ಸಬ್ ಜುಡೀಸ್ ಸೌಜನ್ಯ ಪ್ರಕರಣದಲ್ಲಿ ಅನಗತ್ಯ ಮೂಗು ತೂರಿಸಿದ ವಕೀಲ ಅಮೃತೇಶ್‍ರಿಂದ ಕೋರ್ಟ್ ನಿಂದನೆ

 ವಿಶೇಷ ಸಂಪಾದಕೀಯ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ನಡೆಸಲು ಸುಪ್ರೀಂ ಕೋರ್ಟ್ ಸ್ವತಃ ವಿಶೇಷ ತನಿಖಾ ತಂಡಕ್ಕೆ ಆದೇಶಿಸಿದ್ದು, ಪ್ರಸ್ತುತ ಈ ವಿಷಯವು ಅತ್ಯುನ್ನತ ನ್ಯಾಯಾಲಯದ ವ್ಯಾಪ್ತಿಯಲ್ಲಿ ಅಂದರೆ `ಸಬ್ ಜುಡೀಸ್' ಹಂತದಲ್ಲಿದೆ. ದೇಶದ ಅತ್ಯುನ್ನತ ನ್ಯಾಯಾಲಯವೇ ವಿಚಾರಣೆಯನ್ನು ಕೈಗೆತ್ತಿಕೊಂಡು ತನಿಖೆಗೆ ಆದೇಶಿಸಿರುವಾಗ, ಹೈಕೋರ್ಟ್ ವಕೀಲ ಅಮೃತೇಶ್ ಅವರು ಮಾಧ್ಯಮಗಳ ಮುಂದೆ ನಿಂತು ಸಂತ್ರಸ್ತೆ ಸೌಜನ್ಯಳ ಪೆÇೀಷಕರ ಮೇಲೆ ಕಳಂಕ ಹೊರಿಸುವ ಹಾಗೂ ನಿಂದನೀಯ ಆರೋಪ ಮಾಡುವ ಪ್ರವೃತ್ತಿ ನ್ಯಾಯಾಂಗ ನಿಂದನೆ  ಮತ್ತು ಸಮಾಜಕ್ಕೆ ಎಸಗಿದ ದ್ರೋಹವಾಗಿದೆ.

ಕಾನೂನಿನ ಚೌಕಟ್ಟಿನಲ್ಲಿ ತನಿಖಾ ಸಂಸ್ಥೆಗಳು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿರುವ ಈ ನಿರ್ಣಾಯಕ ಘಟ್ಟದಲ್ಲಿ, ವಕೀಲರೊಬ್ಬರು ಸುದ್ದಿಗೋಷ್ಠಿ ನಡೆಸಿ, "ಸಂತ್ರಸ್ತೆಯ ತಂದೆ-ತಾಯಿ ಈ ಪ್ರಕರಣವನ್ನು ಇಟ್ಟುಕೊಂಡು ಹಣ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಗಂಭೀರ ದಾಳಿಯಾಗಿದೆ. ಸಂತ್ರಸ್ತ ಕುಟುಂಬವನ್ನು ಸಾರ್ವಜನಿಕವಾಗಿ ತೇಜೋವಧೆ ಮಾಡುವುದು, ತನಿಖೆಯ ದಿಕ್ಕನ್ನು ತಪ್ಪಿಸುವ ಮತ್ತು ನ್ಯಾಯಾಲಯದ ಅಭಿಪ್ರಾಯ ರೂಪಿಸುವ ಅಸಂವಿಧಾನಿಕ ಪ್ರಯತ್ನವಲ್ಲದೆ ಮತ್ತೇನಲ್ಲ.

ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಸೂಕ್ಷ್ಮ ವಿಚಾರದ ಕುರಿತು ಮಾಧ್ಯಮಗಳ ಮುಂದೆ ಅರೆಬರೆ ಆಡಿಯೋ ತುಣುಕುಗಳನ್ನು ಹರಿಬಿಟ್ಟು  ಸಾಕ್ಷ್ಯಗಳೆಂದು ಬಿಂಬಿಸುವುದು, ನ್ಯಾಯಸಮ್ಮತ ತನಿಖಾ ಪ್ರಕ್ರಿಯೆಗೆ ಧಕ್ಕೆ ತರುತ್ತದೆ. ನ್ಯಾಯಾಂಗ ಧರ್ಮ ಹಾಗೂ ವಕೀಲರ ವೃತ್ತಿಪರ ನಡಾವಳಿಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ಕೇವಲ ಪ್ರಚಾರಕ್ಕಾಗಿ ಅಥವಾ ಯಾವುದೋ ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿ ಸಾರ್ವಜನಿಕವಾಗಿ ನಿರೂಪಣೆ ಸೃಷ್ಟಿಸಲು ಹೊರಟಿರುವ ಅಮೃತೇಶ್ ಅವರ ನಡೆ ಅತ್ಯಂತ ಖಂಡನೀಯ.

ಸುಪ್ರೀಂ ಕೋರ್ಟ್ ಆದೇಶಿಸಿದ ತನಿಖೆಯನ್ನು ವಿಫಲಗೊಳಿಸಲು ಹಾಗೂ ನ್ಯಾಯಕ್ಕಾಗಿ ದಶಕಗಳಿಂದ ಹೋರಾಡುತ್ತಿರುವ ನೊಂದ ಕುಟುಂಬದ ಮಾನಸಿಕ ಧೈರ್ಯವನ್ನು ಕುಸಿಯುವಂತೆ ಮಾಡಲು ಯತ್ನಿಸುತ್ತಿರುವ ಇಂತಹ ಹೇಳಿಕೆಗಳನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕಿದೆ. ಉನ್ನತ ನ್ಯಾಯಾಲಯದ ಕಣ್ಣಳತೆಯಲ್ಲಿ ತನಿಖೆ ನಡೆಯುತ್ತಿರುವಾಗ, ಮಾಧ್ಯಮಗಳ ಮೂಲಕ `ಮಿಡಿಯಾ ಟ್ರಯಲ್' ನಡೆಸಲು ಯತ್ನಿಸಿದ ವಕೀಲ ಅಮೃತೇಶ್ ಅವರ ವಿರುದ್ಧ `ನ್ಯಾಯಾಂಗ ನಿಂದನೆ' ಪ್ರಕರಣ ದಾಖಲಿಸಿ, ಅವರ ವಕೀಲಿಕೆ ಪರವಾನಗಿಯ ಮೇಲೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI