ಅಮೆರಿಕದ ಅಹಂಕಾರದೆದುರು ಮಂಡಿಯೂರಿದ ವಿಶ್ವಗುರು ಭಾರತ

 ಅಮೆರಿಕದ ನಿರಂತರ ಆರ್ಥಿಕ ಬೆದರಿಕೆ ಹಾಗೂ ತಾರತಮ್ಯದ ಸುಂಕ ನೀತಿಗಳ ಮುಂದೆ ಭಾರತ ತನ್ನ ಸ್ವಾಭಿಮಾನಿ ವಿದೇಶಾಂಗ ನೀತಿಯನ್ನು ಬದಿಗೊತ್ತಿ, ವಾಷಿಂಗ್ಟನ್‍ನ ಪ್ರತಿಯೊಂದು ಹಿತಾಸಕ್ತಿಗೆ ಸಂಪೂರ್ಣವಾಗಿ ಶರಣಾಗುತ್ತಿರುವುದು ದೇಶದ ಆರ್ಥಿಕ ಸಾರ್ವಭೌಮತ್ವಕ್ಕೆ ಬಿದ್ದ ಅತಿದೊಡ್ಡ ಪೆಟ್ಟಾಗಿದೆ.

.............


ಒಂಟಿ ದನಿ * ಬಿವಿಸೀ


ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾರತ, ಅಮೆರಿಕದ ರಾಜಕೀಯ ಮತ್ತು ಆರ್ಥಿಕ ಬೆದರಿಕೆಗಳಿಗೆ ಸಂಪೂರ್ಣವಾಗಿ ಮಣಿಯುತ್ತಿದೆಯೇ ಎಂಬ ಸಂಶಯ ಇಂದು ಸಾರ್ವಜನಿಕರಲ್ಲಿ ದಟ್ಟವಾಗಿದೆ. ಅಮೆರಿಕದ ಟ್ರಂಪ್ ಆಡಳಿತವು ದಿನಕ್ಕೊಂದು ವರಸೆ ತೆಗೆದು ಭಾರತದ ಮೇಲೆ ಅತಿಯಾದ ಸುಂಕ ಹೇರುವುದು, ಹೆಚ್-1ಬಿ ವೀಸಾ ವಿಚಾರದಲ್ಲಿ ಭಾರತೀಯ ಉದ್ಯೋಗಿಗಳನ್ನು ಕೀಳಾಗಿ ಕಾಣುವುದು ಮತ್ತು ನಿರಂತರ ಆರ್ಥಿಕ ಬೆದರಿಕೆ ಒಡ್ಡುವುದನ್ನು ಅಭ್ಯಾಸ ಮಾಡಿಕೊಂಡಿದೆ. ಆದರೆ, ಕೇಂದ್ರದ ಮೋದಿ ಸರ್ಕಾರ ಮಾತ್ರ ಈ ಎಲ್ಲಾ ಅಪಮಾನಗಳನ್ನು ಮೌನವಾಗಿ ಸಹಿಸಿಕೊಳ್ಳುತ್ತಾ ಅಮೆರಿಕದ ಪ್ರತಿ ಆಜ್ಞೆಗೂ ಶಿರಬಾಗುತ್ತಿರುವುದು ಅತೀವ ವಿಷಾದನೀಯ. ಇದಕ್ಕೊಂದು ಉದಾಹರಣೆ ಎಂದರೆ ಜಾಮ್‍ನಗರದ ರಿಫೈನರಿಯಿಂದ ಸಂಸ್ಕರಿಸಿದ ತೈಲವನ್ನು ಅಮೆರಿಕದ ಆಜ್ಞೆಯಂತೆ ಪೂರೈಸಲು ಒಪ್ಪಿಕೊಂಡಿರುವುದು. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಶೇಕಡಾ 100ರಷ್ಟು ದಂಡನಾತ್ಮಕ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದ ಅದೇ ಅಮೆರಿಕ, ತನ್ನ ದೇಶದಲ್ಲಿ ಇಂಧನ ಅಭಾವ ಮತ್ತು ತೈಲ ಅಭಾವ ಸೃಷ್ಟಿಯಾದ ತಕ್ಷಣವೇ ತನ್ನ ಹಳೆಯ ನಿಲುವನ್ನು ಬದಿಗೊತ್ತಿದೆ. ತನಗೆ ಅನುಕೂಲ ಬೇಕಾದಾಗ ರಷ್ಯಾದ ತೈಲವನ್ನು ಸಂಸ್ಕರಿಸಿ ತನಗೆ ತಲುಪಿಸುವಂತೆ ಭಾರತಕ್ಕೆ ಆದೇಶ ನೀಡುತ್ತದೆ, ಮತ್ತು ಸಾರ್ವಭೌಮತ್ವದ ಮಾತುಗಳನ್ನಾಡುವ ಭಾರತ ಸರ್ಕಾರ ಯಾವುದೇ ಪ್ರತಿರೋಧವಿಲ್ಲದೆ ದಾಸ್ಯದ ರೀತಿಯಲ್ಲಿ ಅದನ್ನು ಪಾಲಿಸಲು ಮುಂದಾಗುತ್ತದೆ.   ಅಮೆರಿಕದ ಉದ್ಯೋಗಿ ನೀತಿಗಳಿಂದಾಗಿ ಅಲ್ಲಿ ಸಾವಿರಾರು ಭಾರತೀಯ ತಂತ್ರಜ್ಞರು ದಿನನಿತ್ಯ ಕಿರುಕುಳ ಮತ್ತು ತಾರತಮ್ಯ ಎದುರಿಸುತ್ತಿದ್ದಾರೆ. ಇತ್ತ ಭಾರತೀಯ ಸರಕುಗಳ ಮೇಲೆ ಶೇಕಡಾವಾರು ಆಧಾರದಲ್ಲಿ ಅಸಮಾನ ಸುಂಕ ವಿಧಿಸಿ ದೇಶದ ರಫ್ತುದಾರರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ. ಆದಾಗ್ಯೂ, "ಬಲವಾದ ಮುಖಂಡತ್ವ" ಮತ್ತು "ಸ್ವಾಭಿಮಾನಿ ವಿದೇಶಾಂಗ ನೀತಿ" ಎಂದು ಬೊಬ್ಬೆ ಹೊಡೆಯುವ ಕೇಂದ್ರ ಸರ್ಕಾರ, ವಾಷಿಂಗ್ಟನ್‍ನ ಪ್ರತಿಯೊಂದು ಹಿತಾಸಕ್ತಿಗೆ ಅನುಗುಣವಾಗಿ ತನ್ನ ನಿಲುವುಗಳನ್ನು ಬದಲಾಯಿಸುತ್ತಿದೆ. ವಿದೇಶಾಂಗ ನೀತಿಯಲ್ಲಿ ಸ್ವತಂತ್ರ ನಿರ್ಧಾರ ತಗೆದುಕೊಳ್ಳಲಾಗದೆ, ತನ್ನ ಇಂಧನ ಭದ್ರತೆ ಮತ್ತು ರಾಷ್ಟ್ರೀಯ ಗೌರವವನ್ನು ಅಮೆರಿಕದ ದಾಳವಾಗಲು ಬಿಟ್ಟಿರುವುದು ಭಾರತೀಯರ ಸ್ವಾಭಿಮಾನಕ್ಕೆ ಬಿದ್ದ ದೊಡ್ಡ ಪೆಟ್ಟು. ಅಮೆರಿಕದ ಪ್ರತಿಯೊಂದು ದಂಡನೆ ಮತ್ತು ಶರತ್ತಿಗೆ ಬೆನ್ನುಬಾಗಿಸುವ ಬದಲು, ಭಾರತವು ತನ್ನ ಕಠಿಣ ಆರ್ಥಿಕ ಸಾರ್ವಭೌಮತ್ವವನ್ನು ಪ್ರದರ್ಶಿಸಬೇಕಿತ್ತು. ಸೂಪರ್ ಪವರ್ ರಾಷ್ಟ್ರದ ಮುಂದೆ ಎರಡನೇ ದರ್ಜೆಯ ಅನುಸರಣಾ ದೇಶದಂತೆ ನಡೆದುಕೊಳ್ಳುವುದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆಯಲ್ಲ. ಸರ್ಕಾರ ತಕ್ಷಣವೇ ಈ ಶರಣಾಗತಿಯ ನೀತಿಯನ್ನು ಕೈಬಿಟ್ಟು, ರಾಷ್ಟ್ರೀಯ ಹಿತಾಸಕ್ತಿ ಮತ್ತು ಗೌರವವನ್ನು ಎತ್ತಿಹಿಡಿಯಬೇಕಿದೆ.


Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI