ತರ್ಕವಿಲ್ಲದ ಸಂಪುಟ ವಿಸ್ತರಣೆ: ಪ್ರಾದೇಶಿಕ ಅನ್ಯಾಯ, ಜಾತಿ ಪ್ರೇಮ: ಅಸ್ಥಿರತೆಯತ್ತ ಕಾಂಗ್ರೆಸ್ ಸರ್ಕಾರದ ಹೆಜ್ಜೆ
ಹೈಕಮಾಂಡ್ ಕಣ್ಣುಮುಚ್ಚಾಲೆ ಆಟಕ್ಕೆ ತತ್ತರಿಸಿದ ಕರಾವಳಿ! ಕಾರ್ಯಕರ್ತರ ಆಕ್ರೋಶ
ಕೇಳ್ರಪ್ಪೊ ಕೇಳಿ * ಬಿವಿಸೀ
ಬರೋಬ್ಬರಿ ಎರಡು ತಿಂಗಳ ಕಾಲ ಹೈಕಮಾಂಡ್ ಅಂಗಳದಲ್ಲಿ ಹಗ್ಗ ಜಗ್ಗಾಟ, ತಂಟೆ-ತಕರಾರುಗಳ ನಾಟಕ ನಡೆಸಿ ಕೊನೆಗೂ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಪ್ರಕ್ರಿಯೆಯು ಬೆಳಕು ನೀಡುವ ಬದಲು ಕೇವಲ ಕೆಂಡವನ್ನಷ್ಟೇ ಕಾರಿದೆ! ನಾಯಕತ್ವದ ಕಸರತ್ತಿನಲ್ಲಿ `ಆಡಳಿತ' ಎಂಬುದನ್ನು ಮರೆತು ಕುಳಿತ ಕಾಂಗ್ರೆಸ್ ಹೈಕಮಾಂಡ್, ಈಗ ಸುಮಾರು 40ಕ್ಕೂ ಹೆಚ್ಚು ಶಾಸಕರ ತೀವ್ರ ಅಸಮಾಧಾನದ ಬೆಂಕಿಯಲ್ಲಿ ಬೇಯುತ್ತಿದೆ. ಆಡಳಿತ ಪಕ್ಷದ ಎಲ್ಲ 135 ಶಾಸಕರಿಗೂ ಮಂತ್ರಿಗಿರಿ ನೀಡಲು ಸಾಧ್ಯವಿಲ್ಲ ಎಂಬುದು ನಿಜ. ಆದರೆ, ಈ ಸಚಿವ ಸಂಪುಟ ರಚನೆಯಲ್ಲಿ ಅನುಸರಿಸಲಾದ ತರ್ಕರಹಿತ ಹಾಗೂ ಕಣ್ಣುಮುಚ್ಚಾಲೆ ಮಾನದಂಡಗಳನ್ನು ಕಂಡರೆ ಪ್ರಬುದ್ಧ ವಿಶ್ಲೇಷಕರು ಮತ್ತು ಸಾಮಾನ್ಯ ನಾಗರಿಕರು ಹುಬ್ಬೇರಿಸುವಂತಾಗಿದೆ.
ಈ ಬಾರಿಯ ವಿಸ್ತರಣೆಯಲ್ಲಿ ಪ್ರಾದೇಶಿಕ ಸಮತೋಲನ ಎಂಬುದು ಸಂಪೂರ್ಣವಾಗಿ ಗಾಳಿಗೆ ತೂರಲ್ಪಟ್ಟಿದೆ. 6 ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್ ಗೆಲ್ಲಿಸಿ ಕೊಟ್ಟ ಉತ್ತರ ಕನ್ನಡ ಜಿಲ್ಲೆಗೆ ಸಂಪುಟದಲ್ಲಿ ಶೂನ್ಯ ಪ್ರಾತಿನಿಧ್ಯ ನೀಡಲಾಗಿದೆ! ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದು, ಆ ಬಳಿಕ ಸಚಿವ ಸ್ಥಾನ ಕಳೆದುಕೊಂಡ ಭಟ್ಕಳದ ಮೀನುಗಾರ ಸಮುದಾಯದ ಪ್ರಭಾವಿ ನಾಯಕ ಮಂಕಾಳ ವೈದ್ಯ ಅವರಿಗೂ ಈ ಬಾರಿ ಶಿವಕುಮಾರ್ ಸಂಪುಟದಲ್ಲಿ ಸ್ಥಾನ ನಿರಾಕರಿಸಲಾಗಿದೆ. ಕರಾವಳಿ ಹಾಗೂ ಮಲೆನಾಡಿನ ಉಡುಪಿ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೂ ಸಂಪುಟದಲ್ಲಿ ಯಾವುದೇ ಜಾಗ ಸಿಕ್ಕಿಲ್ಲ. ಅಷ್ಟೇ ಅಲ್ಲದೆ, ಉತ್ತರ ಕರ್ನಾಟಕದ ರಾಯಚೂರು, ಯಾದಗಿರಿ ಮತ್ತು ರಾಮನಗರದಂತಹ ಜಿಲ್ಲೆಗಳು ಕೂಡ ಪ್ರಾತಿನಿಧ್ಯವಿಲ್ಲದೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಜೊತೆಗೆ, ಜಾತಿ ಸಮತೋಲನದ ವಿಷಯದಲ್ಲೂ ಹೈಕಮಾಂಡ್ ಘೋರ ವೈಫಲ್ಯ ಅನುಭವಿಸಿದೆ. ಬ್ರಾಹ್ಮಣ ಸೇರಿದಂತೆ ಕೆಲವು ನಿರ್ದಿಷ್ಟ ಸಮುದಾಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದರೆ, ಕೆಲವು ಪ್ರಭಾವಿ ಸಮುದಾಯಗಳಿಗೆ (ಉದಾ: ಒಕ್ಕಲಿಗ, ಲಿಂಗಾಯಿತ) ಮಿತಿಯಿಲ್ಲದ ಮನ್ನಣೆ ನೀಡಲಾಗಿದೆ. ಕಾಂಗ್ರೆಸ್‍ನ ಸ್ವಯಂಪ್ರಕಟಿತ `ಅಹಿಂದ' ಸಿದ್ಧಾಂತಕ್ಕೂ ಎಳ್ಳುನೀರು ಬಿಡಲಾಗಿದೆ. ಮೀನುಗಾರರ ನಾಯಕ ಮಂಕಾಳ ವೈದ್ಯರನ್ನು ಕೈಬಿಟ್ಟು, ಅವರ ಬದಲಿಗೆ ದಾವಣಗೆರೆಯ ಮೇಲ್ವರ್ಗದ ಲಿಂಗಾಯತ ಸಮುದಾಯದ ಪ್ರಭಾವಿ ಮನೆತನದ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಮಣೆ ಹಾಕಲಾಗಿದೆ. ಮಲ್ಲಿಕಾರ್ಜುನ್ ಅವರ ಕುಟುಂಬದಲ್ಲಿ ಮಗ ಶಾಸಕ, ಹೆಂಡತಿ ಸಂಸದೆ! ಆದರೂ ಅವರಿಗೆ ಮತ್ತೆ ಅಧಿಕಾರದ ಹೂರಣ ಉಣಿಸಲಾಗಿದೆ.
ಮಂಡ್ಯ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಅತಿಯಾದ ಪ್ರಾತಿನಿಧ್ಯ ನೀಡಿ, ಉಳಿದ ಜಿಲ್ಲೆಗಳನ್ನು ಭಿಕ್ಷುಕರೆಂತೆ ನಡೆಸಿಕೊಳ್ಳಲಾಗಿದೆ. `ಸಿಕ್ಕದವರಿಗೆ ಸೀರುಂಡೆ' ಎಂಬ ಕನ್ನಡದ ಗಾದೆಯು ಈ ಸಂಪುಟ ವಿಸ್ತರಣೆಯ ತಾರತಮ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಎರಡು ತಿಂಗಳ ಕಾಲ ದೆಹಲಿಯಲ್ಲಿ ನಡೆಸಿದ ಕಸರತ್ತು ಇಷ್ಟೇನಾ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಈಗಾಗಲೇ ಇಬ್ಬರು ಶಾಸಕರು ರಾಜೀನಾಮೆ ಘೋಷಿಸಿದ್ದು, ಭಟ್ಕಳದಲ್ಲಿ ಮಂಕಾಳ ವೈದ್ಯ ಬೆಂಬಲಿಗರು ಪಕ್ಷ ತೊರೆಯಲು ಒತ್ತಾಯಿಸುತ್ತಿದ್ದಾರೆ. ಕಾರ್ಯಕರ್ತರ ಈ ಬಂಡಾಯವು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿ, ತಳಹದಿಯನ್ನೇ ಅಲ್ಲಾಡಿಸುವಷ್ಟು ಸ್ಫೋಟಕ ಸ್ವರೂಪ ಪಡೆದುಕೊಂಡಿದೆ.
Comments
Post a Comment