿದ ಕೋಣೆಗಳಲ್ಲಿ ನಿರ್ಧರಿಸಬೇಕೇ ಹೊರತು, ಸಾರ್ವಜನಿಕ ವೇದಿಕೆಗಳಲ್ಲಿ ಅಲ್ಲ.
Comments
Post a Comment