ಮೋದಿ ಹುಟ್ಟುಹಬ್ಬಕ್ಕೆ ತಿಂಗಳು ಪೂರ್ತಿ ಸಂಭ್ರಮ, ಯುವಕರು ಕೇಳುತ್ತಿರುವುದು ನೇಮಕಾತಿ ಡೇಟು!

 `ರೋಮ್ ಉರಿಯುತ್ತಿದ್ದರೆ, ನೀರೋ ದೊರೆ ಪಿಟೀಲು ಬಾರಿಸುತ್ತಿದ್ದ' ಮಾತು ನೆನಪಾಗುತ್ತಿದೆಯಾ?


ಕೇವಿಯಟ್ * ಬಿವಿಸೀ

ಇಂದು ನಮ್ಮ ದೇಶದ ಪರಿಸ್ಥಿತಿ ಎಂತಹ ವಿಪರ್ಯಾಸಕ್ಕೆ ತಲುಪಿದೆ ಎಂದರೆ, ಇಲ್ಲಿ ಎರಡು ಬೇರೆ ಬೇರೆ ಲೋಕಗಳ ಎರಡು ಕ್ಯಾಲೆಂಡರ್‍ಗಳು ಏಕಕಾಲಕ್ಕೆ ಚಾಲನೆಯಲ್ಲಿವೆ. ಒಂದು ಕಡೆ ಜನರ ವಾಸ್ತವ ಬದುಕಿನ ಕ್ಯಾಲೆಂಡರ್ ಇದೆ. ಅದರಲ್ಲಿ ಬೆಲೆ ಏರಿಕೆಯ ಬರೆ ಶೇಕಡಾ ನಲವತ್ತರಷ್ಟು ಏರಿದೆ, ಉದ್ಯೋಗಾವಕಾಶಗಳು ಶೇಕಡಾ ಅರವತ್ತರಷ್ಟು ಕುಸಿದಿವೆ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ನಡೆಯುವುದಕ್ಕಿಂತ ಮುಂಚೆಯೇ ಪ್ರಶ್ನೆಪತ್ರಿಕೆಗಳು ಲೀಕ್ ಆಗುತ್ತವೆ, ಪ್ರಯಾಣದ ಟೋಲ್ ಮತ್ತು ಪೆಟ್ರೋಲ್ ದರಗಳು ಆಕಾಶ ಮುಟ್ಟಿವೆ, ಕೇವಲ ನೋಟ್‍ಬುಕ್‍ಗಳ ಮೇಲಷ್ಟೇ ಅಲ್ಲದೆ ಬಡವರ ಆರೋಗ್ಯ ವಿಮೆ ಮೇಲೂ ಜಿಎಸ್‍ಟಿ ಕತ್ತರಿ ಬೀಳುತ್ತಿದೆ. ಇತ್ತ ದೆಹಲಿಯ ವಾಯು ಮಾಲಿನ್ಯ ಸೂಚ್ಯಂಕ ಅಂದರೆ ಎಕ್ಯುಐ ಮೂರು ನೂರು ದಾಟಿ ಜನರ ಉಸಿರುಗಟ್ಟಿಸುತ್ತಿದ್ದರೂ, ಸರ್ಕಾರಿ ಹವಾಮಾನ ವರದಿಗಳು ಮಾತ್ರ ಅದನ್ನು `ಹಬ್ಬದ ಮಂಜು' ಎಂದು ಬಿಂಬಿಸುತ್ತವೆ.

