ಸಾಧನೆಯೆಂಬ ಮುಖವಾಡದ ಅಡಿಯಲ್ಲಿ ಸಾಗುತ್ತಿರುವ ಕಪಟ ರಾಜಕಾರಣ, ಪ್ರಜಾಪ್ರಭುತ್ವಕ್ಕೆ ಎದುರಾದ ನೈಜ ಆಘಾತಗಳು
ಪ್ರಚಲಿತ * ಬಿವಿಸೀ
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತವನ್ನು ಭ್ರಷ್ಟಾಚಾರ, ಜಾತಿವಾದ ಮತ್ತು ವಂಶಪಾರಂಪರ್ಯ ರಾಜಕೀಯದಿಂದ ಮುಕ್ತಿಗೊಳಿಸಿ "ಸಾಧನೆಯ ರಾಜಕಾರಣ"ಕ್ಕೆ ಕರೆದೊಯ್ದಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ಪ್ರತಿಪಾದನೆಯು ಸಂಪೂರ್ಣವಾಗಿ ನೈಜತೆಗೆ ದೂರವಾದದ್ದು. ರಾಜಕೀಯ ಲಾಭಕ್ಕಾಗಿ ಭ್ರಷ್ಟಾಚಾರ, ಜಾತಿ ಧ್ರುವೀಕರಣ ಮತ್ತು ರಾಜಕೀಯ ಅನುಕೂಲಸಿಂಧುತ್ವವನ್ನು ಮೋದಿ ಸರಕಾರ ಹೊಸ ರೂಪದಲ್ಲಿ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಪ್ರಸಕ್ತ ವಿದ್ಯಮಾನಗಳೇ ಸಾಕ್ಷಿ.
ಪ್ರಮುಖವಾಗಿ, ಭ್ರಷ್ಟಾಚಾರ ಮುಕ್ತ ಆಡಳಿತದ ಸುಳ್ಳು ಮುಖವಾಡವು ಚುನಾವಣಾ ಬಾಂಡ್ ಹಗರಣದ ಮೂಲಕ ಸಂಪೂರ್ಣವಾಗಿ ಕಳಚಿಬಿದ್ದಿದೆ. ಅತ್ಯುನ್ನತ ನ್ಯಾಯಾಲಯವು ಅಸಂವಿಧಾನಿಕ ಎಂದು ರದ್ದುಗೊಳಿಸಿದ ಈ ಬಾಂಡ್ ವ್ಯವಸ್ಥೆಯು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಅಧಿಕೃತ ಲಂಚಕೋರತನಕ್ಕೆ ದಾರಿ ಮಾಡಿಕೊಟ್ಟಿತು. ಕೇಂದ್ರೀಯ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ದಾಳಿ ನಡೆಸಿದ ಬೆನ್ನಲ್ಲೇ ನೂರಾರು ಕಂಪನಿಗಳು ಆಡಳಿತ ಪಕ್ಷಕ್ಕೆ ಕೋಟ್ಯಂತರ ರೂಪಾಯಿ ನಿಧಿ ನೀಡಿರುವುದು ಮತ್ತು ತಕ್ಷಣವೇ ಬೃಹತ್ ಯೋಜನೆಗಳ ಗುತ್ತಿಗೆ ಪಡೆದುಕೊಂಡಿರುವುದು ಕೊಡು-ಕೊಳ್ಳುವಿಕೆಯ ಉದ್ಯಮವನ್ನು ಬಹಿರಂಗಪಡಿಸಿದೆ. ಅಷ್ಟೇ ಅಲ್ಲದೆ, ವಿರೋಧ ಪಕ್ಷಗಳಲ್ಲಿದ್ದ ಭ್ರಷ್ಟ ನಾಯಕರನ್ನು ಸ್ವಪಕ್ಷಕ್ಕೆ ಸೇರಿಸಿಕೊಂಡು, ಅವರ ಮೇಲಿದ್ದ ಗಂಭೀರ ಆರೋಪಗಳನ್ನು ಸಂಪೂರ್ಣವಾಗಿ ಮರೆಮಾಚುವ "ವಾಷಿಂಗ್ ಮೆಷಿನ್" ಸಂಸ್ಕøತಿಯು ಆಡಳಿತ ಪಕ್ಷದ ಡಂಭಾಚಾರವನ್ನು ಎತ್ತಿಹಿಡಿಯುತ್ತದೆ.
ಇನ್ನು ಜಾತಿ ರಾಜಕಾರಣವನ್ನು ಅಂತ್ಯಗೊಳಿಸಲಾಗಿದೆ ಎಂಬ ಮಾತು ಮತ್ತೊಂದು ಬಹುದೊಡ್ಡ ಪೆÇಳ್ಳು ಪ್ರತಿಪಾದನೆ. ಸಾಂಪ್ರದಾಯಿಕ ಜಾತಿ ಲೆಕ್ಕಾಚಾರಗಳನ್ನು ಮೀರುವ ನೆಪದಲ್ಲಿ, ಸಮಾಜವನ್ನು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಸೂಕ್ಷ್ಮ ಜಾತಿಗಳನ್ನಾಗಿ ವಿಭಜಿಸುವ ಕುತಂತ್ರ ನಡೆಯುತ್ತಿದೆ. ಪ್ರತಿಯೊಂದು ಚುನಾವಣೆಯಲ್ಲೂ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಮತದಾರರನ್ನು ಧ್ರುವೀಕರಿಸಿ, ಕೋಮು ಗಲಭೆಗಳ ಮತ್ತು ದ್ವೇಷದ ವಾತಾವರಣವನ್ನು ಸೃಷ್ಟಿಸುವ ಮೂಲಕವೇ ಅಧಿಕಾರ ಹಿಡಿಯಲಾಗುತ್ತಿದೆ. ಜಾತಿವಾದವನ್ನು ಅಳಿಸುವುದರ ಬದಲಿಗೆ, ಅದನ್ನು ಮತ್ತಷ್ಟು ಆಳವಾಗಿ ಬೇರೂರುವಂತೆ ಮಾಡಲಾಗಿದೆ.
ಅಂತೆಯೇ, ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಕಟು ವಾಗ್ದಾಳಿ ನಡೆಸುವ ಆಡಳಿತ ಪಕ್ಷವು, ಅಧಿಕಾರದ ದಾಹಕ್ಕಾಗಿ ಅದೇ ಕುಟುಂಬ ಆಧಾರಿತ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಯಾವುದೇ ಮುಜುಗರ ಪಡುವುದಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಮತ್ತು ಸರ್ಕಾರ ರಚಿಸಲು ಕುಟುಂಬ ಆಧಾರಿತ ಪಕ್ಷಗಳ ಮನೆ ಬಾಗಿಲಿಗೆ ಹೋಗುವುದು ಇವರ ರಾಜಕೀಯ ನೈತಿಕತೆಯ ನಿರ್ಲಜ್ಜತನವನ್ನು ತೋರಿಸುತ್ತದೆ.
ಕೇವಲ ದೊಡ್ಡ ಬ್ಯಾನರ್‍ಗಳು, ಜಾಹೀರಾತುಗಳು ಮತ್ತು ಮೂಲಸೌಕರ್ಯಗಳ ಪ್ರಚಾರದ ಮರೆಯಲ್ಲಿ ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು, ಮುಕ್ತ ಮಾಧ್ಯಮಗಳನ್ನು ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಹಗಲಲ್ಲಿಯೇ ಹತ್ಯೆ ಮಾಡಲಾಗುತ್ತಿದೆ. ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿ, ಜಾತಿಯನ್ನು ಅಸ್ತ್ರವಾಗಿಸಿಕೊಂಡು, ವಿರೋಧಿಗಳನ್ನು ಹತೋಟಿ ನೊಗದಲ್ಲಿ ಇಟ್ಟುಕೊಳ್ಳುವ ಈ ಆಡಳಿತ ವೈಖರಿಯು ಸಾಧನೆಯ ರಾಜಕಾರಣವಲ್ಲ; ಬದಲಿಗೆ ಇದು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ನಿರಂಕುಶ ಪ್ರಭುತ್ವ.
Comments
Post a Comment