ನೇಮಕಾತಿ ಎಂಬ ಮರೀಚಿಕೆ: ಖಾಲಿ ಬೊಕ್ಕಸದ ಭರವಸೆ
ಕರ್ನಾಟಕವು ಸಹಿಸಿಕೊಳ್ಳಲಾಗದ ಬಾಧ್ಯತೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವಶ್ಯ ಆಳ್ವಿಕೆಯ ವೆಚ್ಚಗಳಿಗೆ ಕೊರತೆಯಾಗಿದೆ.
.............
ಕೇವಿಯಟ್ * ಬಿವಿಸೀ
ಕರ್ನಾಟಕದ ನಿರುದ್ಯೋಗ ಸಮಸ್ಯೆ ಈಗ ಕೇವಲ ಆರ್ಥಿಕ ವಿಷಯವಾಗಿ ಉಳಿದಿಲ್ಲ. ಇದು ರಾಜ್ಯದ ಆಡಳಿತ ವ್ಯವಸ್ಥೆ ಕುಸಿಯುತ್ತಿರುವುದರ ಸಂಕೇತವಾಗಿ ಕಾಣುತ್ತಿದೆ. ಹಲವು ತಿಂಗಳುಗಳಿಗೊಮ್ಮೆ ಸರ್ಕಾರ ಸಾವಿರಾರು ಹೊಸ ಉದ್ಯೋಗ ನೇಮಕಾತಿಯನ್ನು, ಎಲ್ಲ ವಿಭಾಗಗಳಲ್ಲೂ ಘೋಷಿಸುತ್ತದೆ. ಇದು ಹಲವು ವರ್ಷಗಳಿಂದ ಉದ್ಯೋಗ ನಿರೀಕ್ಷೆಯಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳಲ್ಲಿ ಭರವಸೆ ಮೂಡಿಸುತ್ತದೆ. ಆದರೆ ಈ ಘೋಷಣೆಗಳು ಮೇಲ್ನೋಟಕ್ಕೆ ಭರವಸೆದಾಯಕವಾಗಿ ಕಂಡರೂ, ವಾಸ್ತವದಲ್ಲಿ ನಾಟಕೀಯ ಪ್ರಸಂಗವಾಗಿರುತ್ತದೆ. ಇದಕ್ಕೆ ಏನೂ ವೆಚ್ಚ ತಗುಲುವುದಿಲ್ಲ, ಬದಲಾಗಿ ತಾತ್ಕಾಲಿಕ ಆಶಾಭಾವನೆಯನ್ನು ಮೂಡಿಸುವ ಮೂಲಕ ಸಮಯ ಹರಣ ಮಾಡಲು ನೆರವಾಗುತ್ತದೆ. ಇದರಿಂದಾಚೆಗೆ ಯಾವುದೇ ಪ್ರಯೋಜನವಾಗುವುದಿಲ್ಲ.
ಕಟು ವಾಸ್ತವ ಎಂದರೆ ರಾಜ್ಯ ಸರ್ಕಾರಕ್ಕೆ ಉದ್ಯೋಗ ದೊರಕಿಸಲು ಸಾಮಥ್ರ್ಯವಿಲ್ಲ. ಹಣಕಾಸು ಪರಿಸ್ಥಿತಿ ಡೋಲಾಯಮಾನವಾಗಿದ್ದು, ಗ್ಯಾರಂಟಿ ಯೋಜನೆಗಳಿಗೂ ಹಣ ಒದಗಿಸಲಾಗದಂಥ ಸ್ಥಿತಿ ಬಂದಿದೆ. ತೆರಿಗೆದಾರರು ಕೊಟ್ಟ ಹಣ ಏನಾಗುತ್ತದೆಯೋ ಗೊತ್ತಿಲ್ಲ. ಸಾಲದ ಹೊರೆ ಹೆಚ್ಚಾಗುತ್ತಿದೆ, ಹಲವು ಬಿಲ್‍ಗಳೂ ಪಾವತಿಯಾಗದೆ ಉಳಿದಿವೆ, ಮೂಲ ಸೌಕರ್ಯಗಳು ನೆನೆಗುದಿಗೆ ಬಿದ್ದಿವೆ. ಸರ್ಕಾರಿ ನೌಕರರ ವೇತನಗಳು ಸರ್ಕಾರದ ಇತಿಮಿತಿಗಳನ್ನು ಮೀರಿ ಹೆಚ್ಚಾಗಿವೆ. ತತ್ಪರಿಣಾಮವಾಗಿ, ನೇಮಕಾತಿ ಸ್ಥಗಿತಗೊಂಡಿದ್ದು, ಇಲಾಖೆಗಳೂ ಸಹ ಸಿಬ್ಬಂದಿ ಇಲ್ಲದೆ ಪರದಾಡುತ್ತಿವೆ.
ಎಲ್ಲ ಆಡಳಿತ ಇಲಾಖೆಗಳಲ್ಲೂ ಶೇಕಡಾ 60ರಿಂದ 70 ಮಂಜೂರಾದ ಹುದ್ದೆಗಳು ಖಾಲಿ ಉಳಿದಿವೆ. ಇದು ವ್ಯವಸ್ಥೆಯ ವೈಫಲ್ಯವಾಗಿದೆ. ಇಲಾಖೆಗಳಿಗೆ ಎಂಜಿನಿಯರ್‍ಗಳು, ಇನ್ಸ್‍ಪೆಕ್ಟರ್‍ಗಳು, ವೈದ್ಯಕೀಯ ಸಿಬ್ಬಂದಿ ಶಿಕ್ಷಕರು ಮತ್ತು ಕ್ಷೇತ್ರ ಕಾರ್ಯದ ಅಧಿಕಾರಿಗಳು ಅಗತ್ಯವಾಗಿದ್ದಾರೆ. ಆದರೆ ಅಲ್ಪ ಪ್ರಮಾಣದ ಸಿಬ್ಬಂದಿಯೊಂದಿಗೇ ನಿರ್ವಹಿಸುತ್ತಿವೆ. ಒಬ್ಬರೇ ಅಧಿಕಾರಿ ಐದು ಜನರ ಕೆಲಸ ಮಾಡುತ್ತಿದ್ದಾರೆ. ಕಡತಗಳು ಮುಂದೆ ಸಾಗುತ್ತಿಲ್ಲ. ಸಾರ್ವಜನಿಕ ಕುಂದುಕೊರತೆಗಳು ಧೂಳು ತಿನ್ನುತ್ತಿವೆ. ನಿಗದಿತ ಸಮಯವನ್ನು ಮೀರಲಾಗುತ್ತಿದ್ದು ಅದನ್ನು ಪೂರೈಸಲು ಸಿಬ್ಬಂದಿ ಇಲ್ಲವಾಗಿದೆ. ಕ್ರಮೇಣ ಸರ್ಕಾರದ ಆಡಳಿತ ಯಂತ್ರ ತನ್ನದೇ ಭಾರದಲ್ಲಿ ನಲುಗಿಹೋಗುತ್ತಿದ್ದು, ನಾಗರಿಕರ ಪಾಲಿಗೆ ಕೆಲಸವನ್ನೇ ಮಾಡದ, ಸ್ಪಂದಿಸದ ಇಲಾಖೆಗಳಷ್ಟೇ ಕಾಣುತ್ತಿವೆ.
ಈ ವ್ಯವಸ್ಥೆಯನ್ನು ಸರಿದೂಗಿಸಲು ಸರ್ಕಾರವು ಪರಾರಿಯಾಗುವ ಹಾದಿಗಳನ್ನು ಹುಡುಕುತ್ತಿದೆ: ಅದು ಗುತ್ತಿಗೆ ಕಾರ್ಮಿಕರು. ಈ ಒತ್ತಡಗಳು ಸಹಿಸಲಾಗದೆ ಹೋದರೆ, ಗುತ್ತಿಗೆದಾರರನ್ನು ನೇಮಿಸಿ ತಾತ್ಕಾಲಿಕ ನೌಕರರನ್ನು ಪಡೆಯಲಾಗುತ್ತದೆ. ಈ ನೌಕರರಿಗೆ ಕಡಿಮೆ ವೇತನ ಇರುವುದಷ್ಟೇ ಅಲ್ಲದೆ, ಉದ್ಯೋಗ ಭದ್ರತೆಯೂ ಇರುವುದಿಲ್ಲ, ಇದು ಮೀಸಲಾತಿ ವ್ಯಾಪ್ತಿಗೂ ಒಳಪಡುವುದಿಲ್ಲ, ಕಲ್ಯಾಣ ಯೋಜನೆಗಳು ಅನ್ವಯಿಸುವುದಿಲ್ಲ, ಸೇವಾ ರಕ್ಷಣೆಯ ನಿಯಮಗಳೂ ಸಹ ಅನ್ವಯಿಸುವುದಿಲ್ಲ. ಪರಿಣಾಮ ಎಂದರೆ ಕರ್ನಾಟಕವು ತೆರೆಮರೆಯಲ್ಲಿ ನೌಕರರ ನೇಮಕ ಮಾಡುತ್ತಿದ್ದು, ಇದು ಸಾರ್ವಜನಿಕ ಉದ್ಯೋಗ ವಲಯದಲ್ಲಿ ಲಭ್ಯವಿರುವ ಯಾವುದೇ ರಕ್ಷಣಾ ಸೌಕರ್ಯಗಳಿಲ್ಲದೆಯೇ ಕಾರ್ಯನಿರ್ವಹಿಸಬೇಕಾಗಿದೆ. ರಾಜ್ಯ ಸರ್ಕಾರವು ಹೊರನೋಟಕ್ಕೆ ಕಾರ್ಯನಿರ್ವಹಿಸುತ್ತಿರುವಂತೆ ಕಾಣುತ್ತದೆ. ಆದರೆ ಆಂತರಿಕವಾಗಿ, ಅಡಿಪಾಯವೇ ಸಡಿಲವಾಗುತ್ತಿದೆ.
