ಚುನಾವಣಾ ಭರವಸೆಗಳ ಬಲೆಗೆ ಸಿಲುಕಿ ಒದ್ದಾಡುತ್ತಿರುವ ಸರ್ಕಾರ
ಅಭಿವೃದ್ಧಿಗೆ ಹಣವಿಲ್ಲ, ಕೊಟ್ಟ ಮಾತು ಉಳಿಸಿಕೊಳ್ಳಲು ದಾರಿಯಿಲ್ಲ
ಬಿವಿಸೀ
ಚುನಾವಣೆ ಗೆಲ್ಲಲು ನೀಡಿದ ಉಚಿತ ಭರವಸೆಗಳ ಬೆಲೆ ಈಗ ಕರ್ನಾಟಕದ ಖಜಾನೆಗೆ ತೀವ್ರವಾಗಿ ತಟ್ಟತೊಡಗಿದೆಯೇ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ಕಾರದ ವಿವಿಧ ಹಂತಗಳಲ್ಲಿನ ಇತ್ತೀಚಿನ ಹೇಳಿಕೆಗಳು ರಾಜ್ಯದ ಆರ್ಥಿಕ ಒತ್ತಡವನ್ನು ಬಹಿರಂಗಪಡಿಸುತ್ತಿವೆ. ಆರು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದರ ಜೊತೆಗೆ ಹೊಸ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಹೊಂದಿಸುವುದು ಸರ್ಕಾರಕ್ಕೆ ಕಠಿಣವಾಗಿರುವುದು ಸ್ಪಷ್ಟವಾಗುತ್ತಿದೆ.
ಇದು ಕೇವಲ ಹಣದ ಕೊರತೆಯ ಪ್ರಶ್ನೆಯಲ್ಲ. ಚುನಾವಣೆಗೆ ಮುನ್ನ ಜನರಿಗೆ ನೀಡಿದ ಭರವಸೆಗಳನ್ನು ಜಾರಿಗೊಳಿಸುವ ಸಾಮಥ್ರ್ಯವನ್ನು ಲೆಕ್ಕಿಸದೆ ರಾಜಕೀಯವಾಗಿ ಘೋಷಿಸುವುದು ಸರಿಯೇ ಎಂಬುದೇ ಮೂಲ ಪ್ರಶ್ನೆ.
ಜನರಿಗೆ ಉಚಿತ ವಿದ್ಯುತ್, ಉಚಿತ ಪ್ರಯಾಣ, ನೇರ ಹಣ ವರ್ಗಾವಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಳಿಕ ಹಣದ ಕೊರತೆಯನ್ನು ಮುಂದಿಟ್ಟು ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವುದು, ಅರ್ಹತೆಯ ಮಾನದಂಡ ಬದಲಿಸುವುದು ಅಥವಾ ಪಾವತಿಗೆ ಕಡಿವಾಣ ಹಾಕುವ ಪರಿಸ್ಥಿತಿ ಬಂದರೆ ಅದು ಆಡಳಿತದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗುತ್ತದೆ.
ಚುನಾವಣಾ ಭರವಸೆಗಳು ಐದು ವರ್ಷಗಳ ಆಡಳಿತಾವಧಿಯನ್ನು ಗಮನದಲ್ಲಿಟ್ಟುಕೊಂಡೇ ನೀಡಲ್ಪಡುತ್ತವೆ. ಹೀಗಿರುವಾಗ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲೇ ಖಜಾನೆಯ ಮೇಲೆ ಒತ್ತಡ ಉಂಟಾಗಿದೆ ಎಂದು ಸರ್ಕಾರವೇ ಒಪ್ಪಿಕೊಳ್ಳುವ ಪರಿಸ್ಥಿತಿ ಎದುರಾದರೆ, ಭರವಸೆ ನೀಡುವ ಮೊದಲು ಅದರ ಆರ್ಥಿಕ ಪರಿಣಾಮವನ್ನು ಯಾಕೆ ಲೆಕ್ಕ ಹಾಕಲಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಅಭಿವೃದ್ಧಿ ಎಂದರೆ ಕೇವಲ ಹಣ ಹಂಚುವುದಲ್ಲ. ರಸ್ತೆಗಳು, ನೀರಾವರಿ, ಆಸ್ಪತ್ರೆಗಳು, ಶಾಲೆಗಳು, ಕೈಗಾರಿಕೆ, ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯಗಳಿಗೆ ನಿರಂತರ ಹೂಡಿಕೆ ಅಗತ್ಯ. ಜನರಿಗೆ ತಾತ್ಕಾಲಿಕ ಪರಿಹಾರ ನೀಡುವ ಯೋಜನೆಗಳಿಗಾಗಿ ದೀರ್ಘಕಾಲೀನ ಅಭಿವೃದ್ಧಿಯನ್ನು ಬಲಿಕೊಡುವುದು ರಾಜ್ಯದ ಭವಿಷ್ಯಕ್ಕೆ ಅಪಾಯಕಾರಿ.
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಇಂತಹ ಆರ್ಥಿಕ ಒತ್ತಡದ ಪ್ರಶ್ನೆಗಳನ್ನು ಎದುರಿಸಿತ್ತು. ಈಗ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರವೂ ಅದೇ ದಾರಿಯಲ್ಲಿ ಸಾಗುತ್ತಿದ್ದರೆ, ಪಾಠವನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕಾಗಿದೆ.
ಜನರಿಗೆ ಕೊಟ್ಟ ಮಾತು ಉಳಿಸುವುದು ಸರ್ಕಾರದ ಕರ್ತವ್ಯ. ಆದರೆ ಆ ಮಾತು ಕೊಡುವ ಮೊದಲು ಅದರ ಬೆಲೆ ಎಷ್ಟು ಎಂಬುದನ್ನು ಲೆಕ್ಕ ಹಾಕುವುದು ರಾಜಕೀಯ ಪಕ್ಷದ ಜವಾಬ್ದಾರಿ. ಲೆಕ್ಕಾಚಾರವಿಲ್ಲದೆ ನೀಡಿದ ಭರವಸೆಗಳು ಕೊನೆಗೆ ಜನರಿಗೆ ಸೌಲಭ್ಯವಲ್ಲ, ಆರ್ಥಿಕ ಹೊರೆಯಾಗಬಹುದು. ಇದೇ ಉಚಿತ ಕೊಡುಗೆ ರಾಜಕಾರಣದ ದೊಡ್ಡ ವೈಫಲ್ಯ
Comments
Post a Comment