ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ನಿರ್ಣಾಯಕ ಪರೀಕ್ಷೆ
ಅಭಿಮತ ಬಿವಿಸೀ ............... 2014ರ ನಂತರ ಅಜೇಯವಾಗಿ ಕಾಣುತ್ತಿದ್ದ ಬಿಜೆಪಿಯ ರಾಜಕೀಯ ಪ್ರಾಬಲ್ಯದಲ್ಲಿ ಈಗ ಬಿರುಕು ಕಾಣುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ ಕಳೆದುಕೊಂಡು ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಬೇಕಾಯಿತು. ನಂತರ ಯುವ ಪ್ರತಿಭಟನೆ, ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ ಮತ್ತು ಪರೀಕ್ಷಾ ಅಕ್ರಮಗಳಿಂದ ಅಸಮಾಧಾನ ಹೆಚ್ಚಾಗಿದೆ. ಏಪ್ರಿಲ್‍ನಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆ ಸೋಲು, ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ಪ್ರತಿಭಟನೆಗಳು, ಪ್ರಧಾನಿ ಮತ್ತು ಗೃಹ ಸಚಿವರು ಗೈರಾಗಿ ಮುಂಗಾರು ಅಧಿವೇಶನ ಸ್ಥಗಿತಗೊಂಡಿದ್ದು ಸರ್ಕಾರದ ಉತ್ತರದಾಯಿತ್ವದ ಬಗ್ಗೆ ಪ್ರಶ್ನೆ ಮೂಡಿಸಿದೆ. ಜುಲೈ 20ರ ವಿದ್ಯಾರ್ಥಿಗಳ ಮೇಲಿನ ಪೆÇಲೀಸ್ ದೌರ್ಜನ್ಯದ ಬಗ್ಗೆ ಇಬ್ಬರು ನಾಯಕರು ಸಂಸತ್ತಿನಲ್ಲಿ ಉತ್ತರ ನೀಡದಿರುವುದು ಸರ್ಕಾರ ಉತ್ತರಿಸಲು ಸಿದ್ಧವಿಲ್ಲ ಎಂಬ ಭಾವನೆ ಬಲಪಡಿಸಿದೆ. ಆದರೂ ಈ ಹಿನ್ನಡೆಗಳೇ ಪ್ರಾಬಲ್ಯದ ಅಂತ್ಯ ಎಂದಲ್ಲ. ಬಿಜೆಪಿ ಇನ್ನೂ ದೊಡ್ಡ ಮತಬ್ಯಾಂಕ್ ಮತ್ತು ಸೈದ್ಧಾಂತಿಕ ಆಕರ್ಷಣೆಯನ್ನು ಉಳಿಸಿಕೊಂಡಿರುವ ಪ್ರಬಲ ಶಕ್ತಿ. ಆದರೆ ಅದರ ಪ್ರಾಬಲ್ಯಕ್ಕೆ ಕಾರಣವಾದ ಅಂಶಗಳು ಈಗ ಮಿತಿ ಎದುರಿಸುತ್ತಿವೆಯೇ ಎಂಬುದು ಪ್ರಶ್ನೆ. ಇದನ್ನು ಪರೀಕ್ಷಿಸಬಹುದಾದ ಪ್ರಮುಖ ಕ್ಷೇತ್ರ ಉತ್ತರ ಪ್ರದೇಶ. ಉತ್ತರ ಪ್ರದೇಶ ಕೇವಲ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯವಲ್ಲ, ಬಿಜೆಪಿ ಅಧಿಕಾರದ ಕೋಟೆ. ...