`ಕುಮಾರಸ್ವಾಮಿಯ ಕ್ಷಣ'ಕ್ಕೆ ಒಡ್ಡಿಕೊಂಡ ಸಿದ್ದರಾಮಯ್ಯ

 ಅಧಿಕಾರ ಬಿಡಲು ಒಪ್ಪದ ಸಿದ್ದರಾಮಯ್ಯ ನಿಲುವು, ಹೈಕಮಾಂಡ್ ಅನಿಶ್ಚಿತತೆಯೊಂದಿಗೆ, ರಾಜ್ಯದಲ್ಲಿ ಬಿಕ್ಕಟ್ಟು ಸೃಷ್ಟಿಸಿದ್ದು, ಇದು ಸಿದ್ದರಾಮಯ್ಯ ಅವರನ್ನು ಮಾತ್ರವೇ ಅಲ್ಲದೆ ಕಾಂಗ್ರೆಸ್ ಪಕ್ಷವನ್ನೂ ಹಾಳುಮಾಡುತ್ತಿದೆ.



ಅಹುದಾದರಹುದೆನ್ನಿ * ಬಿವಿಸೀ

ಕರ್ನಾಟಕದಲ್ಲಿ ಅನಾವರಣಗೊಳ್ಳುತ್ತಿರುವ ರಾಜಕೀಯ ಚಟುವಟಿಕೆಗಳು ಎರಡು ದಶಕಗಳ ಹಿಂದೆ ಅಧಿಕಾರ ಹಂಚಿಕೆಗಾಗಿ ಒಪ್ಪಿಕೊಳ್ಳಲಾಗಿದ್ದ ಕುಮಾರಸ್ವಾಮಿ-ಯಡಿಯೂರಪ್ಪ ಮೈತ್ರಿ ಭಂಗವಾದ ಸಂದರ್ಭವನ್ನು ನೆನಪಿಗೆ ತರುತ್ತಿದೆ. ಇತಿಹಾಸ ಕೇವಲ ಮರುಕಳಿಸುತ್ತಿಲ್ಲ, ಇನ್ನೂ ನಾಟಕೀಯವಾಗಿ ನಿರ್ಣಾಯಕವಾಗಿ ತೆರೆದುಕೊಳ್ಳುತ್ತಿದೆ. 2009-10ರಲ್ಲಿ ಎಚ್ ಡಿ ಕುಮಾರಸ್ವಾಮಿ ಎರಡೂವರೆ ವರ್ಷ ಅಧಿಕಾರ ನಡೆಸಿ, ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಲು ನಿರಾಕರಿಸಿದಾಗ, ಇದು ಸ್ವತಃ ಕುಮಾರಸ್ವಾಮಿ ಮತ್ತು ಗೌಡರ ಕುಟುಂಬದ ವಿಶ್ವಾಸಾರ್ಹತೆಗೆ ಅಪಾರ ಹಾನಿ ಉಂಟುಮಾಡಿತ್ತು. ಅನಿವಾರ್ಯವಾಗಿ ಮಧ್ಯಂತರ ಚುನಾವಣೆಗಳು ನಡೆಯಬೇಕಾಯಿತು. ಈ ಘಟನೆಯು ಶಾಶ್ವತವಾಗಿ ಗೌಡರ ನೈತಿಕ ನೆಲೆಯನ್ನು ನಾಶಪಡಿಸಿತ್ತು. ಇಂದು ಸಿದ್ದರಾಮಯ್ಯ ಇದೇ ರೀತಿಯ ವಿಶ್ವಾಸಾರ್ಹತೆಯ ನೆಲೆಯಲ್ಲಿ ಸಮಾಲು ಎದುರಿಸುತ್ತಿದ್ದಾರೆ.

2023ರಲ್ಲಿ ಹೈಕಮಾಂಡ್ ಕರ್ನಾಟಕ ಸರ್ಕಾರದ ರಚನೆಗೆ ಸೂಚಿಸಿದ ಸೂತ್ರದ ಅನುಸಾರ 50:50 ಅನುಪಾತದಲ್ಲಿ ಮುಖ್ಯಮಂತ್ರಿ ಪದವಿಯನ್ನು ಹಂಚಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಒಪ್ಪಿದ್ದರು ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಇದು ಪೂರ್ಣ ಸತ್ಯ ಎನ್ನಲು ಪುರಾವೆಗಳಿಲ್ಲ. ಇದನ್ನು ಸಿದ್ದರಾಮಯ್ಯ ಮುಕ್ತವಾಗಿ ಒಪ್ಪಿಕೊಳ್ಳದೆ ಇರಬಹುದು. ಆದರೆ ವ್ಯಾಪಕವಾಗಿ ಜನರು ನಂಬಿರುವ ಹಾಗೆ ಅವರು ಡಿ ಕೆ ಶಿವಕುಮಾರ್‍ಗೆ ಅಧಿಕಾರಾವಧಿಯ ಅರ್ಧ ಸಮಯ ಕಳೆದ ಮೇಲೆ ಪದವಿಯನ್ನು ಬಿಟ್ಟುಕೊಡುವ ನಿರೀಕ್ಷೆ ಇತ್ತು. ಸಿದ್ದರಾಮಯ್ಯ ತಾವು ಹೈಕಮಾಂಡ್ ತೀರ್ಪಿಗೆ ಬದ್ಧರಾಗಿರುವುದಾಗಿ ಪದೇಪದೇ ಹೇಳುತ್ತಿರುವುದು, ಅವರ ವರ್ಚಸ್ಸನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಹಿಂಜರಿಕೆಯ ಸೂಚನೆಯಾಗಿ ಕಾಣುತ್ತಿದ್ದು, ಒಪ್ಪುವುದಿಲ್ಲ ಎಂಬ ಸಂಕೇತವನ್ನೂ ನೀಡುತ್ತಿದೆ. ಅವರ ಮೌನದ ಪ್ರತಿಯೊಂದು ದಿನವೂ, ಸಿದ್ದರಾಮಯ್ಯ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ ಎಂಬ ಭಾವನೆಯನ್ನು ದಟ್ಟವಾಗಿಸುತ್ತಿದ್ದು, ಇದು ನೈತಿಕ ಒಪ್ಪಂದಕ್ಕೆ ವಿರುದ್ಧವಾದುದು ಎಂದು ಭಾವಿಸಲಾಗುತ್ತಿದೆ.

ಇಷ್ಟೇ ಹಾನಿಕಾರಕ ಅಂಶ ಎಂದರೆ ಕಾಂಗ್ರೆಸ್ ಹೈಕಮಾಂಡ್‍ನ ದುರವಸ್ಥೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಸಹ ಸಾರ್ವಜನಿಕವಾಗಿ, ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುವುದಾಗಿ ಪ್ರಮಾಣ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪಕ್ಷದ ಕೇಂದ್ರ ಕಚೇರಿಯಿಂದ ನಿರ್ಣಾಯಕ ನಾಯಕತ್ವದ ನಿರ್ಣಯ ಕೈಗೊಳ್ಳುವುದು ಸಾಧ್ಯವಾಗಬೇಕಿತ್ತು. ಬದಲಾಗಿ ಪಕ್ಷದ ನಿಷ್ಕ್ರಿಯತೆ ಒಳಒಪ್ಪಂದದ ಒಂದು ವಿಷಯವನ್ನು ಸಾರ್ವಜನಿಕವಾಗಿ ಮುಜುಗರಕ್ಕೀಡು ಮಾಡುವ ವಿವಾದವಾಗಿ ಪರಿವರ್ತಿಸಿದೆ. ಇಬ್ಬರು ಪ್ರಬಲ ನಾಯಕರು ಮುಕ್ತ ಮಲ್ಲಯುದ್ಧದಲ್ಲಿ ತೊಡಗಿರುವ ಹಾಗೆ ತೋರುತ್ತಿದ್ದರೆ, ಹೈಕಮಾಂಡ್ ಕೇವಲ ಪ್ರೇಕ್ಷಕನಾಗಿ ಕಾಣುತ್ತಿದೆ. ಇದು ಪಕ್ಷದ ವರ್ಚಸ್ಸಿಗೆ ತೀವ್ರ ಧಕ್ಕೆ ಉಂಟುಮಾಡುತ್ತಿದೆ. ಕರ್ನಾಟಕದ ಮತದಾರರು ಎರಡು ವರ್ಷದ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು ಈಗ ಪಕ್ಷವು ತನ್ನದೇ ಆದ ಅನಿಶ್ಚಿತತೆಯಿಂದ ಕುಸಿಯುತ್ತಿರುವುದನ್ನು ಗಮನಿಸುತ್ತಿದ್ದಾರೆ.

