ಕಾಂಗ್ರೆಸ್ಸಿಗೆ ಸ್ವಯಂಕೃತ ಅಪರಾಧದ ಬಿಸಿ: ದುರಾಸೆಗೆ ತತ್ವ-ಸಿದ್ಧಾಂತ ಬಲಿ

 

                                                                    ಬಿ ನಾಗೇಂದ್ರ

ಖುಲ್ಲಂಖುಲ್ಲಾ * ಬಿವಿಸೀ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ನೂರಾರು ಕೋಟಿ ರೂಪಾಯಿಗಳ ಬೃಹತ್ ಭ್ರಷ್ಟಾಚಾರದ ಪ್ರಕರಣವು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಸಂಪೂರ್ಣವಾಗಿ ಬೆತ್ತಲುಗೊಳಿಸಿದೆ. ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮತ್ತು ತನಿಖಾ ಸಂಸ್ಥೆಗಳ ಕಣ್ಣಿನಲ್ಲಿದ್ದ  ಬಿ ನಾಗೇಂದ್ರ ಅವರನ್ನು ಯಾವುದೇ ತನಿಖೆಯಿಂದ ಮುಕ್ತವಾಗುವ ಮುನ್ನವೇ ಮರಳಿ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಂಡ ನಿರ್ಧಾರವು ಪಕ್ಷದ ಪಾಲಿಗೆ ಸ್ವಯಂಕೃತ ಅಪರಾಧವಾಗಿ ಪರಿಣಮಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಸಾರ್ವಜನಿಕ ಹಣವನ್ನು ನೆರೆ ರಾಜ್ಯದ ಚುನಾವಣಾ ವೆಚ್ಚಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ರಾಜ್ಯದ ಜನತೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಇಡೀ ಹಗರಣದ ಹಾದಿಯಲ್ಲಿ ಅಧಿಕಾರ ಮತ್ತು ಹಣಬಲದ ದುರಾಸೆಗಾಗಿ ಒಬ್ಬ ದಲಿತ ನಾಯಕನನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗಿದೆ. ನಿಗಮದಲ್ಲಾದ ಅಕ್ರಮಗಳು ಮತ್ತು ಅದರಿಂದ ಉಂಟಾದ ಸರಣಿ ಒತ್ತಡಗಳು ಅಮಾಯಕ ಅಧಿಕಾರಿಗಳ ಜೀವವನ್ನೇ ಬಲಿ ಪಡೆದಿರುವುದು ಈ ಪ್ರಕರಣದ ಅತ್ಯಂತ ದುರಂತದ ಮುಖ. ತನಿಖಾ ಸಂಸ್ಥೆಗಳಾದ ಈ ಡಿ ಮತ್ತು ಸಿಬಿಐ ಕಾರ್ಯಾಚರಣೆ ತೀವ್ರಗೊಳಿಸಿದಾಗ ಅನಿವಾರ್ಯವಾಗಿ ಸಚಿವರನ್ನು ಕೈಬಿಟ್ಟಿದ್ದ ಕಾಂಗ್ರೆಸ್ ಹೈಕಮಾಂಡ್, ನಂತರದ ದಿನಗಳಲ್ಲಿ ಯಾವುದೇ ಕಾನೂನಾತ್ಮಕ ಕ್ಲೀನ್ ಚಿಟ್ ಸಿಗುವ ಮುನ್ನವೇ ಅವರನ್ನು ಪುನಃ ಸರ್ಕಾರಕ್ಕೆ ಕರೆತಂದಿದ್ದು ರಾಜಕೀಯ ಅಂಧಕಾರಕ್ಕೆ ಸಾಕ್ಷಿ.

ಯಾವುದೇ ದೂರದೃಷ್ಟಿಯಿಲ್ಲದೆ ತೆಗೆದುಕೊಂಡ ಈ ಅಪಕ್ವ ತೀರ್ಮಾನವು ಈಗ ಮತ್ತೆ ಸಚಿವರ ತಲೆದಂಡಕ್ಕೆ ಹಾದಿಮಾಡಿಕೊಟ್ಟಿದ್ದು, ನೂತನ ಸರ್ಕಾರದ ಮೊದಲ ವಿಕೆಟ್ ಪತನಗೊಂಡಂತಾಯಿತು. ಕೋಲು ಕೊಟ್ಟು ಹೊಡೆಸಿಕೊಂಡ ಕಾಂಗ್ರೆಸ್ ಪಕ್ಷದ ವರಿಷ್ಠರ ಮೂರ್ಖತನಕ್ಕೆ ಮತ್ತೊಂದು ನಿದರ್ಶನ ಅಗತ್ಯವಿಲ್ಲ. - ರಾತ್ರಿಯೇ ಕಂಡ ಬಾವಿಯಲ್ಲಿ ಹಗಲು ಬಿದ್ದರು ಎನ್ನುವಂತಿದೆ ಇದು. ಇಂಥ ಅವಕಾಶವನ್ನು ಯಾವ ಪ್ರತಿಪಕ್ಷವಾದರೂ ಬಿಡುತ್ತದೆಯೇ? ಕಾಂಗ್ರೆಸ್ ವರಿಷ್ಠರಿಗೆ ಇಷ್ಟೂ ಗೊತ್ತಾಗಿಲ್ಲ ಎಂದರೆ ನಂಬಲು ಸಾಧ್ಯವೇ?

ಸಾರ್ವಜನಿಕರ ತೆರಿಗೆ ಹಣವನ್ನು ರಕ್ಷಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರ್ಕಾರವು ತನ್ನ ರಾಜಕೀಯ ತಂತ್ರಗಾರಿಕೆಗಾಗಿ ಶೋಷಿತ ಸಮುದಾಯಗಳ ಅಭಿವೃದ್ಧಿ ನಿಧಿಯನ್ನೇ ಬಳಸಿಕೊಂಡಿದೆ ಎಂಬ ಆರೋಪವು ಪಕ್ಷದ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಹೈಕಮಾಂಡ್‍ನ ಅತಿಯಾದ ರಾಜಕೀಯ ಹಸ್ತಕ್ಷೇಪ ಮತ್ತು ದುರಾಡಳಿತವು ರಾಜ್ಯದ ಜನತೆಗೆ ನೀಡಿದ ಭರವಸೆಗಳಿಗೆ ಬಗೆದ ದ್ರೋಹ.

ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಪಕ್ಷವು, ತಾನೇ ಸೃಷ್ಟಿಸಿದ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ನಲುಗುತ್ತಿರುವುದು ವಿಪರ್ಯಾಸವೇ ಸರಿ. ಹಗರಣದ ಸೂತ್ರಧಾರಿಗಳನ್ನು ರಕ್ಷಿಸುವ ಭರದಲ್ಲಿ ಶಾಸನಬದ್ಧ ಸಂಸ್ಥೆಗಳ ಮೇಲಿನ ಗೌರವವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಚುನಾವಣಾ ಗೆಲುವಿಗಾಗಿ ಸಾರ್ವಜನಿಕರ ಖಜಾನೆಗೆ ಕನ್ನ ಹಾಕುವುದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಎಸಗಿದ ಬ್ರಹ್ಮರಾಕ್ಷಸೀಯ ಅಪರಾಧ.

ಈ ಸಂಪೂರ್ಣ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‍ನ ನೈತಿಕ ಅಧಃಪತನವನ್ನು ಎತ್ತಿಹಿಡಿದಿದೆ. ತಪ್ಪಿತಸ್ಥರನ್ನು ರಕ್ಷಿಸಲು ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಹೋದ ಆಡಳಿತಾರೂಢ ಪಕ್ಷವು ಇಂದು ಸಾರ್ವಜನಿಕರ ಮುಂದೆ ಸಂಪೂರ್ಣವಾಗಿ ಅಪರಾಧಿಯಂತೆ ನಿಂತಿದೆ. ಇಂತಹ ದುಡುಕಿನ ಹಾಗೂ ಹೊಣೆಗೇಡಿತನದ ನಿರ್ಧಾರಗಳು ಕೇವಲ ಸರ್ಕಾರಕ್ಕೆ ಕಪ್ಪುಚುಕ್ಕೆಯಷ್ಟೇ ಅಲ್ಲ, ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆಯೇ ಜನರಿಗಿರುವ ನಂಬಿಕೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿವೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI