ಯಾತ್ರಾ ಸ್ಥಳಗಳು ಮತ್ತು ಸಾರ್ವಜನಿಕ ಪ್ರಜ್ಞೆ

 ಭಾರತಕ್ಕೆ ಪವಿತ್ರ ಸ್ಥಾನಗಳಿಗೆ ಹೆಚ್ಚು ಪ್ರಯಾಣ ಮಾಡುವ ಜನರ ಬದಲಾಗಿ ನಿತ್ಯಜೀವನದಲ್ಲಿ ಮೌಲ್ಯಗಳನ್ನು ಅನುಸರಿಸುವ ಜನರು ಬೇಕಿದ್ದಾರೆ

...............

ನಾವು ನಮ್ಮ ಕರ್ತವ್ಯ ನಿರ್ವಹಿಸಿ, ವರ್ತನೆ ಬದಲಾಯಿಸಿಕೊಳ್ಳುವ ಬದಲು ನಮ್ಮ ಪಾಪಗಳನ್ನು ತೊಳೆಯಲು ಯತ್ನಿಸುತ್ತಿದ್ದೇವೆಯೇ?

ಭಾರತೀಯ ಸಮಾಜವು ಪಾರಂಪರಿಕವಾಗಿ ಪಾಪ ಪುಣ್ಯಗಳಲ್ಲಿ ನಂಬಿಕೆ ಇಟ್ಟುಕೊಂಡೇ ನಡೆದುಬಂದಿದೆ. ನಮ್ಮ ಪ್ರತಿಯೊಂದು ಕ್ರಿಯೆಯೂ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬುತ್ತಲೇ ಬಂದಿದ್ದೇವೆ. ಆದರೆ ಇಂದು ವಿಚಿತ್ರವಾದ ಮಾದರಿಯನ್ನು ನೋಡಬಹುದು. ಭಾರತೀಯರು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತೀರ್ಥಯಾತ್ರೆಗಳಿಗೆ ಹೋಗುತ್ತಿದ್ದಾರೆ. ಆದರೂ ನಮ್ಮ ದೈನಂದಿನ ಜೀವನ ಮೌಲ್ಯಗಳು ಶಿಥಿಲವಾಗುತ್ತಲೇ ಇವೆ. ಇದು ಜಟಿಲ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ನಾವು ತೀರ್ಥಯಾತ್ರೆಗಳನ್ನು ನಮ್ಮ ಕ್ರಿಯೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿ ಪರಿಗಣಿಸುತ್ತಿದ್ದೇವೆಯೇ?

ಪ್ರಾಚೀನ ಭಾರತದಲ್ಲಿ ಪುಣ್ಯ ಎಂದರೆ ಕ್ಷಮೆಯನ್ನು ಖರೀದಿಸುವ ಪ್ರಕ್ರಿಯೆಯಾಗಿರಲಿಲ್ಲ. ಅದು ಉತ್ತಮ ರೀತಿಯಲ್ಲಿ ಬದುಕುವುದು, ಸತ್ಯವಂತರಾಗಿರುವುದು, ಜವಾಬ್ದಾರಿಯುತ ಜೀವನ ನಡೆಸುವುದು ಮತ್ತು ನೈತಿಕ ಮೌಲ್ಯಗಳನ್ನು ಪಾಲಿಸುತ್ತ ನಡೆದುಕೊಳ್ಳುವುದಾಗಿತ್ತು. ಹಲವು ಶತಮಾನಗಳು ಕಳೆದ ನಂತರ, ದೇವಾಲಯಗಳು ಹೆಚ್ಚು ಹೆಚ್ಚಾಗಿ ಆರ್ಥಿಕ ಕೇಂದ್ರಗಳಾದಂತೆಲ್ಲಾ, ಜನರ ಗಮನವೂ ಬದಲಾಗುತ್ತಲೇ ಹೋಯಿತು. ಒಂದು ಪವಿತ್ರ ಸ್ಥಳಕ್ಕೆ ಭೇಟಿ ನೀಡುವುದು ಮುಖ್ಯವಾಯಿತೇ ಹೊರತು, ಪವಿತ್ರ ಜೀವನ ನಡೆಸುವುದು ಮುಖ್ಯವಾಗಲಿಲ್ಲ.

ಭಾರತೀಯರು ಕರ್ಮ ಎನ್ನುವುದನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎನ್ನುವುದಕ್ಕೂ ಇದು ಸಂಬಂಧಿಸಿದೆ. ಅನೇಕ ಭಾರತೀಯರು ಜೀವನವನ್ನು ಸಮತೋಲನದ ಲೆಕ್ಕಾಚಾರ ಎಂದೇ ಭಾವಿಸುತ್ತಾರೆ. ತೀರ್ಥಯಾತ್ರೆಗೆ ಹೋಗುವುದರಿಂದ ಅವರ ಸರಿತಪ್ಪುಗಳನ್ನು ಸಮತೋಲನ ಮಾಡಲು ಸಾಧ್ಯ ಎಂದೇ ಭಾವಿಸುತ್ತಾರೆ. ಇದಕ್ಕೆ ತದ್ವಿರುದ್ದವಾಗಿ, ಪಾಶ್ಚಿಮಾತ್ಯ ಸಮಾಜಗಳು ಇಂತಹ ತೀರ್ಥಯಾತ್ರೆಯ ಸಂಸ್ಕøತಿಯನ್ನು ಬೆಳೆಸಿಕೊಳ್ಳಲೇ ಇಲ್ಲ.

