ಬಿಜೆಪಿ ಸರ್ಕಾರದಲ್ಲಿ ತೀವ್ರ ನಿರ್ಬಂಧಕ್ಕೆ ಒಳಗಾದ ಶೈಕ್ಷಣಿಕ ಸ್ವಾತಂತ್ರ್ಯ
ವಿಶ್ಲೇಷಣೆ * ಬಿವಿಸೀ
ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯ ಬಿಜೆಪಿ ಸರ್ಕಾರದ ಅಡಿಯಲ್ಲಿ ತೀವ್ರವಾಗಿ ನಿರ್ಬಂಧಿಸಲ್ಪಟ್ಟಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ `ಸ್ಕಾಲರ್ಸ್ ಅಟ್ ರಿಸ್ಕ್'ನ `ಫ್ರೀ ಟು ಥಿಂಕ್' 2026 ವರದಿ ಹೇಳಿದೆ. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆಯು 40 ದೇಶಗಳ 650ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಜಾಲವಾಗಿದ್ದು ಅಪಾಯದಲ್ಲಿರುವ ವಿದ್ವಾಂಸರನ್ನು ರಕ್ಷಿಸುವ ಕೆಲಸ ಮಾಡುತ್ತದೆ.
ವರದಿಯ ಪ್ರಕಾರ ಭಾರತದ ಅಕಾಡೆಮಿಕ್ ಫ್ರೀಡಮ್ ಇಂಡೆಕ್ಸ್ ಅಂಕ 2024ರಲ್ಲಿ 0.16 ಇದ್ದದ್ದು 2026ರಲ್ಲಿ 0.14ಕ್ಕೆ ಕುಸಿದಿದೆ. ಎರಡೂ ಅಂಕಗಳು ತೀವ್ರವಾಗಿ ನಿಬರ್ಂಧಿತ ವಿಭಾಗಕ್ಕೆ ಸೇರಿವೆ. ಈ ವಿಭಾಗದಲ್ಲಿ ಭಾರತದ ಜೊತೆಗೆ ಚೀನಾ 0.07 ಮತ್ತು ಅಫ್ಘಾನಿಸ್ತಾನ 0.09 ಅಂಕ ಹೊಂದಿವೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ಅಂಕ 2015ರಲ್ಲಿ 0.41 ಇದ್ದದ್ದು ಈಗ 0.14ಕ್ಕೆ ಕುಸಿದಿದೆ. ಈ ಸೂಚ್ಯಂಕವನ್ನು 0 ರಿಂದ 1ರವರೆಗೆ ಅಳೆಯಲಾಗುತ್ತದೆ. ಕ್ಯಾಂಪಸ್ ಸಮಗ್ರತೆ, ಶೈಕ್ಷಣಿಕ ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಶೋಧನೆ ಮತ್ತು ಬೋಧನಾ ಸ್ವಾತಂತ್ರ್ಯ, ಸಾಂಸ್ಥಿಕ ಸ್ವಾಯತ್ತತೆ ಮುಂತಾದ ಮಾನದಂಡಗಳ ಆಧಾರದಲ್ಲಿ ಅಂಕ ನೀಡಲಾಗುತ್ತದೆ.
2025ರ ಜುಲೈ 1ರಿಂದ 2026ರ ಜೂನ್ 30ರವರೆಗೆ 59 ದೇಶಗಳಲ್ಲಿ 321 ಪರಿಶೀಲಿತ ಘಟನೆಗಳಿಂದ 382 ದಾಳಿಗಳು ನಡೆದಿವೆ ಎಂದು ವರದಿ ದಾಖಲಿಸಿದೆ. ಇದರಲ್ಲಿ ಅತಿ ಹೆಚ್ಚು ದಾಳಿ ಭಾರತದಲ್ಲೇ ನಡೆದಿದ್ದು 42 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಶಿಕ್ಷಕರ ಮೇಲಿನ ಹಿಂಸೆ, ಜೈಲು ಶಿಕ್ಷೆ, ಕೆಲಸದಿಂದ ತೆಗೆದುಹಾಕುವುದು ಸೇರಿವೆ.
