ಪ್ರವಾಸೋದ್ಯಮದ ಹೆಸರಿನಲ್ಲಿ ಕರಾವಳಿ-ಮಲೆನಾಡಿನ ಪ್ರಕೃತಿಗೆ ಬೆಲೆ ತೆರಬೇಕೇ?
ಎಚ್ಚರ ಲೇಸು * ಬಿವಿಸೀ
ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026 ಈ ಭಾಗದ ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ. ಕಡಲತೀರಗಳು, ದ್ವೀಪಗಳು, ಜಲಮಾರ್ಗಗಳು, ಜಲಪಾತಗಳು, ಕಾಡುಗಳು ಮತ್ತು ಐತಿಹಾಸಿಕ ತಾಣಗಳನ್ನು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿ ಅಭಿವೃದ್ಧಿಪಡಿಸುವ ಉದ್ದೇಶ ಸ್ವಾಗತಾರ್ಹ. ಆದರೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವುದೇ ಯಶಸ್ಸಿನ ಏಕೈಕ ಮಾನದಂಡವಾದರೆ, ಅದರ ಬೆಲೆ ಪ್ರಕೃತಿಯೇ ತೆರಬೇಕಾಗುತ್ತದೆ.
ಈಗಾಗಲೇ ಕರಾವಳಿಯಲ್ಲಿ ಕಡಲತೀರಗಳ ಮೇಲೆ ಒತ್ತಡ, ತ್ಯಾಜ್ಯ ನಿರ್ವಹಣೆಯ ಕೊರತೆ, ನೀರಿನ ಸಮಸ್ಯೆ, ಸಂಚಾರ ದಟ್ಟಣೆ ಮತ್ತು ಸಿಆರ್‍ಝಡ್ ನಿಯಮಗಳ ಉಲ್ಲಂಘನೆಯಂತಹ ಆತಂಕಗಳಿವೆ. ಮಲೆನಾಡಿನಲ್ಲಿ ಪರಿಸ್ಥಿತಿ ಇನ್ನೂ ಸೂಕ್ಷ್ಮ. ಕಾಡು, ಜಲಪಾತ, ನದಿ, ಗುಡ್ಡ ಮತ್ತು ವನ್ಯಜೀವಿ ಪ್ರದೇಶಗಳಿಗೆ ಹೆಚ್ಚುತ್ತಿರುವ ಪ್ರವಾಸಿಗರ ಒತ್ತಡವನ್ನು ನಿಯಂತ್ರಿಸದಿದ್ದರೆ ಪ್ರವಾಸೋದ್ಯಮವೇ ಪರಿಸರ ಹಾನಿಗೆ ಕಾರಣವಾಗಬಹುದು.
ವಿಶೇಷವಾಗಿ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಜನಪ್ರಿಯ ತಾಣಗಳ ಸ್ಥಿತಿ ಎಚ್ಚರಿಕೆಯ ಗಂಟೆ ಮೊಳಗಿಸುತ್ತಿದೆ. ವಾಹನಗಳ ದಟ್ಟಣೆ, ಪ್ಲಾಸ್ಟಿಕ್ ತ್ಯಾಜ್ಯ, ಅಕ್ರಮ ಪಾಕಿರ್ಂಗ್, ಶಬ್ದ ಮಾಲಿನ್ಯ ಮತ್ತು ನದಿಗಳಲ್ಲಿ ಪ್ರವಾಸಿಗರ ಅಸಡ್ಡೆಯ ವರ್ತನೆಗಳು ಪರಿಸರದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಕೆಲವು ಜಲಪಾತಗಳು ಮತ್ತು ಕಾಡು ಪ್ರದೇಶಗಳಿಗೆ ಪ್ರವಾಸಿಗರ ನಿಯಂತ್ರಣ ಅಗತ್ಯವಾಗಿರುವುದೂ ಇದೇ ಕಾರಣಕ್ಕೆ.
ಆದ್ದರಿಂದ ಹೊಸ ಯೋಜನೆ ಎಂದರೆ ಹೊಸ ಕಟ್ಟಡಗಳು, ರೆಸಾರ್ಟ್‍ಗಳು ಮತ್ತು ಕಾಂಕ್ರೀಟ್ ರಸ್ತೆಗಳ ಸರಣಿ ಎಂಬ ಮನೋಭಾವ ಬದಲಾಗಬೇಕು. ಪ್ರತಿ ಪ್ರವಾಸಿ ತಾಣದ ಪರಿಸರದ ಧಾರಣಾ ಸಾಮಥ್ರ್ಯವನ್ನು ಮೊದಲು ಅಳೆಯಬೇಕು. ಯಾವ ಪ್ರದೇಶಕ್ಕೆ ದಿನಕ್ಕೆ ಎಷ್ಟು ಪ್ರವಾಸಿಗರನ್ನು ಅನುಮತಿಸಬಹುದು, ಎಷ್ಟು ವಾಹನಗಳಿಗೆ ಅವಕಾಶ ನೀಡಬಹುದು ಮತ್ತು ಎಷ್ಟು ಪ್ರಮಾಣದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಬಹುದು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಬೇಕು.