ಆದರೆ ಸರ್ಕಾರದ ಬಳಿ ಇರುವುದು ಮತ್ತೊಂದು ಭಿನ್ನವಾದ ಕ್ಯಾಲೆಂಡರ್. ಅದರಲ್ಲಿ ಇರುವುದು ಕೇವಲ ಒಂದೇ ಒಂದು ರೋಮಾಂಚಕ ದಿನಾಂಕ - ಅದುವೇ ನರೇಂದ್ರ ಮೋದಿಯವರ ಹುಟ್ಟುಹಬ್ಬ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿರುವ ಪ್ರಕಾರ, ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ಕೇವಲ ಒಂದು ದಿನವೋ ಅಥವಾ ಒಂದು ವಾರವೋ ಅಲ್ಲ, ಬದಲಿಗೆ  ಇಡೀ ತಿಂಗಳು `ಸೇವಾ ಮಹೋತ್ಸವ'ದ ಹೆಸರಿನಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ದೇಶದ ಜನತೆ ಹತ್ತು ಹಲವು ಬಿಕ್ಕಟ್ಟುಗಳಿಂದ ನರಳುತ್ತಿರುವಾಗ, ಸೇವೆ ಸಲ್ಲಿಸುವುದು ಎಂದರೆ ಹುಟ್ಟುಹಬ್ಬದ ಹೆಸರಿನಲ್ಲಿ ಉತ್ಸವ ಮಾಡುವುದು ಎಂಬ ಅತಿ ಹೊಸ ವ್ಯಾಖ್ಯಾನವನ್ನು ನಮ್ಮ ಆಡಳಿತಗಾರರು ನೀಡುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ನೋಡಿ ಅತಿ ಹೆಚ್ಚು ಗೊಂದಲಕ್ಕೀಡಾಗಿರುವುದು ನಮ್ಮ ದೇಶದ ಇಂದಿನ ಯುವಪಡೆ ಅಂದರೆ ಜೆನ್ ಜಿ ತಲೆಮಾರು. ಇವರೆಂದೂ ರಾಜಕೀಯದ ಗಂಟಲು ಹರಿಯುವವರಲ್ಲ, ಬದಲಿಗೆ ಇನ್‍ಸ್ಟಾಗ್ರಾಮ್ ರೀಲ್ಸ್ ಮಾಡುತ್ತಾ ಐಸ್ಡ್ ಕಾಫಿ ಕುಡಿಯುತ್ತಾ ಕಾಲ ಕಳೆಯುತ್ತಾರೆ ಎಂದೇ ಹಿರಿಯರು ಭಾವಿಸಿದ್ದರು. ಆದರೆ ಇಂದು ಅದೇ ಯುವಕರು ತಮ್ಮ ಕೈಯಲ್ಲಿ ಕಾಫಿ ಕಪ್ ಬದಲು ಭಾರತದ ಸಂವಿಧಾನದ ಪ್ರತಿಯನ್ನು ಹಿಡಿದು ಅಧ್ಯಯನ ಮಾಡುತ್ತಿದ್ದಾರೆ. ಇವರು ಈಗ ಗಡಿಯಾಚೆಗಿನ ವಿಷಯಗಳ ಬಗ್ಗೆ ಪ್ರತಿಭಟಿಸುತ್ತಿಲ್ಲ; ಬದಲಿಗೆ ಪೇಪರ್ ಲೀಕ್ ಹಗರಣ, ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ, ಬಡಕುಟುಂಬಗಳ ಭವಿಷ್ಯವನ್ನು ಬಲಿ ತೆಗೆದುಕೊಳ್ಳುತ್ತಿರುವ ಗುತ್ತಿಗೆ ಉದ್ಯೋಗ ಪದ್ಧತಿ, ಹಾಗೂ ಮೊದಲ ಸಂಬಳ ಕಣ್ಣಿಗೂ ಬೀಳುವ ಮುಂಚೆಯೇ ಕಡಿತವಾಗುವ ಜಿಎಸ್‍ಟಿ ತೆರಿಗೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.

ಇಂದಿನ ಯುವಕರ ಬೇಡಿಕೆಗಳು ಅತಿ ಸರಳ ಮತ್ತು ನೇರವಾಗಿವೆ - ನಮಗೆ ಕೇವಲ ಭಾಷಣದ ಜುಮ್ಲಾ ಬೇಡ, ಬದುಕಿಗೆ ಆಸರೆಯಾಗುವ ಉದ್ಯೋಗ ಕೊಡಿ!

ಆದರೆ ಇದಕ್ಕೆ ಸರ್ಕಾರದ ಕಡೆಯಿಂದ ಸಿಗುವ ಉತ್ತರ ಮಾತ್ರ ಅತ್ಯಂತ ರೋಮಾಂಚಕ ಹಾಗೂ ಉತ್ಸವಮಯವಾಗಿದೆ - ಬನ್ನಿ, ತಿಂಗಳುಪೂರ್ತಿ ಹಬ್ಬ ಆಚರಿಸಿ!

* ವಾರ ಮೊದಲನೆಯದು: ಸ್ವಚ್ಛತಾ ಅಭಿಯಾನ. ಸರ್ಕಾರ ಸ್ವಚ್ಛ ಮಾಡಬೇಕಿದ್ದ ದೇಶದ ಹೊಲಸು ನದಿಗಳನ್ನು ನೀವೇ ಸ್ವಯಂಪ್ರೇರಿತರಾಗಿ ಸ್ವಚ್ಛ ಮಾಡಿ.

* ವಾರ ಎರಡನೆಯದು: ರಕ್ತದಾನ ಶಿಬಿರ. ಜಿಲ್ಲಾಸ್ಪತ್ರೆಗಳಲ್ಲಿ ಸೂಕ್ತ ವೈದ್ಯರು ಮತ್ತು ಮೂಲಸೌಕರ್ಯಗಳೇ ಇಲ್ಲದ ಅಸ್ತವ್ಯಸ್ತ ಆರೋಗ್ಯ ವ್ಯವಸ್ಥೆಗಾಗಿ ನಿಮ್ಮ ದೇಹದ ರಕ್ತವನ್ನೇ ದಾನ ಮಾಡಿ.

