ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ನಿರ್ಣಾಯಕ ಪರೀಕ್ಷೆ

 ಅಭಿಮತ

ಬಿವಿಸೀ

...............

2014ರ ನಂತರ ಅಜೇಯವಾಗಿ ಕಾಣುತ್ತಿದ್ದ ಬಿಜೆಪಿಯ ರಾಜಕೀಯ ಪ್ರಾಬಲ್ಯದಲ್ಲಿ ಈಗ ಬಿರುಕು ಕಾಣುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ ಕಳೆದುಕೊಂಡು ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಬೇಕಾಯಿತು. ನಂತರ ಯುವ ಪ್ರತಿಭಟನೆ, ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ ಮತ್ತು ಪರೀಕ್ಷಾ ಅಕ್ರಮಗಳಿಂದ ಅಸಮಾಧಾನ ಹೆಚ್ಚಾಗಿದೆ. ಏಪ್ರಿಲ್‍ನಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆ ಸೋಲು, ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ಪ್ರತಿಭಟನೆಗಳು, ಪ್ರಧಾನಿ ಮತ್ತು ಗೃಹ ಸಚಿವರು ಗೈರಾಗಿ ಮುಂಗಾರು ಅಧಿವೇಶನ ಸ್ಥಗಿತಗೊಂಡಿದ್ದು ಸರ್ಕಾರದ ಉತ್ತರದಾಯಿತ್ವದ ಬಗ್ಗೆ ಪ್ರಶ್ನೆ ಮೂಡಿಸಿದೆ. ಜುಲೈ 20ರ ವಿದ್ಯಾರ್ಥಿಗಳ ಮೇಲಿನ ಪೆÇಲೀಸ್ ದೌರ್ಜನ್ಯದ ಬಗ್ಗೆ ಇಬ್ಬರು ನಾಯಕರು ಸಂಸತ್ತಿನಲ್ಲಿ ಉತ್ತರ ನೀಡದಿರುವುದು ಸರ್ಕಾರ ಉತ್ತರಿಸಲು ಸಿದ್ಧವಿಲ್ಲ ಎಂಬ ಭಾವನೆ ಬಲಪಡಿಸಿದೆ.

ಆದರೂ ಈ ಹಿನ್ನಡೆಗಳೇ ಪ್ರಾಬಲ್ಯದ ಅಂತ್ಯ ಎಂದಲ್ಲ. ಬಿಜೆಪಿ ಇನ್ನೂ ದೊಡ್ಡ ಮತಬ್ಯಾಂಕ್ ಮತ್ತು ಸೈದ್ಧಾಂತಿಕ ಆಕರ್ಷಣೆಯನ್ನು ಉಳಿಸಿಕೊಂಡಿರುವ ಪ್ರಬಲ ಶಕ್ತಿ. ಆದರೆ ಅದರ ಪ್ರಾಬಲ್ಯಕ್ಕೆ ಕಾರಣವಾದ ಅಂಶಗಳು ಈಗ ಮಿತಿ ಎದುರಿಸುತ್ತಿವೆಯೇ ಎಂಬುದು ಪ್ರಶ್ನೆ. ಇದನ್ನು ಪರೀಕ್ಷಿಸಬಹುದಾದ ಪ್ರಮುಖ ಕ್ಷೇತ್ರ ಉತ್ತರ ಪ್ರದೇಶ.

ಉತ್ತರ ಪ್ರದೇಶ ಕೇವಲ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯವಲ್ಲ, ಬಿಜೆಪಿ ಅಧಿಕಾರದ ಕೋಟೆ. 2014ರಲ್ಲಿ 80ರಲ್ಲಿ 71 ಸ್ಥಾನ, 2019ರಲ್ಲಿ ಎಸ್ಪಿ ಬಿಎಸ್ಪಿ ಮೈತ್ರಿ ಇದ್ದರೂ 62 ಸ್ಥಾನ ಗೆದ್ದು ರಾಷ್ಟ್ರೀಯ ಬಹುಮತಕ್ಕೆ ಆಧಾರವಾಯಿತು. ಇದು ಬಿಜೆಪಿಯ ಬಹುಸಂಖ್ಯಾತ ರಾಜಕಾರಣದ ಪ್ರಯೋಗಶಾಲೆ. ಇಲ್ಲಿ ದುರ್ಬಲಗೊಂಡರೆ ಪರಿಣಾಮ ರಾಷ್ಟ್ರವ್ಯಾಪಿಯಾಗಿರುತ್ತದೆ.

2024ರ ಫಲಿತಾಂಶ ಬಿಜೆಪಿ ನೆಲೆ ಕಳೆದುಕೊಂಡಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಸ್ಥಾನಗಳು 62ರಿಂದ 33ಕ್ಕೆ ಕುಸಿದರೆ ಸಮಾಜವಾದಿ ಪಕ್ಷ 37 ಮತ್ತು ಕಾಂಗ್ರೆಸ್ 6 ಸ್ಥಾನ ಗೆದ್ದಿವೆ. ಅಯೋಧ್ಯೆ ಚಳವಳಿಯ ಕೇಂದ್ರವಾದ ಅವಧ್‍ನಲ್ಲಿ ದೊಡ್ಡ ಕುಸಿತವಾಗಿದೆ. 2022ರ ವಿಧಾನಸಭೆಯಲ್ಲಿ ಅವಧ್ ನ 154ರಲ್ಲಿ 101 ಗೆದ್ದಿದ್ದ ಬಿಜೆಪಿ 2024ರಲ್ಲಿ ಕೇವಲ 51 ವಿಧಾನಸಭಾ ವಿಭಾಗಗಳಲ್ಲಿ ಮುನ್ನಡೆ ಸಾಧಿಸಿದೆ.

ರಾಮಮಂದಿರ ಉದ್ಘಾಟನೆಯ ನಂತರವೇ ಈ ಚುನಾವಣೆ ನಡೆದಿದ್ದರಿಂದ ಇದರ ಮಹತ್ವ ಹೆಚ್ಚು. ದಶಕಗಳ ಕನಸಾದ ಮಂದಿರ ಉದ್ಘಾಟನೆ ನಿರೀಕ್ಷಿತ ಲಾಭ ನೀಡಲಿಲ್ಲ. ಅಯೋಧ್ಯೆ ಇರುವ ಫೈಜಾಬಾದ್‍ನಲ್ಲೇ ಬಿಜೆಪಿ ಸೋತಿತು. ಬಹುಸಂಖ್ಯಾತ ಸಂಕೇತಗಳು ಚುನಾವಣೆ ಗೆಲ್ಲಲು ಸಾಕಾಗುವುದಿಲ್ಲ ಎಂಬ ಸಂದೇಶ ಇದು. ದೇಣಿಗೆ ವಿವಾದವೂ ಪರಿಣಾಮ ಬೀರಿದೆ.

ಮತದಾರರು ಆರ್ಥಿಕ ವಾಸ್ತವವನ್ನು ನಿರ್ಲಕ್ಷಿಸಲು ಸಿದ್ಧರಿಲ್ಲ. ಉತ್ತರ ಪ್ರದೇಶದ ಆರ್ಥಿಕತೆ ಬೆಳೆದರೂ ತಲಾ ಆದಾಯ ಮತ್ತು ಉದ್ಯೋಗದಲ್ಲಿ ಹಿಂದುಳಿದಿದೆ. ಕಾನ್ಪುರ, ಫಿರೋಜಾಬಾದ್, ಭದೋಹಿ, ಮೊರಾದಾಬಾದ್ ನ ರಫ್ತು ಕ್ಲಸ್ಟರ್ ಗಳಲ್ಲಿ ಅಮೆರಿಕದ ಸುಂಕದಿಂದ ಆದೇಶ ಕುಸಿದು ಗುತ್ತಿಗೆ ಕಾರ್ಮಿಕರ ಉದ್ಯೋಗಕ್ಕೆ ಅಪಾಯ ಬಂದಿದೆ.

ಯುವಕರ ಹತಾಶೆ ತೀವ್ರವಾಗಿದೆ. 2024ರಲ್ಲಿ 48 ಲಕ್ಷ ಅಭ್ಯರ್ಥಿಗಳ 60 ಸಾವಿರ ಹುದ್ದೆಗಳ ಪೆÇಲೀಸ್ ಪರೀಕ್ಷೆ ಪತ್ರಿಕೆ ಸೋರಿಕೆಯಿಂದ ರದ್ದಾಯಿತು. 10.76 ಲಕ್ಷ ಅಭ್ಯರ್ಥಿಗಳ 411 ಹುದ್ದೆಗಳ ರಿವ್ಯೂ ಆಫೀಸರ್ ಪರೀಕ್ಷೆಯೂ ರದ್ದಾಯಿತು. ಸರ್ಕಾರಿ ಉದ್ಯೋಗವೇ ಭದ್ರತೆಯ ದಾರಿ ಎಂದು ನಂಬಿದ ಯುವಕರಿಗೆ ಇದು ಹಣ ಮತ್ತು ಸಮಯದ ನಷ್ಟ.

ಈ ಹಿನ್ನೆಲೆಯಲ್ಲಿ 2027ರ ಚುನಾವಣೆ ಹೆಚ್ಚು ಪೈಪೆÇೀಟಿಯಿಂದ ಕೂಡಿರಲಿದೆ. ಬಿಜೆಪಿ ಮಹಿಳಾ ಉದ್ಯಮಿ ಕ್ರೆಡಿಟ್ ಯೋಜನೆಯಡಿ ಒಂದು ಕೋಟಿ ಮಹಿಳೆಯರಿಗೆ ಒಂದು ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಉದ್ಯಮಶೀಲತೆ ಉತ್ತೇಜನದಂತಹ ಯೋಜನೆ ತರುತ್ತಿದೆ. ಎಸ್ಪಿ ಮತ್ತು ಕಾಂಗ್ರೆಸ್ ಯುವ ಅಸಮಾಧಾನ, ಜಾತಿ ಬಿರುಕುಗಳ ಮೇಲೆ ಗಮನ ಹರಿಸುತ್ತಿವೆ. 2024ರಂತೆ ಮೈತ್ರಿ ಮುಂದುವರಿದರೆ ವಿರೋಧ ಪಕ್ಷಕ್ಕೆ ಲಾಭವಾಗಬಹುದು. 2027ರ ಫಲಿತಾಂಶ ಲಕ್ನೋದಿಂದ ದೆಹಲಿವರೆಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮಾದರಿ ಇನ್ನೂ ಬಲವಾಗಿದೆಯೇ ಎಂಬುದನ್ನು ನಿರ್ಧರಿಸಲಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI