ಕರ್ನಾಟಕದ ಸ್ಥಿತಿ ಕುರಿತು ಮಲಯಾಳಿ ಮಾಧ್ಯಮ ಏನು ಹೇಳುತ್ತದೆ?
ಮಲಯಾಳಿ ಮಾಧ್ಯಮಗಳ ವಿಶ್ಲೇಷಣೆಯು ಸ್ಥಿರವಾಗಿದ್ದು, ಮುಲಾಜಿಲ್ಲದೆ ವಿಶ್ಲೇಷಣೆ ಮಾಡುತ್ತಿವೆ
ಇದ್ದುದು ಇದ್ದಹಾಗೆ * ಬಿವಿಸೀ
ಕಳೆದ ಒಂದು ತಿಂಗಳಲ್ಲಿ ಮಲಯಾಳಿ ಮಾಧ್ಯಮಗಳು ಕರ್ನಾಟಕದ ಕರಾಳ ಚಿತ್ರವನ್ನು ಬಿತ್ತರಿಸಿವೆ. ಹೆಚ್ಚುತ್ತಿರುವ ಅಪರಾಧಗಳು, ದುಬಾರಿ ಗ್ಯಾರಂಟಿ ಯೋಜನೆಗಳು ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ವಿರೋಧಿ ಬಣಗಳ ಕಲಹ ಈ ವಿಷಯಗಳನ್ನೇ ಕೇಂದ್ರೀಕರಿಸಿವೆ.
ಮಲಯಾಳಿ ಸುದ್ದಿಪತ್ರಿಕೆಗಳು, ಆನ್ ಲೈನ್ ವೇದಿಕೆಗಳು, ವಾರಪತ್ರಿಕೆಗಳು ಕರ್ನಾಟಕವನ್ನು ಹೆಚ್ಚು ತೀಕ್ಷ್ಣವಾಗಿ ಗಮನಿಸುತ್ತಿರುವುದನ್ನು ಕಳೆದ ವಾರದಲ್ಲಿ ಕಾಣಬಹುದು. ಈ ವಾಹಿನಿಗಳ ಒಟ್ಟಾರೆ ವಿಶ್ಲೇಷಣೆ ನೇರವಾಗಿದೆ. ರಾಜ್ಯ ಸರ್ಕಾರ ಓಲಾಡುತ್ತಿದೆ. ಕಾನೂನು ಸುವ್ಯವಸ್ಥೆಯ ವೈಫಲ್ಯ, ಬರಿದಾಗುವ ಹಂತಕ್ಕೆ ತಲುಪಿರುವ ರಾಜ್ಯ ಬೊಕ್ಕಸ, ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹ ಈ ನಿರೂಪಣೆಗಳಲ್ಲಿ ಪ್ರಧಾನವಾಗಿವೆ.
ಕಾನೂನು ಸುವ್ಯವಸ್ಥೆಯನ್ನು ಕುರಿತಂತೆ, ಮಲಯಾಳಿ ವಿಶ್ಲೇಷಕರು ಉನ್ನತ ಹಂತದ ಅಪರಾಧಗಳನ್ನು ವರದಿ ಮಾಡಿದ್ದು, ಪೆÇಲೀಸ್ ಪಡೆಗಳು ಹೆಚ್ಚು ನಿಷ್ಕ್ರಿಯರಾಗಿ ಕಾಣುತ್ತಿರುವುದನ್ನು ವರದಿ ಮಾಡಿವೆ. ಹಲವು ವರದಿಗಳ ಅನುಸಾರ ಸರ್ಕಾರದ ಪ್ರತಿಕ್ರಿಯೆಯೂ ಸಹ ರಕ್ಷಣಾತ್ಮಕವಾಗಿದ್ದು ಈ ಕುಸಿತವನ್ನು ನಿರಾಕರಿಸಲಾಗುತ್ತಿದೆಯೇ ಹೊರತು, ಬಗೆಹರಿಸಲು ಮುಂದಾಗುತ್ತಿಲ್ಲ. ಇದೇ ಕುಸಿತವನ್ನು ರಾಜ್ಯ ಹಿಂದೆ ಗಳಿಸಿದ್ದ ಆದರಕ್ಕೆ ಹೋಲಿಸಿ, ಈಗ ಆಡಳಿತಾತ್ಮಕ ಶಿಸ್ತು ಇಲ್ಲದಿರುವುದನ್ನು ಎತ್ತಿ ಹೇಳಿವೆ. ಈ ಅಸಮಾಧಾನವನ್ನು ಸಂಪಾದಕೀಯಗಳಲ್ಲಿ ಮುಖ್ಯವಾಗಿ ಬಿಂಬಿಸಲಾಗಿದೆ. ಕೆಲವು ಲೇಖಕರು ಕರ್ನಾಟಕದ ಪರಿಸ್ಥಿತಿ ದಾರಿ ತಪ್ಪಿದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಮಲಯಾಳಿ ಸುದ್ದಿ ಪತ್ರಿಕೆಗಳ ಪ್ರಕಟಣೆಗಳಲ್ಲಿ ಮತ್ತೊಂದು ವಿಷಯ ಮುಖ್ಯವಾಗಿ ಕಾಣುವುದು, ಕಾಂಗ್ರೆಸ್ ಸರ್ಕಾರದ ವಿಶಾಲ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸಕ್ಕೆ ಉಂಟಾಗುತ್ತಿರುವ ಸಮಸ್ಯೆಗಳು. ಲೇಖಕರು ಪದೇಪದೇ, ಗ್ಯಾರಂಟಿಗಳು ಚುನಾವಣೆಗಳ ದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಸದಾಭಿಪ್ರಾಯ ಮೂಡಿಸಿದ್ದರೂ ಸಹ, ಈಗ ರಾಜ್ಯದ ಹಣಕಾಸು ಸ್ಥಿರತೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಶ್ಲೇಷಣೆಗಳಲ್ಲಿ ಅಭಿವೃದ್ಧಿ ವೆಚ್ಚಗಳು ಕುಸಿಯುತ್ತಿರುವುದನ್ನೂ ಹೇಳಲಾಗಿದೆ. ಗುತ್ತಿಗೆದಾರರಿಗೆ ಪಾವತಿ ಮಾಡದಿರುವುದು, ಸರಕಾರಿ ನೌಕರರಿಗೆ ತಿಂಗಳುಗಟ್ಟಲೆ ವೇತನವಿಲ್ಲದಿರುವುದು, ರಸ್ತೆಗಳು ಮೂರಾಬಟ್ಟೆಯಾಗಿರುವುದು ಮುಖ್ಯ ವಿಷಯಗಳಾಗಿ ವರದಿಯಾಗಿವೆ. ಸಾಲದ ಹೊರೆಯಿಂದ ತತ್ತರಿಸುತ್ತಿರುವ ಕೇರಳದಲ್ಲಿ ಕರ್ನಾಟಕದ ಪರಿಸ್ಥಿತಿಯನ್ನು ಉದಾಹರಣೆಯಾಗಿ ಮುಂದಿಡಲಾಗುತ್ತಿದ್ದು ಸೂಕ್ತ ರಕ್ಷಣಾ ಕ್ರಮಗಳಿಲ್ಲದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಶ್ಲೇಷಣೆ ಮಾಡಲಾಗುತ್ತಿದೆ.
ಈ ಚರ್ಚೆಗಳಿಗೆ ಪೂರಕವಾಗಿ ಮತ್ತೊಂದು ರಾಜಕೀಯವಾಗಿ ಹಾನಿಕರವಾದ ವಿಷಯವನ್ನೂ ಪ್ರಸ್ತಾಪಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಡುವೆ ಕಲಹವನ್ನು ಮಲಯಾಳಿ ಮಾಧ್ಯಮಗಳು ಸಾಮಾನ್ಯ ಪೈಪೆÇೀಟಿಯಂತೆ ಚಿತ್ರಿಸದೆ, ಬೇರೂರಿದ ಅಧಿಕಾರ ಸಂಘರ್ಷದಂತೆ ವ್ಯಾಖ್ಯಾನಿಸುತ್ತಿದ್ದು, ಇದು ಸರ್ಕಾರಕ್ಕೆ ಧಕ್ಕೆ ಉಂಟುಮಾಡುತ್ತಿದೆ ಎಂದು ಹೇಳಲಾಗಿದೆ. ವಿಶ್ಲೇಷಕರು ಎರಡು ಬದಿಯ ನಿಯಂತ್ರಣದ ಈ ರಚನೆಯನ್ನು, ಇಬ್ಬರೂ ನಾಯಕರು ಸ್ವತಂತ್ರವಾಗಿ ಮುನ್ನಡೆಸುತ್ತಿರುವುದನ್ನು ಸೂಚಿಸುತ್ತಿದ್ದು, ಇಬ್ಬರೂ ಸಹ ಒಬ್ಬರನ್ನೊಬ್ಬರು ನಗಣ್ಯಗೊಳಿಸುವ ಮೂಲಕ ಪ್ರಭಾವ ಬೀರಲೆತ್ನಿಸುತ್ತಿರುವುದನ್ನು ವ್ಯಾಖ್ಯಾನಿಸಿದ್ದಾರೆ. ಇದು ಆಡಳಿತಾತ್ಮಕ ಸಂಯೊಜನೆಗೆ ಧಕ್ಕೆ ಉಂಟುಮಾಡಿರುವುದಲ್ಲದೆ, ಸರ್ಕಾರದ ದೌರ್ಬಲ್ಯಕ್ಕೆ ನೇರವಾದ ಕಾರಣವಾಗಿದೆ ಎಂದೂ ವಿಶ್ಲೇಷಿಸಿದ್ದಾರೆ.