ಸಿದ್ದರಾಮಯ್ಯನವರ ನೈತಿಕ ವೈರುಧ್ಯ ಇಲ್ಲಿ ಸ್ಪಷ್ಟವಾಗುತ್ತಿದೆ. ತಮ್ಮ ರಾಜಕೀಯ ಗುರು ಎಂದು ಹೇಳಿಕೊಳ್ಳುವ ರಾಮಕೃಷ್ಣ ಹೆಗಡೆ ಅವರಿಗೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಹೆಗಡೆ ತಮ್ಮ ಮುಖ್ಯಮಂತ್ರಿ ಹುದ್ದೆಗೆ ಮೂರು ಬಾರಿ ರಾಜೀನಾಮೆ ನೀಡಿದ್ದು ಒತ್ತಡದಿಂದ ಅಥವಾ ಸಾರ್ವಜನಿಕರ ಪ್ರತಿಭಟನೆಯ ಪರಿಣಾಮವಾಗಿ ಅಲ್ಲ, ಅವರು ತಮ್ಮ ಹುದ್ದೆಯ ಘನತೆಯನ್ನು ಎತ್ತಿಹಿಡಿಯುವುದು ಅಧಿಕಾರದಲ್ಲಿ ಉಳಿಯುವುದಕ್ಕಿಂತಲೂ ಹೆಚ್ಚು ಮೌಲ್ಯಯುತ ಎಂದು ಭಾವಿಸಿದ್ದರು. ತಮ್ಮ ಜೇಬಿನಲ್ಲಿ ರಾಜೀನಾಮೆಯನ್ನು ಇಟ್ಟುಕೊಂಡೇ ಆಳ್ವಿಕೆ ನಡೆಸಿದ್ದರು. ಆದರೆ ಸಿದ್ದರಾಮಯ್ಯ ತಮ್ಮ ಜೇಬಿನಲ್ಲಿ ಲೆಕ್ಕಾಚಾರಗಳನ್ನು ಇಟ್ಟುಕೊಂಡಿದ್ದಾರೆ, ಇದು ರಾಜಕೀಯ ಲೆಕ್ಕಾಚಾರವಾಗಿದ್ದು ರಾಜಕೀಯ ನೈತಿಕತೆಯನ್ನು ಸೂಚಿಸುವುದಿಲ್ಲ.

ತಮ್ಮ 79ನೆ ವಯಸ್ಸಿನಲ್ಲಿ (80ಕ್ಕೆ ಸನಿಹ) ಸಿದ್ದರಾಮಯ್ಯ ಗೌರವಯುತವಾಗಿ ನಿರ್ಗಮಿಸುವ ಸ್ಥಿತಿಯಲ್ಲಿ ಇರಬೇಕಿತ್ತು. ಸ್ವಯಂಪ್ರೇರಿತವಾಗಿ ಅಧಿಕಾರ ಹಸ್ತಾಂತರ ಮಾಡಿದ್ದರೆ ಅವರ ವರ್ಚಸ್ಸು ಹೆಚ್ಚಾಗುತ್ತಿದ್ದು, ರಾಜಕೀಯ ಮುತ್ಸದ್ದಿಯಾಗಿ, ತಮ್ಮ ಕಚೇರಿಯ ಆಮಿಷಗಳನ್ನು ಸರಿಯಾದ ಸಮಯದಲ್ಲಿ ತ್ಯಜಿಸುವ ಕೀರ್ತಿಗೆ ಪಾತ್ರರಾಗುತ್ತಿದ್ದರು. ಆದರೆ ಸಿದ್ದರಾಮಯ್ಯ ಉಳಿದರೂ ಅಥವಾ ನಿರ್ಗಮಿಸಿದರೂ ಸಹ, ಈಗಾಗಲೇ ಹಾನಿ ಸಂಭವಿಸಿದೆ. ಅವರ ಅಹಿಂದ ಮತಬ್ಯಾಂಕು ಒಂದು ಕಾಲದಲ್ಲಿ ಅತ್ಯಂತ ನಿಷ್ಠೆಯಿಂದಿದ್ದುದು ಈಗ ಭ್ರಮನಿರಸನಕ್ಕೊಳಗಾಗುತ್ತಿದೆ. ನೀತಿಗಳನ್ನು ಅನುಕರಿಸುವ ನಾಯಕ ಎಂಬ ಅವರ ಗೌರವಕ್ಕೆ ಧಕ್ಕೆ ಉಂಟಾಗಿದ್ದು ಅವರ ರಾಜಕೀಯ ಬದುಕಿನ ಈ ಕಾಲಘಟ್ಟದಲ್ಲಿ ಇದು ಅನಗತ್ಯವಾಗಿತ್ತು.

ದುರಂತ ಎಂದರೆ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದರೂ ಕಳೆದುಕೊಳ್ಳುವುದು ಏನೂ ಇಲ್ಲ. ಅವರು ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಏನೂ ಮಾಡಲು ಸಾಧ್ಯವಾಗಿಲ್ಲ - ಹೋಗಲಿ, ಸರಕಾರಿ ನೌಕರರಿಗೆ ಮಾಸಿಕ ವೇತನ ನಿಗದಿತವಾಗಿ ಕೊಡಲು ಸಾಧ್ಯವಾಗಿಲ್ಲ, ರಸ್ತೆ ಮತ್ತು ಆಸ್ಪತ್ರೆಗಳನ್ನು ಕಾರ್ಯನಿರ್ವಹಣೆ ಸ್ಥಿಯಯಲ್ಲಿಡಲು ಸಾಧ್ಯವಾಗಿಲ್ಲ... ಅವರು ಈಗ ಅಧಿಕಾರ ಬಿಟ್ಟರೆ ಪರಂಪರೆಯ ದೃಷ್ಟಿಯಿಂದ ಇನ್ನೂ ಪ್ರಯೋಜನಕಾರಿಯಾಗುತ್ತದೆ. ಅಧಿಕಾರ ಬಿಡಲು ಒಪ್ಪದ ಅವರ ನಿಲುವು, ಹೈಕಮಾಂಡ್ ಅನಿಶ್ಚಿತತೆಯೊಂದಿಗೆ, ರಾಜ್ಯದಲ್ಲಿ ಬಿಕ್ಕಟ್ಟು ಸೃಷ್ಟಿಸಿದ್ದು, ಇದು ಸಿದ್ದರಾಮಯ್ಯ ಅವರನ್ನು ಮಾತ್ರವೇ ಅಲ್ಲದೆ ಕಾಂಗ್ರೆಸ್ ಪಕ್ಷವನ್ನೂ ಹಾಳುಮಾಡುತ್ತಿದೆ. 2009ರಲ್ಲಿ ಕುಮಾರಸ್ವಾಮಿಗೆ ಆದಂತೆ, ನಿಜವಾದ ಹಾನಿಯಾಗುವುದು ಸರ್ಕಾರಕ್ಕೆ ಅಲ್ಲ, ಅದರ ನಾಯಕನ ನೈತಿಕ ಅಧಿಕಾರಕ್ಕೆ ಮತ್ತು ಪಕ್ಷಕ್ಕೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again