ಯಶ್‍ನ `ಟಾಕ್ಸಿಕ್': ಕನ್ನಡದ ನೆಲೆಯಿಂದ ವಿಶ್ವದ ಪರದೆಗೆ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗ್ಗೆ ದೇಶದಾದ್ಯಂತ ಇಷ್ಟೊಂದು ಚರ್ಚೆಯಾಗುತ್ತಿರುವುದು ಕೇವಲ ಒಬ್ಬ ಜನಪ್ರಿಯ ನಟನ ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಕಾರಣಕ್ಕೆ ಅಲ್ಲ. `ಕೆಜಿಎಫ್' ಸರಣಿಯ ನಂತರ ಯಶ್ ಮರಳುತ್ತಿರುವುದು ಒಂದು ಕಾರಣವಾದರೆ, ಕನ್ನಡ ಚಿತ್ರರಂಗದಲ್ಲಿ ಬೆಳೆದ ನಟನೊಬ್ಬ ಈಗ ಭಾರತೀಯ ಚಿತ್ರರಂಗದ ಪ್ರಮುಖ ತಾರೆಯಾಗಿ, ವಿಶ್ವ ಮಾರುಕಟ್ಟೆಯನ್ನೂ ಗುರಿಯಾಗಿಸಿಕೊಂಡಿರುವುದು ಮತ್ತೊಂದು ಕಾರಣ. ಟಾಕ್ಸಿಕ್ ಆ ಪ್ರಯಾಣದ ಮತ್ತೊಂದು ಮಹತ್ವದ ಹೆಜ್ಜೆ.
ಗೀತು ಮೋಹನ್‍ದಾಸ್ ನಿರ್ದೇಶನದ ಈ ಚಿತ್ರ ಅಪರಾಧ ಜಗತ್ತಿನ ಹಿನ್ನೆಲೆಯ ಕಥೆ. ಗೋವಾದ ಕತ್ತಲೆಯ ಲೋಕ, ಅಧಿಕಾರ, ಹಣ, ದ್ರೋಹ, ಹಿಂಸೆ ಮತ್ತು ಮಾದಕವಸ್ತುಗಳ ಜಾಲದ ಸುತ್ತ ಕಥೆ ಹೆಣೆದಿದೆ. ಸ್ವಾತಂತ್ರ್ಯಾನಂತರದ ಗೋವಾದ ಹಿನ್ನೆಲೆಯನ್ನೂ ಕಥೆ ಬಳಸಿಕೊಂಡಿದ್ದು, ರಾಯ ಎಂಬ ಪಾತ್ರದ ಮೂಲಕ ಅಪರಾಧ ಜಗತ್ತಿನ ಸಂಕೀರ್ಣ ಮುಖವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ ಟಾಕ್ಸಿಕ್ ಕೇವಲ ಸಾಹಸಮಯ ಮನರಂಜನೆಯಲ್ಲ; ಕಥೆ ಮತ್ತು ಪಾತ್ರಗಳ ಮನೋವೈಜ್ಞಾನಿಕ ಆಯಾಮಕ್ಕೂ ಒತ್ತು ನೀಡಿರುವ ಚಿತ್ರ ಎಂಬ ನಿರೀಕ್ಷೆ ಇದೆ.
ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಹೆಚ್ಚಿಸಿದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರಂತಹ ತಾರೆಯರ ಉಪಸ್ಥಿತಿಯೂ ಚಿತ್ರದ ವ್ಯಾಪ್ತಿಯನ್ನು ತೋರಿಸುತ್ತದೆ. ಯಶ್ ನಟನಷ್ಟೇ ಅಲ್ಲದೆ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ.
ಭಾಷೆಯ ದೃಷ್ಟಿಯಿಂದಲೂ `ಟಾಕ್ಸಿಕ್' ದೊಡ್ಡ ಹೆಜ್ಜೆ. ಮೂಲತಃ ಕನ್ನಡದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ಪ್ರೇಕ್ಷಕರನ್ನು ತಲುಪುತ್ತಿದೆ. ಕನ್ನಡ ಚಿತ್ರವೊಂದು ತನ್ನ ಮೂಲ ಗುರುತನ್ನು ಉಳಿಸಿಕೊಂಡೇ ದೇಶದ ವಿವಿಧ ಭಾಷೆಗಳ ಜೊತೆಗೆ ಇಂಗ್ಲೀಷ್ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿರುವುದು ಕನ್ನಡ ಚಿತ್ರರಂಗದ ಬದಲಾಗುತ್ತಿರುವ ಸಾಮಥ್ರ್ಯಕ್ಕೆ ಸಾಕ್ಷಿ.
ಯಶ್‍ನ ಮಹತ್ವಾಕಾಂಕ್ಷೆ `ಟಾಕ್ಸಿಕ್'ನಲ್ಲೇ ನಿಲ್ಲುವುದಿಲ್ಲ. ಬಿಡುಗಡೆಯಾಗಬೇಕಿರುವ ಪಾನ್-ಇಂಡಿಯಾ ಚಿತ್ರ `ರಾಮಾಯಣ'ದಲ್ಲೂ ಅವರು ನಿರ್ಮಾಪಕರಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದು, ರಾವಣನ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಅಂದರೆ ಯಶ್ ಈಗ ಕೇವಲ ನಟನಾಗಿ ಚಿತ್ರಗಳನ್ನು ಆಯ್ಕೆ ಮಾಡುತ್ತಿಲ್ಲ; ದೊಡ್ಡ ಪ್ರಮಾಣದ ಚಿತ್ರಗಳ ನಿರ್ಮಾಣ ಮತ್ತು ಸೃಜನಾತ್ಮಕ ರೂಪುರೇಷೆಯಲ್ಲೂ ತನ್ನ ಛಾಪು ಮೂಡಿಸುತ್ತಿದ್ದಾರೆ.
`ಕೆಜಿಎಫ್' ಯಶ್ ಅವರನ್ನು ಕನ್ನಡದ ಗಡಿಯಾಚೆಗೆ ಕರೆದೊಯ್ದಿತು. `ಟಾಕ್ಸಿಕ್' ಮತ್ತು `ರಾಮಾಯಣ' ಆ ಗಡಿಯನ್ನು ಇನ್ನಷ್ಟು ವಿಸ್ತರಿಸುವ ಎರಡು ವಿಭಿನ್ನ ಪ್ರಯತ್ನಗಳು. ಒಂದು ಅಪರಾಧ ಜಗತ್ತಿನ ಕಥೆ; ಮತ್ತೊಂದು ಭಾರತೀಯ ಪುರಾಣದ ಮಹಾಕಾವ್ಯ. ಎರಡರಲ್ಲೂ ಯಶ್ ನಟನಷ್ಟೇ ಅಲ್ಲ, ನಿರ್ಮಾಣದ ಶಕ್ತಿಯನ್ನೂ ಬಳಸುತ್ತಿದ್ದಾರೆ.
ಹೀಗಾಗಿ `ಟಾಕ್ಸಿಕ್'ನ ನಿಜವಾದ ವಿಶೇಷತೆ ಅದರ ಭವ್ಯತೆಯಲ್ಲಿ ಮಾತ್ರವಲ್ಲ. ಕನ್ನಡದ ಮಣ್ಣಿನಲ್ಲಿ ಬೆಳೆದ ಒಬ್ಬ ನಟ ತನ್ನ ಭಾಷೆಯ ಬೇರುಗಳನ್ನು ಉಳಿಸಿಕೊಂಡೇ ಭಾರತೀಯ ಮತ್ತು ಜಾಗತಿಕ ಚಿತ್ರರಂಗದಲ್ಲಿ ತನ್ನದೇ ಸ್ಥಾನವನ್ನು ನಿರ್ಮಿಸಿಕೊಳ್ಳುತ್ತಿರುವುದೇ ಅದರ ದೊಡ್ಡ ಕಥೆ.
Comments
Post a Comment