ಕೆಲವು ಮಲಯಾಳಿ ಅಂಕಣಕಾರರು, ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಲು ಹಿಂಜರಿಯುತ್ತಿರುವುದನ್ನು ಮುಖ್ಯವಾಗಿ ವಿಶ್ಲೇಷಿಸಿದ್ದು, ಇದು ಪರಿಸ್ಥಿತಿಯನ್ನು ಬಿಗಡಾಯಿಸಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಹಣಕಾಸು ಹೊರೆಯ ಮತ್ತು ಆಳ್ವಿಕೆಯ ದಣಿವನ್ನು ಹೊರುತ್ತಿದ್ದು, ಶಿವಕುಮಾರ್ ಅವರು ಅಸಹನೆಯ, ಹಠಮಾರಿತನದ ನಾಯಕ ಎಂದು ಬಣ್ಣಿಸಲಾಗುತ್ತಿದೆ. ಇದರಿಂದ ಉಂಟಾಗುವ ಸಂಘರ್ಷವೇ ಅಧಿಕಾರಶಾಹಿಗೂ ವ್ಯಾಪಿಸಿದ್ದು, ಈಗ ಅಧಿಕಾರಿಗಳು ಯಾವುದೋ ಒಂದು ಬಣದ ರಾಜಕೀಯ ಪರಿಣಾಮಕ್ಕೆ ಹೆದರಿ ಹಿಂಜರಿಯುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.
ಒಟ್ಟಾಗಿ ನೋಡಿದಾಗ ಮಲಯಾಳಿ ಮಾಧ್ಯಮಗಳ ವಿಶ್ಲೇಷಣೆಯು ಸ್ಥಿರವಾಗಿದ್ದು, ಮುಲಾಜಿಲ್ಲದೆ ವಿಶ್ಲೇಷಣೆ ಮಾಡುತ್ತಿವೆ. ಕರ್ನಾಟಕದ ಸವಾಲುಗಳು ಪ್ರತ್ಯೇಕ ಘಟನೆಗಳಲ್ಲ, ಆದರೆ ಪರಸ್ಪರ ಸಂಬಂಧ ಇರುವ ರಾಜಕೀಯ ಅನೈಕ್ಯತೆಯ, ಆರ್ಥಿಕ ದುರ್ಬಳಕೆಯ, ಆಡಳಿತಾತ್ಮಕ ಕುಸಿತದ ಲಕ್ಷಣಗಳಾಗಿವೆ. ಈ ಪ್ರವೃತ್ತಿ ಮುಂದುವರೆದರೆ ರಾಜ್ಯ ಶೀಘ್ರದಲ್ಲೇ ಇನ್ನೂ ಆಳವಾದ ಬಿಕ್ಕಟ್ಟಿಗೆ ಒಳಪಡುತ್ತದೆ ಎಂದು ಎಚ್ಚರಿಸಿರುವ ವಿಶ್ಲೇಷಕರು, ಕಾಂಗ್ರೆಸ್ ನಾಯಕರು ಈಗ ಒಪ್ಪಿಕೊಳ್ಳುತ್ತಿರುವ ಬಿಕ್ಕಟ್ಟನ್ನೂ ಮೀರಿಸುತ್ತದೆ ಎಂದು ಹೇಳುತ್ತಿದ್ದಾರೆ.
Comments
Post a Comment