ಶಿವಕುಮಾರ್ ಅಧಿಕಾರದಾಟದಲ್ಲಿ ಕಾಂಗ್ರೆಸ್ ಕುಸಿತ

 ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ ನೀಡಿ, ಪ್ರಧಾನ ಕಾರ್ಯದರ್ಶಿ ಅಥವಾ ಖಜಾಂಚಿಯ ಹುದ್ದೆ ನೀಡಬಹುದು. ರಾಜ್ಯದಲ್ಲಿ ಪಕ್ಷ ಮತ್ತು ಸರಕಾರದ ಮೇಲೆ ಡಿಕೆಶಿ ಹಿಡಿತವನ್ನು ಬಿಡಿಸಿ ಮುಕ್ತಗೊಳಿಸುವುದು ಹೈಕಮಾಂಡಿಗೆ ಸರಳ ಆಯ್ಕೆಯಾಗಬೇಕು.


 

* ಸಂಪಾದಕೀಯ

ತಾನಿಲ್ಲದೇ ಪಕ್ಷ ಉಸಿರಾಡುವ ಸ್ಥಿತಿಯಲ್ಲೂ ಇರಲು ಸಾಧ್ಯವಿಲ್ಲ ಎಂದು  ಡಿ ಕೆ ಶಿವಕುಮಾರ್ ಭಾವಿಸಿದಂತಿದೆ. ಅವರು ಆಡುವ ಪ್ರತಿಯೊಂದು ಮಾತೂ, ನೀಡುವ ರಕ್ಷಣಾತ್ಮಕ ಪತ್ರಿಕಾ ಹೇಳಿಕೆಗಳು ಇದನ್ನೇ ಸೂಚಿಸುವಂತಿವೆ. ರಾಜಕೀಯದಲ್ಲಿ, ವಿಶೇಷವಾಗಿ ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಶಾಶ್ವತವಲ್ಲ, ಯಾವ ಕುರ್ಚಿಯೂ ಬದಲಾವಣೆಗೆ ಹೊರತಾಗಿಲ್ಲ ಎಂದು ನಾಯಕರಿಗೆ ಸಂದೇಶ ನೀಡುವ ಒಂದು ಮಾದರಿ ಇದೆ. ಅಂಥಾ ದೇವರಾಜ ಅರಸರೇ ಕಾಂಗ್ರೆಸ್ಸಿಗೆ ಅನಿವಾರ್ಯವಾಗಲಿಲ್ಲ.

ಕಾಂಗ್ರೆಸ್ ಹೈಕಮಾಂಡ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಪದವಿಯಿಂದ ಕೆಳಗಿಳಿಸುತ್ತದೆ ಎಂಬ ವರದಿಗಳು ಡಿಕೆಶಿ ಅವರನ್ನು ಕಂಗೆಡಿಸಿವೆ. ಸಂಯಮ ಕಾಪಾಡಿಕೊಳ್ಳುವುದರ ಬದಲು, ಡಿಕೆಶಿ ಆತಂಕ ಮತ್ತು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾರೆ. ಏನೇ ಆದರೂ ಸ್ಥಾನ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ತಾವೇನೂ ತಪ್ಪು ಮಾಡಿಲ್ಲ ಎಂದು ಹೇಳಿಕೊಳ್ಳುವ ಡಿಕೆಶಿ ಏಕಾಂಗಿಯಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ, ಆರಂಭದಿಂದಲೂ ದುಡಿದಿದ್ದೇನೆ ಎಂದೆಲ್ಲ ಹೇಳುತ್ತಿದ್ದಾರೆ. ಇದು ಆತ್ಮಪ್ರಶಂಸೆ, ಅಭದ್ರತೆಯನ್ನು ಸೂಚಿಸುತ್ತದೆಯೇ ಹೊರತು, ಬಲವನ್ನು ಅಲ್ಲ. ಪಕ್ಷವು ತಮ್ಮನ್ನು ಅವಲಂಬಿಸುತ್ತದೆ, ಅದು ಹಣಬಲಕ್ಕಾಗಿ ಮತ್ತು ಶಾಶ್ವತ ನಿಷ್ಠೆಯ ಕಾರಣಕ್ಕಾಗಿ ಎಂದು ಡಿಕೆಶಿ ತಪ್ಪಾಗಿ ಭಾವಿಸಿದಂತೆ ಕಾಣುತ್ತದೆ.

ನೇರವಾಗಿ ಹೇಳುವುದಾದರೆ, ಡಿ ಕೆ ಶಿವಕುಮಾರರಲ್ಲಿ ರಾಜಕೀಯ ಸಂಯಮ ಶೂನ್ಯ. ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆಯೂ ಬೇಕು, ಕೆಪಿಸಿಸಿ ಅಧ್ಯಕ್ಷಗಿರಿಯೂ ಬೇಕು. ಈ ಎರಡೂ ತನ್ನ ಜನ್ಮಸಿದ್ಧ ಹಕ್ಕು ಎಂದು ಅವರು ಭಾವಿಸುತ್ತಾರೆ. ಎರಡೂವರೆ ವರ್ಷಗಳ ಕಾಲ ಈ ಎರಡೂ ಸವಲತ್ತುಗಳನ್ನು ಅನುಭವಿಸಿದ್ದಾರೆ, ಈಗ ಪಕ್ಷವು ಅಸಮತೋಲನವನ್ನು ಸರಿಪಡಿಸಲು ಮುಂದಾಗಿದ್ದು, ಇದು ಬಹಳ ಕಾಲದಿಂದ ಬಾಕಿ ಇದ್ದ ತರ್ಕಬದ್ದ ನಡೆಯಾಗಿದೆ.

