ಯುಪಿಐ ಶುಲ್ಕ - ಭಾರತ ಮತ್ತೆ ನಗದು ಯುಗಕ್ಕೆ ಹೋಗುತ್ತದೆಯೇ?

 ಅಭಿಮತ   ಬಿವಿಸೀ

..............

ಯುಪಿಐ ಭಾರತದ ಡಿಜಿಟಲ್ ಕ್ರಾಂತಿಯ ಹೆಮ್ಮೆ. 2016ರಲ್ಲಿ ಆರಂಭವಾದ ಯುಪಿಐ ಇಂದು ವರ್ಷಕ್ಕೆ ರೂ 24 ಸಾವಿರ ಕೋಟಿಗೂ ಹೆಚ್ಚು ವಹಿವಾಟು, 314 ಲಕ್ಷ ಕೋಟಿ ರೂ ಮೌಲ್ಯದ ವ್ಯವಹಾರ ನಡೆಸುತ್ತಿದೆ. 44 ಬ್ಯಾಂಕ್‍ಗಳಿಂದ 703 ಬ್ಯಾಂಕ್‍ಗಳಿಗೆ ವಿಸ್ತರಣೆಯಾಗಿದೆ. 2020ರಿಂದ ಶೂನ್ಯ ಎಂಡಿಆರ್ ನೀತಿ ಜಾರಿಯಲ್ಲಿತ್ತು. ಸಣ್ಣ ಅಂಗಡಿಯಿಂದ ಹಿಡಿದು ಬೀದಿ ಬದಿ ವ್ಯಾಪಾರಿಯವರೆಗೆ ಎಲ್ಲರೂ ಕ್ಯೂಆರ್ ಕೋಡ್ ಅಳವಡಿಸಿಕೊಂಡಿದ್ದರು. ಇದೇ ಡಿಜಿಟಲ್ ಇಂಡಿಯಾದ ಯಶಸ್ಸು.

ಆದರೆ ಕೇಂದ್ರ ಸರ್ಕಾರ ಈಗ ಆ ಯಶಸ್ಸಿಗೆ ಹೊಡೆತ ಬೀಳಿಸುವ ನಿರ್ಧಾರ ತೆಗೆದುಕೊಂಡಿದೆ. ಅಕ್ಟೋಬರ್ 15ರಿಂದ 2,000 ರೂ ಮೇಲ್ಪಟ್ಟ ಪರ್ಸನ್-ಟು-ಮಚೆರ್ಂಟ್ ಯುಪಿಐ ವಹಿವಾಟಿಗೆ ಶೇ 0.4 ಎಂಡಿಆರ್ ವಿಧಿಸಲು ನಿರ್ಧರಿಸಿದೆ. 75 ಸಾವಿರ ರೂ ಮೇಲ್ಪಟ್ಟ ವಹಿವಾಟಿಗೆ ಗರಿಷ್ಠ 300 ರೂ ಮಿತಿ. ರೈಲ್ವೆ, ಟೆಲಿಕಾಂ, ವಿಮೆ, ಇಂಧನಕ್ಕೆ 5 ರೂ ಫ್ಲಾಟ್ ಶುಲ್ಕ. ಬಂಡವಾಳ ಮಾರುಕಟ್ಟೆ ವಹಿವಾಟಿಗೆ ಶೇ 0.02. ಗ್ರಾಹಕರಿಗೆ ನೇರ ಶುಲ್ಕವಿಲ್ಲ, ವ್ಯಾಪಾರಿಗಳೇ ಭರಿಸಬೇಕು.

ಸರ್ಕಾರದ ಸಮರ್ಥನೆ

ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ ಇದೆ. ತಿಂಗಳಿಗೆ 1 ಲಕ್ಷ ರೂ.ವರೆಗೆ ಯುಪಿಐ ಮೂಲಕ ಪಡೆಯುವ ವ್ಯಾಪಾರಿಗಳಿಗೆ ಶೂನ್ಯ ಎಂಡಿಆರ್ ಮುಂದುವರಿಯುತ್ತದೆ. ಇದರಿಂದ ಶೇ 96ರಷ್ಟು ವ್ಯಾಪಾರಿ ವಹಿವಾಟಿಗೆ ಪರಿಣಾಮ ಇಲ್ಲ. ಗ್ರಾಮೀಣ ಮತ್ತು ಅರೆ ನಗರ ಪ್ರದೇಶದ ಕ್ಯೂಆರ್ ಪಾವತಿಗಳು ಉಚಿತ. ಪರ್ಸನ್-ಟು-ಪರ್ಸನ್ ವರ್ಗಾವಣೆ ಯಾವಾಗಲೂ ಉಚಿತ. ಸಂಗ್ರಹವಾದ ಎಂಡಿಆರ್‍ನ ಶೇ 70 ಬ್ಯಾಂಕ್‍ಗಳಿಗೆ, ಶೇ 5 ಸಣ್ಣ ವ್ಯಾಪಾರಿಗಳಲ್ಲಿ ಯುಪಿಐ ವಿಸ್ತರಣೆಗೆ ಮೀಸಲಿಡಲಾಗುತ್ತದೆ. ಮೂಲಸೌಕರ್ಯ, ಸೈಬರ್ ಭದ್ರತೆ, ವಂಚನೆ ತಡೆಗಾಗಿ ಹಣ ಬೇಕು ಎಂಬುದು ಎನ್‍ಪಿಸಿಐ ವಾದ.

ಆದರೆ ವ್ಯಾಪಾರಿಗಳ ಆತಂಕ ಬೇರೆ ಇದೆ. ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕ್ಲೋತಿಂಗ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ನಂತಹ ಸಂಘಟನೆಗಳು ಇದು ಹಬ್ಬದ ಋತುವಿನಲ್ಲಿ ಸಣ್ಣ ವ್ಯಾಪಾರವನ್ನು ಮತ್ತೆ ನಗದಿಗೆ ತಳ್ಳುತ್ತದೆ ಎನ್ನುತ್ತಿವೆ. ಕಡಿಮೆ ಲಾಭಾಂಶದಲ್ಲಿ ನಡೆಯುವ ಎಂಎಸ್‍ಎಂಇ ಚಿಲ್ಲರೆ ವ್ಯಾಪಾರಿಗೆ ಇದು ಹೊರೆ. 2,000 ರೂ ಮೇಲ್ಪಟ್ಟ ವಹಿವಾಟು ಹಬ್ಬದಲ್ಲಿ ಸಾಮಾನ್ಯ. ಶುಲ್ಕ ಬಂದಾಗ ನಗದೇ ಸುಲಭದ ದಾರಿಯಾಗುತ್ತದೆ.

"ಸಣ್ಣ ವ್ಯಾಪಾರಿಗಳು ಈಗ ನಗದೋ ಯುಪಿಐಯೋ ಎಂದು ಎರಡು ಬಾರಿ ಯೋಚಿಸುತ್ತಾರೆ" ಎನ್ನುತ್ತಾರೆ ಆರ್‍ಎಐ ಸಿಇಒ ಕುಮಾರ್ ರಾಜಗೋಪಾಲನ್. ಆರು ವರ್ಷಗಳ ಕಾಲ ಕಷ್ಟಪಟ್ಟು ಸದರ್ ಬಜಾರ್, ಚಾಂದನಿ ಚೌಕ್, ಲಜಪತ್ ನಗರದಲ್ಲಿ ಶೇ 90 ಪಾವತಿಯನ್ನು ಯುಪಿಐಗೆ ತಂದಿದ್ದೇವೆ, ಈಗ ಹಿನ್ನಡೆಯಾಗುತ್ತದೆ ಎಂಬುದು ಚೇಂಬರ್ ಆಫ್ ಟ್ರೇಡ್ ಅಭಿಪ್ರಾಯ.

ಇದರಿಂದ ಸರ್ಕಾರದ ಫಾರ್ಮಲೈಸೇಶನ್ ಗುರಿಗೂ ಪೆಟ್ಟು ಬೀಳುತ್ತದೆ. ಯುಪಿಐನಿಂದ ಹೊರಹೋಗುವ ವಹಿವಾಟು ಜಿಎಸ್‍ಟಿ ವರದಿಗೆ ಬರುವುದಿಲ್ಲ. ಕಪ್ಪು ಹಣ ಹೆಚ್ಚಾಗುವ ಅಪಾಯವೂ ಇದೆ. ಸೀರೆ ವ್ಯಾಪಾರಿ ಹೇಳುವಂತೆ 1-2 ಲಕ್ಷ ರೂ ಸೀರೆಗೆ ಶುಲ್ಕ ಬಂದರೆ ಬೆಲೆ ಏರಿಸಬೇಕಾಗುತ್ತದೆ.

ಸರ್ಕಾರ ವಿದೇಶಿ ಒತ್ತಡದ ಆರೋಪವನ್ನು ತಳ್ಳಿಹಾಕಿದೆ. ಇದು ಕಂದಾಯದ ಪ್ರಶ್ನೆಯಲ್ಲ, ಯುಪಿಐ ಉಚಿತವಾಗಿ ಇಡಲು ವರ್ಷಕ್ಕೆ 2,000-2,500 ಕೋಟಿ ರೂ ಮಾತ್ರ ಬೇಕು, ಆಹಾರ ಸಬ್ಸಿಡಿ 2 ಲಕ್ಷ ಕೋಟಿ ಮುಂದೆ ಇದು ಸಣ್ಣದು ಎಂದು ತಜ್ಞರು ಹೇಳುತ್ತಾರೆ. ಎನ್‍ಪಿಸಿಐ 2025ರಲ್ಲಿ 3,270 ಕೋಟಿ ಗಳಿಸಿ 1,552 ಕೋಟಿ ಉಳಿತಾಯ ಮಾಡಿದೆ.

ಪ್ರಶ್ನೆ ಹಣದ್ದಲ್ಲ, ನಂಬಿಕೆಯದ್ದು. ಉಚಿತವಾಗಿ ಬೆಳೆದ ಅಭ್ಯಾಸಕ್ಕೆ ಶುಲ್ಕ ಬಂದರೆ, ಜನ ಮತ್ತೆ ನಗದಿನತ್ತ ಹೊರಳಿದರೆ, ಡಿಜಿಟಲ್ ಇಂಡಿಯಾ ಹಿಂದಕ್ಕೆ ಹೋಗುತ್ತದೆಯೇ ಎಂಬುದು ಕಳವಳ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI