ಹರಿಪ್ರಸಾದ್ ಅತಿರೇಕದ ನಡೆ ದುಬಾರಿಯಾಗಬಹುದು
ಆಕ್ರೋಶ ಕ್ಷಮಾಪಣೆಯಿಂದಾಗುವ ಮುಜುಗರವನ್ನು ತಪ್ಪಿಸಬಹುದಿತ್ತು.
......
ಇತ್ತೀಚಿನ ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ನಡೆದ ಅಸಹ್ಯಕರ ಬೆಳವಣಿಗೆಗಳು, ರಾಜಕೀಯ ಪ್ರತಿಭಟನೆಯೊಂದು ಸಾಂಸ್ಥಿಕವಾಗಿ ಹೇಗೆ ಅಪಮಾನಕರವಾಗಿ ಪರಿಣಮಿಸುತ್ತದೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣುತ್ತದೆ. ರಾಜ್ಯಪಾಲರ ವರ್ತನೆಯ ವಿರುದ್ಧ ಒಂದು ತರ್ಕಬದ್ಧವಾದ, ತೀಕ್ಷ್ಣ ಸಂಘರ್ಷವಾಗಬಹುದಾಗಿದ್ದ ಘಟನೆ, ಸದನದಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿದ್ದು, ಇದಕ್ಕೆ ಮೂಲ ಕಾರಣರಾದವರು ಹಿರಿಯ ಶಾಸಕರೊಬ್ಬರ ಸಂಯಮವಿಲ್ಲದ ನಾಟಕೀಯ ನಡವಳಿಕೆ.
ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರನ್ನು ದೈಹಿಕವಾಗಿ ತಡೆಗಟ್ಟಲು ಮೇಲ್ಮನೆ ಸದಸ್ಯ ಬಿ ಕೆ ಹರಿಪ್ರಸಾದ್ ಪ್ರಯತ್ನಿಸಿದ್ದು, ಸಂಸದೀಯ ನಿಯಮಗಳನ್ನು ಉಲ್ಲಂಘಿಸುವ ಗಂಭೀರ ಘಟನೆಯಾಗಿದೆ. ರಾಜ್ಯಪಾಲರು ವಿವಾದಾಸ್ಪದವಾಗಿರಬಹುದು, ಅವರ ನಡವಳಿಕೆ ಮತ್ತು ತೀರ್ಮಾನಗಳನ್ನು ಪ್ರಶ್ನಿಸಬಹುದು, ಬಲವಾಗಿ ಅದನ್ನು ಪ್ರಶ್ನಿಸಲೂಬಹುದು; ಆದರೆ ಏನೇ ಆದರೂ ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವವರಾಗಿರುತ್ತಾರೆ. ಅವರ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೂ ಅದು ರಾಜಕೀಯ ಸ್ವರೂಪದಲ್ಲಿದ್ದು ನಿಯಮಬದ್ಧವಾಗಿರಬೇಕಾಗುತ್ತದೆ. ದೈಹಿಕವಾಗಿ ಅಥವಾ ವೈಯುಕ್ತಿಕ ನೆಲೆಯಲ್ಲಿ ಅಲ್ಲ. ಒಮ್ಮೆ ಈ ಲಕ್ಷ್ಮಣರೇಖೆಯನ್ನು ದಾಟಿದರೆ ಶಾಸಕಾಂಗವೇ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ.
ಸಚಿವ ಸಂಪುಟ ಸಿದ್ದಪಡಿಸಿದ್ದ ಭಾಷಣವನ್ನು ರಾಜ್ಯಪಾಲರು ಪೂರ್ತಿಯಾಗಿ ಓದದೆ ಇರುವುದರಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಆಕ್ರೋಶ ವ್ಯಕ್ತಪಡಿಸುವುದು ನ್ಯಾಯಯುತವಾದುದು. ಈ ನಡವಳಿಕೆಯು ಸಾಂವಿಧಾನಿಕ ಬದ್ಧತೆಯ ಬಗ್ಗೆ ಕಳಕಳಿಯನ್ನು ಉಂಟುಮಾಡುವುದೇ ಅಲ್ಲದೆ, ಚುನಾಯಿತ ಸರ್ಕಾರಗಳಿಗೆ ಅವಕಾಶಗಳೇ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ. ಘೋಷಣೆಗಳು, ಪ್ರತಿಭಟನೆಗಳು ಮತ್ತು ತೀಕ್ಷ್ಣವಾದ ಹೇಳಿಕೆ, ಭಾಷಣಗಳು ಇಲ್ಲಿ ಸಮರ್ಪಕವಾಗಿರುತ್ತಿದ್ದವು. ಆದರೆ ಹರಿಪ್ರಸಾದ್ ಅವರ ಅತಿರೇಕದ ವರ್ತನೆ ಎಲ್ಲವನ್ನೂ ಪಲ್ಲಟಗೊಳಿಸಿದ್ದು, ರಾಜ್ಯಪಾಲರ ನಿಯಮಬಾಹಿರ ನಡೆಯಿಂದ ವಿಷಯವನ್ನು ಶಾಸನಸಭೆಯ ದುರ್ವರ್ತನೆಯ ಕಡೆಗೆ ಹೊರಳಿದೆ.
ಇಡೀ ಪ್ರಸಂಗವು ಹೆಚ್ಚು ವಿವಾದಾಸ್ಪದವಾಗಿ ಕಾಣಲು ಕಾರಣ, ಹರಿಪ್ರಸಾದ್ ಅವರ ರಾಜಕೀಯ ಸ್ಥಾನಮಾನ. ಬಹಳ ಸಮಯ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಕಾರರಾಗಿದ್ದು, ಹಠಾತ್ತನೆ ಸರ್ಕಾರದ ಸಮರ್ಥಕರಾಗಿ ಮುನ್ನಲೆಗೆ ಬಂದ ಹರಿಪ್ರಸಾದ್, ಪಕ್ಷದ ನಿರ್ದೇಶನದ ಅನುಸಾರವೇ ನಡೆದುಕೊಳ್ಳುತ್ತಿರುವುದು ಸ್ಪಷ್ಟ. ಇತರರನ್ನು ಹಿಂದಿಕ್ಕುವ ಭರದಲ್ಲಿ ಹರಿಪ್ರಸಾದ್ ತಮ್ಮನ್ನೇ ಪ್ರತ್ಯೇಕಿಸಿಕೊಂಡಿದ್ದಾರೆ. ಅವರ ವರ್ತನೆಯನ್ನು ಕಾಂಗ್ರೆಸ್ ನಾಯಕತ್ವವಾಗಲೀ ಸಾರ್ವಜನಿಕರಾಗಲೀ ಒಪ್ಪಲು ಸಾಧ್ಯವಿಲ್ಲ. ತದನಂತರ ಸಲ್ಲಿಸಿದ ಕ್ಷಮಾಪಣೆ ವಾಸ್ತವವನ್ನು ಬಿಂಬಿಸುವಂತಿದ್ದು, ರಾಜಕೀಯ ಬೆಂಬಲ ಇಲ್ಲದಿರುವುದನ್ನು ಸೂಚಿಸುತ್ತದೆ.
ಅವರ ಹರಿದ ಅಂಗಿಯ ಸುತ್ತ ಹಬ್ಬಿದ ವಿವಾದ ಪರಿಸ್ಥಿತಿಯನ್ನು ಇನ್ನೂ ಪ್ರಕ್ಷುಬ್ಧಗೊಳಿಸಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಹಾಗೆ, ಸದನದ ಮಾರ್ಷಲ್‍ಗಳು ಬಲವಂತವಾಗಿ ಹರಿಪ್ರಸಾದ್ ಅವರನ್ನು ಪಕ್ಕಕ್ಕೆ ತಳ್ಳಿದಾಗ ಇದು ಸಂಭವಿಸಿದೆಯೇ ಹೊರತು ಬಿಜೆಪಿ ಶಾಸಕರ ದಾಳಿಯಿಂದ ಅಲ್ಲ. ಈ ರೀತಿಯ ಅಭಿಪ್ರಾಯವನ್ನೇ ಮುನ್ನಲೆಗೆ ತರುವುದರ ಮೂಲಕ ಮೂಲ ಪ್ರಶ್ನೆಯನ್ನೇ ಮರೆಮಾಚಲಾಗಿದ್ದು, ದಿಕ್ಕು ತಪ್ಪಿಸಲಾಗಿದೆ. ಒಬ್ಬ ಹಿರಿಯ ಅನುಭವಿ ಶಾಸಕರು ರಾಜ್ಯಪಾಲರ ಕಡೆಗೆ ಧಾವಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.
ತಮ್ಮ 71ನೆಯ ವಯಸ್ಸಿನಲ್ಲಿ ಹರಿಪ್ರಸಾದ್ ಅನುಭವಸ್ಥರಾಗಿ ವರ್ತಿಸಬೇಕು. ಆದರೆ ಈ ಪ್ರಸಂಗವನ್ನು ನೋಡಿದರೆ ಸಂಯಮ ಇಲ್ಲದ ಅನುಭವ ಹೊರೆಯಾಗಿ ಪರಿಣಮಿಸುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ಅಂತಿಮವಾಗಿ ಶಾಸನಸಭೆ ತನ್ನ ಉನ್ನತ ಮೌಲ್ಯವನ್ನು ಕಳೆದುಕೊಂಡಿದ್ದು, ಕರ್ನಾಟಕದ ಪ್ರಜಾಸತ್ತಾತ್ಮಕ ಪರಂಪರೆಗೆ ತೀವ್ರ ಧಕ್ಕೆ ಉಂಟಾಗಿರುವುದು ಸ್ಪಷ್ಟ.
Comments
Post a Comment