ಬಿಜೆಪಿಯ `ಅಜೇಯ ಕೋಟೆ'ಯಲ್ಲಿ ಬಿರುಕುಗಳು

 ಸೀಳುನೋಟ * ಬಿವಿಸೀ

ಕಳೆದ ಒಂದು ದಶಕದಿಂದ ರಾಷ್ಟ್ರೀಯ ರಾಜಕಾರಣದಲ್ಲಿ ಅಜೇಯ ಶಕ್ತಿಯಾಗಿ ಹೊರಹೊಮ್ಮಿದ್ದ ಭಾರತೀಯ ಜನತಾ ಪಕ್ಷ ಈಗ ಹಲವು ರಾಜ್ಯಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಉಳಿದಿದ್ದರೂ ಹಿಂದಿನಂತೆಯೇ ಏಕಪಕ್ಷೀಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂಬ ಸೂಚನೆಗಳು ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಸ್ಪಷ್ಟವಾಗಿವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಸಂಘಟನೆ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಮಹಾರಾಷ್ಟ್ರದಲ್ಲಿ ಮಿತ್ರಪಕ್ಷಗಳೊಂದಿಗೆ ಅಧಿಕಾರದಲ್ಲಿದ್ದರೂ ಒಳಜಗಳ ಮತ್ತು ನಾಯಕತ್ವದ ಪೈಪೆÇೀಟಿ ಮುಂದುವರಿದಿದೆ. ಹರಿಯಾಣ ಹಾಗೂ ಇತರ ಕೆಲವು ರಾಜ್ಯಗಳಲ್ಲೂ ಸ್ಥಳೀಯ ಮಟ್ಟದಲ್ಲಿ ಅಸಮಾಧಾನಗಳು ವ್ಯಕ್ತವಾಗುತ್ತಿವೆ. ಇಂತಹ ಬೆಳವಣಿಗೆಗಳು ಪಕ್ಷದ ಬಲವಾದ ಸಂಘಟನೆಗೂ ಸವಾಲುಗಳನ್ನು ಸೃಷ್ಟಿಸುತ್ತಿವೆ.

ಬಿಜೆಪಿಯ ದೊಡ್ಡ ಶಕ್ತಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತು ರಾಷ್ಟ್ರೀಯತೆಯ ರಾಜಕೀಯ. ಆದರೆ ಕೇವಲ ಜನಪ್ರಿಯ ನಾಯಕತ್ವದ ಮೇಲೆ ಮಾತ್ರ ಚುನಾವಣೆಗಳನ್ನು ಗೆಲ್ಲುವುದು ಯಾವಾಗಲೂ ಸಾಧ್ಯವಿಲ್ಲ. ರಾಜ್ಯಗಳಲ್ಲಿನ ಸ್ಥಳೀಯ ಸಮಸ್ಯೆಗಳು, ರೈತರ ಅಸಮಾಧಾನ, ನಿರುದ್ಯೋಗ, ಬೆಲೆ ಏರಿಕೆ, ಅಭ್ಯರ್ಥಿಗಳ ಆಯ್ಕೆ ಮತ್ತು ಸ್ಥಳೀಯ ನಾಯಕತ್ವದ ಕೊರತೆ ಮತದಾರರ ನಿರ್ಧಾರವನ್ನು ಬದಲಾಯಿಸಬಲ್ಲ ಅಂಶಗಳಾಗಿವೆ.

ಪಕ್ಷದೊಳಗಿನ ಭಿನ್ನಾಭಿಪ್ರಾಯಗಳೂ ಕೆಲವೆಡೆ ಬಹಿರಂಗವಾಗುತ್ತಿವೆ. ಹಿರಿಯ ನಾಯಕರ ನಿರ್ಲಕ್ಷ್ಯ, ಹೊಸ ನಾಯಕತ್ವದ ವಿಶ್ವಾಸಾರ್ಹತೆಯ ಕೊರತೆ, ಬೆಲೆ ಏರಿಕೆ ಮತ್ತು ಟಿಕೆಟ್ ಹಂಚಿಕೆಯ ವಿವಾದಗಳು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿರುವ ಉದಾಹರಣೆಗಳು ಕಾಣಿಸುತ್ತಿವೆ. ಬಲಿಷ್ಠ ಸಂಘಟನೆಯಿದ್ದರೂ ಕಾರ್ಯಕರ್ತರ ಉತ್ಸಾಹ ಕುಗ್ಗಿದರೆ ಅದರ ಪರಿಣಾಮ ಚುನಾವಣೆಯಲ್ಲಿ ಕಾಣಿಸಿಕೊಳ್ಳುವುದು ಸಹಜ.

ಆದಾಗ್ಯೂ ಬಿಜೆಪಿಯನ್ನು ದುರ್ಬಲ ಪಕ್ಷವೆಂದು ನಿರ್ಧರಿಸುವುದು ಇನ್ನೂ ಆತುರದ ಮಾತು. ದೇಶವ್ಯಾಪಿ ಸಂಘಟನೆ, ಆರ್‍ಎಸ್‍ಎಸ್‍ನ ಬೆಂಬಲ, ಬಲಿಷ್ಠ ಚುನಾವಣಾ ಯಂತ್ರ, ಸಂಪನ್ಮೂಲಗಳು ಮತ್ತು ಪರಿಣಾಮಕಾರಿ ಪ್ರಚಾರ ವ್ಯವಸ್ಥೆ ಪಕ್ಷದ ಪ್ರಮುಖ ಆಸ್ತಿಗಳಾಗಿವೆ. ಪ್ರತಿಸ್ಪರ್ಧಿ ಪಕ್ಷಗಳು ಅನೇಕ ರಾಜ್ಯಗಳಲ್ಲಿ ಇನ್ನೂ ಪರ್ಯಾಯ ನಾಯಕತ್ವ ಮತ್ತು ಏಕತೆಯನ್ನು ನಿರ್ಮಿಸಲು ಹೋರಾಡುತ್ತಿವೆ.

ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷ ಶಾಶ್ವತವಾಗಿ ಅಜೇಯವಾಗಿರುವುದಿಲ್ಲ. ನಿರಂತರ ಆತ್ಮಾವಲೋಕನ, ಜನರ ಸಮಸ್ಯೆಗಳಿಗೆ ಸ್ಪಂದನೆ ಮತ್ತು ಸಂಘಟನೆಯೊಳಗಿನ ಅಸಮಾಧಾನವನ್ನು ನಿವಾರಿಸಿಕೊಳ್ಳುವ ಪಕ್ಷವೇ ದೀರ್ಘಕಾಲ ಉಳಿಯುತ್ತದೆ. ಸರ್ವಾಧಿಕಾರದ ಲಕ್ಷಣ ತೋರುವ ಪಕ್ಷಗಳು ಧೂಳೀಪಟವಾಗುತ್ತವೆ.ಇತ್ತೀಚಿನ ಹಿನ್ನಡೆಗಳು ಬಿಜೆಪಿಯ ಪತನದ ಸಂಕೇತಗಳಲ್ಲ; ಆದರೆ ಅಧಿಕಾರ ಮತ್ತು ಜನಬೆಂಬಲ ಶಾಶ್ವತವಲ್ಲ ಎಂಬ ಎಚ್ಚರಿಕೆಯನ್ನು ಮಾತ್ರ ಖಂಡಿತವಾಗಿ ನೀಡುತ್ತಿವೆ. ರಾಜಕೀಯದಲ್ಲಿ ಅಜೇಯ ಕೋಟೆಗಳೂ ಕಾಲಾನುಸಾರ ಬಿರುಕು ಬಿಡಬಹುದು; ಆ ಬಿರುಕುಗಳನ್ನು ಸರಿಪಡಿಸುವ ಸಾಮಥ್ರ್ಯವೇ ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

WHEN COMMUNAL POLITICS POISONS TRADITION: A WARNING FROM UDUPI