ಪಳೆಯುಳಿಕೆಯಾಗುಳಿದ ಜೆಡಿಎಸ್

 ಜೆಡಿಎಸ್ ಗುರಿಕಾರರಾದ ಗೌಡ ಕುಟುಂಬಕ್ಕೆ ಬೇಕಿರುವುದು ಕುಟುಂಬದ ಹಿತವರ್ಧನೆ. ಅದಕ್ಕೆ ಬೇಕಾಗಿ ಉಳಿದವರೆಲ್ಲ ಕಾಲಾಳುಗಳು.


....


ಅಹುದಾದರಹುದೆನ್ನಿ * ಬಿವಿಸೀ

ಜನತಾ ದಳ (ಜಾತ್ಯತೀತ) ಪಕ್ಷವು ಈಗ ಒಂದು ಪಳೆಯುಳಿಕೆಯಾಗಿದ್ದು, ಸಾರ್ವಜನಿಕರ ಬೆಂಬಲ ಇಲ್ಲದೆ ಅಥವಾ ಸೈದ್ಧಾಂತಿಕ ಬದ್ಧತೆ ಇಲ್ಲದೆ, ಆಳ್ವಿಕೆಯ ಸ್ಮರಣಾರ್ಹ ದಾಖಲೆಗಳಿಲ್ಲದೆ, ಕೇವಲ ಒಂದು ಕುಟುಂಬದ ಅನುಕೂಲತೆಗಳನ್ನು ಅವಲಂಬಿಸಿ ಉಳಿದುಕೊಂಡಿದೆ. ಈ ಕುಟುಂಬವು ತನ್ನ ಕುಸಿಯುತ್ತಿರುವ ಪ್ರಭಾವವನ್ನು ಉಳಿಸಿಕೊಳ್ಳಲು ಹತಾಶವಾಗಿದೆ. ಒಂದು ಕಾಲದಲ್ಲಿ ಎಚ್ ಡಿ ದೇವೇಗೌಡ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿದ್ದ ಜೆಡಿಎಸ್ ಕಳೆದ ಹತ್ತು ವರ್ಷಗಳಲ್ಲಿ ಸಂಪೂರ್ಣವಾಗಿ ಅಧೋಗತಿಗೆ ಕುಸಿದಿದ್ದು, ಈಗ ರಾಷ್ಟ್ರೀಯ ವರ್ಚಸ್ಸು ಕೇವಲ ಹಾಳೆಗಳ ಮೇಲೆ ಉಳಿದಿದೆ. ಕರ್ನಾಟಕದಲ್ಲೂ ಸಹ ಜೆಡಿಎಸ್ ಮಸುಕಾಗುತ್ತಿರುವ ತನ್ನ ವರ್ಚಸ್ಸಿನ ಹಿಂದೆ ಸಾಂಕೇತಿಕ ಪ್ರಾತಿನಿಧ್ಯ ಹೊಂದಿದೆ ಮಾತ್ರ.

ಈ ಸತ್ಯವನ್ನು ಅರಗಿಸಿಕೊಳ್ಳುವುದು ಪಾಪದ ಕೊಡ ತುಂಬಿದಂತಿರುವ ಗೌಡ ಕುಟುಂಬಕ್ಕೆ ಕಷ್ಟ, ಆದರೆ ಅನಿವಾರ್ಯ. ಜೆಡಿಎಸ್ ಬಹಳ ಹಿಂದೆಯೇ ತನ್ನ ರಾಜಕೀಯ ಪಕ್ಷದ ಸ್ವರೂಪವನ್ನು ಕಳೆದುಕೊಂಡಿತ್ತು. ಕುಟುಂಬ ನಿರ್ವಹಣೆಯ ಉದ್ಯಮವಾಗಿ, ವ್ಯಾವಹಾರಿಕವಾಗಿ ಮತ್ತು ಅವಕಾಶವಾದಿಯಾಗಿ ತನ್ನ ಸ್ಥಾನವನ್ನು ಕಾಪಾಡಿಕೊಂಡಿತ್ತು. ಪಕ್ಷದ ಮೈತ್ರಿಯೂ ಸಹ ತತ್ವಾಧಾರಿತವಾಗಿರಲಿಲ್ಲ. ಕೇವಲ ಚೌಕಾಸಿಗಳ ಮೂಲಕ ಏರ್ಪಟ್ಟಿತ್ತು. ಒಮ್ಮೆ ಕಾಂಗ್ರೆಸ್ ಪಕ್ಷದೊಡನೆ, ಮತ್ತೊಮ್ಮೆ ಬಿಜೆಪಿಯೊಡನೆ ಮೈತ್ರಿ ಸಾಧಿಸುವ ಹಾದಿಯನ್ನು ತೆನೆಹೊತ್ತ ಮಹಿಳೆಯ ಈ ಕಳಂಕಿತ ಪಕ್ಷ ಅನುಸರಿಸಿದೆ. ಕರ್ನಾಟಕ ಇದಕ್ಕೆ ಭಾರಿ ಬೆಲೆ ತೆರಬೇಕಾಗಿದ್ದು ಇದರ ಕಾರಣಕ್ಕಾಗಿ ಅಸ್ಥಿರತೆಯನ್ನು ಎದುರಿಸಿದ್ದೂ ಉಂಟು. ಈ ಸನ್ನಿವೇಶದಲ್ಲಿ ಕರ್ನಾಟಕದ ರಾಜಕಾರಣ ಯಾವುದೇ ಮೌಲ್ಯವಿಲ್ಲದ, ತಲೆಹರಟೆಯಾಗಿ ಮಾತ್ರವಾಗಿ ಉಳಿದ ಮೂರನೆ ಪಕ್ಷವೊಂದರ ನಾಟಕೀಯ ವರ್ತನೆಯನ್ನು ಯಾಕೆ ಸಹಿಸಿಕೊಳ್ಳಬೇಕು?

ಇತ್ತೀಚಿನ ಪಕ್ಷದ ಘನಂದಾರಿ ರಜತ ಮಹೋತ್ಸವದ ಆಚರಣೆಯು ಅದರ ಇದ್ದೂ ಇಲ್ಲದಂಥ ರೀತಿಗೆ ಅನ್ವರ್ಥಕವಾಗಬೇಕಾಗಿದ್ದ ಅಸ್ತಿತ್ವದ ಶವಪೆಟ್ಟಿಗೆಗೆ ಹಲಗೆ ಹೊಡೆಯುವ ಸಂದರ್ಭವಾಗಬೇಕಿತ್ತು. ಉತ್ತರದಾಯಿತ್ವದ ಬಗ್ಗೆ ಆತ್ಮಾವಲೋಕನಕ್ಕೆ ಮುಂದಾಗದೆ, ಗೌಡರ ಕುಟುಂಬವು ಪಕ್ಷದೊಳಗೆ ಕುಟುಂಬಸ್ಥರಿಗೆ ಹಿಂದಿನ ಹುದ್ದೆಗಳನ್ನೇ ಮುಂದುವರೆಸಿದ್ದು, ಇದು ಸಾಮಾನ್ಯ. ಜೆಡಿಎಸ್ ಮೂಲತಃ ಒಂದು ಕುಟುಂಬದ ಉದ್ದಿಮೆ, ನಂತರದಲ್ಲಿ ರಾಜಕೀಯ ಪಕ್ಷ. 94 ವರ್ಷದ ದೇವೇಗೌಡರು ಈ ಸನ್ನಿವೇಶವನ್ನು ಬಳಸಿಕೊಂಡು, ಗೌರವಯುತವಾಗಿ ಪದತ್ಯಾಗ ಮಾಡಬಹುದಿತ್ತು ಮತ್ತು ತನ್ನ ಮೂಲ ಉದ್ದೇಶ ಗುರಿಯನ್ನೇ ಕಳೆದುಕೊಂಡಿರುವ ಪಕ್ಷವನ್ನು ವಿಸರ್ಜಿಸಬಹುದಿತ್ತು. ಬದಲಾಗಿ ಗೌಡರು ಹಗರಣಗಳಿಂದ ಆವೃತವಾಗಿರುವ ಪಕ್ಷದ ಅದ್ಧೂರಿ ಆಚರಣೆಗೆ ಅಧ್ಯಕ್ಷತೆ ವಹಿಸಿದ್ದಾರೆ.