ಈ ಸನ್ನಿವೇಶ ಇದ್ದಾಗಲೂ ಸಾಮೂಹಿಕ ನೇಮಕಾತಿಯ ಘೋಷಣೆಯನ್ನು ಮಾಡುತ್ತಿರುವುದೇಕೆ? ಬಹುಶಃ ರಾಜಕೀಯದಲ್ಲಿ ಆಡಳಿತಾತ್ಮಕ ಪ್ರಾಮಾಣಿಕತೆಗಿಂತಲೂ ತೋರಿಕೆಯೇ ಮುಖ್ಯವಾಗುತ್ತದೆ. ಘೋಷಣೆಗಳು ಸಕಾರಾತ್ಮಕ ಸಂದೇಶ ನೀಡುತ್ತವೆ. ಮೌನವಾಗಿದ್ದರೆ ವೈಫಲ್ಯ ಬಯಲಾಗುತ್ತದೆ. ಉದ್ಯೋಗ ಭರವಸೆ ನೀಡುವುದು ಸುಲಭ, ಆದರೆ ಹಣಕಾಸು ದೀವಾಳಿತನವನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ.
ಸಮಸ್ಯೆಯ ಮೂಲ ಇರುವುದು ಬೇಕಾಬಿಟ್ಟಿ ವೆಚ್ಚಗಳಲ್ಲಿ. ನಿರ್ದಿಷ್ಟವಾಗಿ ಬೃಹತ್ ಪ್ರಮಾಣದ ಗ್ಯಾರಂಟಿ ಯೋಜನೆಗಳು ಸಾವಿರಾರು ಕೋಟಿ ರೂ.ಗಳ ಹೊರೆಯಾಗಿದ್ದು, ಪೂರಕವಾದ ಆದಾಯ ಬೆಳವಣಿಗೆ ಇಲ್ಲದೆ ಸಮಸ್ಯೆ ಉಲ್ಬಣಿಸುತ್ತಿದೆ. ಕರ್ನಾಟಕವು ಸಹಿಸಿಕೊಳ್ಳಲಾಗದ ಬಾಧ್ಯತೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವಶ್ಯ ಆಳ್ವಿಕೆಯ ವೆಚ್ಚಗಳಿಗೆ ಕೊರತೆಯಾಗಿದೆ.
ಮುಂದಿನ ದಾರಿ ರಾಜಕೀಯವಾಗಿ ಅರಗಿಸಿಕೊಳ್ಳುವಂತಿದ್ದರೂ, ತಪ್ಪಿಸಿಕೊಳ್ಳಲಾಗುವುದಿಲ್ಲ. ಗಂಭೀರ ರೀತಿಯಲ್ಲಿ ಹಣಕಾಸು ಪರಿಸ್ಥಿತಿ ಸುಧಾರಿಸಬೇಕಿದೆ. ಸಿಬ್ಬಂದಿಯ ಪಾರದರ್ಶಕ ಲೆಕ್ಕಪರಿಶೋಧನೆ, ಸ್ವತಂತ್ರವಾದ ನೇಮಕಾತಿ ವೇಳಾಪಟ್ಟಿ ಅದಕ್ಕೆ ಪೂರಕವಾದ ಬಜೆಟ್ ಹಣದ ನಿಗದಿ ಇವೆಲ್ಲವೂ ಆಗಬೇಕಿದೆ. ಅಧಿಕಾರದಲ್ಲಿರುವ ಒಬ್ಬರಾದರೂ ಎಲ್ಲರಿಗೂ ತಿಳಿದಿರುವ ಸತ್ಯವನ್ನು ನುಡಿಯಬೇಕಿದೆ. ಆಳ್ವಿಕೆಯ ಗ್ಯಾರಂಟಿಗಳನ್ನು, ಆಶ್ವಾಸನೆಗಳನ್ನು ಅವಲಂಬಿಸಿ ನಡೆಯುವುದಿಲ್ಲ. ಇದಕ್ಕೆ ವಾಸ್ತವ ನೆಲೆಯಲ್ಲಿ ಸಿಬ್ಬಂದಿ, ಹಣಕಾಸು, ಬದ್ಧತೆ ಇರಬೇಕು. ಅಲ್ಲಿಯವರೆಗೂ ಕರ್ನಾಟಕ ಆಡಳಿತ ಕುಸಿತದತ್ತ ಚಲಿಸುತ್ತಲೇ ಇರುತ್ತದೆ, ಹಾಗೆಯೇ ಸರ್ಕಾರ ಸೃಷ್ಟಿಸುವ ನೇಮಕಾತಿ ಮರೀಚಿಕೆ ಮುಂದುವರೆಯುತ್ತದೆ.
Comments
Post a Comment