ಡಿಕೆಶಿ-ಎಚ್ಡಿಕೆ ಅಧಿಕಾರದ ಆಟದಲ್ಲಿ ಬೆಂದ ರಾಜ್ಯದ ಸ್ವತ್ತು

 ನ್ಯಾಯಾಂಗ ತನಿಖೆಯೊಂದೇ ಮಾರ್ಗ

* ಬಿವಿಸೀ

ಕರ್ನಾಟಕ ಎನ್ನುವುದು ಆರು ಕೋಟಿ ಜನರ ಹೆಮ್ಮೆಯ ನಾಡೋ ಅಥವಾ ರಾಜ್ಯದ ಇಬ್ಬರು ಪ್ರಭಾವಿ ರಾಜಕಾರಣಿಗಳಾದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಖಾಸಗಿ ಆಸ್ತಿಯೋ ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಮೂಡಿದೆ. 

ನೈಸ್ ರಸ್ತೆ ಯೋಜನೆ ಹಾಗೂ ಬಿಡದಿ ಭೂಮಿಯ ಹಂಚಿಕೆಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಈ ಇಬ್ಬರೂ ನಾಯಕರು ನಡೆಸುತ್ತಿರುವ ವಾಗ್ದಾಳಿಗಳು ಹಾಗೂ ಪರಸ್ಪರ ಹೊರಿಸುತ್ತಿರುವ ಕಟು ಆರೋಪಗಳು ಸಾರ್ವಜನಿಕ ಜೀವನದ ಕನಿಷ್ಠ ಸೌಜನ್ಯವನ್ನೂ ದಾಟಿವೆ. ತಮ್ಮ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ಬೀದಿಯಲ್ಲಿ ನಿಂತು ಕಿತ್ತಾಡುತ್ತಿರುವ ಈ ಪ್ರಸಂಗವು ರಾಜ್ಯದ ರಾಜಕೀಯ ಇತಿಹಾಸಕ್ಕೇ ಕಪ್ಪು ಚುಕ್ಕೆಯಾಗಿದೆ.

ಈ ಇಬ್ಬರೂ ನಾಯಕರು ಪರಸ್ಪರ ಮಾಡುತ್ತಿರುವ ಅಕ್ರಮ ಆಸ್ತಿ ಸಂಪಾದನೆಯ ಆರೋಪಗಳನ್ನು ಗಮನಿಸಿದರೆ, ಜನಪ್ರತಿನಿಧಿಗಳು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಕೊಳ್ಳೆ ಹೊಡೆದಿದ್ದಾರೆಯೇ ಎಂಬ ಅನುಮಾನ ಮೂಡುವುದು ಸಹಜ. ನೈಸ್ ರಸ್ತೆಯ ಹೆಸರಿನಲ್ಲಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಯೋಜನೆಯ ವಿನ್ಯಾಸ ಬದಲಾಯಿಸಿ, ಬಿಡದಿಯ ಸುತ್ತಮುತ್ತಲ ಬೆಲೆಬಾಳುವ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಒಬ್ಬರು ಆರೋಪಿಸಿದರೆ, ಮತ್ತೊಬ್ಬರು ಪ್ರತಿಯಾಗಿ ಹಳೆಯ ನೈಸ್ ವ್ಯವಹಾರಗಳ ಜಾತಕವನ್ನೇ ಬಿಚ್ಚಿಡುತ್ತಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ನಾಯಕರು ಈ ರೀತಿ ಸಾರ್ವಜನಿಕ ವೇದಿಕೆಗಳಲ್ಲಿ ಒಬ್ಬರ ಮೇಲೊಬ್ಬರು ಕೆಸರು ಎರಚಾಡಿಕೊಳ್ಳುವುದು ಸಾರ್ವಜನಿಕ ಹಿತಾಸಕ್ತಿಗೆ ತಂದೊಡ್ಡುವ ದೊಡ್ಡ ಧಕ್ಕೆ. ಯಾರದ್ದು ತಪ್ಪು, ಯಾರದ್ದು ಸರಿ ಮತ್ತು ಸತ್ಯವೇನು ಎಂಬುದು ಕೇವಲ ಪತ್ರಿಕಾಗೋಷ್ಠಿಗಳಿಂದ ಅಥವಾ ಟಿವಿ ಚರ್ಚೆಗಳಿಂದ ಹೊರಬರಲು ಸಾಧ್ಯವಿಲ್ಲ.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಆಸ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಪ್ರಕರಣದ ಸತ್ಯಾಸತ್ಯತೆ ತಕ್ಷಣವೇ ಹೊರಬರಬೇಕಿದೆ. ಪ್ರಾರಂಭಿಕವಾಗಿ ಜಾರಿ ನಿರ್ದೇಶನಾಲಯ (ಇಡಿ) ನೈಸ್ ರಸ್ತೆ ಮತ್ತು ಬಿಡÀದಿ ಭೂವ್ಯವಹಾರಗಳ ಹಣಕಾಸು ವರ್ಗಾವಣೆ ಹಾಗೂ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳಬೇಕು. ತರುವಾಯ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ, ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸುವುದು ಅತ್ಯಗತ್ಯ.

ಜನರ ತೆರಿಗೆ ಹಣ ಮತ್ತು ರೈತರ ಭೂಮಿ ನಾಯಕರ ವೈಯಕ್ತಿಕ ಜಾಗೀರಾಗಲು ಸಾಧ್ಯವಿಲ್ಲ. ಕಾಲಹರಣ ಮಾಡದೆ, ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಯ ಮೂಲಕ ಸತ್ಯವನ್ನು ಹೊರತಂದು ತಪ್ಪು ಎಸಗಿದವರಿಗೆ ಶಿಕ್ಷೆಯಾಗದಿದ್ದರೆ, ಪ್ರಜಾಪ್ರಭುತ್ವ ಮತ್ತು ಕಾನೂನಿನ ಮೇಲಿನ ಜನರ ನಂಬಿಕೆ ಸಂಪೂರ್ಣವಾಗಿ ನಶಿಸಿಹೋಗಲಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI