ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

 * ಬಿವಿಸೀ

ಒಂದೇ ಕಾಲದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಿದ್ದ ಅವಿಭಜಿತ ದಕ್ಷಿಣ ಕನ್ನಡ ಇಂದು ವಿಚಿತ್ರವಾದ ಭಯದ ವಾತಾವರಣವನ್ನು ಎದುರಿಸುತ್ತಿದೆ. ಕೊಲೆಗಳು ನಡೆಯುತ್ತಿವೆ; ಮತ್ತೊಂದು ಕೊಲೆಯ ಸುದ್ದಿ ಬರುವಷ್ಟರಲ್ಲಿ ಹಿಂದಿನ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿರುವುದಿಲ್ಲ. ಇವುಗಳಲ್ಲಿ ಕೆಲವು ವೈಯಕ್ತಿಕ ದ್ವೇಷ, ಹಣಕಾಸಿನ ವ್ಯವಹಾರ ಮತ್ತು ಅಪರಾಧ ಜಾಲಗಳಿಗೆ ಸಂಬಂಧಿಸಿದ್ದರೆ, ಮತ್ತೆ ಕೆಲವು ಕೋಮು ವೈಷಮ್ಯದ ಪ್ರತೀಕಾರದ ಸರಪಳಿಯ ಭಾಗವಾಗಿವೆ. ಅವಿರತ ಕೊಲೆಗಳಿಂದಾಗಿ ಅವಳಿ ಜಿಲ್ಲೆಗಳು ರಾಜ್ಯದ ಕ್ರೈಂ ಕ್ಯಾಪಿಟಲ್ ಎನ್ನುವ ಅಪಖ್ಯಾತಿ ಗಳಿಸಿವೆ. ಈ ಎರಡೂ ಪ್ರವೃತ್ತಿಗಳು ಕರಾವಳಿಯ ಶಾಂತಿಪ್ರಿಯ ಜನರನ್ನು ಆತಂಕಕ್ಕೆ ದೂಡಿವೆ.

ಇತ್ತೀಚಿನ ಉಡುಪಿ ಜಿಲ್ಲೆಯ ಮುದರಂಗಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜ ಅವರ ಹತ್ಯೆ ಈ ಆತಂಕವನ್ನು ಮತ್ತಷ್ಟು ಗಾಢಗೊಳಿಸಿದೆ. ಆಗಸ್ಟ್ ಏಳರಂದು ಅವರು ಚರ್ಚ್ ಸಮೀಪವೇ ಗುಂಡಿನ ದಾಳಿಗೆ ಬಲಿಯಾದರು. ಆರಂಭಿಕ ತನಿಖೆಯಲ್ಲಿ ಹಣಕಾಸಿನ ವಿವಾದದ ಸುಳಿವು ಸಿಕ್ಕಿತ್ತು. ನಂತರ ಪೆÇಲೀಸರು ಬಹುಕೋಟಿ ರೂಪಾಯಿಗಳ ಗುತ್ತಿಗೆ ವಿವಾದ ಮತ್ತು ಅಪರಾಧ ಜಾಲದ ಸಂಪರ್ಕದ ಸಾಧ್ಯತೆಯನ್ನೂ ಪರಿಶೀಲಿಸುತ್ತಿದ್ದಾರೆ. ಮುಂಬೈ ಮೂಲದ ಅಪರಾಧಿಯ ಬಂಧನವೂ ಪ್ರಕರಣಕ್ಕೆ ಮತ್ತಷ್ಟು ಗಂಭೀರ ಆಯಾಮ ನೀಡಿದೆ.

ಇದು ಕೇವಲ ಒಂದು ಪ್ರತ್ಯೇಕ ಘಟನೆ ಎಂದು ಹೇಳಿ ಕೈತೊಳೆದುಕೊಳ್ಳುವುದು ಅಪಾಯಕಾರಿ. ಕರಾವಳಿಯಲ್ಲಿ ಹಿಂದೆ ನಡೆದ ಕೊಲೆಗಳ ಸರಣಿಯನ್ನೂ ನೋಡಿದರೆ ಎರಡು ಸ್ಪಷ್ಟ ಪ್ರವೃತ್ತಿಗಳು ಕಾಣುತ್ತವೆ. ಒಂದು, ಹಣ, ಗುತ್ತಿಗೆ, ಭೂಮಿ ಮತ್ತು ವ್ಯವಹಾರಗಳ ಸುತ್ತ ಬೆಳೆದ ಅಪರಾಧ ಜಾಲಗಳು. ಮತ್ತೊಂದು, ಕೋಮು ಗುರುತಿನ ಆಧಾರದ ಮೇಲೆ ನಡೆಯುವ ಪ್ರತೀಕಾರದ ಹಿಂಸೆ. ಎರಡನೆಯದು ಅತ್ಯಂತ ಅಪಾಯಕಾರಿ; ಏಕೆಂದರೆ ಒಬ್ಬನ ಕೊಲೆ ಮತ್ತೊಬ್ಬನ ಪ್ರತೀಕಾರಕ್ಕೆ ಕಾರಣವಾಗಿ ಸರಪಳಿ ಮುಂದುವರಿಯುತ್ತದೆ.

2022ರಲ್ಲಿ ಮೊಹಮ್ಮದ್ ಮಸೂದ್, ಪ್ರವೀಣ್ ನೆಟ್ಟಾರು ಮತ್ತು ಮೊಹಮ್ಮದ್ ಫಾಜಿಲ್ ಅವರ ಸತತ ಹತ್ಯೆಗಳು ಕರಾವಳಿಯ ಸಾಮಾಜಿಕ ಬಿರುಕು ಎಷ್ಟು ಭೀಕರ ಪರಿಣಾಮಕ್ಕೆ ದಾರಿ ಮಾಡಬಹುದು ಎಂಬುದನ್ನು ತೋರಿಸಿದ್ದವು. 2025ರಲ್ಲಿಯೂ ಪ್ರತೀಕಾರದ ಹತ್ಯೆಗಳ ಕುರಿತು ಇದೇ ಆತಂಕ ಮತ್ತೆ ವ್ಯಕ್ತವಾಗಿತ್ತು.

ಹೀಗಾಗಿ ಪ್ರತಿಯೊಂದು ಕೊಲೆಯನ್ನೂ ಕೋಮು ಬಣ್ಣದಲ್ಲಿ ನೋಡುವುದೂ ತಪ್ಪು; ಪ್ರತಿಯೊಂದನ್ನೂ ಸಾಮಾನ್ಯ ಅಪರಾಧವೆಂದು ಕಡೆಗಣಿಸುವುದೂ ಇನ್ನಷ್ಟು ದೊಡ್ಡ ತಪ್ಪು. ಪೆÇಲೀಸ್ ತನಿಖೆ ಪ್ರತಿ ಪ್ರಕರಣದ ನಿಜವಾದ ಹಿನ್ನೆಲೆಯನ್ನು ಬಯಲಿಗೆಳೆಯಬೇಕು. ಅಪರಾಧಿಗಳ ಧರ್ಮ, ಪಕ್ಷ ಅಥವಾ ಸಂಘಟನೆಯ ಕಡೆ ನೋಡದೆ ಕಾನೂನು ಒಂದೇ ರೀತಿಯಲ್ಲಿ ಅನ್ವಯವಾಗಬೇಕು.

ಕರಾವಳಿಯ ಜನರಿಗೆ ಬೇಕಿರುವುದು ಕೊಲೆಗಾರರ ಬಂಧನ ಮಾತ್ರÀವಲ್ಲ; ಕೊಲೆ ನಡೆಯುವ ಮುನ್ನವೇ ಅಪಾಯವನ್ನು ಗುರುತಿಸುವ ಪೆÇಲೀಸ್ ವ್ಯವಸ್ಥೆ. ಅಪರಾಧ ಜಾಲಗಳ ಬೇರು ಕತ್ತರಿಸಬೇಕು. ಕೋಮು ಪ್ರತೀಕಾರದ ರಾಜಕಾರಣಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ಶಾಂತಿಪ್ರಿಯ ಕರಾವಳಿ ನಿಧಾನವಾಗಿ ಕೊಲೆಗಳ ಸುದ್ದಿಗೆ ನಿರ್ಲಿಪ್ತವಾಗುವ ಸಮಾಜವಾಗಿ ಬದಲಾಗುವ ಅಪಾಯವಿದೆ. ಅದು ಯಾವುದೇ ನಾಗರಿಕ ಸಮಾಜಕ್ಕೆ ಒಳ್ಳೆಯ ಸೂಚನೆಯಲ್ಲ.

Comments

Popular posts from this blog

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI