ಗಡಿಗಳ ಒಳಗೆ ವಾಸಿಸುವವರ ದಾಖಲೆ ಸರ್ಕಾರದ ಬಳಿಯೇ ಇಲ್ಲವೇ?
ವಲಸಿಗರನ್ನು ಗುರುತಿಸಲಾಗದ ನಿಷ್ಕ್ರಿಯತೆಯನ್ನು ಯಾವ ಪ್ರಜಾಪ್ರಭುತ್ವವೂ ಸಹಿಸಲಾಗುವುದಿಲ್ಲ .................... ಆಂತರಿಕ ಭದ್ರತೆ * ಬಿವಿಸೀ ಸಾಮಾನ್ಯವಾಗಿ ಸರ್ಕಾರಗಳು ನುಣುಚಿಕೊಳ್ಳಲು ಬಯಸುವ ವಿಷಯವೊಂದನ್ನು ಕರ್ನಾಟಕದ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಸಾರ್ವಜನಿಕ ಚರ್ಚೆಗೆ ಒಳಪಡಿಸಿದೆ. ರಾಜ್ಯದಲ್ಲಿರುವ ಬಾಂಗ್ಲಾದೇಶಿ ಅಕ್ರಮ ವಲಸಿಗರ ಬಗ್ಗೆ ವಿಚಾರಣೆ ನಡೆಸುವ ಸಂದರ್ಭದಲ್ಲಿ, ನ್ಯಾಯಮೂರ್ತಿಗಳು ಬೆಂಗಳೂರು ಒಂದರಲ್ಲೇ 20 ಲಕ್ಷ ಅಕ್ರಮ ವಲಸಿಗರು ಇರಬಹುದು, ಇದು ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಅಂಕಿ ಅಂಶಗಳು ನಿಖರವೋ ಅಲ್ಲವೋ ಎನ್ನುವುದಕ್ಕಿಂತಲೂ ಕಳಕಳಿಯ ವಾಸ್ತವಾಂಶವೆಂದರೆ ರಾಜ್ಯವಾಗಲೀ ಕೇಂದ್ರ ಸರ್ಕಾರವಾಗಲೀ, ಅಧಿಕೃತವಾಗಿ ಎಷ್ಟು ವಿದೇಶೀಯರು ದಾಖಲೆಗಳಿಲ್ಲದೆ ದೇಶದಲ್ಲಿದ್ದಾರೆ ಎಂದು ದಾಖಲೆಗಳ ಸಮೇತ ನೀಡಲು ಸಾಧ್ಯವಾಗಿಲ್ಲ. ವಲಸಿಗರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಇಲ್ಲದಿರುವುದು ಆಳ್ವಿಕೆಯ ವೈಫಲ್ಯವಾಗಿದೆ. ಸಾರ್ವಭೌಮ ದೇಶವೊಂದು ತನ್ನ ಗಡಿಗಳ ಒಳಗೆ ಯಾರು ವಾಸಿಸುತ್ತಾರೆ ಎಂಬ ಮಾಹಿತಿ ಹೊಂದಿರದಿದ್ದರೆ ಅದು ಮೂಲಭೂತ ಜವಾಬ್ದಾರಿಯಿಂದ ನುಣುಚಿಕೊಂಡಂತಾಗುತ್ತದೆ. ಅಂದಾಜುಗಳು ಮುಕ್ತವಾಗಿ ಹರಿದಾಡುತ್ತವೆ. ಎನ್‍ಜಿಒಗಳು ಬಾಂಗ್ಲಾದೇಶದ ಅಕ್ರಮ ವಲಸಿಗರು ಕೋಟ್ಯಂತರ ಇರುವುದಾಗಿ ಹೇಳುತ್ತವೆ. ಆದರೆ ಸರ್ಕಾರಗಳು ಮೌನವಾಗಿರುತ್ತವೆ, ಇಲ್ಲವಾದರೆ ಉತ್ತರ ನೀ...