ರಾಷ್ಟ್ರಪತಿ, ರಾಜ್ಯಪಾಲರು ಮಸೂದೆಗಳಿಗೆ ಸಹಿ ಹಾಕುವ ಸಮಯಮಿತಿಗಳ ವಿವಾದ
ಮೂಲ ತತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ
ಇನ್
ತಪ್ಪಾಗಿ ಅರ್ಥೈಸಿದ ಮಾಧ್ಯಮಗಳು, ಗೊಂದಲಕ್ಕೆ ಒಳಗಾದದ್ದು ಸಾರ್ವಜನಿಕ ಚರ್ಚೆ
ವಿಶ್ಲೇಷಣೆ * ಬಿವಿಸೀ
ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಪತಿಯವರಿಂದ ಬಂದ ಆರ್ಟಿಕಲ್ 143ರ ಸಲಹಾತ್ಮಕ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಹೊಸ ತೀರ್ಮಾನ ನೀಡಿದ ಕ್ಷಣದಿಂದಲೇ, ರಾಷ್ಟ್ರದ ರಾಜಕೀಯ ಮತ್ತು ಮಾಧ್ಯಮ ವಲಯಗಳಲ್ಲಿ ಒಂದು ಗದ್ದಲ ಎದ್ದಿತು. ಬಹುತೇಕ ದೊಡ್ಡ ಮಾಧ್ಯಮ ಸಂಸ್ಥೆಗಳ ವಿಶ್ಲೇಷಣೆ ಒಂದೇ ದಿಕ್ಕಿನತ್ತ ಓಡಿತು - “ನ್ಯಾಯಾಲಯ ತನ್ನ ಹಿಂದಿನ ತೀರ್ಪನ್ನು ತಿರಸ್ಕರಿಸಿದೆ; ಸಮಯ ನಿಗದಿಪಡಿಸಿದ ಹಿಂದಿನ ನಿಲುವು ಕುಸಿದಿದೆ”.
ಇದು ಸರಿಯಲ್ಲ. ವಾಸ್ತವದಲ್ಲಿ, ಸರ್ವೋಚ್ಚ ನ್ಯಾಯಾಲಯವು ತನ್ನ ಹಿಂದೆ ನೀಡಿದ್ದ ಯಾವುದೇ ತೀರ್ಪನ್ನು ರದ್ದುಪಡಿಸಿಲ್ಲ, ಹಾಗೆ ಮಾಡಲು ಈ ವೇದಿಕೆ ಸಲಹಾತ್ಮಕ ಅಭಿಪ್ರಾಯ ವೇದಿಕೆ ಮಾತ್ರ. ಆದರೂ ಈ ತಪ್ಪಾದ ಅರ್ಥವಿವರಣೆ ದೇಶದಾದ್ಯಂತ ಹರಡಿದ್ದು, ಸಂವಿಧಾನದ ಗಂಭೀರತೆಯ ಪ್ರಶ್ನೆಯನ್ನು ಸರಳ ಸುದ್ದಿಶೈಲಿಯಲ್ಲಿ ತಿರುಗಿಸಿ ಹಾಕಿದಂತಾಗಿದೆ.
ಮೊದಲು ಸ್ಪಷ್ಟಪಡಿಸಬೇಕಾದದ್ದು ಆರ್ಟಿಕಲ್ 143 ಅಡಿಯಲ್ಲಿ ಬಂದಿರುವ ಪ್ರಶ್ನೆಗೆ ನ್ಯಾಯಾಲಯ ನೀಡುವುದು ‘ತೀರ್ಪು’ ಅಲ್ಲ, ಸಲಹಾತ್ಮಕ ಅಭಿಪ್ರಾಯ. ಇದು ನ್ಯಾಯಾಲಯದ ವಿಧಿವಿಧಾನಾತ್ಮಕ ಅಧಿಕಾರಕ್ಷೇತ್ರಕ್ಕಿಂತ ಬೇರೆ. ಹಳೆಯ ತೀರ್ಪನ್ನು ಬದಲಿಸುವ ಸಾಮಥ್ರ್ಯ ಹೊಂದಿರುವುದು ಆರ್ಟಿಕಲ್ 32 ಅಥವಾ ಆರ್ಟಿಕಲ್ 136 ಅಡಿಯಲ್ಲಿ ಬಂದಿರುವ ‘ವೈರುಧ್ಯ ವಿಚಾರಣೆ’ ಪ್ರಕರಣಗಳಲ್ಲಿ ಮಾತ್ರ. ಹಾಗಾಗಿ, ನ್ಯಾಯಾಲಯ ಈಗ ಏನನ್ನೂ ಹಿಂತೆಗೆದುಕೊಂಡಿಲ್ಲ; ಬದಲಿಗೆ ಸಂವಿಧಾನದಲ್ಲಿ ಮೊದಲೇ ಇದ್ದ ಮಿತಿಯನ್ನೇ ಮತ್ತೊಮ್ಮೆ ಭಿನ್ನವಾಗಿ ಮೃದುಸ್ವರದಲ್ಲಿ ನೆನಪಿಸಿದೆ.
ರಾಷ್ಟ್ರಪತಿ ಅಥವಾ ರಾಜ್ಯಪಾಲರು ಎದುರಿಗೆ ಬರುವ ವಿಧೇಯಕಗಳ ಮೇಲೆ ಕಾರ್ಯಾಚರಣೆ ಮಾಡಲು ಸಮಯಮಿತಿ ಇಲ್ಲ. ಇದನ್ನು ಕೆಲವರು “ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮುಕ್ತ ಪರವಾನಗಿ” ಎಂದು ತಪ್ಪಾಗಿ ಕರೆದುಬಿಟ್ಟರು. ಆದರೆ ನ್ಯಾಯಾಲಯದ ವಾದವು ಸರಳ ಮತ್ತು ಸಂವಿಧಾನಬದ್ಧ - ಸಂವಿಧಾನದಲ್ಲಿ ಸಮಯಮಿತಿ ಇಲ್ಲದ ಜಾಗಕ್ಕೆ, ನ್ಯಾಯಾಂಗವು ತನ್ನದೇ ಆದ ವಿಧಿಯನ್ನು ಸೇರಿಸಲು ಸಾಧ್ಯವಿಲ್ಲ. “ಸಂವಿಧಾನಪೂರ್ವಕ ಮಿತಿಗಳನ್ನು, ನ್ಯಾಯಾಂಗದ ನಿದೆರ್Éೀಶನಗಳ ಮೂಲಕ ವಿಸ್ತರಿಸುವುದು ಸೂಕ್ತವಲ್ಲ” ಎಂಬುದು ಸಂದೇಶ.
ಆದರೆ ಇದರೊಂದಿಗೆ ಮತ್ತೊಂದು ಸಮಾನಗಂಭೀರ ವಾಕ್ಯವೂ ಇತ್ತು, ಇದು ಮಾಧ್ಯಮಗಳಿಂದ ಬಹುತೇಕ ಕಡೆಗಣಿಸಲ್ಪಟ್ಟಿತು. ನ್ಯಾಯಾಲಯ ಹೇಳಿದ್ದು, “ಸಂವಿಧಾನಾತ್ಮಕ ಅಧಿಕಾರವಿರುವ ಹುದ್ದೆಗಳಲ್ಲಿ ಕುಳಿತುಕೊಳ್ಳುವವರು ಯುಕ್ತವಾದ ಅವಧಿಯೊಳಗೆ ನಿರ್ಣಯ ತೆಗೆದುಕೊಳ್ಳಬೇಕೆಂಬ ಅನಿವಾರ್ಯ ಹೊಣೆಗಾರಿಕೆ ಅವರ ಮೇಲಿರುತ್ತದೆ.” ಇದು ಸಮಯಸಂಖ್ಯೆ ಅಲ್ಲ; ಆದರೆ ಇದು ಸಂವಿಧಾನದ ನೈತಿಕ ಮೌಲ್ಯ. ಅಧಿಕಾರಿಗಳ ಮೌನವು ಅನಿರ್ದಿಷ್ಟವಾಗಿ ಮುಂದುವರಿಯುವುದನ್ನು ನ್ಯಾಯಾಲಯ ಮೆಚ್ಚಿಲ್ಲ. ಆದರೆ, ಮಾಧ್ಯಮಗಳು ಕೇಳದಿರುವ ಪ್ರಶ್ನೆ - ಈ ನೈತಿಕ ಕರೆಯೇ ನ್ಯಾಯಾಲಯದ ನಿಜವಾದ ಸಂದೇಶ.
