ಭ್ರಷ್ಟರಿಗೇ ಬಹುಮಾನ: ಕಾಂಗ್ರೆಸ್‍ನ ನೈತಿಕ ದಿವಾಳಿತನದ ಘೋಷಣೆ
ಹೇಳುವುದು ಕಾಶೀಕಾಂಡ.... * ಬಿವಿಸೀ
ರಾಜಕೀಯದಲ್ಲಿ ಕೆಲವು ನಿರ್ಧಾರಗಳು ಸರ್ಕಾರದ ನಿಜವಾದ ಮುಖವನ್ನು ಬಯಲು ಮಾಡುತ್ತವೆ. ಬಳ್ಳಾರಿಯ ಬಿ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿರುವ ನಿರ್ಧಾರ ಅಂತಹದ್ದೇ ಒಂದು. ಇದು ಕೇವಲ ಸಚಿವ ಸಂಪುಟ ವಿಸ್ತರಣೆಯ ವಿಷಯವಲ್ಲ; ಭ್ರಷ್ಟಾಚಾರದ ವಿರುದ್ಧ ತಾನು ಪ್ರತಿಪಾದಿಸುತ್ತಿರುವ ನೈತಿಕ ಮೌಲ್ಯಗಳನ್ನೇ ಕಾಂಗ್ರೆಸ್ ಚರಂಡಿಗೆ ಬಿಸಾಡಿದ ಕ್ಷಣ.
ಕಾನೂನಿನ ದೃಷ್ಟಿಯಲ್ಲಿ ಅಪರಾಧ ಸಾಬೀತಾಗುವವರೆಗೆ ಪ್ರತಿಯೊಬ್ಬರೂ ನಿರ್ದೋಷಿಗಳು. ಆದರೆ ಸಚಿವ ಸ್ಥಾನವು ಕಾನೂನು ಹಕ್ಕಲ್ಲ; ಅದು ಸಾರ್ವಜನಿಕ ವಿಶ್ವಾಸದ ಸಂಕೇತ. ಆದ್ದರಿಂದ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ತನಿಖೆ ಪೂರ್ಣಗೊಳ್ಳುವ ಮೊದಲೇ ಮತ್ತೆ ಅಧಿಕಾರಕ್ಕೆ ತರುವುದು ಕಾನೂನಿನ ಪ್ರಶ್ನೆಯಲ್ಲ, ರಾಜಕೀಯ ನೈತಿಕತೆಯ ಪ್ರಶ್ನೆ.
ಬಿ ನಾಗೇಂದ್ರ ಅವರ ವಿರುದ್ಧದ ಆರೋಪಗಳು ಸಾರ್ವಜನಿಕ ಹಣದ ದುರುಪಯೋಗ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದವು. ಜಾರಿ ನಿರ್ದೇಶನಾಲಯದ ತನಿಖೆ, ಬಂಧನ, ದೀರ್ಘಕಾಲದ ಕಸ್ಟಡಿ, ಸಚಿವ ಸ್ಥಾನಕ್ಕೆ ರಾಜೀನಾಮೆ - ಇವೆಲ್ಲವೂ ರಾಜ್ಯದ ಜನರ ನೆನಪಿನಲ್ಲಿ ಇನ್ನೂ ತಾಜಾ ಆಗಿವೆ. ಅವರಿಗೆ ಜಾಮೀನು ದೊರೆತಿದೆ. ಆದರೆ ಜಾಮೀನು ಎಂದರೆ ಆರೋಪಗಳಿಂದ ವಿಮುಕ್ತಿ ಅಲ್ಲ. ತನಿಖೆಯೂ ಇನ್ನೂ ಅಂತಿಮ ಹಂತ ತಲುಪಿಲ್ಲ; ನ್ಯಾಯಾಲಯವೂ ಅವರನ್ನು ನಿರ್ದೋಷಿ ಎಂದು ಘೋಷಿಸಿಲ್ಲ. ಇಂತಹ ಸಂದರ್ಭದಲ್ಲಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದು ಸರ್ಕಾರದ ನೈತಿಕತೆಯನ್ನೇ ಪ್ರಶ್ನಿಸುವ ನಿರ್ಧಾರವಾಗಿದೆ. ಈ ಮರುನೇಮಕ ಜನರಲ್ಲಿ ಮತ್ತೊಂದು ಪ್ರಶ್ನೆಯನ್ನೂ ಹುಟ್ಟಿಸುತ್ತದೆ. ಭ್ರಷ್ಟಾಚಾರದ ಆರೋಪಗಳ ನಡುವೆಯೂ ಅಧಿಕಾರದ ಬಾಗಿಲು ತೆರೆದಿದ್ದರೆ, ಅಧಿಕಾರ ಮತ್ತು ಆರೋಪಗಳ ನಡುವೆ ರಾಜಕೀಯ ಹೊಂದಾಣಿಕೆ ನಡೆಯುತ್ತಿದೆಯೇ ಎಂಬ ಅನುಮಾನಗಳನ್ನು ಸರ್ಕಾರವೇ ಆಹ್ವಾನಿಸಿಕೊಂಡಂತಾಗಿದೆ.
ಮಂಡ್ಯದ ಸಚಿವ ಎನ್ ಚೆಲುವರಾಯಸ್ವಾಮಿ ಅವರ ವಿಚಾರವೂ ಇದೇ ಚರ್ಚೆಯನ್ನು ನೆನಪಿಸುತ್ತದೆ. ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ವೆಚ್ಚವಾಗಿದ್ದ 30 ಕೋಟಿಗೂ ಅಧಿಕ ರೂಪಾಯಿಗಳ ಬಳಕೆ, ಕಾಮಗಾರಿಗಳ ನಿರ್ವಹಣೆ ಮತ್ತು ಹಣದ ಪಾರದರ್ಶಕತೆ ಕುರಿತು ಗಂಭೀರ ಆರೋಪಗಳು ಹಾಗೂ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಆ ವಿವಾದಗಳ ರಾಜಕೀಯ ಪ್ರತಿಧ್ವನಿ ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ. ಇಂತಹ ಪ್ರಶ್ನೆಗಳ ನಡುವೆಯೂ ಸಚಿವ ಸ್ಥಾನದಲ್ಲಿ ಮುಂದುವರಿಸಿರುವುದು ಸರ್ಕಾರದ ಆದ್ಯತೆಗಳ ಬಗ್ಗೆ ಅನುಮಾನಗಳನ್ನು ಗಟ್ಟಿಗೊಳಿಸುತ್ತದೆ.
ವಿಚಿತ್ರವೆಂದರೆ ಇದೇ ಕಾಂಗ್ರೆಸ್ ಪ್ರತಿದಿನ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ವಿಚಾರದಲ್ಲಿ ತೀವ್ರ ವಾಗ್ದಾಳಿ ನಡೆಸುತ್ತದೆ. ಆದರೆ ಕರ್ನಾಟಕದಲ್ಲಿ ತನ್ನದೇ ಸರ್ಕಾರ ಆರೋಪಗಳ ನೆರಳಿನಲ್ಲಿರುವ ನಾಯಕರನ್ನು ಮತ್ತೆ ಅಧಿಕಾರಕ್ಕೆ ತರುತ್ತಿದ್ದರೆ, ಅದರ ಮಾತುಗಳಿಗೆ ನೈತಿಕ ಬಲ ಎಲ್ಲಿಂದ ಬರಬೇಕು? ಅತ್ತೆ ಹಾದರ ಮಾಡಿ ನೈತಿಕತೆ ಬೋಧಿಸಿದ ಉದಾಹರಣೆ ಇದು. ವಿರೋಧ ಪಕ್ಷದಲ್ಲಿದ್ದಾಗ ಒಂದು ಮಾನದಂಡ, ಅಧಿಕಾರಕ್ಕೆ ಬಂದಾಗ ಮತ್ತೊಂದು ಮಾನದಂಡ ಎಂಬ ದ್ವಂದ್ವ ನೀತಿಯನ್ನು ಜನರು ಗುರುತಿಸದೇ ಇರುವಷ್ಟು ಮುಗ್ಧರಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ಉತ್ತರ ನೀಡಬೇಕಿರುವುದು ಭಾಷಣಗಳಿಂದಲ್ಲ, ನಡೆಗಳಿಂದ. ಭ್ರಷ್ಟಾಚಾರದ ವಿರುದ್ಧದ ಹೋರಾಟ ಎದುರಾಳಿಗಳ ವಿರುದ್ಧದ ರಾಜಕೀಯ ಆಯುಧವಾಗಬಾರದು; ಅದು ಮೊದಲು ಸ್ವಪಕ್ಷದ ಮೇಲೆಯೇ ಅನ್ವಯಿಸಬೇಕು. ಬಿ ನಾಗೇಂದ್ರ ಅವರ ಮರುನೇಮಕ ಕಾಂಗ್ರೆಸ್‍ಗೆ ಕೇವಲ ರಾಜಕೀಯ ನಿರ್ಧಾರವಾಗಿರಬಹುದು. ಆದರೆ ಜನರ ದೃಷ್ಟಿಯಲ್ಲಿ ಅದು ಭ್ರಷ್ಟಾಚಾರದ ವಿರುದ್ಧದ ತನ್ನದೇ ನೈತಿಕ ಹಕ್ಕನ್ನು ದುರ್ಬಲಗೊಳಿಸಿಕೊಂಡಿರುವ ಸ್ವಯಂಕೃತ ಅಪರಾಧವಾಗಿ ದಾಖಲಾಗುವ ಸಾಧ್ಯತೆ ಹೆಚ್ಚು.
Comments
Post a Comment