ದೇಶಕ್ಕಾಗಿ ನೀವು ಏನು ಮಾಡುವಿರಿ ಎಂಬ ಪ್ರಶ್ನೆ ಕೇಳುವ ಮುನ್ನ ಸರ್ಕಾರ ತನ್ನ ಹೊಣೆಗೇಡಿತನಕ್ಕೆ ಉತ್ತರ ನೀಡಲಿ
ಬಿವಿಸೀ
ದೇಶದ ಹಣಕಾಸು ಸಚಿವೆಯವರು ದೇಶದ ಯುವಶಕ್ತಿಗೆ ಕರೆ ನೀಡಿದ್ದಾರೆ, ``ದೇಶ ನಿಮಗಾಗಿ ಏನು ಮಾಡಿತು ಎಂದು ಕೇಳಬೇಡಿ, ನೀವು ದೇಶಕ್ಕಾಗಿ ಏನು ಮಾಡಬಲ್ಲಿರಿ ಎಂದು ಹೇಳಿ'' ಎಂದು. ಮಾತು ಕೇಳಲು ಚೆನ್ನಾಗಿದೆ, ಆದರೆ ಇದು ವಾಸ್ತವದಿಂದ ಸಂಪೂರ್ಣ ಕಳಚಿಕೊಂಡ, ಅತ್ಯಂತ ಬೇಜವಾಬ್ದಾರಿ ಮತ್ತು ಆಡಂಬರದ ಹೇಳಿಕೆ.
ಇಂದು ದೇಶದ ಯುವಜನತೆ ಯಾವ ಸ್ಥಿತಿಯಲ್ಲಿದೆ? ಬದುಕಲು ಉದ್ಯೋಗವಿಲ್ಲ, ಕಲಿಯಲು ಸರಿಯಾದ ಶಿಕ್ಷಣವಿಲ್ಲ, ಕೈಯಲ್ಲಿ ದುಡ್ಡಿಲ್ಲ, ಮನಸ್ಸಿನಲ್ಲಿ ಭರವಸೆಯಿಲ್ಲ. ಇಂತಹ ಬಡತನದಲ್ಲಿ, ನಿರುದ್ಯೋಗದಲ್ಲಿ ನರಳುತ್ತಿರುವ ಕೋಟ್ಯಂತರ ಯುವಕರಿಗೆ ತ್ಯಾಗದ ಪಾಠ ಹೇಳುವುದು ಎಷ್ಟು ಸುಲಭದ ಕೆಲಸ! ಇದು ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು, ತನ್ನ ಜವಾಬ್ದಾರಿಯನ್ನು ಜನರ ಹೆಗಲಿಗೆ ವರ್ಗಾಯಿಸಲು ಮಾಡುತ್ತಿರುವ ಕುತಂತ್ರವೇ ಆಗಿದೆ.
ದೇಶದಲ್ಲಿ ನಿರುದ್ಯೋಗದ ಪ್ರಮಾಣ ಭಯಾನಕ ಮಟ್ಟ ತಲುಪಿದೆ. ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಓದಿದ ಲಕ್ಷಾಂತರ ಯುವಕ ಯುವತಿಯರು ಜವಾನ, ಪ್ಯೂನ್ ಹುದ್ದೆಗಳಿಗೂ ಅರ್ಜಿ ಸಲ್ಲಿಸುತ್ತಿರುವ ದುಃಸ್ಥಿತಿ ಇದೆ. ಅಂಕಿಅಂಶಗಳ ಪ್ರಕಾರ ಅತಿ ಹೆಚ್ಚು ನಿರುದ್ಯೋಗ ಇರುವುದು ಇಪ್ಪತ್ತರಿಂದ ಮೂವತ್ತು ವರ್ಷದೊಳಗಿನ ಯುವಕರಲ್ಲೇ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂಬ ಭರವಸೆ ನೀಡಿದ್ದ ಸರ್ಕಾರ ಇಂದು ಉದ್ಯೋಗ ಕೇಳಿದವರನ್ನೇ ಅಪರಾಧಿಗಳಂತೆ ನೋಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯುವಕರು ದೇಶಕ್ಕಾಗಿ ಏನು ಮಾಡಬೇಕು? ಖಾಲಿ ಹೊಟ್ಟೆಯಲ್ಲಿ ದೇಶಭಕ್ತಿಯ ಹಾಡು ಹಾಡಲು ಸಾಧ್ಯವೇ?
ಇನ್ನು ಶಿಕ್ಷಣ ವ್ಯವಸ್ಥೆಯಂತೂ ಸಂಪೂರ್ಣ ಕುಸಿದು ಬಿದ್ದಿದೆ. ಇಡೀ ದೇಶದ ಮಟ್ಟದಲ್ಲಿ ಒಂದು ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸುವ ಯೋಗ್ಯತೆಯೂ ಈ ಸರ್ಕಾರಕ್ಕೆ ಇಲ್ಲ. ವೈದ್ಯಕೀಯ ಪ್ರವೇಶ ಪರೀಕ್ಷೆ, ಅರ್ಹತಾ ಪರೀಕ್ಷೆ, ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಅವ್ಯವಸ್ಥೆ, ತಾಂತ್ರಿಕ ದೋಷ ಸಾಮಾನ್ಯವಾಗಿ ಬಿಟ್ಟಿದೆ. ಲಕ್ಷಾಂತರ ವಿದ್ಯಾರ್ಥಿಗಳ ಶ್ರಮ, ಕನಸು, ಭವಿಷ್ಯವನ್ನು ಹಾಳು ಮಾಡಿದ ಸರ್ಕಾರಕ್ಕೆ ಯುವಕರನ್ನು ಪ್ರಶ್ನಿಸುವ ಯಾವ ನೈತಿಕ ಹಕ್ಕಿದೆ?
ಸರ್ಕಾರದ ಕರ್ತವ್ಯವೇನು? ತನ್ನ ದೇಶದ ಜನರಿಗೆ ಉತ್ತಮ ಶಿಕ್ಷಣ ನೀಡುವುದು, ಆರೋಗ್ಯ ನೀಡುವುದು, ಉದ್ಯೋಗ ನೀಡುವುದು, ಭದ್ರತೆ ನೀಡುವುದು. ಈ ಯಾವುದನ್ನೂ ನೀಡದ ಸರ್ಕಾರ ನೀವು ದೇಶಕ್ಕಾಗಿ ಏನು ಮಾಡಿದಿರಿ ಎಂದು ಕೇಳುವುದು ನಾಚಿಕೆಗೇಡಿನ ಸಂಗತಿ. ಇದು ತನ್ನ ಕರ್ತವ್ಯ ಲೋಪವನ್ನು ಮುಚ್ಚಿಕೊಳ್ಳಲು ಮಾಡುತ್ತಿರುವ ತಂತ್ರವಲ್ಲದೆ ಬೇರೇನಲ್ಲ.
ರೈತರ ಮಕ್ಕಳು ಬೀದಿಗೆ ಬಿದ್ದಿದ್ದಾರೆ, ಅಗ್ನಿವೀರನಂತಹ ಅವೈಜ್ಞಾನಿಕ ಯೋಜನೆಗಳು ಯುವಕರ ನಾಲ್ಕು ವರ್ಷದ ಸೇವೆಯನ್ನೂ ಅನುಮಾನಕ್ಕೆ ತಳ್ಳಿವೆ. ಖಾಯಂ ಉದ್ಯೋಗದ ಬದಲು ಗುತ್ತಿಗೆ, ಹೊರಗುತ್ತಿಗೆ ಹೆಚ್ಚಾಗಿದೆ. ಇಂತಹ ಅನಿಶ್ಚಿತತೆಯಲ್ಲಿ ಬದುಕುತ್ತಿರುವ ಜನರ ಬಳಿ ತ್ಯಾಗ ಮಾಡಲು ಏನೂ ಉಳಿದಿಲ್ಲ. ಅವರ ಕನಸುಗಳನ್ನೂ ಈ ಸರ್ಕಾರ ಕಸಿದುಕೊಂಡಿದೆ.
ಆದ್ದರಿಂದ ಸಚಿವರೇ, ಮೊದಲು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿ. ದೇಶದಲ್ಲಿ ಖಾಲಿ ಇರುವ 75 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರದ ಹುದ್ದೆಗಳನ್ನು ಭರ್ತಿ ಮಾಡಿ. ಪರೀಕ್ಷೆಗಳನ್ನು ಸೋರಿಕೆಯಿಲ್ಲದೆ ನಡೆಸಿ. ಶಿಕ್ಷಣವನ್ನು ಮಾರಾಟದ ಸರಕನ್ನಾಗಿ ಮಾಡುವುದನ್ನು ನಿಲ್ಲಿಸಿ. ಯುವಕರಿಗೆ ಘನತೆಯ ಬದುಕು ಕಟ್ಟಿಕೊಡಿ. ಆ ನಂತರ ದೇಶಕ್ಕಾಗಿ ಏನು ಮಾಡಿದಿರಿ ಎಂದು ಕೇಳಿ. ಅಲ್ಲಿಯವರೆಗೆ ಈ ಬೋಗಸ್ ಭಾಷಣಗಳನ್ನು ನಿಲ್ಲಿಸುವುದು ಒಳಿತು.
Comments
Post a Comment