ಶಿರಾಡಿ ಘಾಟ್ ಬಗ್ಗೆ ಅಲಕ್ಷ್ಯ ಅಕ್ಷಮ್ಯ ಅಪರಾಧ
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಎಲ್ಲ ರೀತಿಯ ಹವಾಮಾನಗಳಿಗೂ ಹೊಂದಿಕೊಳ್ಳುವ ಬಂದರು ನಗರ ಮಂಗಳೂರಿಗೂ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದ್ದರೂ, ಸಹ ಈ ಹೆದ್ದಾರಿಯು ಮೂರು ದಶಕಗಳ ಕಾಲ ಭಾರತದ ಆಡಳಿತಾತ್ಮಕ ಅಸಡ್ಡೆ, ನಿರ್ಲಕ್ಷ್ಯಗಳಿಗೆ ಸ್ಮಾರಕವಾಗಿ ನಿಂತಿದೆ. 1990ರಿಂದಲೂ 40 ಕಿಲೋಮೀಟರ್ ಶಿರಾಡಿ ಘಾಟ್ ರಸ್ತೆ ದುರಸ್ತಿಯಲ್ಲಿದ್ದು ಇಂದು ರಸ್ತೆಯ ಸ್ಥಿತಿ ಅಪಾಯಕಾರಿ ಹಂತ ತಲುಪಿದೆ. ಎಂದಿನಂತೆಯೇ ಅವಲಂಬಿಸಲಾಗದ ರಸ್ತೆಯಾಗಿ ಉಳಿದಿದೆ. ಪ್ರತಿ ವರ್ಷ ಮುಂಗಾರು ಮಳೆ ಮುಗಿದ ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಮುಂದುವರೆಯುತ್ತದೆ. ಪ್ರತಿವರ್ಷ ಇದೇ ಪುನರಾವರ್ತನೆಯಾಗುತ್ತದೆ. ನಿಧಾನಗತಿಯ ಪ್ರಗತಿ, ಅರ್ಧಕ್ಕೆ ಕೈಬಿಟ್ಟ ಕೆಲಸಗಳು, ಮೇಲ್ವಿಚಾರಣೆ ಇಲ್ಲದಿರುವುದು, ಅಧಿಕಾರಿಗಳ ಉತ್ತರದಾಯಿತ್ವ ಇಲ್ಲದಿರುವುದು ಇದಕ್ಕೆ ಕಾರಣಗಳಾಗಿವೆ.
ಇದು ಮೂಲೆಯಲ್ಲಿರುವ ಗ್ರಾಮೀಣ ರಸ್ತೆಯಲ್ಲ. ದಿನಕ್ಕೆ 25 ಸಾವಿರ ವಾಹನಗಳು - ಸರಕು ಸಾಗಾಣಿಕೆ ವಾಹನಗಳು, ಬಸ್‍ಗಳು, ತುರ್ತು ಸೇವೆಯ ವಾಹನಗಳು, ನಿತ್ಯ ಸಂಚಾರಿಗಳು - ಈ ರಸ್ತೆಯನ್ನು ಬಳಸುವುದು ವಾಸ್ತವ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು, ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಾಗರಿಕರಿಂದ, ಕೈಗಾರಿಕೋದ್ಯಮಿಗಳಿಂದ, ರಫ್ತು ವ್ಯಾಪಾರಿಗಳಿಂದ ಸಲ್ಲಿಸಲಾಗಿರುವ ಅಸಂಖ್ಯಾತ ಅರ್ಜಿಗಳನ್ನು ನಿರ್ಲಕ್ಷಿಸುತ್ತಿದೆ. ಸಚಿವಾಲಯವು ಈ ಸಮಸ್ಯೆ ರಾಷ್ಟ್ರದ ಪ್ರಮುಖ ಅಭಿವೃದ್ಧಿಯ ಸಮಸ್ಯೆ ಎಂದು ಭಾವಿಸಿಯೇ ಇಲ್ಲ. ಕರ್ನಾಟಕದ ಆರ್ಥಿಕತೆಗೆ ಇದು ಕೇಂದ್ರ ಬಿಂದು ಎಂದೂ ಸಹ ಪರಿಗಣಿಸಿಲ್ಲ.
