ಪ್ರಜಾಪ್ರಭುತ್ವದಲ್ಲಿ ಆಡಳಿತ ಬದಲಾವಣೆ ದೇಶದ್ರೋಹವಲ್ಲ, ಸಂವಿಧಾನಿಕ ಹಕ್ಕು!

 * ಬಿವಿಸೀ


ಪ್ರಜಾಪ್ರಭುತ್ವದ ಜೀವನಾಡಿ ಎಂದರೆ ಅಧಿಕಾರದ ವಿಕೇಂದ್ರೀಕರಣ ಮತ್ತು ಮುಕ್ತ ಸ್ಪರ್ಧೆ. ಇತ್ತೀಚೆಗೆ ಭಾರತದ ರಾಜಕೀಯ ವಲಯದಲ್ಲಿ `ಆಡಳಿತ ಬದಲಾವಣೆ' (ರೆಜೀಮ್ ಚೇಂಜ್) ಎಂಬ ಪದವು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷಗಳು ಸರ್ಕಾರವನ್ನು ಕೆಳಗಿಳಿಸಲು ಯತ್ನಿಸುತ್ತಿವೆ, ದೇಶದಲ್ಲಿ ಆಡಳಿತ ಬದಲಾವಣೆಯ ಸಂಚು ರೂಪಿಸುತ್ತಿವೆ ಎಂದು ಆಡಳಿತಾರೂಢ ಬಿಜೆಪಿ ನಾಯಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪ್ರಜಾಪ್ರಭುತ್ವದ ಮೂಲತತ್ತ್ವದ ಅರಿವಿರುವ ಯಾರೇ ಆದರೂ ಕೇಳಲೇಬೇಕಾದ ಪ್ರಶ್ನೆಯೊಂದಿದೆ: ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ಮಾರ್ಗದಲ್ಲಿ ಸರ್ಕಾರವನ್ನು ಬದಲಾಯಿಸಲು ಬಯಸುವುದು ಅಪರಾಧವೇ? ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ಮೂಲಭೂತ ಕರ್ತವ್ಯವೇ "ವಿರೋಧಿಸುವುದು, ಎಕ್ಸ್‍ಪೋಸ್ ಮಾಡುವುದು ಮತ್ತು ಅಧಿಕಾರದಿಂದ ಕೆಳಗಿಳಿಸುವುದು". ಜನಾದೇಶ ಪಡೆದು ಅಧಿಕಾರಕ್ಕೆ ಬಂದ ಸರ್ಕಾರವೊಂದು ತನ್ನ ಜನವಿರೋಧಿ ನೀತಿಗಳು, ಭ್ರಷ್ಟಾಚಾರ ಅಥವಾ ಆಡಳಿತ ವೈಫಲ್ಯದಿಂದ ಜನಪ್ರಿಯತೆ ಕಳೆದುಕೊಂಡಾಗ, ಇಡೀ ವ್ಯವಸ್ಥೆಯನ್ನು ತನ್ನ ಲಾಭಕ್ಕೆ ಹೈಜಾಕ್ ಮಾಡಿಕೊಂಡಾಗ, ಅದನ್ನು ಶಾಂತಿಯುತವಾಗಿ ಪ್ರಶ್ನಿಸುವುದು ಮತ್ತು ಚುನಾವಣೆಯ ಮೂಲಕ ಬದಲಾಯಿಸಲು ಜನರನ್ನು ಸಂಘಟಿಸುವುದು ವಿರೋಧ ಪಕ್ಷದ ಕರ್ತವ್ಯವೇ ಹೊರತು ದೇಶದ್ರೋಹವಲ್ಲ. 

ಅಧಿಕಾರದಲ್ಲಿರುವ ಸರ್ಕಾರ ಮತ್ತು ದೇಶ ಒಂದೇ ಅಲ್ಲ ಎಂಬ ಸರಳ ಸತ್ಯವನ್ನು ಆಡಳಿತಾರೂಢ ನಾಯಕರು ಗ್ರಹಿಸಬೇಕಿದೆ. ರಾಜಕೀಯ ಪಕ್ಷವೊಂದನ್ನು ವಿರೋಧಿಸುವುದು ದೇಶವನ್ನು ವಿರೋಧಿಸಿದಂತೆ ಅಲ್ಲ. ಹಿಂಸಾತ್ಮಕ ದಂಗೆ ಅಥವಾ ಸೇನಾ ಕ್ರಾಂತಿಯ ಮೂಲಕ ಸರ್ಕಾರವನ್ನು ಉರುಳಿಸುವುದು ಅಸಂವಿಧಾನಿಕ. ಆದರೆ, ಶಾಂತಿಯುತ ಪ್ರತಿಭಟನೆಗಳು, ಜನಜಾಗೃತಿ ಮತ್ತು ಮತದಾನದ ಮೂಲಕ ಆಡಳಿತ ಬದಲಾವಣೆಗೆ ಕರೆ ನೀಡುವುದು ಭಾರತೀಯ ಸಂವಿಧಾನ ನೀಡಿರುವ ಪವಿತ್ರ ಹಕ್ಕಾಗಿದೆ. 

ಇತಿಹಾಸವನ್ನು ತಿರುಚಿ ನೋಡಿದರೆ, ಇಂದು ಅಧಿಕಾರದಲ್ಲಿರುವ ಬಿಜೆಪಿ ಕೂಡ ಗಾಂಧಿನಗರದಿಂದ ದೆಹಲಿವರೆಗೆ `ಪರಿವರ್ತನಾ ಯಾತ್ರೆ'ಗಳು ಮತ್ತು `ಕಾಂಗ್ರೆಸ್ ಮುಕ್ತ ಭಾರತ' ಎಂಬ ಘೋಷಣೆಗಳ ಮೂಲಕ ಆಡಳಿತ ಬದಲಾವಣೆಗೆ ನಿರಂತರ ಕರೆ ನೀಡಿ, ಹೋರಾಟ ನಡೆಸಿ ಅಧಿಕಾರಕ್ಕೆ ಬಂದಿದೆ. ಅಂದು ಅದು ಪ್ರಜಾಪ್ರಭುತ್ವದ ಸೌಂದರ್ಯವಾಗಿದ್ದರೆ, ಇಂದು ವಿರೋಧ ಪಕ್ಷಗಳು ಅದೇ ಮಾರ್ಗವನ್ನು ಅನುಸರಿಸಿದಾಗ ಅದು ದೇಶವಿರೋಧಿ ಕೃತ್ಯವಾಗುವುದು ಹೇಗೆ? 

ಪ್ರಜಾಪ್ರಭುತ್ವವು ರಾಜಪ್ರಭುತ್ವವಲ್ಲ; ಇಲ್ಲಿ ಯಾವುದೇ ರಾಜವಂಶ ಅಥವಾ ರಾಜಕೀಯ ಪಕ್ಷಕ್ಕೆ ಶಾಶ್ವತ ಅಧಿಕಾರದ ಹಕ್ಕಿಲ್ಲ. ಜನರೇ ಪ್ರಭುಗಳು. ಆಡಳಿತದಲ್ಲಿರುವ ಸರ್ಕಾರವನ್ನು ಬದಲಾಯಿಸುವ ಮತ್ತು ಪರ್ಯಾಯ ನಾಯಕತ್ವವನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕು ಮತದಾರನಿಗಿದೆ. ಆಡಳಿತ ಪಕ್ಷವು ವಿರೋಧ ಪಕ್ಷಗಳ ಈ ಯತ್ನವನ್ನು `ಸಂಚು' ಎಂದು ಬಿಂಬಿಸುವ ಬದಲು, ತಮ್ಮ ಆಡಳಿತದ ಲೋಪದೋಷಗಳನ್ನು ತಿದ್ದುಕೊಳ್ಳಲು ಬಳಸಿಕೊಳ್ಳಬೇಕು. ಶಾಂತಿಯುತ ಆಡಳಿತ ಬದಲಾವಣೆಯ ಭರವಸೆಯೇ ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದಿಂದ ರಕ್ಷಿಸುವ ಏಕೈಕ ಕವಚ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI