ಅಧಿಕಾರದಲ್ಲಿದ್ದಾಗ ಅರಾಜಕತೆ, ವಿರೋಧದಲ್ಲಿದ್ದಾಗ ಹಕ್ಕು - ಬಿಜೆಪಿ ಪ್ರತಿಭಟನೆಯ ಇತಿಹಾಸದ ಕನ್ನಡಿ
ಅಭಿಮತ
* ಬಿವಿಸೀ
ಇಂಡಿಯಾ ಮೈತ್ರಿಕೂಟ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಸಂಚು ಎಂದು ಭಾರತೀಯ ಜನತಾ ಪಕ್ಷ ಆರೋಪಿಸುತ್ತಿದೆ. ಈ ಪ್ರತಿಭಟನೆಗಳು ಅಧಿಕಾರ ಹಿಡಿಯುವ ಹತಾಶ ಪ್ರಯತ್ನ ಎಂದು ಬಿಜೆಪಿ ವಕ್ತಾರರು ಹೇಳುತ್ತಿದ್ದಾರೆ. ಆದರೆ ಸ್ವಾತಂತ್ರ್ಯದ ನಂತರದ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಂದು ಅರಾಜಕತೆ ಎಂದು ಕರೆಯಲಾಗುತ್ತಿರುವ ಪ್ರತಿಭಟನೆಯ ಸಂಸ್ಕøತಿಯನ್ನು ಈ ದೇಶದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿ ಅಧಿಕಾರಕ್ಕೆ ಬಂದ ಪಕ್ಷವೇ ಬಿಜೆಪಿ ಎಂಬುದು ಸ್ಪಷ್ಟವಾಗುತ್ತದೆ.
ಬಿಜೆಪಿಯ ಮೂಲವಾದ ಭಾರತೀಯ ಜನಸಂಘದ ಮೊದಲ ದೊಡ್ಡ ಪ್ರತಿಭಟನೆಯೇ ಸರ್ಕಾರದ ಆದೇಶದ ವಿರುದ್ಧದ ಬಂಡಾಯವಾಗಿತ್ತು. 1953ರಲ್ಲಿ ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರಕ್ಕೆ ಪ್ರತ್ಯೇಕ ಪರವಾನಗಿ ವ್ಯವಸ್ಥೆ ಮತ್ತು 370ನೇ ವಿಧಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಅನುಮತಿ ಇಲ್ಲದೆ ಕಾಶ್ಮೀರ ಪ್ರವೇಶಿಸಿ ಬಂಧನಕ್ಕೊಳಗಾದರು. ಅದು ಸರ್ಕಾರದ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ನೇರ ಕ್ರಮವಾಗಿತ್ತು.
ನಂತರ ತುರ್ತು ಪರಿಸ್ಥಿತಿಯು ಬಿಜೆಪಿ ನಾಯಕರಿಗೆ ಪ್ರತಿಭಟನೆಯೇ ರಾಜಕೀಯ ಪಾಠಶಾಲೆಯಾಯಿತು. 1975ರಿಂದ 1977ರವರೆಗೆ ಇಂದಿರಾ ಗಾಂಧಿ ಸರ್ಕಾರ ಜಾರಿ ಮಾಡಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ನಾನಾಜಿ ದೇಶಮುಖ್ ಅವರಂತಹ ನಾಯಕರು ಭೂಗತ ಹೋರಾಟ ನಡೆಸಿದರು. ರಸ್ತೆ ತಡೆ, ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ, ಪೆÇಲೀಸರ ಕೈಗೆ ಸಿಕ್ಕಿ ಜೈಲಿಗೆ ಹೋಗುವುದು ಅವರ ಮತ್ತು ಕಾರ್ಯಕರ್ತರ ನಿತ್ಯದ ಕೆಲಸವಾಗಿತ್ತು. ಆಗ ಕಾಂಗ್ರೆಸ್ ಸರ್ಕಾರ ಅವರನ್ನು `ಅರಾಜಕತಾವಾದಿಗಳು' ಎಂದು ಕರೆದಿತ್ತು. ಆದರೆ ಇಂದು ಬಿಜೆಪಿ ಅದನ್ನೇ ಪ್ರಜಾಪ್ರಭುತ್ವದ `ಎರಡನೇ ಸ್ವಾತಂತ್ರ್ಯ ಸಂಗ್ರಾಮ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ.
ಎಂಭತ್ತರ ಮತ್ತು ತೊಂಬತ್ತರ ದಶಕದಲ್ಲಿ ಪ್ರತಿಭಟನೆಯ ಸ್ವರೂಪ ಇನ್ನಷ್ಟು ತೀವ್ರವಾಯಿತು. 1990ರಲ್ಲಿ ಎಲ್ ಕೆ ಅಡ್ವಾಣಿ ಅವರ ಸೋಮನಾಥದಿಂದ ಅಯೋಧ್ಯೆಗೆ ನಡೆದ ರಥಯಾತ್ರೆ ದೇಶದ ಹೆದ್ದಾರಿಗಳನ್ನೇ ಸ್ಥಬ್ಧಗೊಳಿಸಿತು. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಸಾವಿರಾರು ಕಾರ್ಯಕರ್ತರು ಬಂಧನಕ್ಕೊಳಗಾದರು. ಬೋಫೆÇೀರ್ಸ್ ಹಗರಣ, ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸಿದ ಭಾರತ್ ಬಂದ್ಗಳಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳೇ ನಿಂತು ಹೋಗುತ್ತಿದ್ದವು.
ಇತ್ತೀಚಿನ ಇತಿಹಾಸವೆಂದರೆ ಯುಪಿಎ ಸರ್ಕಾರದ ಅವಧಿ. 2004ರಿಂದ 2014ರವರೆಗೆ ಲೋಕಸಭೆಯಲ್ಲಿ ಪ್ರತಿಪಕ್ಷದಲ್ಲಿದ್ದ ಬಿಜೆಪಿ ಸಂಸತ್ತನ್ನು ನಡೆಸಲು ಬಿಡದಿರುವುದನ್ನೇ ತಂತ್ರವನ್ನಾಗಿ ಮಾಡಿಕೊಂಡಿತ್ತು. ಅಂದಿನ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು 2011ರಲ್ಲಿ ಹೇಳಿದ ಮಾತು ಇಂದಿಗೂ ದಾಖಲೆಯಲ್ಲಿದೆ. ``ಸರ್ಕಾರ ಕೇಳದಿದ್ದಾಗ ಸಂಸತ್ತನ್ನು ಅಡ್ಡಿಪಡಿಸುವುದೂ ಪ್ರಜಾಪ್ರಭುತ್ವದ ಒಂದು ಸಾಧನ'' ಎಂದು ಅವರು ಹೇಳಿದ್ದರು. ಅರುಣ್ ಜೇಟ್ಲಿ ಅವರು ಕೂಡ ಇದೇ ಮಾತನ್ನು ಸಮರ್ಥಿಸಿದ್ದರು.
ಕಾಮನ್ವೆಲ್ತ್ ಹಗರಣ, 2ಜಿ ಸ್ಪೆಕ್ಟ್ರಮ್ ಹಗರಣ, ಕಲ್ಲಿದ್ದಲು ಹಂಚಿಕೆ ಹಗರಣದ ಸಂದರ್ಭದಲ್ಲಿ ಬಿಜೆಪಿ ಸಂಸದರು ಪ್ರತಿದಿನ ಸಂಸತ್ತಿನ ಬಾವಿಗಿಳಿದು ಘೋಷಣೆ ಕೂಗಿ ಸದನವನ್ನು ಮುಂದೂಡುವಂತೆ ಮಾಡುತ್ತಿದ್ದರು. ಒಂದು ಅಧಿವೇಶನದಲ್ಲಿ 60 ದಿನಗಳ ಕಾಲ ಸಂಸತ್ತು ಸರಿಯಾಗಿ ನಡೆಯಲೇ ಇಲ್ಲ. ಸಂಸತ್ತಿನ ಹೊರಗೆ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ಮುತ್ತಿಗೆ, ಎಲ್ಲ ರಾಜ್ಯಗಳಲ್ಲಿ ರೈಲು ತಡೆ, ರಸ್ತೆ ತಡೆ ನಡೆಯಿತು. ಎಫ್ಡಿಐ, ಡೀಸೆಲ್ ಬೆಲೆ ಏರಿಕೆ ವಿರುದ್ಧ 2012ರಲ್ಲಿ ನಡೆದ ಭಾರತ್ ಬಂದ್ನಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಟೈರ್ ಸುಟ್ಟು ಪ್ರತಿಭಟಿಸಿದರು.
ಈಗಿನ ಚರ್ಚೆ ಏನೆಂದರೆ ಬಿಜೆಪಿ ಆಗ ಸರ್ಕಾರದ ವಿರುದ್ಧ ಹೋರಾಡಿತ್ತು, ಈಗ ವಿರೋಧ ಪಕ್ಷಗಳು ಚುನಾವಣಾ ಆಯೋಗದಂತಹ ತಟಸ್ಥ ಸಂಸ್ಥೆಯ ವಿರುದ್ಧ ಹೋರಾಡುತ್ತಿವೆ ಎಂಬುದು. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು ಬೇರೆ, ರೆಫರಿಯ ವಿರುದ್ಧವೇ ಪ್ರತಿಭಟನೆ ಮಾಡುವುದು ಬೇರೆ ಎಂದು ಬಿಜೆಪಿ ವಾದಿಸುತ್ತದೆ.
ಆದರೆ ವಿರೋಧ ಪಕ್ಷಗಳ ವಾದದ ಪ್ರಕಾರ, ಆ ರೆಫರಿಯೇ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ಬಂದಾಗ ಏನು ಮಾಡಬೇಕು? ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳ ತೆಗೆದು ಹಾಕುವಿಕೆ, ಕೊನೆಯ ಗಂಟೆಯಲ್ಲಿ ಮತದಾನದ ಪ್ರಮಾಣದಲ್ಲಿ ಏರಿಕೆ, ಇದಕ್ಕೆ ದಾಖಲೆ ಸಮೇತ ಉತ್ತರ ನೀಡದಿರುವುದು ಇವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎಂದಿಗೂ ಅರಾಜಕತೆ ಅಲ್ಲ. ಅದು ಅಧಿಕಾರದಲ್ಲಿರುವವರು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಅದರ ವ್ಯಾಖ್ಯಾನ ಬದಲಾಗುತ್ತದೆ. ನಿನ್ನೆ ತಮ್ಮ ಪ್ರತಿಭಟನೆಯನ್ನು `ದೇಶಭಕ್ತಿ' ಎಂದು ಕರೆದವರು ಇಂದು ಇನ್ನೊಬ್ಬರ ಪ್ರತಿಭಟನೆಯನ್ನು `ದೇಶದ್ರೋಹ' ಎಂದು ಕರೆಯುವುದು ರಾಜಕೀಯದ ಹಳೆಯ ಆಟವಾಗಿದೆ.
Comments
Post a Comment