ಮಹಾರಾಷ್ಟ್ರ ಜಾರಿಗೊಳಿಸಿದ ಮತಾಂತರ ವಿರೋಧಿ ಕಾನೂನು: ಸರಕಾರದÀ ಅತಿಯಾದ ಹಸ್ತಕ್ಷೇಪ
ನಂಬಿಕೆ ಮತ್ತು ವೈಯಕ್ತಿಕ ಒಲವುಗಳ ಮೇಲೆ ಸರ್ಕಾರದ ಹಸ್ತಕ್ಷೇಪವು ಮಿತಿಮೀರಿದಾಗ, ಅದು ಸಮಾಜದಲ್ಲಿ ಪರಸ್ಪರ ಅಪನಂಬಿಕೆ ಮತ್ತು ವಿಭಜನೆಯನ್ನು ಮಾತ್ರ ಉತ್ತೇಜಿಸಬಲ್ಲದು. .................... ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ `ಮಹಾರಾಷ್ಟ್ರ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 2026' ಪ್ರಜಾಸತ್ತಾತ್ಮಕ ಮೌಲ್ಯಗಳು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ರಾಜ್ಯದ ಅಧಿಕಾರ ವ್ಯಾಪ್ತಿಯ ಕುರಿತು ಅತ್ಯಂತ ಗಂಭೀರವಾದ ಪ್ರಶ್ನೆಗಳನ್ನು ಎತ್ತಿದೆ. ಬಲವಂತ, ವಂಚನೆ, ಅನಗತ್ಯ ಪ್ರಭಾವ ಹಾಗೂ ಆಮಿಷಗಳ ಮೂಲಕ ನಡೆಯುವ ಮತಾಂತರಗಳನ್ನು ತಡೆಯುವುದು ಈ ಕಾನೂನಿನ ಮುಖ್ಯ ಉದ್ದೇಶ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ, ಇದರ ಒಳಗಿರುವ ಕಠಿಣ ನಿಬಂಧನೆಗಳು ನಾಗರಿಕರ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳುವ ಅಪಾಯವನ್ನು ಒಡ್ಡುತ್ತಿವೆ. ಈ ಕಾಯಿದೆಯ ಸುತ್ತ ನಡೆಯುತ್ತಿರುವ ಚರ್ಚೆಯ ಕೇಂದ್ರಬಿಂದು ಎಂದರೆ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯ. ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತನಗೆ ಇಷ್ಟವಾದ ಧರ್ಮವನ್ನು ಅನುಸರಿಸುವ, ಪ್ರಚಾರ ಮಾಡುವ ಹಾಗೂ ಯಾವುದೇ ಧರ್ಮಕ್ಕೆ ಮತಾಂತರಗೊಳ್ಳುವ ಹಕ್ಕನ್ನು ನೀಡಿದೆ. ಆದರೆ, ಹೊಸ ಶಾಸನವು ಸ್ವಯಂಪ್ರೇರಿತ ಮತಾಂತರಕ್ಕೂ ಸರ್ಕಾರಿ ಅಧಿಕಾರಿಗಳಿಂದ ಮುಂಚಿತವಾಗಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ಮೂಲಕ, ನಂಬಿಕೆ ಮತ್ತು ಆತ್ಮಸಾಕ್ಷಿಯಂತಹ ಅತ್ಯಂತ ಖಾಸಗಿ ನಿರ್ಧಾರವನ್ನು ಆಡಳಿತಾತ್ಮಕ ...