ಜನರು ತೀರ್ಥಯಾತ್ರೆಗಳನ್ನು ಅಧ್ಯಾತ್ಮಿಕ ದಾರಿ ಎಂದು ನಂಬಲು ಆರಂಭಿಸಿದಾಗ ಸಮಸ್ಯೆಗಳೂ ಹೆಚ್ಚಾಗತೊಡಗಿದವು. ಪ್ರತಿ ವರ್ಷ ಅಪಘಾತಗಳಲ್ಲಿ ನೂರಾರು ಯಾತ್ರಾರ್ಥಿಗಳು ಸಾಯುತ್ತಾರೆ. ಕಾಲ್ತುಳಿತ, ಬಸ್ ಢಿಕ್ಕಿ, ಭೂ ಕುಸಿತ, ರಸ್ತೆಗಳಲ್ಲಿನ ಜನದಟ್ಟಣೆ ಇದಕ್ಕೆ ಕಾರಣವಾಗುತ್ತದೆ. ಈ ದುರಂತಗಳು ಯಾತ್ರಾಸ್ಥಳಗಳನ್ನು ತಲುಪುವ ರಸ್ತೆಗಳು ಎಷ್ಟು ಕೆಟ್ಟದಾಗಿ ನಿರ್ವಹಿಸಲಾಗಿದೆ, ಹೇಗೆ ಎಲ್ಲವೂ ವಾಣಿಜ್ಯೀಕರಣಗೊಂಡಿದೆ ಎನ್ನುವುದನ್ನು ಸೂಚಿಸುತ್ತದೆ. ಪವಿತ್ರ ಸ್ಥಳಗಳು ಅನೇಕ ಸಂದರ್ಭಗಳಲ್ಲಿ ಮಾರುಕಟ್ಟೆಗಳ ಹಾಗೆ ಕಾಣುತ್ತದೆಯೇ ಹೊರತು, ಆತ್ಮ ಸಾಕ್ಷಾತ್ಕಾರದ ಸ್ಥಳಗಳಾಗಿ ಅಲ್ಲ.

ಒಬ್ಬ ವಿವೇಕಯುತ ಶಿಕ್ಷಕರು ಹೇಳಿದಂತೆ, ಪ್ರಾಮಾಣಿಕವಾಗಿ ಬದುಕುವ ವ್ಯಕ್ತಿ, ಯಾರಿಗೂ ಹಾನಿ ಮಾಡುವುದಿಲ್ಲ ಅಂಥವರು ಯಾವುದೇ ತೀರ್ಥಯಾತ್ರೆಯ ಅಗತ್ಯವೇ ಇಲ್ಲದಂತಹ ಮೌಲ್ಯಯುತ ಜೀವನ ನಡೆಸುತ್ತಾರೆ. ಭಾರತದ ಅನೇಕ ಸಂತರು - ಬಸವಣ್ಣ, ಕಬೀರ ಮುಂತಾದವರು - ಇದೇ ಆದರ್ಶವನ್ನು ಬೋಧಿಸಿದ್ದಾರೆ. ಒಂದು ಯಾತ್ರೆ ಬದಲಾವಣೆಗೆ ಒಪ್ಪದ ಹೃದಯವನ್ನು ಪವಿತ್ರಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

ವಾಸ್ತವವೆಂದರೆ, ತೀರ್ಥಯಾತ್ರೆಯೇ ಸಮಸ್ಯೆಯಲ್ಲ. ನಾವು ಏಕೆ ತೀರ್ಥಯಾತ್ರೆ ಹೋಗುತ್ತೇವೆ ಎನ್ನುವುದು. ದೇವಾಲಯದ ಒಂದು ಭೇಟಿ ನಮ್ಮ ಜೀವಮಾನದ ಬೇಜವಾಬ್ದಾರಿತನವನ್ನು ಹೋಗಲಾಡಿಸಲು ಸಾಧ್ಯವಾದರೆ ನಮ್ಮನ್ನು ನಾವೇ ಮೂರ್ಖರನ್ನಾಗಿಸುತ್ತಿದ್ದೇವೆ ಎಂದೇ ಅರ್ಥ. ಆಚರಣೆಗಳು ಮೌಲ್ಯಗಳಿಗಿಂತಲೂ ಮುಖ್ಯವಾದಾಗ, ಸಮಾಜ ಅಪಾಯಕಾರಿ ದಿಕ್ಕಿನಲ್ಲಿ ಸಾಗುತ್ತದೆ. ತೀರ್ಥಯಾತ್ರೆಗಳು ನಮ್ಮನ್ನು ಉತ್ತಮ ವ್ಯಕ್ತಿಗಳಾಗಲು ಪ್ರಚೋದಿಸಬೇಕೇ ಹೊರತು ನಮ್ಮ ನೈತಿಕ ಕರ್ತವ್ಯಗಳಿಂದ ನುಣುಚಿಕೊಳ್ಳುವುದಕ್ಕೆ ಅಲ್ಲ.

ಭಾರತಕ್ಕೆ ಪವಿತ್ರ ಸ್ಥಾನಗಳಿಗೆ ಹೆಚ್ಚು ಪ್ರಯಾಣ ಮಾಡುವ ಜನರು ಬೇಕಿಲ್ಲ. ಬದಲಾಗಿ ನಿತ್ಯಜೀವನದಲ್ಲಿ ಮೌಲ್ಯಗಳನ್ನು ಅನುಸರಿಸುವ ಜನರು ಬೇಕಿದ್ದಾರೆ. ಆಗ ಮಾತ್ರ ನಮ್ಮ ತೀರ್ಥಯಾತ್ರೆಗಳು ಅರ್ಥಪೂರ್ಣವಾಗುತ್ತವೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again