ಆರೆಸ್ಸೆಸ್ ಬಗ್ಗೆ ತಪ್ಪು ಕಲ್ಪನೆಯಲ್ಲ, ನಂಬಲಾರದ ಸತ್ಯಗಳಿವೆ

 * ಬಿವಿಸೀ

ಆರೆಸ್ಸೆಸ್ ಬಗ್ಗೆ ತಪ್ಪು ನಿರೂಪಣೆ ಇದೆ ಎಂಬ ವಾದವನ್ನು ಮಾಡಲಾಗುತ್ತಿದೆ. ಆದರೆ ಸಾರ್ವಜನಿಕ ದಾಖಲೆಗಳಲ್ಲಿ ಇರುವ ಇತಿಹಾಸ, ಸಂಘದ ಸ್ವಂತ ಪ್ರಕಟಣೆಗಳು ಮತ್ತು ಸಂವಿಧಾನಬದ್ಧ ಸಂಸ್ಥೆಗಳ ವರದಿಗಳನ್ನೇ ನೋಡಿದರೆ, ಆರೆಸ್ಸೆಸ್ ಬಗ್ಗೆ ಇರುವ ಆತಂಕ ತಪ್ಪು ಕಲ್ಪನೆಯಲ್ಲ, ಸತ್ಯದ ಆಧಾರದ ಮೇಲೆ ಹುಟ್ಟಿದ್ದು ಎಂದು ಪ್ರಜಾಪ್ರಭುತ್ವವಾದಿಗಳು, ಇತಿಹಾಸ ತಜ್ಞರು ಮತ್ತು ಸಂವಿಧಾನ ಪ್ರೇಮಿಗಳು ವಾದಿಸುತ್ತಾರೆ.

ತ್ರಿವರ್ಣ ಧ್ವಜ, ಸಂವಿಧಾನದ 

ಬಗೆಗಿನ ನಿಲುವು ಏನಾಗಿತ್ತು?

ಸಂಘದ ಮುಖವಾಣಿ `ಆರ್ಗನೈಸರ್' 1947ರ ಆಗಸ್ಟ್ 14ರಂದು ತ್ರಿವರ್ಣ ಧ್ವಜವನ್ನು ಮೂರು ಬಣ್ಣಗಳಿಂದ ಕೆಟ್ಟದಾಗಿ ತಯಾರಿಸಲಾಗಿದೆ ಎಂದು ಬರೆದಿತ್ತು. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದಾಗಲೂ ಆರ್ಗನೈಸರ್, ಭಾರತದ ಹೊಸ ಸಂವಿಧಾನದಲ್ಲಿ ಭಾರತೀಯತೆ ಏನೂ ಇಲ್ಲ, ಮನುಸ್ಮೃತಿಯಿಂದ ಏನನ್ನೂ ತೆಗೆದುಕೊಂಡಿಲ್ಲ ಎಂದು ಟೀಕಿಸಿತ್ತು. ಇದು ಸಾರ್ವಜನಿಕ ದಾಖಲೆಯಲ್ಲಿ ಇರುವ ಸತ್ಯ. ಸಂಘದ ಸಿದ್ಧಾಂತವಾದಿ ಗೋಲ್ವಾಲ್ಕರ್ ಅವರು ಬರೆದಿರುವ `ಬಂಚ್ ಆಫ್ ಥಾಟ್ಸ್' ಪುಸ್ತಕದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಂಯುಕ್ತತೆಯ ಬಗ್ಗೆ ಇರುವ ವಿಚಾರಗಳು ಇಂದಿನ ಸಂವಿಧಾನದ ಆಶಯಕ್ಕೆ ತದ್ವಿರುದ್ಧವಾಗಿವೆ.

ಗಾಂಧಿ ಹತ್ಯೆ ನಂತರ 

ನಿಷೇಧ ಏಕೆ ಆಯಿತು?

ಮಹಾತ್ಮ ಗಾಂಧಿ ಹತ್ಯೆಯ ನಂತರ 1948ರ ಫೆಬ್ರವರಿ 4ರಂದು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಆರೆಸ್ಸೆಸ್ ಅನ್ನು ನಿಷೇಧಿಸಿದ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದರು - ಗಾಂಧಿ ಹತ್ಯೆಯಂತಹ ದ್ವೇಷದ ವಾತಾವರಣ ಸೃಷ್ಟಿಯಲ್ಲಿ ಸಂಘದ ಪ್ರಚಾರದ ಪಾತ್ರವಿದೆ ಎಂದು. ನಂತರ ಸಂಘವು ಲಿಖಿತವಾಗಿ ಸಂವಿಧಾನಕ್ಕೆ ನಿಷ್ಠೆ, ಹಿಂಸೆಯನ್ನು ತ್ಯಜಿಸುವುದು ಮತ್ತು ರಹಸ್ಯವಲ್ಲದ ಪ್ರಜಾಸತ್ತಾತ್ಮಕ ಸಂಘಟನೆಯಾಗಿ ಕಾರ್ಯನಿರ್ವಹಿಸುವುದಾಗಿ ಒಪ್ಪಿಗೆ ನೀಡಿದ ಮೇಲೆಯೇ ನಿಷೇಧ ತೆರವುಗೊಂಡಿತು. ಇದು ಕೇಂದ್ರ ಸರ್ಕಾರದ ಗೆಜೆಟ್ ದಾಖಲೆ.

ಸ್ವಾತಂತ್ರ್ಯ ಹೋರಾಟದಲ್ಲಿ 

ಸಂಘದ ಪಾತ್ರ ಏನು?

ಭಾರತದ ಸ್ವಾತಂತ್ರ್ಯ ಹೋರಾಟದ ಯಾವುದೇ ಪ್ರಮುಖ ಚಳುವಳಿ - 1920 ಅಸಹಕಾರ, 1930 ಉಪ್ಪಿನ ಸತ್ಯಾಗ್ರಹ, 1942 ಭಾರತ ಬಿಟ್ಟು ತೊಲಗಿ ಚಳುವಳಿ - ಇವುಗಳಲ್ಲಿ ಸಂಘಟನೆಯಾಗಿ ಆರೆಸ್ಸೆಸ್ ಭಾಗವಹಿಸಿದ ಬಗ್ಗೆ ಯಾವುದೇ ಬ್ರಿಟಿಷ್ ದಾಖಲೆ ಅಥವಾ ಕಾಂಗ್ರೆಸ್ ದಾಖಲೆಗಳಲ್ಲಿ ಉಲ್ಲೇಖವಿಲ್ಲ. ಸಂಘದ ಸ್ಥಾಪಕ ಹೆಡಗೆವಾರ್ ಅವರು ವೈಯಕ್ತಿಕವಾಗಿ 1930ರಲ್ಲಿ ಜೈಲಿಗೆ ಹೋದರು ಎಂಬುದನ್ನು ಬಿಟ್ಟರೆ ಸಂಘಟನೆಯಾಗಿ ದೂರ ಉಳಿದಿತ್ತು.

ಹಿಂದೂ ರಾಷ್ಟ್ರದ ಪರಿಕಲ್ಪನೆ 

ಸಂವಿಧಾನಕ್ಕೆ ವಿರುದ್ಧವಲ್ಲವೇ?

ಸಂಘವು ತಾನು ಸಾಂಸ್ಕøತಿಕ ಸಂಘಟನೆ ಎಂದು ಹೇಳಿಕೊಳ್ಳುತ್ತದೆ. ಆದರೆ ಅದರ ಅಂಗಸಂಸ್ಥೆಗಳು ರಾಜಕೀಯ ಅಧಿಕಾರದಲ್ಲಿರುವಾಗಲೇ ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ಎಂಬ ಕೂಗು ಬಲವಾಗುತ್ತಿದೆ. ಸಂವಿಧಾನದ ಪೀಠಿಕೆ ಹೇಳುವ ಜಾತ್ಯತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯದ ಕಲ್ಪನೆಗೆ ಇದು ನೇರ ವಿರುದ್ಧ. ಸರ್ವೋಚ್ಚ ನ್ಯಾಯಾಲಯವು 1973ರ ಕೇಶವಾನಂದ ಭಾರತಿ ತೀರ್ಪಿನಲ್ಲಿ ಜಾತ್ಯತೀತತೆ ಸಂವಿಧಾನದ ಮೂಲ ರಚನೆಯ ಭಾಗ ಎಂದು ಹೇಳಿದೆ.

ಪ್ರಜಾಪ್ರಭುತ್ವದ ಒಳಗಿನ 

ಸರ್ವಾಧಿಕಾರದ ಮಾದರಿ?

ಆರೆಸ್ಸೆಸ್‍ನಲ್ಲಿ ಆಂತರಿಕ ಚುನಾವಣೆ ಇಲ್ಲ. ಸರಸಂಘಚಾಲಕರು ನಾಮನಿರ್ದೇಶನದ ಮೂಲಕ ಬರುತ್ತಾರೆ. ಮಹಿಳೆಯರಿಗೆ ಪ್ರವೇಶವಿಲ್ಲ, ಜಾತಿ ವ್ಯವಸ್ಥೆಯ ಬಗ್ಗೆ ಸ್ಪಷ್ಟ ವೈಚಾರಿಕ ವಿರೋಧವಿಲ್ಲ. ಇಂತಹ ಸಂಘಟನೆಯಿಂದ ಪ್ರಜಾಪ್ರಭುತ್ವದ ಪಾಠ ಏನು ಕಲಿಯಬೇಕು ಎಂಬ ವಾದವನ್ನು ಪ್ರಜಾಪ್ರಭುತ್ವವಾದಿಗಳು ಪ್ರಶ್ನಿಸುತ್ತಾರೆ.

ಸಾವಿರಾರು ಕೋಟಿ ರೂ ಸಾರ್ವಜನಿಕ ದೇಣಿಗೆ ಸಂಗ್ರಹಿಸುವ ಆರೆಸ್ಸೆಸ್ ನೋಂದಣಿಯಾದ ಸಂಘಟನೆಯಲ್ಲ. ನೋಂದಣಿಯಾಗಬೇಕಾದ ಅಗತ್ಯವೇ ಇಲ್ಲ ಎಂದು ಅದರ ಪ್ರಮುಖರು ಮೊಂಡು ವಾದಿಸುತ್ತಾರೆ. ಲಕ್ಷಾಂತರ ಸದಸ್ಯರನ್ನು ಹೊಂದಿರುವ ಮತ್ತು ದೇಶದೆಲ್ಲೆಡೆ ಆಸ್ತಿ ಹೊಂದಿರುವ ಸಂಘಟನೆಯೊಂದು ನೋಂದಣಿಯಾಗಿರದ ಸಂಸ್ಥೆ ಎಂಬುದು ಎಷ್ಟು ಸೂಕ್ತ? ಹಿಂದೂ ಹೆಣ್ಮಕ್ಕಳ ರಕ್ಷಣೆಗೆ ಬದ್ಧ ಎಂದು ಹೇಳುವ ಸಂಘ ಧರ್ಮಸ್ಥಳದಲ್ಲಿ ನೂರಾರು ಹೆಣ್ಮಕ್ಕಳ ಜೀವಗಳು ಬಲಾಢ್ಯರಿಂದ ಹೊಸಕಿಹೋದಾಗ ತುಟಿಪಿಟಕ್ಕೆನ್ನಲಿಲ್ಲ.. ಇದೆಂಥ ವಿಪರ್ಯಾಸ?

ಆರೆಸ್ಸೆಸ್ ಬಗ್ಗೆ ಇರುವ ಪ್ರಶ್ನೆಗಳು ದ್ವೇಷದಿಂದ ಹುಟ್ಟಿದ್ದಲ್ಲ. ಅದು ಇತಿಹಾಸದ ದಾಖಲೆ, ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದ ಮೇಲೆ ಹುಟ್ಟಿದ ಪ್ರಶ್ನೆಗಳು. ತಪ್ಪು ನಿರೂಪಣೆಯನ್ನು ಸರಿಪಡಿಸಬೇಕಾದರೆ, ಸಂಘವು ತನ್ನ ಹಳೆಯ ಬರಹಗಳು, ತ್ರಿವರ್ಣ ಧ್ವಜ ಮತ್ತು ಸಂವಿಧಾನದ ಬಗೆಗಿನ ತನ್ನ ಹಿಂದಿನ ನಿಲುವುಗಳನ್ನು ಬಹಿರಂಗವಾಗಿ ಹಿಂಪಡೆಯಬೇಕು ಮತ್ತು ಇಂದಿನ ಭಾರತದ ಬಹುತ್ವವನ್ನು ಒಪ್ಪಿಕೊಳ್ಳಬೇಕು. ಅಲ್ಲಿಯವರೆಗೆ ಈ ಅನುಮಾನ ಸಹಜ ಮತ್ತು ಪ್ರಜಾಸತ್ತಾತ್ಮಕ ಚರ್ಚೆಯ ಭಾಗ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI