ಆಳ್ವಿಕೆಯನ್ನೇ ನಿರ್ವಹಿಸದ ಕಾಂಗ್ರೆಸ್ ಸರ್ಕಾರ, ರಾಜ್ಯವು ರಾಷ್ಟ್ರಪತಿ ಆಳ್ವಿಕೆಯತ್ತ ಸಾಗುತ್ತಿದೆಯೇ?
ಕೇವಿಯಟ್ * ಬಿವಿಸೀ
ಕರ್ನಾಟಕ ಇಂದು ಸಿಲುಕಿರುವ ಬಿಕ್ಕಟ್ಟು ಕೇವಲ ರಾಜಕೀಯವಲ್ಲ, ಹೆಚ್ಚಿನದಾಗಿ ನೈತಿಕವಾಗಿ ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದಾಗ ಜನರಿಗೆ, ಹಿಂದಿನ ಆಳ್ವಿಕೆಯ ಕುಸಿತವೇ ಮುಖ್ಯವಾಗಿ ಪ್ರಶ್ನೆಯಾಗಿತ್ತು. ಆದರೆ ಸರ್ಕಾರವು ಜನರ ಅಮೂಲ್ಯ ಆಯ್ಕೆಯನ್ನು ಊಹಿಸಲಾಗದ ಮಟ್ಟಿಗೆ ವ್ಯರ್ಥಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ನಡುವೆ ಸದ್ದಿಲ್ಲದೆ ಆರಂಭವಾದ ಗೊಣಗಾಟಗಳು ಈಗ ಮುಕ್ತ ಕದನವಾಗಿ ಕಾಣುತ್ತಿದ್ದು, ಇದು ಆಡಳಿತವನ್ನು ಅಸ್ತವ್ಯಸ್ತಗೊಳಿಸಿರುವುದಷ್ಟೇ ಅಲ್ಲದೆ, ಆಳ್ವಿಕೆಯ ಬುನಾದಿಯನ್ನೇ ಅಲುಗಾಡಿಸಿದೆ. ರಾಜ್ಯವನ್ನು ಈಗ ಆಳಲಾಗುತ್ತಿಲ್ಲ, ಕೇವಲ ಪರಸ್ಪರ ಮಾತುಕತೆಗಳ ಮೂಲಕ ಮೌಖಿಕ ಆದೇಶದಲ್ಲಿ ನಡೆಸಲಾಗುತ್ತಿದೆ.
ಸಿದ್ದರಾಮಯ್ಯ ಅವರು ತಾವೇ ಐದು ವರ್ಷಗಳ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಘೋಷಿಸಿರುವುದು ರಾಜ್ಯ ರಾಜಕಾರಣದಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿದೆ. ಹಲವು ತಿಂಗಳ ಕಾಲ ಡಿಕೆಶಿ ಬಣವು 50:50 ಅನುಪಾತದ ಬಗ್ಗೆ ಮುಕ್ತವಾಗಿಯೆ ಮಾತನಾಡುತ್ತಿದ್ದು, ನಾಯಕತ್ವವು ತಮಗೆ ಆಡಳಿತವನ್ನು ವಹಿಸಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಒತ್ಡಡ ಹೇರುತ್ತಲೇ ಬಂದಿದೆ. ಸಿದ್ದರಾಮಯ್ಯ ಅರ್ಧ ಅವಧಿ ಪೂರೈಸಿರುವುದರಿಂದ ಇದಕ್ಕೆ ಪುಷ್ಟಿ ದೊರೆತಿದೆ. ಆದರೆ ಸಿದ್ದರಾಮಯ್ಯ ಬಣವು ಡಿಕೆಶಿ ಅವರ ಹಕ್ಕೊತ್ತಾಯವನ್ನು `ಕಲ್ಪಿತ' ಎಂದು ಅಲ್ಲಗಳೆಯುತ್ತಿದೆ. ಸಾಮಾನ್ಯ ಸನ್ನಿವೇಶಗಳಲ್ಲಿ, ಇಂತಹ ಆಂತರಿಕ ಭಿನ್ನಾಭಿಪ್ರಾಯಗಳನ್ನು ಹೈಕಮಾಂಡ್ ಸಮಾಲೋಚನೆ ಮೂಲಕ ಪರಿಹರಿಸುತ್ತದೆ. ಆದರೂ ಕಾಂಗ್ರೆಸ್ ನಾಯಕತ್ವವು ರಾಷ್ಟ್ರಮಟ್ಟದಲ್ಲೂ ಸಹ ಮೌನ ವಹಿಸಿರುವುದು ಅಚ್ಚರಿದಾಯಕವಾಗಿದೆ. 50:50 ಅನುಪಾತದ ಒಪ್ಪಂದದ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡದಿರುವುದು ಎರಡೂ ಬಣಗಳ ನಡುವೆ ಸಂಘರ್ಷ ಉಲ್ಬಣಿಸಲು ಕಾರಣವಾಗಿದ್ದು, ಸರ್ಕಾರವನ್ನು ದಿಕ್ಕು ದೆಸೆ ಕಾಣದೆ ಕುಸಿಯುವಂತೆ ಮಾಡಿದೆ.
ಏತನ್ಮಧ್ಯೆ, ಶಾಸಕರಿಗೆ ಹಲವು ರೀತಿಗಳ ಆಕರ್ಷಕ ಆಮಿಷಗಳನ್ನು ಒಡ್ಡಲಾಗುತ್ತಿದ್ದು, ಕೋಟ್ಯಂತರ ರೂ.ಗಳು, ಬೆಂಗಳೂರಿನಲ್ಲಿ ಐಷಾರಾಮಿ ಫ್ಲಾಟ್‍ಗಳು, ದುಬಾರಿ ವಾಹನಗಳು ಮುಂತಾದುವನ್ನು ನೀಡುವುದಾಗಿ ಆಮಿಷ ತೋರಿಸಲಾಗುತ್ತಿದೆ ಎನ್ನುವ ವರದಿಗಳೂ ಬರುತ್ತಿವೆ. ಇದು ಜನರಲ್ಲಿ ಒಂದು ರೀತಿಯ ಆತಂಕವನ್ನು ಸೃಷ್ಟಿಸಿದೆ. ಈ ಮಾಹಿತಿಗಳು ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಬಿಕ್ಕಟ್ಟು ನೇರವಾಗಿ ತಲೆಯೆತ್ತಿದೆ. ಜನರು ಭ್ರಷ್ಟಾಚಾರದ ಗಾಳಿ ಸುದ್ದಿಗಳ ಬಗ್ಗೆ ಹೆಚ್ಚು ಆಘಾತಕ್ಕೊಳಗಾಗಿಲ್ಲ, ಆಳ್ವಿಕೆಯು ಹಿಂಬದಿಗೆ ಸರಿದು, ಸರ್ಕಾರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ಜನರನ್ನು ಬಾಧಿಸುತ್ತಿದೆ.
ಇದರ ಪರಿಣಾಮಗಳನ್ನು ಸ್ಪಷ್ಟವಾಗಿ ಕಾಣಬಹುದು. ಕರ್ನಾಟಕದ ಹೈಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ, ಸರ್ಕಾರವು ಶಿಕ್ಷಕರ ವೇತನಗಳನ್ನು 15 ತಿಂಗಳ ಕಾಲ ಬಾಕಿ ಇರಿಸಿರುವುದನ್ನು ತೀವ್ರವಾಗಿ ಖಂಡಿಸಿ, ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇದು ಬೇಜವಾಬ್ದಾರಿತನ ಎಂದು ಹೇಳಿದೆ. ಸರ್ಕಾರಿ ನೌಕರರ ಇಲಾಖೆಗಳಲ್ಲಿ ವೇತನ ಪಾವತಿಯಾಗಿಲ್ಲ, ಮೂಲ ಸೌಕರ್ಯಗಳು ಕುಸಿಯುತ್ತಿವೆ, ಅವಶ್ಯ ಸೇವೆಗಳನ್ನು ಒದಗಿಸಲಾಗುತ್ತಿಲ್ಲ, ಆಸ್ಪತ್ರೆಗಳು, ರಸ್ತೆಗಳು, ಶಾಲೆಗಳು ದುರವಸ್ಥೆಯಲ್ಲಿವೆ. ಇವೆಲ್ಲವನ್ನೂ ನಿರ್ಲಕ್ಷಿಸಲಾಗಿದೆ. ತನ್ನ ಸಿಬ್ಬಂದಿಗೇ ವರ್ಷಮೀರಿ ವೇತನ ಪಾವತಿ ಮಾಡಲಾಗದ ಸರ್ಕಾರವೊಂದು, ಮೂಲ ಸಾರ್ವಜನಿಕ ವ್ಯವಸ್ಥೆಯನ್ನು ಕಾಪಾಡಲು ವಿಫಲವಾದ ಆಳ್ವಿಕೆಯೊಂದು ತನ್ನ ಆಳುವ ನ್ಯಾಯೋಚಿತ ಹಕ್ಕನ್ನು ಕಳೆದುಕೊಳ್ಳುತ್ತದೆ. ಬಹುಮತ ಕಳೆದುಕೊಳ್ಳುವುದು ಆಮೇಲಿನ ಮಾತು. ರಾಜ್ಯದ ಹಣಕಾಸು ಪರಿಸ್ಥಿತಿ ಅಸ್ತವ್ಯಸ್ತವಾಗಿದ್ದು, ಆದ್ಯತೆಗಳೂ ಸಹ ದಿಕ್ಕು ತಪ್ಪಿದಂತಾಗಿವೆ.
ಸಾಮಾನ್ಯ ಜನತೆ ಈ ಸರ್ಕಾರದ ಮೇಲೆ ವಿಶ್ವಾಸವಿಟ್ಟು, ಹಿಂದಿನ ಸರ್ಕಾರದ ಅದಕ್ಷತೆಗೆ ಪರ್ಯಾಯ ಎಂದೇ ಭಾವಿಸಿದ್ದರು. ಆದರೆ ಈಗ ಅವರಿಗೆ ದ್ರೋಹ ಬಗೆಯಲಾಗಿದೆ. ಆಂತರಿಕ ಕಲಹಗಳ ಮೂಲಕ ಪರಸ್ಪರ ಮೇಲುಗೈ ಸಾಧಿಸುವ ಮೂಲಕ ಆಡಳಿತ ಯಂತ್ರವು ರಾಜ್ಯದ ಪರಿಸ್ಥಿತಿಯನ್ನು ಗಮನಿಸುತ್ತಲೇ ಇಲ್ಲ. ಹಲವಾರು ನಾಗರಿಕರು ಈಗ ಕೇಳುತ್ತಿರುವ ಪ್ರಶ್ನೆ, ಈ ಸರ್ಕಾರ ಕೆಳಗಿಳಿಯಬೇಕೆ, ತಾತ್ಕಾಲಿಕವಾಗಿಯಾದರೂ ರಾಷ್ಟ್ರಪತಿ ಆಳ್ವಿಕೆಗೆ ಒಳಪಡಬೇಕೇ, ತನ್ಮೂಲಕ ಆಡಳಿತವನ್ನು ತಹಬಂದಿಗೆ ತರಬೇಕೇ ಎಂದು. ಈ ಆಗ್ರಹವು ಜನರ ಹತಾಶೆಯನ್ನು ತೋರಿಸುತ್ತಿದೆ. ರಾಷ್ಟ್ರಪತಿ ಆಳ್ವಿಕೆಯನ್ನು ಆಳ್ವಿಕೆಯ ಕುಸಿತ ಆದಾಗ ಮಾತ್ರ ಪ್ರಯೋಗಿಸಲಾಗುತ್ತದೆ. ಕರ್ನಾಟಕ ಈ ಹಂತವನ್ನು ಇನ್ನೂ ತಲುಪಿಲ್ಲ ಎಂದುಕೊಳ್ಳೋಣ. ಆದರೆ ನಿಸ್ಸಂದೇಹವಾಗಿ ಆ ದಿಕ್ಕಿನಲ್ಲಿ ಸಾಗುತ್ತಿದೆ. ತನ್ನೊಂದಿಗೇ ಕದನದಲ್ಲಿರುವ ಸರ್ಕಾರವೊಂದು, ಜನರನ್ನು ಆಳುವ ಹಕ್ಕು ಕಳೆದುಕೊಳ್ಳುತ್ತದೆ. ಕಾಂಗ್ರೆಸ್ ಹೈಕಮಾಂಡ್ ನಿರ್ಣಾಯಕವಾಗಿ ಮಧ್ಯಪ್ರವೇಶ ಮಾಡದೆ ಇದ್ದರೆ, ಪಕ್ಷದಲ್ಲಿ ಶಿಸ್ತು ವಿಧಿಸಿ, ನಾಯಕತ್ವವನ್ನು ಪುನಾರಚನೆ ಮಾಡದೆ ಹೋದರೆ, ರಾಜ್ಯವು ಕುಸಿತದ ಕಡೆ ಸಾಗುವುದು ನಿಶ್ಚಿತವಾಗಿದ್ದು, ಅಧಿಕಾರ ಕೇವಲ ಹಾಳೆಗಳ ಮೇಲೆ ಉಳಿಯುತ್ತದೆ.
ರಾಜ್ಯದ ಜನತೆ ಜವಾಬ್ದಾರಿಯುತ ನಾಯಕತ್ವ, ಸಂಯೋಜಿತ ಆಡಳಿತ ಮತ್ತು ಸ್ಥಿರತೆಯನ್ನು ಬಯಸುತ್ತಾರೆ. ಆದರೆ ಅವರು ಪಡೆದಿರುವುದು ಅಧಿಕಾರದ ಸಂಘರ್ಷ, ಹಣಕಾಸು ಅಶಿಸ್ತು, ಭಗ್ನ ಆಶ್ವಾಸನೆಗಳು. ಆಡಳಿತಾರೂಢ ಪಕ್ಷವು ಈಗ ಎಚ್ಚೆತ್ತುಕೊಳ್ಳದೆ ಹೋದರೆ, ಬಹುಶಃ ಮತದಾರರು ತಮ್ಮದೇ ಆದ ತೀರ್ಪು ಕೊಡುತ್ತಾರೆ, ಅದು ಭಿನ್ನವಾಗಿಯೇ ಇರುತ್ತದೆ.
Comments
Post a Comment