ಇದೇ ರೀತಿ ‘ಸ್ವಯಂ ಅಂಗೀಕಾರ’ (ಡೀಮ್ಡ್ ಅಸೆಂಟ್) ಎಂಬ ಕಲ್ಪನೆಯನ್ನೂ ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿದೆ. ಸರ್ವೋಚ್ಚ ನ್ಯಾಯಾಲಯದ ದೃಷ್ಟಿಯಲ್ಲಿ ಇದು ಸಂವಿಧಾನದಲ್ಲಿ ಯಾವುದೇ ಅಸ್ತಿತ್ವವಿಲ್ಲದ ಕಲ್ಪನೆ. ರಾಷ್ಟ್ರಪತಿ ಅಥವಾ ರಾಜ್ಯಪಾಲರ ಅಂಗೀಕಾರ ಎನ್ನುವುದು ಕೇವಲ ಕಾರ್ಯನಿರ್ವಹಣೆಯಲ್ಲ - ಅದು ಒಂದು ಸಂವಿಧಾನಾತ್ಮಕ ಪ್ರಕ್ರಿಯೆ. ಅದನ್ನು ಸಮಯದ ಹಿಂದಿರಿಸುವ ಯಂತ್ರದಂತೆ ಪರಿಗಣಿಸಲು ಸಾಧ್ಯವಿಲ್ಲ. ಈ ನಿಲುವು ಹೊಸದೇನಲ್ಲ; ಮೊದಲಿನ ತೀರ್ಪುಗಳಲ್ಲಿಯೇ ಇದರ ತೂಕ ಇತ್ತು.
ಇನ್ನೊಂದು ತಪ್ಪಾಗಿ ವರದಿಯಾದ ಅಂಶವೆಂದರೆ - ನ್ಯಾಯಾಲಯ ಈಗ ತನಿಖಾತ್ಮಕ ನ್ಯಾಯಪರಿಶೀಲನೆಯನ್ನು ಕೈಬಿಟ್ಟಿದೆ ಎಂಬ ಭ್ರಮೆ. ವಾಸ್ತವದಲ್ಲಿ ನ್ಯಾಯಾಲಯ ಹೇಳಿದ್ದು ಏನೆಂದರೆ: ಅಂಗೀಕಾರ ನೀಡುವ ಪ್ರಕ್ರಿಯೆಯ ಹಂತದಲ್ಲಿ ನ್ಯಾಯಾಲಯಕ್ಕೆ ಹಸ್ತಕ್ಷೇಪ ಮಾಡಲು ಅವಕಾಶ ಕಡಿಮೆ; ಆದರೆ ಕಾನೂನು ಜಾರಿಗೆ ಬಂದುಬಿಟ್ಟ ನಂತರ, ಅದರ ಮಾನ್ಯತೆಯನ್ನು ಪರಿಶೀಲಿಸುವ ನ್ಯಾಯಾಂಗದ ಅಧಿಕಾರ ಶಾಶ್ವತ. ಇದು ಕೇಂದ್ರ-ರಾಜ್ಯಗಳ ಸಂಬಂಧದ ಸೂಕ್ಷ್ಮ ಸಮತೋಲನವನ್ನು ಕಾಪಾಡಲು ಬೇಕಾದ ಜಾಣ್ಮೆಯ ನಿಲುವು.
ಇದರಿಂದ ಒಟ್ಟಿನಲ್ಲಿ ಏನು ಸ್ಪಷ್ಟವಾಗುತ್ತದೆ? ಸರ್ವೋಚ್ಚ ನ್ಯಾಯಾಲಯವು ತನ್ನ ಹಿಂದಿನ ತತ್ವಗಳನ್ನು ಬದಲಾಯಿಸಿಲ್ಲ. ಬದಲಾಯಿಸಿದ್ದು ಮಾಧ್ಯಮಗಳ ಓದಿನ ವಿಧಾನ. ಸಂವಿಧಾನ ಬರೆದಿರುವ ಮಿತಿಯನ್ನು ಪ್ರಶ್ನೆ ಮಾಡುವ ರಾಜಕೀಯ ಆತುರಕ್ಕೆ ನ್ಯಾಯಾಲಯ ಉತ್ತರಿಸಿದೆ. ಇದು ಯಾವುದೇ ತೀರ್ಪನ್ನು ರದ್ದುಪಡಿಸುವ ಸಲಹಾತ್ಮಕ ವೇದಿಕೆ ಅಲ್ಲ - ಇದು ಕೇವಲ ಸಂವಿಧಾನಪರ ಮರುಉಚ್ಚಾರಣೆ.
ಅಂತಿಮವಾಗಿ, ಈ ಅಭಿಪ್ರಾಯದ ನಿಜಸ್ವರೂಪ: ನ್ಯಾಯಾಲಯವು ತನ್ನ ಹಿಂದಿನ ತೀರ್ಪನ್ನು ಹಿಂತೆಗೆದುಕೊಳ್ಳಲಿಲ್ಲ; ರಾಜಕೀಯ ಗೊಂದಲಕ್ಕೆ ಸಂವಿಧಾನಬದ್ಧ ಗಾಜಿನ ಕನ್ನಡಕವನ್ನೇ ಮತ್ತೊಮ್ಮೆ ಹಿಡಿದಿದೆ.
Comments
Post a Comment