ನಿಜವಾದ ದೇಶಭಕ್ತರು ಯಾರು?
ನೇರಾನೇರ * ಬಿವಿಸೀ
ನಿಜವಾದ ದೇಶಭಕ್ತಿ ಮತ್ತು ಸುಳ್ಳು ರಾಷ್ಟ್ರೀಯತೆಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ದೇಶಭಕ್ತಿಯನ್ನು ಎಂದಿಗೂ ಆಯುಧವನ್ನಾಗಿ ಮಾಡಲು ಸಾಧ್ಯವಿಲ್ಲ. ಆದರೆ ರಾಷ್ಟ್ರೀಯತೆಯನ್ನು ಆಯುಧವನ್ನಾಗಿ ಮಾಡಬಹುದು. ಕಳೆದ ಕೆಲವು ವರ್ಷಗಳಲ್ಲಿ ಆಕ್ರಮಣಕಾರಿ, ಕೋಪಭರಿತ ರಾಷ್ಟ್ರೀಯತೆಯನ್ನು ದೇಶಭಕ್ತಿಯ ಹೆಸರಿನಲ್ಲಿ ಬಿಂಬಿಸಲಾಗುತ್ತಿದೆ. ಅದು ದೇಶಭಕ್ತಿಯಲ್ಲ.
ಧರ್ಮದ ಕಾರಣಕ್ಕೆ ಇನ್ನೊಬ್ಬರ ದೇಶಭಕ್ತಿಯನ್ನು ಪ್ರಶ್ನಿಸುವುದು ನಿಜವಾದ ದೇಶಭಕ್ತಿಯ ಲಕ್ಷಣವಲ್ಲ. ಇಂದು ಹಿಂದೂತ್ವದೊಂದಿಗೆ ಬೆರೆತ ಆಕ್ರಮಣಕಾರಿ ರಾಷ್ಟ್ರೀಯತೆ ದೇಶದ ರಕ್ತನಾಳಗಳಲ್ಲಿ ವಿಷದಂತೆ ಹರಡಿದೆ. ಹಸುವಿನ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವವರು, ಇನ್ನೊಂದು ಧರ್ಮಕ್ಕೆ ಸಂಬಂಧಿಸಿದ ಎಲ್ಲವನ್ನೂ ನಿಂದಿಸುವವರು ತಾವೇ ದೊಡ್ಡ ದೇಶಭಕ್ತರು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಕೇವಲ ಬೀದಿಯ ಪುಂಡರಿಂದ ಮಾತ್ರವಲ್ಲ, ಸರ್ಕಾರದ ಉನ್ನತ ಹುದ್ದೆಯಲ್ಲಿರುವವರಿಂದಲೂ ಕೇಳಿಬರುತ್ತಿದೆ. ಎಲ್ಲ ಮುಸ್ಲಿಮರು ಕೆಟ್ಟವರು ಎಂದು ಬಹಿರಂಗವಾಗಿ ಹೇಳುವ ಮನಸ್ಥಿತಿ ಬೆಳೆದಿದೆ. ಇದು ಅತ್ಯಂತ ಅಪಾಯಕಾರಿ.
ಸ್ವಾತಂತ್ರ್ಯ ಬಂದ ಮೊದಲ ದಶಕದಲ್ಲಿ ದೇಶ ಬೇರೆಯಾಗಿತ್ತು. ಗಣರಾಜ್ಯೋತ್ಸವದ ಮೆರವಣಿಗೆಯನ್ನು ಸಾಮಾನ್ಯ ಜನರು ಕೂಡ ಹತ್ತಿರದಿಂದ ನೋಡಬಹುದಿತ್ತು. ಬೆಚ್ಚಗಿನ ಬಟ್ಟೆ ಧರಿಸಿ, ಮನೆಯಿಂದ ತಿಂಡಿ ತಂದು ಕುಟುಂಬ ಸಮೇತ ನಡೆದು ಹೋಗಿ ನೋಡುವ ಸಂಸ್ಕøತಿ ಇತ್ತು. ಯಾರೂ ಯಾರ ದೇಶಭಕ್ತಿಯನ್ನೂ ಪ್ರಶ್ನಿಸುತ್ತಿರಲಿಲ್ಲ. ಅದು ಅಸಭ್ಯವೆಂದು ಭಾವಿಸಲಾಗುತ್ತಿತ್ತು. ಆಗ ಎಲ್ಲರೂ ದೇಶಭಕ್ತರೇ ಆಗಿದ್ದರು. ರಾಷ್ಟ್ರೀಯತೆಯು ಸ್ವಾತಂತ್ರ್ಯ ತಂದುಕೊಟ್ಟ ಶಕ್ತಿಯಾಗಿತ್ತು.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಧಾರ್ಮಿಕ ಯಾತ್ರೆಗಳ ಹೆಸರಿನಲ್ಲಿ ಹಿಂದೂ-ಮುಸ್ಲಿಂ ಗಲಭೆಗಳು ನಡೆಯಲು ಆರಂಭವಾದಾಗಿನಿಂದ ಈ ಕಠಿಣತೆ ಶುರುವಾಯಿತು. ಇದಕ್ಕೆ ಒಂದು ಧರ್ಮದ ರಾಜಕಾರಣಿಗಳು ಮಾತ್ರವಲ್ಲ, ಎಲ್ಲ ಧರ್ಮದ ರಾಜಕಾರಣಿಗಳು ಕಾರಣ.
ಇಂದು ಪ್ರಶ್ನೆ ಕೇಳುವವರನ್ನು `ದೇಶದ್ರೋಹಿಗಳು' ಎಂದು ಕರೆಯಲಾಗುತ್ತಿದೆ. ಕುಸಿಯುವ ಕಟ್ಟಡಗಳ ಬಗ್ಗೆ, ಕುಸಿಯುವ ಶಾಲೆಗಳ ಬಗ್ಗೆ, ಹಸುಗಳ ಕೊಟ್ಟಿಗೆಯಾದ ಆರೋಗ್ಯ ಕೇಂದ್ರಗಳ ಬಗ್ಗೆ, ಬೀದಿ ನಾಯಿಗಳು ಓಡಾಡುವ ಆಸ್ಪತ್ರೆಗಳ ಬಗ್ಗೆ ಮಾತನಾಡುವವರನ್ನು ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಲಾಗುತ್ತಿದೆ. ಆದರೆ ನಿಜವಾದ ದೇಶಭಕ್ತರು ಅವರೇ. ತಮ್ಮ ಮಕ್ಕಳನ್ನು ಓದಿಸಲು ಕಷ್ಟಪಡುವ ಚಾಲಕರು, ಕೂಲಿ ಕಾರ್ಮಿಕರು, ಪ್ರಶ್ನೆ ಕೇಳುವ ವಿದ್ಯಾರ್ಥಿಗಳು, ಸತ್ಯವನ್ನು ತೋರಿಸುವ ಪತ್ರಕರ್ತರು ನಿಜವಾದ ದೇಶಭಕ್ತರು. ವಿಷ ಹರಡಿ ಕೆಲವು ಚುನಾವಣೆಗಳನ್ನು ಗೆಲ್ಲಬಹುದು, ಆದರೆ ದೇಶವನ್ನು ಉಳಿಸಲು ಸಾಧ್ಯವಿಲ್ಲ ಎಂಬುದನ್ನು ಆಡಳಿತ ನಡೆಸುವವರು ಅರ್ಥಮಾಡಿಕೊಳ್ಳಬೇಕು.
Comments
Post a Comment