ಕರಾವಳಿ-ಮಲೆನಾಡಿನ ವಿಶೇಷತೆ ಪ್ರಕೃತಿಯಲ್ಲಿದೆ; ಕೃತಕ ಪ್ರವಾಸಿ ಸೌಕರ್ಯಗಳಲ್ಲಿ ಅಲ್ಲ. ಸ್ಥಳೀಯ ಸಮುದಾಯಗಳಿಗೆ ಉದ್ಯೋಗ ಮತ್ತು ಆದಾಯ ಸಿಗುವಂತೆ ಮಾಡುವುದರ ಜೊತೆಗೆ, ಅವರ ಸಾಂಪ್ರದಾಯಿಕ ಜ್ಞಾನ ಮತ್ತು ಪರಿಸರ ಸಂರಕ್ಷಣೆಯ ಪಾತ್ರಕ್ಕೂ ಆದ್ಯತೆ ನೀಡಬೇಕು. ದೊಡ್ಡ ಯೋಜನೆಗಳಿಗಿಂತ ಸ್ಥಳೀಯರ ಪಾಲುದಾರಿಕೆಯ ಸಣ್ಣ ಪ್ರಮಾಣದ ಪರಿಸರ ಸ್ನೇಹಿ ಪ್ರವಾಸೋದ್ಯಮ ಹೆಚ್ಚು ಸ್ಥಿರವಾಗಬಹುದು.
ಸಿಆರ್‍ಝಡ್ ನಿಯಮಗಳು ಮತ್ತು ಅರಣ್ಯ, ಜಲಮೂಲ ಹಾಗೂ ವನ್ಯಜೀವಿ ಸಂರಕ್ಷಣಾ ನಿಯಮಗಳನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ಸಡಿಲಿಸುವಂತಿಲ್ಲ. ಅನುಮತಿ ನೀಡುವ ಮೊದಲು ಪರಿಸರ ಪರಿಣಾಮವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವ ವ್ಯವಸ್ಥೆ ಅಗತ್ಯ. ನಿಯಮ ಉಲ್ಲಂಘಿಸಿ ನಿರ್ಮಿಸಲಾದ ಯೋಜನೆಗಳ ವಿರುದ್ಧವೂ ತಕ್ಷಣದ ಕ್ರಮ ಇರಬೇಕು.
ಪ್ರವಾಸಿಗರು ಬರಬೇಕು. ಸ್ಥಳೀಯರಿಗೆ ಉದ್ಯೋಗವೂ ಸಿಗಬೇಕು. ಆರ್ಥಿಕ ಚಟುವಟಿಕೆಯೂ ಹೆಚ್ಚಬೇಕು. ಆದರೆ ನಾಳೆಯ ಪ್ರವಾಸಿಗನಿಗಾಗಿ ಇಂದಿನ ಪ್ರಕೃತಿಯನ್ನು ನಾಶಪಡಿಸುವ ಅಭಿವೃದ್ಧಿ ದೂರದೃಷ್ಟಿಯದ್ದಲ್ಲ. ಕರಾವಳಿ ಮತ್ತು ಮಲೆನಾಡನ್ನು ಮತ್ತೊಂದು ವಾಣಿಜ್ಯ ಪ್ರವಾಸಿ ತಾಣವನ್ನಾಗಿ ಮಾಡುವ ಬದಲು, ಪ್ರಕೃತಿಯೊಂದಿಗೆ ಹೊಂದಾಣಿಕೆ ಸಾಧಿಸುವ ವಿಶಿಷ್ಟ ಪ್ರವಾಸೋದ್ಯಮ ಮಾದರಿಯಾಗಿ ಬೆಳೆಸಬೇಕು. ಪ್ರವಾಸೋದ್ಯಮವು ಪ್ರಕೃತಿಯಿಂದ ಆದಾಯ ಗಳಿಸುವ ವ್ಯವಸ್ಥೆಯಾಗಬಾರದು; ಪ್ರಕೃತಿಯನ್ನು ಉಳಿಸಿಕೊಂಡೇ ಸ್ಥಳೀಯ ಆರ್ಥಿಕತೆಯನ್ನು ಬೆಳೆಸುವ ಮಾರ್ಗವಾಗಬೇಕು.
Comments
Post a Comment