ಸರ್ಕಾರದ ನುಡಿ ಮತ್ತು ನಡೆ ನಡುವೆ ಅಗಾಧ ಅಂತರ
ಸ್ವತಂತ್ರ ಮಾಧ್ಯಮಗಳು ಸರ್ಕಾರದ ಪ್ರತಿಯೊಂದು ನಡವಳಿಕೆಯನ್ನು ಪ್ರಶ್ನಿಸಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ.
ವಿಶ್ಲೇಷಣೆ * ಬಿವಿಸೀ
ದೇಶದಲ್ಲಿ ಆಡಳಿತಾರೂಢ ಸರ್ಕಾರ ನೀಡಿದ್ದ ಪ್ರಮುಖ ರಾಜಕೀಯ ಭರವಸೆಗಳು ಮತ್ತು ಪ್ರಸ್ತುತ ದೇಶದಲ್ಲಿರುವ ನೈಜ ಸ್ಥಿತಿಯ ನಡುವಿನ ದೊಡ್ಡ ವ್ಯತ್ಯಾಸದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ದೇಶದ ಪ್ರಧಾನಮಂತ್ರಿಯವರು ತಮ್ಮ ಸುದೀರ್ಘ ಆಡಳಿತಾವಧಿಯಲ್ಲಿ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿಯನ್ನು ನಡೆಸಿ ಸ್ವತಂತ್ರ ಮಾಧ್ಯಮಗಳ ನೇರ ಪ್ರಶ್ನೆಗಳನ್ನು ಎದುರಿಸದಿರುವುದು ಪ್ರಜಾಪ್ರಭುತ್ವದ ಉತ್ತರದಾಯಿತ್ವದ ಕುರಿತು ಹಲವು ಪ್ರಮುಖ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವರದಿಯೊಂದು ಸ್ಪಷ್ಟವಾಗಿ ಬೆಟ್ಟುಮಾಡಿದೆ.
ಸರ್ಕಾರವು ಈ ಹಿಂದೆ ಅತೀವ ಪ್ರಚಾರದೊಂದಿಗೆ ಘೋಷಿಸಿದ್ದ ಸ್ವಚ್ಛ ಭಾರತ ಅಭಿಯಾನ, ದೇಶದ ನದಿಗಳ ಪುನರುಜ್ಜೀವನ, ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಉಚಿತ ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದೇ ಹಿನ್ನಡೆ ಕಂಡಿವೆ. ದೇಶದಲ್ಲಿದ್ದ ಕಪ್ಪುಹಣವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಉದ್ದೇಶದಿಂದ ಜಾರಿಗೆ ತರಲಾದ ನೋಟು ಅಮಾನ್ಯೀಕರಣ ಪ್ರಕ್ರಿಯೆಯು ದೇಶದ ಸಾಮಾನ್ಯ ಜನರಿಗೆ ತಂದೊಡ್ಡಿದ ತೊಂದರೆಗಳು ಅಪಾರವಾಗಿವೆ. ಇದರ ಜೊತೆಗೆ ದಿನನಿತ್ಯದ ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲಿನ ಹಣದುಬ್ಬರ ಹಾಗೂ ಮಾಲಿನ್ಯ ನಿಯಂತ್ರಿಸುವಲ್ಲಿ ಉಂಟಾಗಿರುವ ವೈಫಲ್ಯಗಳು ಸಾರ್ವಜನಿಕರ ದೈನಂದಿನ ಜೀವನವನ್ನು ಅತ್ಯಂತ ಕಷ್ಟಕರವಾಗಿಸಿವೆ. ಪ್ರತಿವರ್ಷ ಕೋಟ್ಯಂತರ ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡುವ ಆಶ್ವಾಸನೆಯು ಸಂಪೂರ್ಣವಾಗಿ ಹುಸಿಯಾಗಿದ್ದು, ದೇಶದ ಲಕ್ಷಾಂತರ ಯುವಜನತೆ ಭವಿಷ್ಯದ ದಾರಿಯಿಲ್ಲದೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿವೇಗದ ಬುಲೆಟ್ ರೈಲು ಯೋಜನೆ, ಐದು ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಆರ್ಥಿಕತೆಯ ಗುರಿ, ನೂರು ಮಾದರಿ ನಗರಗಳ ನಿರ್ಮಾಣ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಗಳು ಕೇವಲ ಕಾಗದದ ಮೇಲಷ್ಟೇ ಉಳಿದುಕೊಂಡಿವೆ ಎಂದು ಈ ವರದಿ ಪ್ರತಿಪಾದಿಸಿದೆ.
ಆಯ್ದ ಉದ್ಯಮಪತಿಗಳಿಗೆ ನೀಡಲಾಗುತ್ತಿರುವ ಅತಿಯಾದ ಪೆÇ್ರೀತ್ಸಾಹದ ಪರಿಣಾಮವಾಗಿ ಲಕ್ಷಾಂತರ ಮರಗಳನ್ನು ಕಡಿದು ಪರಿಸರ ನಾಶಕ್ಕೆ ದಾರಿ ಮಾಡಿಕೊಡಲಾಗಿದೆ. ತಲಾ ಆದಾಯ ಹೆಚ್ಚಳ, ಕೌಶಲ್ಯ ಅಭಿವೃದ್ಧಿ ಯೋಜನೆಗಳಲ್ಲಿನ ಅಕ್ರಮಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯದ ಕುಸಿತವು ದೇಶದ ಆರ್ಥಿಕ ಭದ್ರತೆಯನ್ನು ತೀವ್ರವಾಗಿ ಕುಸಿಯುವಂತೆ ಮಾಡಿದೆ. ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ ರೈತರ ಪ್ರತಿಭಟನೆಗಳ ಮೇಲಿನ ದಬ್ಬಾಳಿಕೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸರಣಿ ಪರೀಕ್ಷಾ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ಸಂಖ್ಯೆಯಲ್ಲಿ ಉಂಟಾಗಿರುವ ಹೆಚ್ಚಳವು ಸಾಮಾಜಿಕ ಭದ್ರತೆಗೆ ತೀವ್ರ ಧಕ್ಕೆ ತಂದಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆಯು ಸಂಪೂರ್ಣ ಸುಳ್ಳಾಗಿದ್ದು, ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳು ಆಡಳಿತಾರೂಢರನ್ನು ವಿಮರ್ಶಾತ್ಮಕವಾಗಿ ಪ್ರಶ್ನಿಸುವ ಧೈರ್ಯ ತೋರದೆ ತಮ್ಮ ಸ್ವತಂತ್ರ ಅಸ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಂಡಿವೆ ಎಂಬ ಕಳವಳ ವ್ಯಕ್ತವಾಗಿದೆ. ಪ್ರಧಾನಿಯವರು ತಮ್ಮ ಅಧಿಕಾರಾವಧಿಯಲ್ಲಿ ನೂರಕ್ಕೂ ಹೆಚ್ಚು ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದರೂ, ದೇಶದ ಪ್ರಮುಖ ಸಮಸ್ಯೆಗಳ ಕುರಿತು ಪತ್ರಕರ್ತರ ನೇರ ಪ್ರಶ್ನೆಗಳಿಗೆ ಉತ್ತರಿಸದಿರುವುದು ಕಳವಳಕಾರಿ ಸಂಗತಿಯಾಗಿದೆ. ಸ್ವತಂತ್ರ ಮಾಧ್ಯಮಗಳು ಸರ್ಕಾರದ ಪ್ರತಿಯೊಂದು ನಡವಳಿಕೆಯನ್ನು ಪ್ರಶ್ನಿಸಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ
Comments
Post a Comment