ತತ್ಪರಿಣಾಮವಾಗಿ ಈ ದೀರ್ಘ ಕಾಲದ ನಿರ್ಲಕ್ಷ್ಯ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸಿದೆ. ಕರ್ನಾಟಕದ ರಫ್ತು ಸಂಚಾರವು ಅನಗತ್ಯವಾಗಿ ಚೆನ್ನೈ, ಆಂಧ್ರ ಬಂದರುಗಳ ಕಡೆಗೆ ಚಲಿಸುತ್ತಿದ್ದು, ಮಂಗಳೂರು ಬಂದರು ಸಂಪೂರ್ಣ ಸೌಕರ್ಯಗಳನ್ನು ಹೊಂದಿದ್ದರೂ ಸಹ, ಉತ್ತಮ ಜಾಗದಲ್ಲಿದ್ದರೂ ಸಹ ಇದರ ಸದ್ಬಳಕೆಯಾಗುತ್ತಿಲ್ಲ. ಸಾರಿಗೆ ಕಂಪನಿಗಳು ತಮ್ಮ ಹಣ ಮತ್ತು ಸಮಯವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದಾರೆ. ವ್ಯಾಪಾರ ವಹಿವಾಟುಗಳು ಮೂಲ ಸೌಕರ್ಯಗಳ ವೆಚ್ಚವನ್ನು ಹೆಚ್ಚಿನ ಪ್ರಮಾಣದಲ್ಲಿ ಭರಿಸುತ್ತಿದ್ದಾರೆ. ಸಾವಿರಾರು ನಾಗರಿಕರು ನಿತ್ಯ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಸುರಕ್ಷತೆಯೇ ಇಲ್ಲದ ಈ ರಸ್ತೆಯನ್ನೇ ಬಳಸುತ್ತಿದ್ದಾರೆ.
ಇಲ್ಲಿ ಕಾಣುವ ವಿಡಂಬನೆ ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಚೆನ್ನೈ, ಪುಣೆ ಮತ್ತು ಹೈದರಾಬಾದ್ ಸಂಪರ್ಕಿಸುವ ಅಷ್ಟಪಥದ ಎಕ್ಸ್‍ಪ್ರೆಸ್ ವೇ ಹೆದ್ದಾರಿಗಳ ನಿರ್ಮಾಣಕ್ಕಾಗಿ ಅಪಾರ ಬಂಡವಾಳ ಹೂಡುತ್ತಿದೆ. ಹೆಮ್ಮೆಯಿಂದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೂ ಉನ್ನತ ಗುಣಮಟ್ಟದ, ಸುಲಭ ಸಂಪರ್ಕ ಇರುವಂತಹ ಕಾರಿಡಾರ್ ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ ಕೇಂದ್ರ ಮಂಗಳೂರನ್ನು ಸಂಪರ್ಕಿಸಲು ಅಗತ್ಯವಾಗಿದೆ ಎನ್ನುವುದನ್ನು ನಿರ್ಲಕ್ಷಿಸಿದೆ. ಮೂರು ದಶಕಗಳ ಮುನ್ನ ರೂಪಿಸಿದ ಚತುಷ್ಪಥ ಹೆದ್ದಾರಿಯ ನಿರ್ಮಾಣವೂ ಸಹ ಘಟ್ಟಗಳಲ್ಲಿ ಮತ್ತು ಅದನ್ನು ದಾಟಿಯೂ ಸಹ ಅಪೂರ್ಣವಾಗಿದೆ. ಇದು ಕೇವಲ ವಿಳಂಬ ಅಲ್ಲ, ಆಳ್ವಿಕೆಯ ವ್ಯವಸ್ಥಿತ ವೈಫಲ್ಯ.
ಈ ಮಾದರಿಯನ್ನು ಗಮನಿಸಿದಾಗ ಆಳವಾದ ಒಂದು ವ್ಯಾಧಿಯನ್ನು ಗುರುತಿಸಬಹುದು. ಚುನಾವಣೆಗಳಲ್ಲಿ ಲಾಭ ತರುವಂತಹ ಪ್ರದೇಶಗಳು ಅಥವಾ ಆಡಳಿತಾರೂಢ ಪಕ್ಷದ ಹಿತಾಸಕ್ತಿಗಳೊಂದಿಗೆ ಹೊಂದಾಣಿಕೆಯಾಗುವ ಪ್ರದೇಶಗಳು ಅಪಾರ ಗಮನ ಸೆಳೆಯುತ್ತವೆ. ಕರಾವಳಿ ಕರ್ನಾಟಕವು ಆರ್ಥಿಕವಾಗಿ ಚಲನಶೀಲವಾಗಿದ್ದು, ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಹೆಚ್ಚಿನ ಲಾಭ ನೀಡಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಪಡೆಯಲು ವಿಫಲವಾಗಿದ್ದರಿಂದ ದುರದೃಷ್ಟವಶಾತ್ ರಾಜ್ಯದ ಮೇಲೆ ಮೋದಿ ಸರಕಾರ ತೀರಿಸಿಕೊಳ್ಳುತ್ತಿರುವ ಸೇಡು ಕರಾವಳಿಗರಿಗೂ ತಟ್ಟಿದೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ನಾಯಕತ್ವಕ್ಕೆ ದಿನನಿತ್ಯ ಪರಾಕು ಹಾಡುತ್ತಿರುತ್ತಾರೆ, ಆದರೆ ಈ ಸಮಸ್ಯೆ ಪರಿಹರಿಸಲು ದೆಹಲಿಗೆ ನಿಯೋಗವನ್ನೂ ಒಯ್ದಿಲ್ಲ, ಆಗ್ರಹವನ್ನೂ ಮಂಡಿಸಿಲ್ಲ. ಇವರ ಮೌನವೇ ಘೋಷಣೆಗಳಿಗಿಂತಲೂ ಹೆಚ್ಚು ಸದ್ದು ಮಾಡುತ್ತದೆ.
