ನೇಮಕಾತಿ ಎಂಬ ಮರೀಚಿಕೆ: ಖಾಲಿ ಬೊಕ್ಕಸದ ಭರವಸೆ
ಕರ್ನಾಟಕವು ಸಹಿಸಿಕೊಳ್ಳಲಾಗದ ಬಾಧ್ಯತೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವಶ್ಯ ಆಳ್ವಿಕೆಯ ವೆಚ್ಚಗಳಿಗೆ ಕೊರತೆಯಾಗಿದೆ. ............. ಕೇವಿಯಟ್ * ಬಿವಿಸೀ ಕರ್ನಾಟಕದ ನಿರುದ್ಯೋಗ ಸಮಸ್ಯೆ ಈಗ ಕೇವಲ ಆರ್ಥಿಕ ವಿಷಯವಾಗಿ ಉಳಿದಿಲ್ಲ. ಇದು ರಾಜ್ಯದ ಆಡಳಿತ ವ್ಯವಸ್ಥೆ ಕುಸಿಯುತ್ತಿರುವುದರ ಸಂಕೇತವಾಗಿ ಕಾಣುತ್ತಿದೆ. ಹಲವು ತಿಂಗಳುಗಳಿಗೊಮ್ಮೆ ಸರ್ಕಾರ ಸಾವಿರಾರು ಹೊಸ ಉದ್ಯೋಗ ನೇಮಕಾತಿಯನ್ನು, ಎಲ್ಲ ವಿಭಾಗಗಳಲ್ಲೂ ಘೋಷಿಸುತ್ತದೆ. ಇದು ಹಲವು ವರ್ಷಗಳಿಂದ ಉದ್ಯೋಗ ನಿರೀಕ್ಷೆಯಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳಲ್ಲಿ ಭರವಸೆ ಮೂಡಿಸುತ್ತದೆ. ಆದರೆ ಈ ಘೋಷಣೆಗಳು ಮೇಲ್ನೋಟಕ್ಕೆ ಭರವಸೆದಾಯಕವಾಗಿ ಕಂಡರೂ, ವಾಸ್ತವದಲ್ಲಿ ನಾಟಕೀಯ ಪ್ರಸಂಗವಾಗಿರುತ್ತದೆ. ಇದಕ್ಕೆ ಏನೂ ವೆಚ್ಚ ತಗುಲುವುದಿಲ್ಲ, ಬದಲಾಗಿ ತಾತ್ಕಾಲಿಕ ಆಶಾಭಾವನೆಯನ್ನು ಮೂಡಿಸುವ ಮೂಲಕ ಸಮಯ ಹರಣ ಮಾಡಲು ನೆರವಾಗುತ್ತದೆ. ಇದರಿಂದಾಚೆಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಕಟು ವಾಸ್ತವ ಎಂದರೆ ರಾಜ್ಯ ಸರ್ಕಾರಕ್ಕೆ ಉದ್ಯೋಗ ದೊರಕಿಸಲು ಸಾಮಥ್ರ್ಯವಿಲ್ಲ. ಹಣಕಾಸು ಪರಿಸ್ಥಿತಿ ಡೋಲಾಯಮಾನವಾಗಿದ್ದು, ಗ್ಯಾರಂಟಿ ಯೋಜನೆಗಳಿಗೂ ಹಣ ಒದಗಿಸಲಾಗದಂಥ ಸ್ಥಿತಿ ಬಂದಿದೆ. ತೆರಿಗೆದಾರರು ಕೊಟ್ಟ ಹಣ ಏನಾಗುತ್ತದೆಯೋ ಗೊತ್ತಿಲ್ಲ. ಸಾಲದ ಹೊರೆ ಹೆಚ್ಚಾಗುತ್ತಿದೆ, ಹಲವು ಬಿಲ್‍ಗಳೂ ಪಾವತಿಯಾಗದೆ ಉಳಿದಿವೆ, ಮೂಲ ಸೌಕರ್ಯಗಳು ನೆನೆಗುದಿಗೆ ಬಿದ್ದಿವೆ. ಸರ್ಕಾರಿ ನೌಕರರ ವೇತನಗಳು ಸರ್ಕಾರದ ಇತಿಮಿತಿಗಳನ...