* ವಾರ ಮೂರನೆಯದು: ಮೋದಿ ಅವರ ಜೀವನ ಚರಿತ್ರೆಯ ಫೆÇೀಟೋ ಪ್ರದರ್ಶನ. ಅವರ ಭವ್ಯ ಸಾಧನೆಯ ಚಿತ್ರಗಳನ್ನು ನೋಡಿ ನಿಮ್ಮ ನಿರುದ್ಯೋಗದ ಕರಾಳ ನೋವನ್ನು ಶಾಶ್ವತವಾಗಿ ಮರೆತುಬಿಡಿ.

* ವಾರ ನಾಲ್ಕನೆಯದು: ಪ್ರತಿಯೊಂದು ಜಿಲ್ಲೆಯಲ್ಲಿ ಬೃಹತ್ ಕೇಕ್ ಕಟಿಂಗ್. ನಿಮ್ಮ ಮಾಸಿಕ ಇಎಂಐ ಕಂತುಗಳು ನಿಮ್ಮ ಬದುಕನ್ನು ಕತ್ತರಿಸಿ ಹಾಕುತ್ತಿದ್ದರೂ ನೀವು ಚಪ್ಪಾಳೆ ತಟ್ಟಿ ಖುಷಿಪಡಿ!

ಈ ಬೃಹತ್ ಆಚರಣೆಯ ರಾಜಕೀಯ ಚತುರತೆ ಏನೆಂದರೆ; ತಿಂಗಳು ಪೂರ್ತಿ ಹಬ್ಬ ಮತ್ತು ಉತ್ಸವಗಳನ್ನು ಮಾಡಿದರೆ, ತಿಂಗಳು ಪೂರ್ತಿ ಜನರ ಗಂಭೀರ ಪ್ರಶ್ನೆಗಳಿಗೆ ಉತ್ತರಿಸುವ ಪ್ರಮೇಯವೇ ಬರುವುದಿಲ್ಲ. ದೇಶದಲ್ಲಿ ತೀವ್ರ ಹಣದುಬ್ಬರವೇ? ಬನ್ನಿ ಸಂಭ್ರಮಿಸೋಣ! ನಿರುದ್ಯೋಗ ದೇಶಾದ್ಯಂತ ತಾಂಡವವಾಡುತ್ತಿದೆಯೇ? ಮತ್ತಷ್ಟು ಜೋರಾಗಿ ಉತ್ಸವ ಮಾಡೋಣ! ಮಣಿಪುರ ಅಥವಾ ಲಡಾಖ್‍ನಂತಹ ಸೂಕ್ಷ್ಮ ಹಾಗೂ ಆತಂಕಕಾರಿ ವಿಷಯಗಳೇ? ಇನ್ನಷ್ಟು ದೊಡ್ಡದಾಗಿ ಧ್ವನಿವರ್ಧಕ ಹಾಕಿ ಸಂಭ್ರಮಿಸಿ!

ಹಳೆಯ ಕಾಲದ ರಾಜಕೀಯ ತಂತ್ರವೆಂದರೆ ಆಡಳಲಿತಗಾರರು ನೆರೆ ದೇಶದ ಹೆಸರು ಹೇಳಿ ಜನರ ಗಮನವನ್ನು ಬೇರೆಡೆ ಸೆಳೆಯುವುದು. ಆದರೆ ಹೊಸ ಕಾಲದ ತಂತ್ರವೆಂದರೆ ಪೇಸ್ಟ್ರಿ ಕೇಕ್ ಹಾಗೂ ಉತ್ಸವಗಳ ಹೆಸರಿನಲ್ಲಿ ಜನರ ಗಮನವನ್ನು ದಿಕ್ಕುತಪ್ಪಿಸುವುದು.

ಇಂದಿನ ಜೆನ್ ಜಿ ಯುವಕರು ಈ ಸಂಪೂರ್ಣ ಪ್ರಕ್ರಿಯೆಗೆ ಒಂದು ನಿಖರವಾದ ಹೆಸರನ್ನಿಟ್ಟಿದ್ದಾರೆ - 'ಗ್ಯಾಸ್‍ಲೈಟಿಂಗ್'. ಆದರೆ ಸರ್ಕಾರ ಈ ಯುವಕರಿಗೆ ಮತ್ತೊಂದು ಬಿರುದು ನೀಡಿದೆ - 'ದೇಶದ್ರೋಹಿಗಳು'.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI