ವಿದೇಶಿ ಪಿತೂರಿಯ ಸಬೂಬು: ಆಂತರಿಕ ವೈಫಲ್ಯ ಮುಚ್ಚಿಕೊಳ್ಳುವ ಆರೆಸ್ಸೆÉಸ್ ವರಸೆ!
ನೇರಾನೇರ * ಬಿವಿಸೀ
ದೇಶದ ಪ್ರತಿಯೊಬ್ಬ ನಾಗರಿಕನೂ ಇಂದು ಗಂಭೀರ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿ ಹೋಗಿದ್ದಾನೆ. ಯುವಜನತೆ ಮತ್ತು ಜನಸಾಮಾನ್ಯರು ತಮ್ಮ ಬದುಕಿನ ಅನಿಶ್ಚಿತತೆಯ ವಿರುದ್ಧ ದನಿ ಎತ್ತಿದಾಗಲೆಲ್ಲ, ಆಡಳಿತ ವ್ಯವಸ್ಥೆಯ ಬೆಂಬಲಕ್ಕೆ ನಿಲ್ಲುವ ಆರೆಸ್ಸೆÉಸ್ ಹಾಗೂ ಆಡಳಿತಾರೂಢ ಪಕ್ಷಗಳು ಮತ್ತೊಮ್ಮೆ ಹಳೆಯದಾದ `ವಿದೇಶಿ ವೈರಿಗಳ ಕೈವಾಡ' ಹಾಗೂ `ವಿದೇಶಿ ಪಿತೂರಿ' ಎಂಬ ಸಿದ್ಧಾಂತವನ್ನು ಮುನ್ನೆಲೆಗೆ ತಂದಿವೆ. ಆರೆಸ್ಸೆÉಸ್ ಮುಖ್ಯಸ್ಥರ ಇತ್ತೀಚಿನ ವಿಜಯದಶಮಿ ಭಾಷಣದಲ್ಲಿ, ಭಾರತದಲ್ಲಿ ತಲೆದೋರಿರುವ ಆಂತರಿಕ ಅಶಾಂತಿ ಮತ್ತು ಪ್ರತಿಭಟನೆಗಳ ಹಿಂದೆ ಪಾಶ್ಚಾತ್ಯ ಶಕ್ತಿಗಳು ಹಾಗೂ ವಿದೇಶಿ ಲಾಬಿಗಳ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿರುವುದು ತೀವ್ರ ಚರ್ಚೆಗೆ ಹಾಗೂ ವ್ಯಾಪಕ ಟೀಕೆಗೆ ಗ್ರಾಸವಾಗಿದೆ.
ದೇಶದ ಯುವಕರು ಇಂದು ಗುಣಮಟ್ಟದ ಶಿಕ್ಷಣದ ಕೊರತೆ, ಉದ್ಯೋಗಾವಕಾಶಗಳ ಮರೀಚಿಕೆ ಮತ್ತು ಭವಿಷ್ಯದ ಆತಂಕದಿಂದ ಕಂಗೆಟ್ಟಿದ್ದಾರೆ. ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು, ತೆರಿಗೆಯ ಹೊರೆ ಹಾಗೂ ಕಾಪೆರ್Çರೇಟ್ ಪರ ಆರ್ಥಿಕ ನೀತಿಗಳು ಸಾಮಾನ್ಯ ಜನರ ದೈನಂದಿನ ಬದುಕನ್ನು ದುಸ್ತರಗೊಳಿಸಿವೆ. ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆಗಾಗಿ, ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಮತ್ತು ವಿದ್ಯಾರ್ಥಿಗಳು ಪರೀಕ್ಷಾ ಪದ್ಧತಿಯ ವೈಫಲ್ಯಗಳ ವಿರುದ್ಧ ರಸ್ತೆಗಿಳಿದು ಹೋರಾಡುತ್ತಿದ್ದಾರೆ. ಈ ಎಲ್ಲಾ ಜನಪರ ಆಂದೋಲನಗಳು ಮತ್ತು ಆಡಳಿತ ವಿರೋಧಿ ಧ್ವನಿಗಳು ಸಂಪೂರ್ಣವಾಗಿ ಭಾರತದ ಮಣ್ಣಿನಿಂದಲೇ, ಇಲ್ಲಿನ ವಾಸ್ತವ ಪರಿಸ್ಥಿತಿಯಿಂದಲೇ ಹುಟ್ಟಿಕೊಂಡಿರುವ ನೈಜ ಆಕ್ರೋಶಗಳಾಗಿವೆ. ಆದರೆ, ಆಡಳಿತ ವ್ಯವಸ್ಥೆಯ ನೀತಿ ವೈಫಲ್ಯಗಳನ್ನು ನೇರವಾಗಿ ಒಪ್ಪಿಕೊಳ್ಳುವ ಬದಲು, ಪ್ರತಿಯೊಂದು ಆಕ್ರೋಶಕ್ಕೂ ಬಾಹ್ಯ ಶಕ್ತಿಗಳ ಕುಮ್ಮಕ್ಕು ಇದೆ ಎಂದು ಬಿಂಬಿಸುವುದು ಅಕ್ಷಮ್ಯ ಧೋರಣೆಯಾಗಿದೆ.
ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಧಕ್ಕೆಯಾಗುತ್ತಿರುವಾಗ ಪ್ರಜೆಗಳು ಸರ್ಕಾರವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಆದರೆ ಆಡಳಿತಾರೂಢ ಸರ್ಕಾರದ ತಪ್ಪುಗಳನ್ನು ಎತ್ತಿಹಿಡಿಯುವ ಪ್ರತಿಯೊಬ್ಬರನ್ನೂ ರಾಷ್ಟ್ರದ್ರೋಹಿಗಳೆಂದೋ ಅಥವಾ ವಿದೇಶಿ ಏಜೆಂಟರೆಂದೋ ಚಿತ್ರಿಸುವುದು ಪ್ರಜಾಪ್ರಭುತ್ವದ ಗಂಟಲು ಹಿಸುಕಿದಂತೆ. ದಶಕಗಳಿಂದ ದೇಶವನ್ನು ಕಾಡುತ್ತಿರುವ ಬಡತನ, ಹಸಿವು, ಸಂಪನ್ಮೂಲಗಳ ಅಸಮಾನ ಹಂಚಿಕೆ ಮತ್ತು ಸಾಮಾಜಿಕ ಅಶಾಂತಿಯನ್ನು ಹೋಗಲಾಡಿಸುವಲ್ಲಿ ಸರ್ಕಾರಗಳು ವಿಫಲವಾಗಿರುವಾಗ, ಆಂತರಿಕ ಸಮಸ್ಯೆಗಳಿಗೆಲ್ಲಾ ಹೊರಗಿನವರೇ ಕಾರಣ ಎಂಬ ಸುಲಭದ ಸುಳ್ಳನ್ನು ಹೇಳಿ ಜಾರಿಕೊಳ್ಳುವುದು ಜನರಿಗೆ ಮಾಡುತ್ತಿರುವ ದ್ರೋಹವಾಗಿದೆ. ವಿದೇಶಿ ಧನಸಹಾಯ ಮತ್ತು ಪಿತೂರಿಗಳ ಬಗ್ಗೆ ಮಾತನಾಡುವವರು, ಚುನಾವಣಾ ನಿಧಿ ಹಾಗೂ ಕಾಪೆರ್Çರೇಟ್ ದೇಣಿಗೆಗಳ ಅಪಾರದರ್ಶಕತೆಯ ಬಗ್ಗೆಯೂ ಅದೇ ಗಂಭೀರತೆಯನ್ನು ಪ್ರದರ್ಶಿಸಬೇಕಲ್ಲವೇ?
ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಆಡಳಿತ ಪಕ್ಷ ಹಾಗೂ ಅದರ ಮಾತೃಸಂಸ್ಥೆಯು ಇಂತಹ ಬೇಜವಾಬ್ದಾರಿ ಮತ್ತು ಆಧಾರರಹಿತ ಹೇಳಿಕೆಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಜನರ ದಿಕ್ಕು ತಪ್ಪಿಸುವ ಹಳೆಯ ತಂತ್ರಗಳನ್ನು ಬಿಟ್ಟು, ದೇಶದೊಳಗಿನ ನಿರುದ್ಯೋಗ, ಆರ್ಥಿಕ ಮುಗ್ಗಟ್ಟು, ಆರೋಗ್ಯ ಮತ್ತು ಶಿಕ್ಷಣದ ಬಿಕ್ಕಟ್ಟುಗಳಿಗೆ ಪ್ರಾಮಾಣಿಕ ಹಾಗೂ ದೀರ್ಘಕಾಲಿಕ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕು. ಅನ್ಯರ ಮೇಲೆ ಗೂಬೆ ಕೂರಿಸಿ ಜಾರಿಕೊಳ್ಳುವ ರಾಜಕೀಯ ಎಂದಿಗೂ ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುವುದಿಲ್ಲ ಎಂಬುದನ್ನು ಆಡಳಿತಗಾರರು ಅರಿಯಬೇಕು.
Comments
Post a Comment