ಡಿಕೆಶಿ ಪಕ್ಷಕ್ಕಾಗಿ ಹಣವನ್ನು ಒದಗಿಸಿದಾಗ, ಈ ಹಣವು ನಾಯಕತ್ವಕ್ಕೆ ಸಮನಾಗುವುದಿಲ್ಲ. ಅವರ ಹಠಮಾರಿ ಶೈಲಿ, ಅನಗತ್ಯ ಪ್ರಚೋದನೆಗಳು ಮತ್ತು ವಿವೇಚನೆ ಇಲ್ಲದ ನಡೆ ಇವೆಲ್ಲವೂ ಪಕ್ಷಕ್ಕೆ ಹಾನಿ ಉಂಟುಮಾಡಿದೆಯೇ ಹೊರತು ನೆರವಾಗಿಲ್ಲ. ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿದ್ದು, ಕೇಂದ್ರ ಸಂಸ್ಥೆಗಳು ಅವರ ಅಪಾರ ಸಂಪತ್ತನ್ನು ವಶಪಡಿಸಿಕೊಂಡಿದ್ದವು. ಈ ಕ್ರಮವು ಅವರ ನೈತಿಕ ಹಕ್ಕನ್ನು ಧಕ್ಕೆಗೊಳಪಡಿಸಿತ್ತು. ಇಷ್ಟು ದೊಡ್ಡ ಹೊರೆ ಹೊತ್ತ ನಾಯಕ ಕಾರ್ಯಕರ್ತರಲ್ಲಿ ಹುರುಪು ಮೂಡಿಸಲಾಗುವುದಿಲ್ಲ.

ಇಲ್ಲಿ ಅಹಿತಕರ ಸತ್ಯವೂ ಅಡಗಿದೆ. ಕಾಂಗ್ರೆಸ್ ಪಕ್ಷವು ಡಿಕೆಶಿ ಅವರಿಂದಾಗಲೀ, ಸಿದ್ದರಾಮಯ್ಯ ಅವರಿಂದಾಗಲೀ ಅಧಿಕಾರಕ್ಕೆ ಬರಲಿಲ್ಲ. ಜನರು ಬಿಜೆಪಿ ಆಡಳಿತದಿಂದ ಬೇಸತಿದ್ದರು, ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಭ್ರಮನಿರಸನರಾಗಿದ್ದರು. ಇದು ನಕಾರಾತ್ಮಕ ಮತದಾನದ ಪರಿಣಾಮವಾಗಿತ್ತೇ ಹೊರತು ಕಾಂಗ್ರೆಸ್ ನಾಯಕತ್ವಕ್ಕೆ ಸಮ್ಮತಿಯಲ್ಲ. ಆದಾಗ್ಯೂ ಹಾಲಿ ಸರ್ಕಾರವು ಅದೇ ರೀತಿಯ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿದ್ದು, ಕುಸಿತ ಇನ್ನೂ ಆಳವಾಗುತ್ತಿದೆ.

ಬಿಹಾರದಲ್ಲಿ ಪಕ್ಷದ ಹೀನ ಸಾಧನೆಯ ನಂತರ ಹೈಕಮಾಂಡ್ ಕರ್ನಾಟಕದಲ್ಲಿ ಪಕ್ಷ ಮತ್ತು ಸರಕಾರಕ್ಕಿರುವ ಅಪಾಯಗಳನ್ನು ಪರಿಶೀಲಿಸುತ್ತಿದೆ. ಡಿಕೆಶಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ಉಳಿಸಿಕೊಳ್ಳುವುದು ಅಂತಹ ಅಪಾಯಗಳಲ್ಲೊಂದು. ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ ನೀಡಿ, ಪ್ರಧಾನ ಕಾರ್ಯದರ್ಶಿ ಅಥವಾ ಖಜಾಂಚಿಯ ಹುದ್ದೆ ನೀಡಬಹುದು. ಅಲ್ಲಿ ಡಿಕೆಶಿ ಅವರ ಹಣಕಾಸು ಬಲ ಮತ್ತು ಸಂಘಟನಾತ್ಮಕ ಕೌಶಲವನ್ನು ಬಳಸಿಕೊಂಡು, ಕರ್ನಾಟಕದಲ್ಲಿ ಪಕ್ಷದ ಬಲವರ್ಧನೆ ಮಾಡಬಹುದು.

ಡಿಕೆಶಿ ಅವರು ಉಪಮುಖ್ಯಮಂತ್ರಿ ಹುದ್ದೆಗೆ ಅಥವಾ ರಾಜ್ಯಾಧ್ಯಕ್ಷ ಹುದ್ದೆಗೇ ಅಂಟಿಕೊಂಡರೆ, ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳುವುದಕ್ಕೆ ಅವರೇ ಕಾರಣರಾಗುತ್ತಾರೆ. ದಕ್ಷಿಣದಲ್ಲಿ ಎರಡೇ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಪಕ್ಷಕ್ಕೆ ಸ್ಪಷ್ಟತೆ ಮತ್ತು ಪ್ರಬುದ್ಧತೆ ಅವಶ್ಯವಾಗಿದೆ. ಡಿ ಕೆ ಶಿವಕುಮಾರ್, ತಮ್ಮ ಎಲ್ಲ ಬಲದೊಂದಿಗೆ ಈ ಎರಡೂ ಲಕ್ಷಣಗಳನ್ನು ಹೊಂದಿಲ್ಲ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again