ಈ ನಿರ್ಲಕ್ಷ್ಯ ದುಬಾರಿಯಾಗಿದೆ. ಪ್ರಾಥಮಿಕ ಆರ್ಥಿಕ ವಿಶ್ಲೇಷಣೆಗಳ ಪ್ರಕಾರ ಉದ್ದಿಮೆಗಳಿಗೆ ಸಾರಿಗೆ ವೆಚ್ಚವೇ ಹೆಚ್ಚಾಗುತ್ತಿದೆ, ಬಂದರು ದೊರೆಯದಿರುವುದರಿಂದ, ಲಕ್ಷಾಂತರ ಟನ್ ಸರಕುಗಳು ಪ್ರತಿವರ್ಷ ಮಂಗಳೂರು ಬಂದರಿನ ಕೈತಪ್ಪಿ ಹೋಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆದಾಯಕ್ಕೂ ಹೊಡೆತ ಬೀಳುತ್ತಿದೆ. ಒಂದು ನಿರ್ಣಾಯಕವಾದ, ಪ್ರಮುಖ ಆರ್ಥಿಕ ವಲಯವು ದುರವಸ್ಥೆಯಿಂದ ಹಾಳಾಗುತ್ತಿದ್ದು, ಇಡೀ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ.
ಮುಂದಿನ ಹಾದಿ ಏನು? ಅರ್ಜಿಗಳು ಫಲಪ್ರದವಾಗುವುದಿಲ್ಲ. ಇಲ್ಲಿ ಸಂಯೋಜಿತ, ಹಕ್ಕೊತ್ತಾಯದ ಸಾರ್ವಜನಿಕ ಪ್ರತಿರೋಧವೊಂದೇ ದಾರಿ. ಬೆಂಗಳೂರು ಮತ್ತು ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗಳನ್ನು, ರಸ್ತೆ ತಡೆ ಚಳುವಳಿಗಳನ್ನು ಚೇಂಬರ್ ಆಫ್ ಕಾಮರ್ಸ್ ಮತ್ತು ರೈತ ಸಂಘಟನೆಗಳು, ಸಾರಿಗೆ ಸಂಘಟನೆಗಳು, ಕರಾವಳಿಯ ನಾಗರಿಕ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಳ್ಳಬೇಕಿದೆ. ನಾಗರಿಕ ಸಮಾಜವು ಜಂಟಿ ಕಾರ್ಯಪಡೆಗಾಗಿ ಆಗ್ರಹಿಸಿ, ಮೂರನೆ ವ್ಯಕ್ತಿಯ ಮೇಲ್ವಿಚಾರಣೆಗೆ ಒತ್ತಾಯಿಸಿ, ಪಾರದರ್ಶಕ ಕಾಮಗಾರಿ ಕಾರ್ಯಪಟ್ಟಿಯನ್ನು, ಸಮಯಕ್ಕೆ ಸರಿಯಾಗಿ ಪೂರೈಸುವ ಯೋಜನೆಗಳಿಗಾಗಿ ಆಗ್ರಹಿಸಬೇಕಿದೆ.
ಶಿರಾಡಿ ಘಾಟ್ ಅಭಿವೃದ್ಧಿಗಾಗಿ ಹೋರಾಟ ಕೇವಲ ಒಂದು ರಸ್ತೆಗಾಗಿ ಅಲ್ಲ. ಇದು ಘನತೆ, ನ್ಯಾಯಪರತೆ, ಸಮಾನ ಅಭಿವೃದ್ಧಿಯ ಮೂಲಭೂತ ಹಕ್ಕುಗಳಿಗಾಗಿ ಹೋರಾಟ. ಕರಾವಳಿ ಕರ್ನಾಟಕವು ಭಗ್ನಗೊಂಡ ಭರವಸೆಗಳನ್ನು ಅಪೇಕ್ಷಿಸುವುದಿಲ್ಲ, ನಿರಂತರ ಅನನುಕೂಲಗಳನ್ನು ಸಹಿಸಿಕೊಳ್ಳುವುದಿಲ್ಲ, ಉತ್ತರದಾಯಿತ್ವ ಮತ್ತು ಯೋಜನಾಬದ್ಧ, ರಾಜಕೀಯ ಇಚ್ಛಾಶಕ್ತಿಯ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಬಯಸುತ್ತದೆ.
Comments
Post a Comment