ಒಬ್ಬ ಮೊಮ್ಮಗ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತು ಜೈಲು ಪಾಲಾಗಿದ್ದಾನೆ. ಅವರ ಮಗ ಎಚ್ ಡಿ ರೇವಣ್ಣ ಗಂಭೀರ ಆರೋಪಗಳಲ್ಲಿ ಸಿಲುಕಿದ್ದು ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಮತ್ತೊಬ್ಬ ಮಗ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಲವು ಹಣಕಾಸು ಹಗರಣಗಳ ವಿವಾದಗಳಲ್ಲಿ ಸಿಲುಕಿದ್ದು ಇದು ವ್ಯಕ್ತಿಗತವಾಗಿ ಹಾಗೂ ಪಕ್ಷದ ವಿಶ್ವಾಸಾರ್ಹತೆಗೆ ಸರಿಪಡಿಸಲಾಗದಷ್ಟು ಹಾನಿ ಮಾಡಿದೆ. ಇದು ಬಿಕ್ಕಟ್ಟು ಎದುರಿಸುತ್ತಿರುವ ಪಕ್ಷವಲ್ಲ, ಬದಲಾಗಿ ತನ್ನನ್ನು ತಾನೇ ಬಂಧನದಲ್ಲಿಟ್ಟಿರುವ ಪಕ್ಷವಾಗಿದೆ.

ಹಾಗಾಗಿ ಬಿಜೆಪಿ ಮೈತ್ರಿಗೆ ಜೆಡಿಎಸ್ ಹಾತೊರೆಯುವುದು ಅಚ್ಚರಿಯೇನಲ್ಲ. ಇದಕ್ಕೆ ಸೈದ್ಧಾಂತಿಕ ಕಾರಣಗಳಿಗಿಂತಲೂ ಅನಿವಾರ್ಯತೆ ಪ್ರಧಾನವಾಗಿ ಕಾಣುತ್ತದೆ. ರಾಜಕೀಯ ಅಸ್ತಿತ್ವದ ಉಳಿವು ಗಳಿಸಿದ ಅಕ್ರಮ ಸಂಪತ್ತನ್ನು ರಕ್ಷಿಸುವ ಧೋರಣೆಯೊಂದಿಗೆ ಕೂಡಿದಾಗ, ಮೈತ್ರಿಕೂಟಗಳು ಕಾರ್ಯತಾಂತ್ರಿಕವಾಗಿರುವುದಿಲ್ಲ. ಇದು ವ್ಯಾವಹಾರಿಕ ಚಟುವಟಿಕೆ ಆಗುತ್ತದೆ.

ರಾಜಕೀಯ ಸಂಘಟನೆಯೊಂದು ಕರ್ನಾಟಕದ ಆಳ್ವಿಕೆಗೆ ಕಿಂಚಿತ್ತೂ ಕೊಡುಗೆ ನೀಡದಿರುವಾಗ, ಅದು ಸಾರ್ವಜನಿಕ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ, ಯಾವುದೇ ಸೈದ್ಧಾಂತಿಕ ಪಾತ್ರವನ್ನು ನಿರ್ವಹಿಸುವುದಿಲ್ಲ. ಹಾಗಾಗಿ ಈ ಪಕ್ಷ ಉಳಿಯಲು ಯಾವುದೇ ಕಾರಣಗಳು ಕಾಣುವುದಿಲ್ಲ. ಜೆಡಿಎಸ್ ಇಂದು ವಿಸರ್ಜನೆಯಾದರೆ, ರಾಜ್ಯಕ್ಕೆ ರಾಜಕೀಯ ಶಕ್ತಿಯ ನಷ್ಟವೇನೂ ಆಗುವುದಿಲ್ಲ. ರಾಜ್ಯದ ರಾಜಕೀಯ ಕೊಂಚವಾದರೂ ನಿರಾಳವಾಗುತ್ತದೆ. ಕರ್ನಾಟಕದ ರಾಜಕಾರಣಕ್ಕೆ ಸ್ಪಷ್ಟತೆ ಬೇಕಿದೆಯೇ ಹೊರತು ಗೊಂದಲಗಳಲ್ಲ. ನಾಯಕತ್ವ ಬೇಕಿದೆ, ಪರಂಪರೆಯ ರಾಜಕೀಯವಲ್ಲ. ಪಕ್ಷಗಳು ಬೇಕಿವೆ, ಖಾಸಗಿ ಉದ್ದಿಮೆಗಳಲ್ಲ. ವಿಷಾದಕರ ಅಂಶವೆಂದರೆ, ಜೆಡಿಎಸ್ ಈ ವ್ಯತ್ಯಾಸಗಳನ್ನು ಅರಿತೇ ಇಲ್ಲ. ಪಕ್ಷದ ಗುರಿಕಾರರಾದ ಗೌಡ ಕುಟುಂಬಕ್ಕೆ ಬೇಕಿರುವುದು ಕುಟುಂಬದ ಹಿತವರ್ಧನೆ.. ಅದಕ್ಕೆ ಬೇಕಾಗಿ ಉಳಿದವರೆಲ್ಲ ಕಾಲಾಳುಗಳು.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again