ವರದಿಯು ಕೇಂದ್ರ ಸರ್ಕಾರ ವಿಶ್ವವಿದ್ಯಾಲಯಗಳ ಆಡಳಿತ, ಕುಲಪತಿ ನೇಮಕ ಮತ್ತು ಶೈಕ್ಷಣಿಕ ಆದ್ಯತೆಗಳ ಮೇಲೆ ತನ್ನ ಹಿಡಿತವನ್ನು ವಿಸ್ತರಿಸಿದೆ ಎಂದು ಆರೋಪಿಸಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವನ್ನು ರಾಜ್ಯ ಪ್ರಭಾವದ ಪ್ರಮುಖ ಸಾಧನವಾಗಿ ಬಿಜೆಪಿ ಬಳಸುತ್ತಿದೆ ಎಂದು ಹೇಳಿದೆ. ಕುಲಪತಿಗಳಿಗೆ ಶೈಕ್ಷಣಿಕ ಅರ್ಹತೆಯನ್ನು ಸಡಿಲಗೊಳಿಸುವುದು, ಗುತ್ತಿಗೆ ಬೋಧಕರ ಮೇಲಿನ ಶೇ 10ರ ಮಿತಿಯನ್ನು ತೆಗೆದುಹಾಕುವುದು ಮುಂತಾದ ನೀತಿಗಳು ಸರ್ಕಾರಿ ನಿಯಂತ್ರಣವನ್ನು ಬಿಗಿಗೊಳಿಸಿವೆ.
ಹಲವು ಉದಾಹರಣೆಗಳನ್ನು ವರದಿ ಉಲ್ಲೇಖಿಸಿದೆ. ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸ್ನೇಹಶಿಶ್ ಭಟ್ಟಾಚಾರ್ಯ ಅವರನ್ನು 2022ರಲ್ಲಿ ವಿದ್ಯಾರ್ಥಿ ಪ್ರತಿಭಟನೆ ಕುರಿತು ಪತ್ರಕ್ಕೆ ಸಹಿ ಹಾಕಿದ್ದಕ್ಕಾಗಿ 2025ರಲ್ಲಿ ಕೆಲಸದಿಂದ ತೆಗೆದುಹಾಕಲಾಯಿತು. ತಮಿಳುನಾಡಿನ ಎಸ್‍ಆರ್‍ಎಂ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕಿ ಲೋರಾ ಸಂತಕುಮಾರ್ ಅವರು ಪಾಕಿಸ್ತಾನದಲ್ಲಿ ಭಾರತದ ಸೇನಾ ಕಾರ್ಯಾಚರಣೆ ವಿರುದ್ಧ ವಾಟ್ಸಾಪ್‍ನಲ್ಲಿ ಯುದ್ಧ ಬೇಡ ಎಂದು ಬರೆದಿದ್ದಕ್ಕಾಗಿ ಅಮಾನತು ಮತ್ತು ವಜಾ ಮಾಡಲಾಯಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರದ ಇತಿಹಾಸ ಕುರಿತ 25 ಪುಸ್ತಕಗಳನ್ನು ನಿಷೇಧಿಸಿರುವುದು, ಎನ್ ಸಿಇಆರ್‍ಟಿ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಉಲ್ಲೇಖಕ್ಕಾಗಿ ಮೂವರು ಲೇಖಕರಿಗೆ ಸುಪ್ರೀಂ ಕೋರ್ಟ್ ಜೀವಮಾನ ನಿಷೇಧ ಹೇರಿದ್ದು ಮುಂತಾದ ಘಟನೆಗಳನ್ನೂ ವರದಿ ದಾಖಲಿಸಿದೆ. ಜೆಎನ್‍ಯು ಮತ್ತು ದಕ್ಷಿಣ ಏಷ್ಯಾ ವಿವಿಯಲ್ಲಿ ಪ್ರತಿಭಟನೆ ನಿಬರ್ಂಧಿಸುವ ಹೊಸ ನಿಯಮಗಳನ್ನು ತಂದಿರುವುದನ್ನೂ ಉಲ್ಲೇಖಿಸಲಾಗಿದೆ.
ವರದಿಯು ಕಳೆದ ಹತ್ತು ವರ್ಷಗಳಲ್ಲಿ 179 ದೇಶಗಳಲ್ಲಿ 50 ದೇಶಗಳಲ್ಲಿ ಶೈಕ್ಷಣಿಕ ಸ್ವಾತಂತ್ರ್ಯ ಕುಸಿದಿದ್ದು ಕೇವಲ 9 ದೇಶಗಳಲ್ಲಿ ಮಾತ್ರ ಸುಧಾರಿಸಿದೆ ಎಂದು ಹೇಳಿದೆ.
Comments
Post a Comment