ಸುಗುಣೇಂದ್ರರನ್ನು ಮಧ್ವಾಚಾರ್ಯರಿಗೆ ಸಮ ಎನ್ನುವುದು ಇಬ್ಬರಿಗೂ ನ್ಯಾಯವಲ್ಲ
ವಿವಾದಾಸ್ಪದ ವ್ಯಕ್ತಿಗಳನ್ನು ಅನಗತ್ಯವಾಗಿ ವೈಭವೀಕರಿಸುವುದು ಅಷ್ಟ ಮಠಗಳು ಒಂದು ಕಾಲದಲ್ಲಿ ಹೊಂದಿದ್ದ ಆಧ್ಯಾತ್ಮಿಕ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತಿದೆಯೇ ಎಂದು ಚರ್ಚಿಸಬೇಕಿದೆ.
.............
ಅಲವಾದರಲವೆನ್ನಿ * ಬಿವಿಸೀ
ಪುತ್ತಿಗೆ ಸುಗುಣೇಂದ್ರ ಸ್ವಾಮಿಯ ಸುತ್ತ ಹರಡಿಕೊಂಡಿರುವ ಗೊಂದಲಗಳು ಬಗೆಹರಿಯುವಂತೆ ತೋರುತ್ತಿಲ್ಲ. ಹಲವು ವರ್ಷಗಳ ಕಾಲ ಇವರು ವಾದ ವಿವಾದಗಳ ನಡುವೆ ಸಿಲುಕಿದ್ದು ಇದು ಮಧ್ವ ಸಂಪ್ರದಾಯದ ಮೂಲವನ್ನೇ ಅಲುಗಾಡಿಸುತ್ತಿರುವಂತಿದೆ. ಕೆಲವು ವಿವಾದಗಳು ಸ್ವಯಂಕೃತವಾಗಿದ್ದರೆ, ಇನ್ನು ಕೆಲವು ಬೆಂಬಲಿಗರು ಮತ್ತು ವಿರೋಧಿಗಳು ಹೆಣೆದಿರುವ ನಿರೂಪಣೆಗಳು.
ಆದರೆ ಇತ್ತೀಚಿನ ಬೆಳವಣಿಗೆಗಳು ಇನ್ನೂ ವಿವಾದಾಸ್ಪದವಾಗಿದೆ. ಅರಕಲಗೂಡು ಅರೆಮಂದನಹಳ್ಳಿ ವಿಶ್ವ ಬ್ರಾಹ್ಮಣ ಸಂಸ್ಥಾನದ ಸ್ವಾಮಿಯು ಸುಗುಣೇಂದ್ರ ಸ್ವಾಮಿಯನ್ನು ಮಧ್ವಾಚಾರ್ಯರಿಗೆ ಸಮ ಎಂದು ಹೇಳಿರುವುದು ಈ ವಿವಾದವನ್ನು ಧಾರ್ಮಿಕ ವಾದ ವಿವಾದಗಳನ್ನೂ ಮೀರಿ ಗೊಂದಲ ಸೃಷ್ಟಿಸಿದೆ. ಇದು 800 ವರ್ಷಗಳ ಪರಂಪರೆಯ ತಾತ್ವಿಕ ಮೂಲಕ್ಕೇ ಧಕ್ಕೆ ಉಂಟುಮಾಡಿದೆ.
ನಿಯಮದ ಉಲ್ಲಂಘನೆ: ಮ್ಲೇಚ್ಛರ ನಾಡಿನಲ್ಲಿ
ಸುಗುಣೇಂದ್ರ ಅವರ ಕತೆ ಆರಂಭವಾಗಿದ್ದು, ಅವರು ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಪ್ರವಾಸ ಹೋಗಿದ್ದಾಗ. ಮಧ್ವಾಚಾರ್ಯರು ವಿದೇಶ ಪ್ರವಾಸ ಅಥವಾ ಸಾಗರೋಲ್ಲಂಘನವನ್ನು ನಿಷೇಧಿಸಿದ್ದರು, ಅಷ್ಟ ಮಠಗಳ ಯಾವುದೇ ಸ್ವಾಮಿಗಳೂ ಸಮುದ್ರಯಾನ ಮಾಡದಂತೆ ಕಟ್ಟಳೆ ವಿಧಿಸಿದ್ದರು. ಸುಗುಣೇಂದ್ರ ಸ್ವಾಮಿ ಈ ಮೂಲಭೂತ ನಿಬರ್ಂಧವನ್ನು ಉಲ್ಲಂಘಿಸಿ ಪ್ರಯಾಣ ಮಾಡಿದಾಗ, ಪೇಜಾವರ ಸ್ವಾಮಿಗಳು ಬಲವಾದ ವಿರೋಧ ವ್ಯಕ್ತಪಡಿಸಿ, ಸಾರ್ವಜನಿಕವಾಗಿ ಆಕ್ಷೇಪಿಸಿದ್ದರು. ಆದರೂ ಪುತ್ತಿಗೆ ಮುಂದುವರೆದಿದ್ದರು. ತನ್ಮೂಲಕ ಸಂಸ್ಥೆಯ ನಿಷ್ಠೆ ಮತ್ತು ಶಿಸ್ತು ಉಲ್ಲಂಘಿಸುವುದಕ್ಕೆ ಒಂದು ಪೂರ್ವ ನಿದರ್ಶನವನ್ನು ಉಂಟುಮಾಡಿದ್ದರು.
ಪ್ರಚೋದನೆಯ ಒಂದು ಮಾದರಿ
ಇಷ್ಟೇ ಅಪಾಯಕಾರಿಯಾಗಿರುವುದು ಸುಗುಣೇಂದ್ರ ಅವರ ಅನಗತ್ಯ ಹೇಳಿಕೆಗಳನ್ನು ನೀಡುವ ಚಾಳಿ. ಇತ್ತೀಚೆಗೆ ಸಂಸ್ಕøತ ಜ್ಞಾನ ಇಲ್ಲದವರು ಸ್ವರ್ಗದ ದ್ವಾರವನ್ನು ಪ್ರವೇಶಿಸಲು ಅವಕಾಶ ಇಲ್ಲ ಎಂಬ ಹೇಳಿಕೆ ನೀಡಿದ್ದು, ಸಾವಿರಾರು ಸಾಧಾರಣ ಭಕ್ತರಿಗೆ ಆಕ್ರೋಶ ಉಂಟುಮಾಡಿತ್ತು. ಉಡುಪಿ ಕೃಷ್ಣ ಮಠದ ಭಕ್ತಾದಿಗಳು ಇದು ಭಕ್ತಿ ಪರಂಪರೆಗೆ ತದ್ವಿರುದ್ಧವಾದ, ವಿಭಜನಾವಾದಿ ಅಭಿಪ್ರಾಯ ಎಂದು ಅಭಿಪ್ರಾಯಪಟ್ಟಿದ್ದರು.
ಧರ್ಮಸ್ಥಳದ ಪಟ್ಟಭದ್ರರನ್ನು ಟೀಕಿಸಿದವರ ಮೇಲೆ ವಾಗ್ದಾಳಿ ನಡೆಸಿ, ಅಂಥವರನ್ನ ಕಮ್ಯುನಿಸ್ಟರು ಎಂದು ಮೂದಲಿಸಿದ್ದು, ಈ ಸ್ವಾಮಿಯು ಧಾರ್ಮಿಕ ಅಧಿಕಾರವನ್ನು ತಮ್ಮ ರಾಜಕೀಯ ಸೂಚಕಗಳಾಗಿ ಬಳಸುತ್ತಿದ್ದಾರೆ ಎಂಬ ಅಭಿಪ್ರಾಯ ಮೂಡಿಸಿತ್ತು.
ಅಪಾಯಕಾರಿ ವೈಭವೀಕರಣ
ಅತಿ ಹೆಚ್ಚಿನ ತೊಂದರೆಗೀಡಾಗುವ ಬೆಳವಣಿಗೆ ಎಂದರೆ, ಸುಗುಣೇಂದ್ರ ಸ್ವಾಮಿಯನ್ನು ಮಧ್ವಾಚಾರ್ಯರಿಗೆ ಸಮ ಎಂದು ಹೋಲಿಸಿರುವುದು. ಅರಕಲಗೂಡು ಮಠದ ಮತ್ತೊಬ್ಬ ಸ್ವಾಮಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇದು ತಪ್ಪಾದ ಅಭಿಪ್ರಾಯವಷ್ಟೇ ಅಲ್ಲದೆ, ಧಾರ್ಮಿಕವಾಗಿ ಅಪ್ರಬುದ್ದವಾದ ಹೇಳಿಕೆಯಾಗಿದೆ. ಉಡುಪಿ ಮಠದಲ್ಲಿ ಸುಗುಣೇಂದ್ರರ ಪ್ರಸ್ತುತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹೋಲಿಕೆ ಮಾಡಿದ್ದರು.
ಮಧ್ವಾಚಾರ್ಯರು ಮೂಲಭೂತ ತತ್ವಶಾಸ್ತ್ರಜ್ಞರಾಗಿದ್ದು, ವಿದ್ವಾಂಸರೂ, ಸಂತರೂ, ತತ್ವಜ್ಞಾನಿಯೂ ಆಗಿದ್ದರು. ಹಾಗೆಯೇ ಸಂಸ್ಥೆಯ ನಿರ್ಮಾತೃಗಳೂ ಆಗಿದ್ದರು. ಅವರ ಗ್ರಂಥಗಳು, ಪ್ರವಾಸ ಮತ್ತು ವಾದಗಳು ದ್ವೈತ ಸಂಪ್ರದಾಯವನ್ನು ಹುಟ್ಟುಹಾಕಿತ್ತು. ಅವರನ್ನು ಅದೂ ಸದಾ ವಿವಾದಗಳ ಸುಳಿಯಲ್ಲಿ ಸಿಲುಕುವ ಸಮಕಾಲೀನ ಸ್ವಾಮಿಗೆ ಹೋಲಿಸುವುದು ಮತ್ತು ಮಧ್ವಾಚಾರ್ಯರೊಡನೆ ಹೋಲಿಸುವುದು, ಶತಮಾನಗಳ ವಿದ್ವತ್ತು ಮತ್ತು ಭಕ್ತಿಯನ್ನು ಅವಮಾನಿಸಿದಂತಾಗುತ್ತದೆ.
ಮಧ್ವಾಚಾರ್ಯರ ಅನೇಕ ಭಕ್ತರು ಈ ಹೋಲಿಕೆಯನ್ನು ಖಂಡಿಸಿರುವುದು ಅಚ್ಚರಿಯೇನಲ್ಲ. ಇದು ಆಚಾರ್ಯರ ಸ್ಮøತಿಗೆ ಅವಮಾನ ಎಂದು ಖಂಡಿಸಲಾಗುತ್ತಿದೆ. ಕೆಲವರು ಅರಕಲಗೂಡು ಸ್ವಾಮಿ ತಮ್ಮ ಧಾರ್ಮಿಕ ಕಟ್ಟಳೆಗಳನ್ನು ಮೀರಿದ್ದಾರೆ ಎಂದು ಹೇಳಿದ್ದರೆ ಇನ್ನು ಕೆಲವರು ಇದನ್ನು ಸ್ವಾಮೀಜಿಗಳ ಸುತ್ತ ಹರಡುತ್ತಿರುವ ವ್ಯಕ್ತಿತ್ವ ಪಂಥೀಯ ಭಾವನೆ ಎಂದು ನಿಂದಿಸಿದ್ದಾರೆ. ಇದು ಸಾಂಪ್ರದಾಯಿಕ ಮಠ ವ್ಯವಸ್ಥೆಗೆ ತದ್ವಿರುದ್ಧವಾದ ನಡೆಯಾಗಿರುತ್ತದೆ.
ಸಾರ್ವಜನಿಕ ಚರ್ಚೆಯು, ಉಡುಪಿ ಕ್ಷೇತ್ರದ ಸಾಂಸ್ಥಿಕ ಧಾರ್ಮಿಕ ನಾಯಕತ್ವವು ತತ್ವಶಾಸ್ತ್ರದ ಮೂಲ ಬೇರುಗಳಿಂದ ದೂರ ಸರಿಯುತ್ತಿದೆಯೇ ಎಂಬ ವಿಷಯವನ್ನು ಕೇಂದ್ರೀಕರಿಸಬೇಕಿದೆ. ವಿವಾದಾಸ್ಪದ ವ್ಯಕ್ತಿಗಳನ್ನು ಅನಗತ್ಯವಾಗಿ ವೈಭವೀಕರಿಸುವುದು ಅಷ್ಟ ಮಠಗಳು ಒಂದು ಕಾಲದಲ್ಲಿ ಹೊಂದಿದ್ದ ಆಧ್ಯಾತ್ಮಿಕ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತಿದೆಯೇ ಎಂದು ಚರ್ಚಿಸಬೇಕಿದೆ.
ಇದು ಸ್ಥಳೀಯ ಸಾಮಾನ್ಯ ವಿಷಯವಾಗಿ ಉಳಿದಿಲ್ಲ. ಸಮಕಾಲೀನ ಧಾರ್ಮಿಕ ಅಧಿಕಾರಗಳಲ್ಲಿ ಉಂಟಾಗಿರುವ ಆಳವಾದ ಬಿಕ್ಕಟ್ಟಿನ ಸಂಕೇತವಾಗಿದೆ. ಇದನ್ನು ಕರ್ನಾಟಕದ ಭಕ್ತಾದಿಗಳು, ವಿದ್ವಾಂಸರು, ಸಾಂಸ್ಕøತಿಕ ನಾಯಕರು ಇನ್ನು ಸಹಿಸಿಕೊಂಡಿರಲಾಗುವುದಿಲ್ಲ.
Comments
Post a Comment