ನಂದಿನಿ ದರ ಏರಿಕೆಯ ಜನವಿರೋಧಿ ನಿರ್ಧಾರ
ಹಾಲು ಕುಡಿಯುವ ಬಾಯಿಗೆ ಮಣ್ಣು
..............
* ವಿಶೇಷ ಸಂಪಾದಕೀಯ
ಕರ್ನಾಟಕ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ `ನಂದಿನಿ' ಹಾಲಿನ ದರವನ್ನು ಲೀಟರ್ಗೆ ರೂ ಎಂಟು ರೂಪಾಯಿಗಳಷ್ಟು ಏರಿಕೆ ಮಾಡಲು ಕೈಗೊಂಡಿರುವ ತೀರ್ಮಾನವು ಸಾರ್ವಜನಿಕರ ಮೇಲಿನ ನೇರ ಆರ್ಥಿಕ ದಾಳಿಯಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲೂ ಅತ್ಯಂತ ಹೆಚ್ಚು ಮಾರಾಟವಾಗುವ ಮತ್ತು ಬಡ, ಮಧ್ಯಮ ವರ್ಗದ ಮನೆಗಳ ನಿತ್ಯದ ಅಗತ್ಯವಾಗಿರುವ ಹಾಲಿನ ಮೇಲಿನ ಈ ಪ್ರಮಾಣದ ಬೆಲೆ ಏರಿಕೆಯು ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದಷ್ಟು ಭೀಕರವಾದದ್ದಾಗಿದೆ. ಸಾಂಪ್ರದಾಯಿಕವಾಗಿ ಲೀಟರ್ಗೆ ಒಂದು ಅಥವಾ ಎರಡು ರೂಪಾಯಿ ಹೆಚ್ಚಿಸುತ್ತಿದ್ದ ಸರ್ಕಾರ, ಒಂದೇ ಬಾರಿಗೆ ಎಂಟು ರೂಪಾಯಿ ಏರಿಸುವ ಮೂಲಕ ನಗರಾಧರಿತ ಶ್ರಮಿಕ ಮತ್ತು ಮಧ್ಯಮ ವರ್ಗದ ಗ್ರಾಹಕರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ.
ಸಾಮಾನ್ಯವಾಗಿ ಬೆಲೆ ಏರಿಕೆಯಾದಾಗ ಉದ್ಯಮಗಳು ಅಥವಾ ಸರ್ಕಾರಗಳು ಕೊಡುವ ನೆಪ ಎಂದರೆ ರೈತರ ಹಿತರಕ್ಷಣೆ. ಆದರೆ, ಈ ಭಾರಿ ಪ್ರಮಾಣದ ದರ ಏರಿಕೆಯಿಂದ ಬರುವ ಹಣ ನಿಜವಾಗಿಯೂ ಹಾಲಿನ ಉತ್ಪಾದಕರಾದ ಬಡ ರೈತರ ಜೇಬಿಗೆ ತಲುಪುತ್ತಿದೆಯೇ ಅಥವಾ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ದುರಾಡಳಿತ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಸರಿದೂಗಿಸಲು ಬಳಸಲಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಹೈನುಗಾರಿಕೆಯನ್ನು ನೆಪವಾಗಿಟ್ಟುಕೊಂಡು ಗ್ರಾಹಕರ ಜೇಬಿಗೆ ಕನ್ನ ಹಾಕುವುದು ಯಾವುದೇ ಸರ್ಕಾರಕ್ಕೆ ಶೋಭೆ ತರುವಂತಹುದಲ್ಲ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ ಮತ್ತು ದುಬಾರಿ ಜೀವನ ವೆಚ್ಚದಿಂದ ತತ್ತರಿಸಿರುವ ನಗರ ಹಾಗೂ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಈ ಹಾಲಿನ ದರ ಏರಿಕೆ ಚೇಳು ಕಡಿದಂತಾಗಿದೆ. ಹಾಲಿನ ದರ ಹೆಚ್ಚಾಗುತ್ತಿದ್ದಂತೆ, ಅದರ ಸರಪಳಿ ಪರಿಣಾಮವಾಗಿ ಹೋಟೆಲ್ ತಿಂಡಿ, ಟೀ, ಕಾಫಿ, ಮೊಸರು ಮತ್ತು ಸಿಹಿ ತಿಂಡಿಗಳ ಬೆಲೆಯೂ ಗಗನಕ್ಕೇರಲಿದೆ. ಇದರಿಂದಾಗಿ ದಿನಗೂಲಿ ನೌಕರರು, ಕೆಳ ಮಧ್ಯಮ ವರ್ಗದ ಕುಟುಂಬಗಳು ಮತ್ತು ಪುಟ್ಟ ಮಕ್ಕಳ ಪೌಷ್ಟಿಕತೆಗೆ ತೀವ್ರ ಹೊಡೆತ ಬೀಳಲಿದೆ.
ಜನರ ತಟ್ಟೆಯಲ್ಲಿರುವ ಆಹಾರದ ಮೂಲಭೂತ ಅಗತ್ಯವಾದ ಹಾಲಿನ ಮೇಲೂ ಇಂತಹ ಕರುಣೆ ಇಲ್ಲದ ದರ ಭಾರ ಹಾಕುವುದು ಸರ್ಕಾರದ ಜನವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ರಾಜ್ಯಾದ್ಯಂತ ಸಾರ್ವಜನಿಕರು, ವಿವಿಧ ಸಂಘಟನೆಗಳು ಮತ್ತು ಗ್ರಾಹಕರ ಹಕ್ಕುಗಳ ಹೋರಾಟಗಾರರು ಸರ್ಕಾರದ ಈ ಬೇಜವಾಬ್ದಾರಿ ನಿರ್ಧಾರದ ವಿರುದ್ಧ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರವು ತಕ್ಷಣವೇ ತನ್ನ ಹಟಮಾರಿತನವನ್ನು ಬಿಟ್ಟು, ಕಷ್ಟದಲ್ಲಿರುವ ನಗರಾಧರಿತ ಹಾಗೂ ಗ್ರಾಮೀಣ ಗ್ರಾಹಕರ ಸ್ಥಿತಿಯನ್ನು ಅನುಕಂಪದಿಂದ ಪರಿಶೀಲಿಸಬೇಕು. ಯಾವುದೇ ಅಸಮರ್ಥನೀಯ ಸಮರ್ಥನೆಗಳನ್ನು ನೀಡದೆ, ಈ ಅಭೂತಪೂರ್ವ ಮತ್ತು ರಕ್ಕಸ ಬೆಲೆ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದಲ್ಲಿ, ಬೆಲೆ ಏರಿಕೆಯ ವಿರುದ್ಧ ಸಾರ್ವಜನಿಕರಲ್ಲಿ ಕುದಿಯುತ್ತಿರುವ ಈ ಆಕ್ರೋಶವು ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ತೀವ್ರ ರಾಜಕೀಯ ಮುಖಭಂಗ ತರುವುದು ನಿಶ್ಚಿತ. ಈ ಜನಾಕ್ರೋಶವನ್ನು ಗಂಭೀರವಾಗಿ ಪರಿಗಣಿಸಿ, ಹಾಲಿನ ದರವನ್ನು ಕೂಡಲೇ ಇಳಿಸಬೇಕಿದೆ.
Comments
Post a Comment