ರಾಜಕೀಯ ಗೊಂದಲದಿಂದ ಆಡಳಿತಕ್ಕೆ ಗ್ರಹಣ
ಫೀಡ್‍ಬ್ಯಾಕ್
ವಿವೇಕ್ ಉಪಾಧ್ಯಾಯ
..........................
`ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್ಸಿಗೆ ನೆಲೆಯಿಲ್ಲವೇ?' ಎಂಬ ಶೀರ್ಷಿಕೆಯಡಿ ರಘು ಮೊಗವೀರ ಅವರು ಬರೆದ ಲೇಖನ ಪರಿಣಾಮಕಾರಿಯಾಗಿತ್ತು. ಇರುವ ವಾಸ್ತವ ಪರಿಸ್ಥಿತಿಯನ್ನೇ ಅವರು ವಿಶ್ಲೇಷಿಸಿದ್ದಾರೆ. ಧನ್ಯವಾದಗಳು. ಅದೇ ವಿಷಯಕ್ಕೆ ಸಂಬಂಧಿಸಿ ನನ್ನ ಒಂದೆರಡು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.
ಕರ್ನಾಟಕದ ಜನರು ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ನೀಡಿದ್ದು, ಸರ್ಕಾರವು ಸ್ಥಿರವಾಗಿ ಮತ್ತು ಪರಿಣಾಮಕಾರಿಯಾಗಿ ಆಡಳಿತ ನಡೆಸಲಿ ಎಂಬ ನಿರೀಕ್ಷೆಯಿಂದ. ಆದರೆ ಅಧಿಕಾರಕ್ಕೆ ಬಂದ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ, ಸರ್ಕಾರದ ಮುಂದೆ ಈಗ ರಾಜಕೀಯ ಸ್ಥಿರತೆಗಿಂತ ಆಡಳಿತದ ಚುರುಕುತನವೇ ದೊಡ್ಡ ಸವಾಲಾಗಿ ಕಾಣುತ್ತಿದೆ. ಬಹುಮತದ ಬಲವಿದ್ದರೂ ಸರ್ಕಾರ ತನ್ನ ಹೆಜ್ಜೆಗಳನ್ನು ದೃಢವಾಗಿ ಇಡಲು ಏಕೆ ತಡ ಮಾಡುತ್ತಿದೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಸಚಿವ ಸಂಪುಟ ವಿಸ್ತರಣೆಯ ಬಳಿಕ ಖಾತೆ ಹಂಚಿಕೆಯಲ್ಲಿ ಉಂಟಾದ ಗೊಂದಲ ಮತ್ತು ವಿಳಂಬವು ಸರ್ಕಾರದ ಒಳಗಿನ ಸಮನ್ವಯದ ಕೊರತೆಯನ್ನು ಬಹಿರಂಗಪಡಿಸಿದೆ. ಆಡಳಿತದ ಮೊದಲ ಹೆಜ್ಜೆಯಲ್ಲೇ ಇಂತಹ ಅಸ್ಪಷ್ಟತೆ ಕಂಡುಬಂದರೆ, ಮುಂದಿನ ದಿನಗಳಲ್ಲಿ ದೊಡ್ಡ ನಿರ್ಧಾರಗಳನ್ನು ಎಷ್ಟು ವೇಗವಾಗಿ ಕೈಗೊಳ್ಳಬಹುದು ಎಂಬ ಅನುಮಾನ ಮೂಡುವುದು ಸಹಜ. ಸರ್ಕಾರದೊಳಗಿನ ರಾಜಕೀಯ ಲೆಕ್ಕಾಚಾರಗಳು ಜನರ ಆಡಳಿತದ ಅಗತ್ಯಗಳಿಗಿಂತ ಮೇಲುಗೈ ಪಡೆಯಬಾರದು.
ಕರ್ನಾಟಕದ ಸಮಸ್ಯೆಗಳು ಸರ್ಕಾರದ ರಾಜಕೀಯ ಅನುಕೂಲಕ್ಕಾಗಿ ಕಾಯುವುದಿಲ್ಲ. ಬೆಂಗಳೂರು ಮತ್ತು ಇತರ ನಗರಗಳಲ್ಲಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರಗಳ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು, ರಸ್ತೆ ಮತ್ತು ಸಾರ್ವಜನಿಕ ಸಾರಿಗೆ, ಗ್ರಾಮೀಣ ಮೂಲಸೌಕರ್ಯ, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ತಕ್ಷಣದ ಕ್ರಮಗಳ ಅಗತ್ಯವಿದೆ. ಇವುಗಳೆಲ್ಲವೂ ಘೋಷಣೆಗಳಿಂದ ಪರಿಹಾರವಾಗುವ ಸಮಸ್ಯೆಗಳಲ್ಲ. ನಿರಂತರ ನಿರ್ಧಾರ ಮತ್ತು ಪರಿಣಾಮಕಾರಿ ಅನುಷ್ಠಾನ ಬೇಕು.
ಸರ್ಕಾರದೊಳಗಿನ ಭಿನ್ನಾಭಿಪ್ರಾಯಗಳು ಹೊಸದಲ್ಲ. ಆದರೆ ಅವು ಆಡಳಿತ ಯಂತ್ರವನ್ನು ನಿಧಾನಗೊಳಿಸುವ ಮಟ್ಟಕ್ಕೆ ಹೋದರೆ ಅದರ ಹೊರೆ ಜನರ ಮೇಲೆಯೇ ಬೀಳುತ್ತದೆ. ಮುಖ್ಯಮಂತ್ರಿ ಮತ್ತು ಸಚಿವರು ತಮ್ಮ ರಾಜಕೀಯ ಭಿನ್ನತೆಗಳನ್ನು ಬದಿಗಿಟ್ಟು ಸರ್ಕಾರದ ಆದ್ಯತೆಗಳನ್ನು ಸ್ಪಷ್ಟಪಡಿಸಬೇಕು. ಅಧಿಕಾರಿಗಳಿಗೆ ಗುರಿ ನೀಡುವುದಷ್ಟೇ ಸಾಲದು; ಆ ಗುರಿ ತಲುಪದಿದ್ದರೆ ಹೊಣೆಗಾರಿಕೆಯನ್ನೂ ನಿಗದಿಪಡಿಸಬೇಕು.
ಜನರು ರಾಜಕೀಯ ಹೇಳಿಕೆಗಳಿಗಿಂತ ತಮ್ಮ ಬದುಕಿನಲ್ಲಿ ಕಾಣುವ ಬದಲಾವಣೆಯನ್ನು ಬಯಸುತ್ತಾರೆ. ಉತ್ತಮ ರಸ್ತೆ, ಸಮಯಕ್ಕೆ ಸಿಗುವ ಸರ್ಕಾರಿ ಸೇವೆ, ಸಮರ್ಪಕ ನೀರು, ಉತ್ತಮ ಆಸ್ಪತ್ರೆ, ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶ ಮತ್ತು ಸುರಕ್ಷಿತ ನಗರ ಜೀವನವೇ ಅವರಿಗೆ ಸರ್ಕಾರದ ಯಶಸ್ಸಿನ ಮಾನದಂಡ.
ಆದ್ದರಿಂದ ಕಾಂಗ್ರೆಸ್ ಸರ್ಕಾರದ ಮುಂದಿರುವ ಪ್ರಶ್ನೆ ಬಹುಮತವಿದೆಯೇ ಎಂಬುದಲ್ಲ. ಆ ಬಹುಮತವನ್ನು ಆಡಳಿತದ ಫಲಿತಾಂಶವಾಗಿ ಪರಿವರ್ತಿಸುವ ಸಾಮಥ್ರ್ಯವಿದೆಯೇ ಎಂಬುದು. ಅಧಿಕಾರದ ಒಳಗಿನ ಲೆಕ್ಕಾಚಾರಗಳನ್ನು ಮೀರಿ ಸರ್ಕಾರ ಕೆಲಸಕ್ಕೆ ಇಳಿಯಬೇಕಾದ ಸಮಯ ಇದು. ಜನರು ಸರ್ಕಾರ ರಚನೆಗಾಗಿ ಮತ ಹಾಕಿದ್ದಾರೆ; ಸರ್ಕಾರ ತನ್ನೊಳಗಿನ ಗೊಂದಲಗಳನ್ನು ಬಗೆಹರಿಸಿಕೊಳ್ಳುವುದನ್ನು ನೋಡಲು ಅಲ್ಲ.
ಈಗ ಬೇಕಿರುವುದು ಮತ್ತಷ್ಟು ಭರವಸೆಗಳಲ್ಲ, ಕಾರ್ಯಗತಿ. ನಿರ್ಧಾರಗಳಲ್ಲಿ ಸ್ಪಷ್ಟತೆ, ಆಡಳಿತದಲ್ಲಿ ವೇಗ ಮತ್ತು ಅನುಷ್ಠಾನದಲ್ಲಿ ಹೊಣೆಗಾರಿಕೆ ಬಂದಾಗ ಮಾತ್ರ ಸರ್ಕಾರ ತನ್ನ ಬಹುಮತದ ನಿಜವಾದ ಅರ್ಥವನ್ನು ಸಾಬೀತುಪಡಿಸಲಿದೆ.
Comments
Post a Comment