ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ
* ಬಿವಿಸೀ
ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ಮತ್ತು ಅವರ ಕುಟುಂಬದ ಬಗ್ಗೆ ಮಾಡಿದ ಟೀಕೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿರುವುದು ಅರ್ಥವಾಗುವ ಸಂಗತಿಯೇ. ವೈಯಕ್ತಿಕ ಮಟ್ಟಕ್ಕೆ ಇಳಿದು ನಡೆಯುವ ಇಂತಹ ಟೀಕೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಅದೇ ಸಂದರ್ಭದಲ್ಲಿ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ವಿನಾ ಕಾರಣ `ಕೊಳಕು ಮನುಷ್ಯ' ಎಂದು ತುಚ್ಛ ಭಾಷೆಯಲ್ಲಿ ಕರೆದಿರುವುದೂ ಅಷ್ಟೇ ಖಂಡನೀಯ. ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿರುವ ವ್ಯಕ್ತಿಗೆ ತನ್ನ ಭಾಷೆಯ ಮೇಲೆ ಹೆಚ್ಚು ಹಿಡಿತ ಮತ್ತು ಹೊಣೆಗಾರಿಕೆ ಇರಬೇಕಾಗುತ್ತದೆ. ಗೌರವ ಕೊಟ್ಟರೆ ಮಾತ್ರ ಗೌರವ ಸಿಗುತ್ತದೆ ಎಂಬ ಸರಳ ಸತ್ಯವನ್ನು ಎಲ್ಲ ರಾಜಕಾರಣಿಗಳೂ ಅರಿಯಬೇಕಾಗಿದೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ರಾಜಕೀಯ ವಿರೋಧವನ್ನು ವ್ಯಕ್ತಪಡಿಸುವಾಗ ಬಳಸುವ ಭಾಷೆಯಲ್ಲಿ ಸಂಯಮದ ಕೊರತೆ ಆಗಾಗ ಕಂಡುಬರುತ್ತದೆ. ಅವರ ತಂದೆ ರಾಜೀವ್ ಗಾಂಧಿ ಅಥವಾ ಅಜ್ಜಿ ಇಂದಿರಾ ಗಾಂಧಿ ತೀವ್ರ ರಾಜಕೀಯ ಸಂಘರ್ಷಗಳ ನಡುವೆಯೂ ಇಂತಹ ಕೆಳಮಟ್ಟದ ಪದಪ್ರಯೋಗಕ್ಕೆ ಇಳಿದ ಉದಾಹರಣೆಗಳು ಇರಲಿಲ್ಲ. ಇಂದಿನ ಗಾಂಧಿ ಕುಟುಂಬದ ರಾಜಕೀಯದಲ್ಲಿ ಭಾಷೆಯ ಸೊಬಗು ಮತ್ತು ಸಾಂಸ್ಕೃತಿಕ ಸಂಯಮ ಹಿಂಬದಿಗೆ ಸರಿದಂತಿದೆ.
ಧಮೇರ್ಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ವಿದ್ಯಾರ್ಥಿಗಳ ಹೋರಾಟದ ಯಶಸ್ಸನ್ನು ಕಾಂಗ್ರೆಸ್ ತನ್ನ ರಾಜಕೀಯ ಸಾಧನೆಯಾಗಿ ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವುದೂ ಗಮನಾರ್ಹ. ಉಪವಾಸನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಕಾರಣಕ್ಕೆ ಆ ಹೋರಾಟದ ಸಂಪೂರ್ಣ ರಾಜಕೀಯ ಲಾಭವನ್ನು ಪಡೆದುಕೊಳ್ಳಲು ಮಾಡುವ ಪ್ರಯತ್ನ ಸಮಂಜಸವೆನಿಸುವುದಿಲ್ಲ.
ಇದು ಕಾಂಗ್ರೆಸ್‍ಗೆ ಮಾತ್ರ ಸೀಮಿತ ಸಮಸ್ಯೆಯೂ ಅಲ್ಲ. ರಾಜ್ಯ ಕಾಂಗ್ರೆಸ್‍ನ ಬಿ ಕೆ ಹರಿಪ್ರಸಾದ್ ಅವರ ಭಾಷೆಯೂ ಅನೇಕ ಬಾರಿ ಇದೇ ಮಟ್ಟದಲ್ಲಿರುತ್ತದೆ. ಬಿಜೆಪಿಯಲ್ಲೂ ಸಿ ಟಿ ರವಿ, ಸುನಿಲ್ ಕುಮಾರ್, ಬಿ ವೈ ವಿಜಯೇಂದ್ರ ಮೊದಲಾದವರು ರಾಜಕೀಯ ಟೀಕೆಯ ವೇಳೆ ಸಂಯಮದ ಮಾದರಿಗಳೆಂದು ಹೇಳಲು ಸಾಧ್ಯವಿಲ್ಲ.
ಹೀಗಾಗಿ ಅಸಭ್ಯ, ಅಸಂಸದೀಯ ಮತ್ತು ವೈಯಕ್ತಿಕ ನಿಂದನೆಯ ಭಾಷೆ ಇಂದು ಭಾರತೀಯ ರಾಜಕೀಯದ ಸಾಮಾನ್ಯ ಸಂಸ್ಕೃತಿಯಾಗುತ್ತಿದೆ. ಕೇವಲ ಒಂದು ದಶಕದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ತೀವ್ರ ಭಿನ್ನಾಭಿಪ್ರಾಯಗಳಿದ್ದರೂ ನಾಯಕರು ಒಂದು ಲಕ್ಷ್ಮಣರೇಖೆಯನ್ನು ದಾಟುತ್ತಿರಲಿಲ್ಲ. ಇಂದು ಆ ರೇಖೆಯೇ ಅಳಿದುಹೋಗುತ್ತಿರುವುದು ನಮ್ಮ ರಾಜಕೀಯ ಸಂಸ್ಕೃತಿಯ ಅಧೋಗತಿಯ ಸಂಕೇತವಾಗಿದೆ.
Comments
Post a Comment