ಅಮೆರಿಕದಲ್ಲಿ ನೋಂದಣಿ, ಭಾರತದಲ್ಲೇಕೆ ನಿರಾಕರಣೆ?
ಆರೆಸ್ಸೆಸ್ ಇಬ್ಬಗೆಯ ನೀತಿ
...............
ಈ ಸಂಪಾದಕೀಯವು ಅಮೆರಿಕದಲ್ಲಿ ವಿದೇಶಿ ಸಂಸ್ಥೆಯಾಗಿ ನೋಂದಾಯಿಸಿಕೊಂಡಿರುವ ಆರೆಸ್ಸೆಸ್, ಭಾರತದಲ್ಲಿ ಮಾತ್ರ ಕಾನೂನಾತ್ಮಕವಾಗಿ ನೋಂದಣಿ ಮಾಡಿಕೊಳ್ಳಲು ನಿರಾಕರಿಸುತ್ತಿರುವ ಇಬ್ಬಗೆಯ ನೀತಿಯನ್ನು ವಿಶ್ಲೇಷಿಸುತ್ತದೆ.
.................
ಸಂಪಾದಕೀಯ
ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ಆರೆಸ್ಸೆಸ್ ಫ್ರೆಂಡ್ಸ್ ಸಂಸ್ಥೆಯು ಫಾರಿನ್ ಏಜೆಂಟ್ಸ್ ರೆಜಿಸ್ಟ್ರೇಷನ್ ಆಕ್ಟ್ ಅಡಿಯಲ್ಲಿ ವಿದೇಶಿ ಏಜೆಂಟ್ ಆಗಿ ಅಧಿಕೃತವಾಗಿ ನೋಂದಾಯಿಸಿಕೊಂಡಿದೆ. ಆದರೆ, ಭಾರತದಲ್ಲಿ ಅದೇ ಆರೆಸ್ಸೆಸ್ ತನ್ನನ್ನು ತಾನು ನೋಂದಾಯಿತ ಸಂಸ್ಥೆಯಾಗಿ ಗುರುತಿಸಿಕೊಳ್ಳಲು ನಿರಾಕರಿಸುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್‍ನ ಕಾನೂನಾತ್ಮಕ ಅಸ್ತಿತ್ವ, ಬೃಹತ್ ಆರ್ಥಿಕ ಸಾಮ್ರಾಜ್ಯ, ವರ್ಷದಿಂದ ವರ್ಷಕ್ಕೆ ಹರಿದುಬರುವ ಗುರುದಕ್ಷಿಣೆ ನಿಧಿ ಮತ್ತು ಕಾರ್ಯಕ್ರಮಗಳಿಗೆ ಸರ್ಕಾರದಿಂದ ಪಡೆಯುವ ಭದ್ರತೆಯ ಜವಾಬ್ದಾರಿಯನ್ನು ಪ್ರಶ್ನಿಸಿ, ಸಂಘಟನೆಯನ್ನು ನೋಂದಣಿ ಮಾಡುವಂತೆ ಬಹಿರಂಗ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಘದ ನಾಯಕರು, ಆರೆಸ್ಸೆಸ್ ಒಂದು ನೋಂದಾಯಿತ ಸಂಸ್ಥೆಯಲ್ಲ, ಅದೊಂದು ವ್ಯಕ್ತಿಗಳ ಸಮೂಹ ಮತ್ತು ಆರೆಸ್ಸೆಸ್ ಎಂದಿಗೂ ನೋಂದಣಿ ಮಾಡುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಇಲ್ಲಿ ಮೂಡುವ ಮೂಲಭೂತ ಪ್ರಶ್ನೆಯೆಂದರೆ: ಅಮೆರಿಕದ ಕಾನೂನಿಗೆ ಬಾಗುವ ಸಂಘ ಪರಿವಾರ, ಭಾರತದ ಸಂವಿಧಾನ ಮತ್ತು ಕಾನೂನಿನ ನಿಯಮಗಳಿಗೆ ಏಕ ಮುಖ ತಿರುಗಿಸುತ್ತಿದೆ?
ಅಮೆರಿಕದಲ್ಲಿ ವಿದೇಶಿ ಸಂಸ್ಥೆಯಾಗಿ ಕಾರ್ಯಾಚರಣೆ ನಡೆಸಲು ಹಾಗೂ ಕಾನೂನಾತ್ಮಕ ಮಾನ್ಯತೆ ಪಡೆಯಲು ಅಲ್ಲಿನ ಕಾಯಿದೆ ಅಡಿಯಲ್ಲಿ ಪಾರದರ್ಶಕವಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಅಲ್ಲಿನ ನಿಯಮಗಳನ್ನು ಪಾಲಿಸದಿದ್ದರೆ ಸಂಸ್ಥೆಯ ಕಾರ್ಯಾಚರಣೆಗೆ ಸಂಪೂರ್ಣ ತಡೆ ಬೀಳುತ್ತದೆ ಎಂಬ ಅರಿವು ಸಂಘಕ್ಕಿದೆ. ಆದರೆ, ಭಾರತದಲ್ಲಿ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿರುವ, ದೇಶದ ರಾಜಕೀಯ ಮತ್ತು ಸಾಮಾಜಿಕ ತೀರ್ಮಾನಗಳ ಮೇಲೆ ಪ್ರಭಾವ ಬೀರುವ ಬೃಹತ್ ಸಂಸ್ಥೆಯಾಗಿದ್ದರೂ, ಅನೌಪಚಾರಿಕ ಸಂಸ್ಥೆ ಎಂಬ ಮುಸುಕಿನ ಅಡಿಯಲ್ಲಿಯೇ ಉಳಿಯಲು ಬಯಸುತ್ತಿದೆ.
ನೋಂದಣಿ ಇಲ್ಲದೆ ಕಾರ್ಯಾಚರಣೆ ನಡೆಸುವುದರಿಂದ ಸರ್ಕಾರದ ಆರ್ಥಿಕ ಲೆಕ್ಕಪತ್ರ ಸಲ್ಲಿಕೆ, ನಿಧಿಯ ಮೂಲದ ಪಾರದರ್ಶಕತೆ ಮತ್ತು ಕಾನೂನಾತ್ಮಕ ಹೊಣೆಗಾರಿಕೆಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು. ಸಂಘದ ಕಾರ್ಯಕ್ರಮಗಳಿಗೆ ಸರ್ಕಾರಿ ಯಂತ್ರ ಹಾಗೂ ಪೆÇಲೀಸ್ ಭದ್ರತೆಯನ್ನು ಪಡೆದುಕೊಳ್ಳುವಾಗ ಸಿಗುವ ಸವಲತ್ತುಗಳು, ಸಾರ್ವಜನಿಕ ಜವಾಬ್ದಾರಿ ಮತ್ತು ಪಾರದರ್ಶಕತೆಯ ಪ್ರಶ್ನೆ ಬಂದಾಗ ಏಕಿಲ್ಲ? ಭಾರತದ ಕಾನೂನಿನ ವ್ಯಾಪ್ತಿಯಲ್ಲಿ ಬಂದು ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ಇಡುವುದು ಯಾವುದೇ ಪಾರದರ್ಶಕ ಸಂಸ್ಥೆಯ ಕರ್ತವ್ಯ.
ಒಂದು ಜವಾಬ್ದಾರಿಯುತ ರಾಷ್ಟ್ರೀಯ ಸಂಘಟನೆಯು ದೇಶದ ಕಾನೂನಿಗಿಂತ ಮಿಗಿಲಾದುದಲ್ಲ. ಅಮೆರಿಕದಲ್ಲಿ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಳ್ಳಲು ಹಿಂಜರಿಯದ ಆರೆಸ್ಸೆಸ್, ತನ್ನದೇ ಮಾತೃಭೂಮಿಯಲ್ಲಿ ಭಾರತದ ಸಂವಿಧಾನಿಕ ಚೌಕಟ್ಟು ಮತ್ತು ನಿಯಮಗಳಿಗೆ ಬದ್ಧವಾಗಿ ನೋಂದಾಯಿಸಿಕೊಳ್ಳಲು ನಿರಾಕರಿಸುವುದು ಅದರ ಇಬ್ಬಗೆಯ ನೀತಿಯನ್ನು ಎತ್ತಿಹಿಡಿಯುತ್ತದೆ. ದೇಶಪ್ರೇಮದ ಮಾತಾಡುವ ಸಂಸ್ಥೆಗೆ ಭಾರತದ ಕಾನೂನಿನ ವ್ಯಾಪ್ತಿಗೆ ಬರಲು ಏಕಿಷ್ಟು ಹಿಂಜರಿಕೆ?
Comments
Post a Comment