ಕೋರ್ಟ್ ಉಸ್ತುವಾರಿಯ ತನಿಖೆ ಮಾತ್ರ ಧರ್ಮಸ್ಥಳ ಎಸ್‍ಐಟಿಯನ್ನು ಸರಿದಾರಿಗೆ ತರಲು ಸಾಧ್ಯ
ಧರ್ಮಸ್ಥಳದ ಸಾಮೂಹಿಕ ಹತ್ಯೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಗಳ ತನಿಖೆ ಆರಂಭಿಸಿದ್ದ ಎಸ್‍ಐಟಿ ನಡುವಿನಲ್ಲೇ ದಾರಿ ತಪ್ಪಿದೆ
..............
* ಸಂಪಾದಕೀಯ
ಧರ್ಮಸ್ಥಳದ ಸಾಮೂಹಿಕ ಹತ್ಯೆ ಮತ್ತು ತತ್ಸಂಬಂಧಿತ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದ ವಿಶೇಷ ತನಿಖಾ ದಳ, ಕೊನೆಯಲ್ಲಿ ವಿವಾದಾಸ್ಪದ ತಿರುವಿನಲ್ಲಿದೆ. ಈ ನಿಟ್ಟಿನಲ್ಲಿ ತನಿಖೆಯ ಪ್ರಾಮಾಣಿಕತೆ, ಆದ್ಯತೆ ಮತ್ತು ಉದ್ದೇಶಗಳ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಎಸ್‍ಐಟಿ ಸಾಗುತ್ತಿರುವ ಹಾದಿ ಕುರಿತಾಗಿ ಸ್ಪಷ್ಟವಾಗಿ ಹೊರಬಂದ ಒಂದು ಮಾದರಿಯನ್ನು ಗಮನಿಸಿದರೆ, ಇದು ಕಾಕತಾಳೀಯ ಎನಿಸುವುದಿಲ್ಲ. ಅತ್ಯಾಚಾರ ಎಸಗಿದವರನ್ನು, ಕೊಲೆಗಡುಕರನ್ನು ಬೆನ್ನಟ್ಟಿ ಶಿಕ್ಷೆಗೊಳಪಡಿಸುವ ಬದಲು, ನ್ಯಾಯಕ್ಕಾಗಿ ಹೋರಾಡುತ್ತಿರುವವರ ವಿರುದ್ಧವೇ ಎಸ್‍ಐಟಿ ತನ್ನ ಬಲ ಪ್ರಯೋಗ ಮಾಡುತ್ತಿದೆ.
ಈ ಬೆಳವಣಿಗೆಯನ್ನು ಸ್ಪಷ್ಟವಾಗಿ ಧರ್ಮಸ್ಥಳದಲ್ಲಿ ನಡೆದ ಲಕ್ಷ ದೀಪೆÇೀತ್ಸವದ ಸಂಭ್ರಮದಲ್ಲಿ ಕಾಣಬಹುದಿತ್ತು. ಈ ಸಂದರ್ಭದಲ್ಲಿ ಧರ್ಮಸ್ಥಳದ ಆಡಳಿತ ನಡೆಸುವ ಕುಟುಂಬದ ಔದಾರ್ಯದಿಂದ ಧನ್ಯರಾಗಿರುವ ಪತ್ರಕರ್ತರ ಮಾತುಗಳಲ್ಲಿ ಗುರುತಿಸಬಹುದಿತ್ತು. ಈ ಪತ್ರಕರ್ತರು ಹೇಯ ಆರೋಪಗಳಿಗೆ ಈಡಾಗಿರುವ ಹೆಗ್ಗಡೆ ಕುಟುಂಬದವರನ್ನು ಹಾಡಿಹೊಗಳಿ ಅಟ್ಟಕ್ಕೇರಿಸಿದ್ದು ಮತ್ತು ಆರೋಪಗಳನ್ನು ಮಾಡುತ್ತಿರುವವರ ವಿರುದ್ದವೇ ಮಾತನಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಧರ್ಮಸ್ಥಳ ಲಕ್ಷಾಂತರ ಹಣತೆಗಳಿಂದ ಬೆಳಗಿದ್ದರೆ, ಹೆಗ್ಗಡೆ ಕುಟುಂಬವು ದಿಗ್ವಿಜಯದ ನಗೆ ಬೀರಿರುವುದನ್ನು ಸ್ಪಷ್ಟವಾಗಿ ಕಾಣುತ್ತಿತ್ತು.
ವಿಶ್ಲೇಷಕರಿಗೆ ಈ ಸಮಾರಂಭ ನಡೆದ ಸಮಯದ ಬಗ್ಗೆ ಅಚ್ಚರಿಯೇನಿಲ್ಲ. ಇದಕ್ಕೆ ಪೂರಕವಾಗಿ ಕೆಲ ದಿನಗಳ ಮುನ್ನ ಆರು ವ್ಯಕ್ತಿಗಳ ವಿರುದ್ಧ ಎಸ್‍ಐಟಿ 4000 ಪುಟಗಳ ವರದಿಯನ್ನು ಸಲ್ಲಿಸಿರುವುದು ಎಸ್‍ಐಟಿ ತನಿಖೆಯ ದಿಕ್ಕೇ ಉಲ್ಟಾಪಲ್ಟಾ ಆಗಿರುವುದನ್ನು ಸೂಚಿಸುತ್ತದೆ. ಇವರ ಪೈಕಿ ನಾಲ್ವರು `ಸೌಜನ್ಯಾಗೆ ನ್ಯಾಯ' ಆಂದೋಲನದ ಕೇಂದ್ರ ಬಿಂದುವಾಗಿದ್ದಾರೆ. ಉತ್ತರ ಸಿಗದ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಹಲವು ವರ್ಷಗಳಿಂದ ಹೋರಾಡುತ್ತಿರುವ ಸಮುದಾಯಕ್ಕೆ, ಅವರಲ್ಲಿದ್ದ ಆತಂಕ ನಿಜವಾಗಿದೆ. ತನಿಖೆಯ ದಿಕ್ಕು ಬಲಾಢ್ಯರಿಗೆ ಸಮಾಧಾನ ತಂದಿದ್ದು, ಮಾಹಿತಿದಾರರು ಮತ್ತು ದೂರುದಾರರ ಆತಂಕವನ್ನು ಹೆಚ್ಚಿಸಿದೆ.
ಪರ್ಯಾಯವಾಗಿ ನಡೆದ ಕೆಲವು ಬೆಳವಣಿಗೆಗಳು ಇದನ್ನು ಸ್ಪಷ್ಟಪಡಿಸುತ್ತದೆ. ಹೈಕೋರ್ಟ್ ಇತ್ತೀಚೆಗೆ ಪುತ್ತೂರು ಸಹಾಯಕ ಆಯುಕ್ತರನ್ನು, ಮಹೇಶ್ ತಿಮರೋಡಿ ಅವರನ್ನು ಬೆಳ್ತಂಗಡಿಯಿಂದ ಗಡೀಪಾರು ಮಾಡಿ ಆದೇಶಿಸಿದ ಕಾರಣಕ್ಕಾಗಿ ಆಕ್ಷೇಪಿಸಿದ್ದು, ಗಡೀಪಾರು ಕ್ರಮವು ದೂರುದಾರರನ್ನು ಮೂಲೆಗುಂಪು ಮಾಡುವ ಅಥವಾ ಅಪರಾಧಿಗಳಂತೆ ತೋರಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ನೀತಿಯ ಒಂದು ಭಾಗ ಎಂದು ಹೇಳಲಾಗುತ್ತಿದೆ. ಸಹಾಯಕ ಆಯುಕ್ತರ ಆದೇಶವು ಧರ್ಮಸ್ಥಳದ ಕಳಂಕಿತ ಆಡಳಿತವನ್ನು ರಕ್ಷಿಸುವ ಸಲುವಾಗಿ, ಪ್ರಶ್ನಿಸುವವರನ್ನೇ ಶಿಕ್ಷೆಗೊಳಪಡಿಸುವ ಮಾದರಿಯನ್ನೇ ಅನುಸರಿಸಿದ್ದು, ಮಹಾ ಪ್ರಮಾದವಾಗಿದೆ.
ಈ ಸಂದರ್ಭದಲ್ಲಿ ಅತ್ಯಂತ ಗಂಭೀರ ಪ್ರಸಂಗ ಎಂದರೆ, ಕಾರ್ಯಕರ್ತ ಟಿ ಜಯಂತ್ ಅವರ ಮೇಲೆ ಎಸ್‍ಐಟಿ ಅಧಿಕಾರಿಗಳ ಸಮ್ಮುಖದಲ್ಲೇ ಮಾರಣಾಂತಿಕ ಹಲ್ಲೆ ನಡೆದಿರುವುದು. ಇದು ಸಾಂಸ್ಥಿಕ ಸಭ್ಯತೆಯ ನೇರ ಉಲ್ಲಂಘನೆಯಾಗಿದೆ. ಸಾಕ್ಷಿ ಅಥವಾ ಮಾಹಿತಿದಾರರ ಮೇಲೆ ತನಿಖಾ ತಂಡದ ರಕ್ಷಣೆಯಲ್ಲಿದ್ದಾಗಲೇ ದೈಹಿಕ ಹಲ್ಲೆ ಮಾಡಿಸುವುದು, ಪಕ್ಷಪಾತವಷ್ಟೇ ಅಲ್ಲ, ಅಮಾನವೀಯ ಮತ್ತು ಪಕ್ಕಾ ಕ್ರಿಮಿನಲ್ ಕೃತ್ಯ. ತದನಂತರದ ಕ್ರಿಮಿನಲ್ ದೂರಿನಲ್ಲಿ ಟಿ ಜಯಂತ್ ಎಸ್‍ಐಟಿ ಅಧಿಕಾರಿಗಳನ್ನೇ ದೂಷಿಸಿದ್ದು, ಇದು ನಿರ್ಲಕ್ಷಿಸಲಾಗದ ವಿಶ್ವಾಸಾರ್ಹತೆಯ ಬಿಕ್ಕಟ್ಟಾಗಿ ಕಾಣುತ್ತದೆ.
ಎಸ್‍ಐಟಿಯಿಂದ ಅನ್ಯಾಯ ನಡೆಯುತ್ತಿರುವುದರ ಬಗ್ಗೆ ಇನ್ನೂ ಹೆಚ್ಚಿನ ವಾಸ್ತವಾಂಶಗಳು ಸ್ಪಷ್ಟನೆ ನೀಡುತ್ತವೆ. ಸೌಜನ್ಯಾಳ ತಾಯಿ ನೀಡಿರುವ ಮೂಲ ದೂರಿನಲ್ಲಿ ಉಲ್ಲೇಖಿಸಿರುವ ಹೆಗ್ಗಡೆ ಕುಟುಂಬದ ಯಾರನ್ನೂ ಎಸ್‍ಐಟಿ ಈವರೆಗೆ ತನಿಖೆಗೆ ಒಳಪಡಿಸಿಲ್ಲ. ಏತನ್ಮಧ್ಯೆ, ಈ ಅನ್ಯಾಯದ ವಿರುದ್ಧ ದನಿ ಎತ್ತಿದ, ತಿಮರೋಡಿ, ಜಯಂತ್, ಮಟ್ಟಣ್ಣನವರ್ ಮತ್ತು ವಿಠ್ಠಲ್ ಗೌಡ ಅವರಿಗೆ ಆಗೀಗ ಸಮನ್ಸ್ ನೀಡಲಾಗಿದ್ದು, ಬೆದರಿಕೆಯ ತಂತ್ರಗಳನ್ನು ಒಡ್ಡಲಾಗಿದೆ. ಅವರನ್ನೇ ಪಿತೂರಿಗಾರರು ಎಂದು ಬಿಂಬಿಸಲಾಗಿದೆ. ತಿಮರೋಡಿ ಅವರು ಎಸ್‍ಐಟಿ ಬಗ್ಗೆ `ಇದು ಸ್ಕ್ರಿಪ್ಟ್ ಪ್ರಕಾರ ನಡೆವ ತನಿಖಾ ತಂಡ' ಎಂಬ ಹೇಳಿಕೆ, ತನಿಖೆಯ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ಭಾವನೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಇವೆಲ್ಲವೂ ಸಹ ಅನಿವಾರ್ಯವಾಗಿ ಕೆಲವು ಅಂತಿಮ ಅಭಿಪ್ರಾಯಗಳನ್ನು ಹುಟ್ಟುಹಾಕುತ್ತದೆ. ಎಸ್‍ಐಟಿಗೆ ನೀಡಿರುವ ತನಿಖೆಯ ವ್ಯಾಪ್ತಿಯನ್ನು ದುರ್ಬಳಕೆ ಮಾಡಲಾಗಿದೆ. ಈ ತಂಡವು ಅತ್ಯಾಚಾರಿಗಳನ್ನು, ಹಂತಕರನ್ನು ಮತ್ತು ಇವರ ಸಹಾಯಕರನ್ನು ಗುರುತಿಸದೆ, ದೂರುದಾರರನ್ನೇ ಅನುಮಾನಿಸುವ ರೀತಿಯಲ್ಲಿ ಸಾಗಿದ್ದು, ಸತ್ಯವನ್ನು ಹೊರಗೆಳೆಯುವ ನಿಟ್ಟಿನಲ್ಲಿ ವಿಫಲವಾಗಿದೆ. ಇದು ನ್ಯಾಯಕ್ಕೆ ಬಗೆದ ದ್ರೋಹ ಕೂಡ ಹೌದು. ಇದು ಸಾರ್ವಜನಿಕರ ನಂಬಿಕೆಯನ್ನು ಹದಗೆಡಿಸಿದ್ದು ಎಸ್‍ಐಟಿ, ಪ್ರಸ್ತುತ ನಾಯಕತ್ವದ ಅಡಿಯಲ್ಲಿ, ನಿಷ್ಪಕ್ಷಪಾತ ಫಲಿತಾಂಶವನ್ನು ನೀಡುವುದೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.
ಕರ್ನಾಟಕದ ಕಾನೂನು ಮತ್ತು ರಾಜಕೀಯ ವ್ಯವಸ್ಥೆಯನ್ನು ಕಾಡಬೇಕಾಗಿರುವ ಪ್ರಶ್ನೆ ಎಂದರೆ, ಪ್ರಣಬ್ ಮೊಹಂತಿ ನೇತೃತ್ವದ ಎಸ್‍ಐಟಿ ಮುಂದುವರೆಯಬೇಕೇ ಅಥವಾ ಉನ್ನತ ನ್ಯಾಯಲಯವು ಮಧ್ಯಪ್ರವೇಶಿಸಿ ಪಾರದರ್ಶಕವಾದ, ನ್ಯಾಯಾಂಗ ನಿಯಂತ್ರಣದ ತನಿಖೆಯನ್ನು ನಡೆಸಬೇಕೇ ಎಂಬುದು. ಸಂತ್ರಸ್ತರಿಗೆ, ಮಾಹಿತಿದಾರರಿಗೆ, ದೂರುದಾರರಿಗೆ ಹಾಗೂ ಈ ಪ್ರದೇಶದ ಸಾಮಾಜಿಕ ಪ್ರಜ್ಞೆ ಇರುವ ನಾಗರಿಕರಿಗೆ, ನ್ಯಾಯಾಂಗದ ಮೇಲುಸ್ತುವಾರಿಯೊಂದೇ ಇದಕ್ಕೆ ಪರಿಹಾರವಾಗಿ ಕಾಣುತ್ತದೆ. ಆಗ ಈಗಾಗಲೇ ದಿಕ್ಕುತಪ್ಪಿರುವ ತನಿಖೆಯನ್ನು ಸರಿಪಡಿಸಿ, ನ್ಯಾಯ ವ್ಯವಸ್ಥೆಗೆ ಆಗಬಹುದಾದ ಅಪಾಯವನ್ನು ತಪ್ಪಿಸಲು ಸಾಧ್ಯ.
Comments
Post a Comment