ಆರ್ ವಿ ದೇಶಪಾಂಡೆ ಅವರೇ, ಉತ್ತರ ಕನ್ನಡದ ಉದ್ಯೋಗ ಹಾಗೂ ಆರೋಗ್ಯ ವಲಯಕ್ಕೆ ನಿಮ್ಮ ಬಂಡವಾಳ ತುರ್ತಾಗಿ ಹರಿದು ಬರಲಿ

 ಹೇಳಲೇಬೇಕಾದ್ದು * ಬಿವಿಸೀ

ದಟ್ಟ ಅರಣ್ಯ, ಪ್ರಶಾಂತ ಕರಾವಳಿ ಹಾಗೂ ನದಿಗಳಿಂದ ಆವೃತವಾದ ಉತ್ತರ ಕನ್ನಡ ಜಿಲ್ಲೆಗೆ ದೀರ್ಘಕಾಲದ ರಾಜಕೀಯ ಪ್ರಾತಿನಿಧ್ಯದ ಕೊರತೆಯೇನೂ ಇರಲಿಲ್ಲ. 16 ಮಾರ್ಚ್ 2027ಕ್ಕೆ 80ನೇ ವಯಸ್ಸಿಗೆ ಕಾಲಿಡುತ್ತಿರುವ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಅವರು ದೀರ್ಘಕಾಲ ಶಾಸಕರಾಗಿ, ರಾಜ್ಯ ಸರ್ಕಾರದ ಪ್ರಭಾವಿ ಸಚಿವರಾಗಿ ಆಡಳಿತ ನಡೆಸಿದವರು. ಆದರೆ ದೇಶಪಾಂಡೆಯವರ ರಾಜಕೀಯ ಯಾನದ ಎತ್ತರ ಮತ್ತು ಅವರ ಸ್ವಂತ ಜಿಲ್ಲೆಯ ಇಂದಿನ ಅಭಿವೃದ್ಧಿಯ ಸ್ಥಿತಿಗತಿಯನ್ನು ಮುಖಾಮುಖಿಗೊಳಿಸಿದಾಗ, ಪ್ರಾದೇಶಿಕ ಹಿನ್ನಡೆಯ ಹಲವು ಕಟು ಸತ್ಯಗಳು ಹೊರಬರುತ್ತವೆ.

ದಕ್ಷಿಣ ಕನ್ನಡದ ಡಾ ಎಂ ಮೋಹನ್ ಆಳ್ವ, ದಾವಣಗೆರೆಯ ಶಾಮನೂರು ಶಿವಶಂಕರಪ್ಪ, ಬೆಳಗಾವಿಯ ಪ್ರಭಾಕರ್ ಕೋರೆ ಹಾಗೂ ಕೋಲಾರ ಭಾಗದ ಆರ್ ಎಲ್ ಜಾಲಪ್ಪ ಅವರಂತಹ ನಾಯಕರು ತಮ್ಮ ಪ್ರಭಾವದೊಂದಿಗೆ ಬೃಹತ್ ಶಿಕ್ಷಣ ಸಂಸ್ಥೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ-ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿ ಸಾರ್ವಜನಿಕ ಕೊಡುಗೆ ನೀಡಿದರು. ಈ ಸಂಸ್ಥೆಗಳು ಆ ಭಾಗದ ಯುವಕರಿಗೆ ಉದ್ಯೋಗ ನೀಡಿ, ಮೂಲಸೌಕರ್ಯ ಹಾಗೂ ಸ್ಥಳೀಯ ಆರ್ಥಿಕತೆಯ ಚಿತ್ರಣವನ್ನೇ ಬದಲಾಯಿಸಿದವು. ಈ ಮಾದರಿಗೆ ಎದುರಾಗಿ ದೇಶಪಾಂಡೆ ಅವರ ಶೈಲಿಯನ್ನು ಪರಿಶೀಲಿಸಿದರೆ, ಅವರು ಸರಣಿ ಖಾಸಗಿ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಸಂಸ್ಥೆಗಳನ್ನು ಹುಟ್ಟುಹಾಕುವ ಬದಲು ತಮ್ಮ ಖಾಸಗಿ ಸಾವಿರಾರು ಕೋಟಿಗಟ್ಟಲೆ ರೂ ಸಂಪನ್ಮೂಲ ಕ್ರೋಢೀಕರಣ ಮಾಡುತ್ತ ಆಡ್ಯನೆನೆಸಿಕೊಳ್ಳಲು ಯತ್ನಿಸುತ್ತಾ ಬಂದಿರುವುದು ಇತಿಹಾಸ.

ಹಳಿಯಾಳದಲ್ಲಿ ಅವರ ಕುಟುಂಬದ ವಿ ಆರ್ ದೇಶಪಾಂಡೆ ಸ್ಮಾರಕ ಟ್ರಸ್ಟ್ ಮೂಲಕ ವಿಡಿಐಟಿ ಕಾಲೇಜು ಹಾಗೂ ದೇಶಪಾಂಡೆ ರುಡ್‍ಸೆಟ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ, ಇವು ನೆರೆ ಜಿಲ್ಲೆಗಳ ಬೃಹತ್ ಆಸ್ಪತ್ರೆ ಅಥವಾ ವಿಶ್ವವಿದ್ಯಾಲಯ ಮಟ್ಟದ ನೆಟ್‍ವರ್ಕ್‍ಗಳಿಗೆ ಹೋಲಿಸಿದರೆ ಅತ್ಯಂತ ಸೀಮಿತ ವ್ಯಾಪ್ತಿಯನ್ನು ಹೊಂದಿವೆ. ಶೇ 70ಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಮತ್ತು ಪರಿಸರ ನಿಯಮಗಳಿದ್ದರೂ, ದೃಢ ಇಚ್ಛಾಶಕ್ತಿಯಿಂದ ಇಡೀ ಉತ್ತರ ಕನ್ನಡ ಜಿಲ್ಲೆಗೆ ತಲುಪುವಂತೆ ಶಿರಸಿ ಅಥವಾ ಇತರ ಕೇಂದ್ರ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸುವ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವುದು ಅಸಾಧ್ಯವೇನೂ ಆಗಿರಲಿಲ್ಲ.

80ನೇ ವಯಸ್ಸಿನ ಅಂಚಿನಲ್ಲಿರುವ ದೇಶಪಾಂಡೆ ಅವರು ತಮ್ಮ ಸಂಪನ್ಮೂಲ ಮತ್ತು ಪ್ರಭಾವವನ್ನು ಬಳಸಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಹಾಗೂ ಸುಸಜ್ಜಿತ ಆರೋಗ್ಯ ಕೇಂದ್ರಗಳನ್ನು ಒದಗಿಸುವ ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪಿಸಲು ತಮ್ಮ ಯೋಜನೆಗಳನ್ನು ಮರುಪರಿಶೀಲಿಸಬೇಕಾಗಿದೆ. ಸಾರ್ವಜನಿಕ ನಾಯಕರೊಬ್ಬರ ಸಾರ್ಥಕತೆಯು ಕೇವಲ ರಾಜಕೀಯ ಅಧಿಕಾರದಲ್ಲಷ್ಟೇ ಇರದೆ, ಜಿಲ್ಲೆಯ ಜನರಿಗೆ ಸ್ವಂತ ಉದ್ಯೋಗ ನೀಡುವ `ಉದ್ಯೋಗದಾತ' ಮತ್ತು ಸುಸಜ್ಜಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ `ಸೌಲಭ್ಯದಾತ' ಆಗುವಲ್ಲಿ ಇದೆ.


Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI